More

    “ಕಾಶಿಗೆ ಹೋಗಿ ಬಂದರೆ ಕಾಗೆ ಕೋಗಿಲೆಯಾಗಲ್ಲ, ವಿಜುಗೌಡ ಅತ್ತ ಮಾತ್ರಕ್ಕೆ ಅನುಕಂಪ ಸಿಗಲ್ಲ”: ಜೆಡಿಎಸ್ ಅಭ್ಯರ್ಥಿ ಹೊನವಾಡ ವಾಗ್ದಾಳಿ

    ವಿಜಯಪುರ: ‘ಕಾಗೆ ಕಾಶಿಗೆ ಹೋಗಿ ಬಂದ ಮಾತ್ರಕ್ಕೆ ಕೋಗಿಲಾಯಗಲ್ಲ’ ಅದರಂತೆ ವಿಜುಗೌಡ ಅತ್ತ ಮಾತ್ರಕ್ಕೆ ಅನುಕಂಪ ಸಿಗಲ್ಲ, ಕಾಂಗ್ರೆಸ್ ಎಂಎಲ್‌ಸಿ ಸುನೀಲಗೌಡ ಕೈಗೆ ‘ಸಲೈನ್’ ಹಚ್ಚಿಕೊಂಡು ಬಂದರೆ ಮಾಡಿದ ಪಾಪ ತೊಳೆಯಲ್ಲ. ಬಬಲೇಶ್ವರದಲ್ಲಿ ಈ ಬಾರಿ ದರ್ಬ, ದಬ್ಬಾಳಿಕೆ ನಡೆಯಲ್ಲ. ಕ್ಷೇತ್ರ ಅಭಿವೃದ್ಧಿಯೂ ಆಗಿಲ್ಲ, ಹಣ-ಅನುಕಂಪದ ಅಲೆಯಿಲ್ಲ. ಕೇವಲ ಜೆಡಿಎಸ್‌ನ ಸ್ವಾಭಿಮಾನದ ಅಲೆಯಿದೆ ಎಂದು ಜೆಡಿಎಸ್ ಅಭ್ಯರ್ಥಿ ಬಸವರಾಜ ಹೊನವಾಡ ಹೇಳಿದರು.

    ಬಬಲೇಶ್ವರ ಕ್ಷೇತ್ರ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಪ್ರಶ್ನೆ ಮಾಡಿದರೆ ದಬ್ಬಾಳಿ, ದರ್ಪ ಮೆರೆಯಲಾಗುತ್ತಿದೆ. ತುಂಬಿದ ಸಭೆಯಲ್ಲಿಯೇ ಜನ ಪ್ರಶ್ನೆ ಮಾಡುತ್ತಿರುವುದು ಗಮನಿಸಿದರೆ ಕಾಂಗ್ರೆಸ್‌ನ ಅಸಲಿಯತ್ತು ಏನೆಂಬುದು ಗೊತ್ತಾಗಲಿದೆ. ಇತ್ತೀಚೆಗೆ ದೇವಾಪುರದಲ್ಲಿ ಯುವಕನೊಬ್ಬ ಪ್ರಶ್ನೆ ಮಾಡಿದರೆ ಕಾಂಗ್ರೆಸ್ ಅಭ್ಯರ್ಥಿ ಕಪಾಳಮೋಕ್ಷ ಮಾಡಿದ್ದಾರೆ. ಇದು ದಬ್ಬಾಳಿಕೆಗೆ ಹಿಡಿದ ಕೈಗನ್ನಡಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಹರಿಹಾಯ್ದರು.

    ಹೊಂದಾಣಿಕೆಗೆ ಬ್ರೇಕ್:

    ಅನ್ಯ ಕ್ಷೇತ್ರದಿಂದ ಬಂದು ಜನರನ್ನು ಮರಳು ಮಾಡುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಅಸಲಿ ಬಣ್ಣ ಈ ಬಾರಿ ಬಯಲಾಗಿದೆ. ಬಿಜೆಪಿ ಅಭ್ಯರ್ಥಿಯನ್ನು ಜನ ಮೂರು ಬಾರಿ ತಿರಸ್ಕರಿಸಿದರೂ ಆ ಪಕ್ಷ ಮತ್ತದೇ ಅಭ್ಯರ್ಥಿಗೆ ಟಿಕೆಟ್ ನೀಡುವುದನ್ನು ಗಮನಿಸಿದರೆ ಹೊಂದಾಣಿಕೆ ರಾಜಕಾರಣ ಎಷ್ಟರ ಮಟ್ಟಿಗೆ ಬೇರೂರಿದೆ ಎಂಬುದು ಗೊತ್ತಾಗಲಿದೆ. ಬಸವನಬಾಗೇವಾಡಿ, ಬಬಲೇಶ್ವರಕ್ಕೂ ಪರಸ್ಪರ ಹೊಂದಾಣಿಕೆ ಇದೆ. ವಿಜುಗೌಡರು ಬ.ಬಾಗೇವಾಡಿಗೆ ಹೋಗಿ ಬಿಜೆಪಿ ಪ್ರಚಾರ ಮಾಡಲ್ಲ. ಬ.ಬಾಗೇವಾಡಿ ಕಾಂಗ್ರೆಸ್ ಅಭ್ಯರ್ಥಿ ಬಬಲೇಶ್ವರದಲ್ಲಿ ತಮ್ಮ ಪಕ್ಷದ ಪರ ಪ್ರಚಾರ ಮಾಡಲ್ಲ. ಇದೆಲ್ಲಾ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಮೂಲಕ ತಮ್ಮ ಗೆಲುವಿನ ಹಾದಿ ಸುಗಮಗೊಳಿಸುವ ಕಾಂಗ್ರೆಸ್ ಆಟ ಇನ್ಮುಂದೆ ನಡೆಯಲ್ಲ. ಹೊಂದಾಣಿಕೆಗೆ ಕಡಿವಾಣ ಹಾಕಲೆಂದೇ ಜೆಡಿಎಸ್‌ಗೆ ಜನ ಮಣೆ ಹಾಕುತ್ತಿದ್ದಾರೆಂದರು.

    ಸಂಪತ್ತಿಗೆ ಸವಾಲ್:

    ಒಬ್ಬರು ಆಸ್ತಿ ಮಾಡಲು ರಾಜಕಾರಣಕ್ಕೆ ಬಂದರೆ ಇನ್ನೊಬ್ಬರು ಹಣ ಹಂಚಿ ಅಧಿಕಾರಕ್ಕೆ ಬರುತ್ತಿದ್ದಾರೆ. ಬಬಲೇಶ್ವರದಲ್ಲಿ ಜನ ಮಾತ್ರ ಮತ ಹಾಕಿ ಬಡವರಾಗುತ್ತಿದ್ದಾರೆ. ಇತ್ತ ವಿಜುಗೌಡ ಪಾಟೀಲ ಮತ್ತು ಎಂ.ಬಿ. ಪಾಟೀಲ ಮಾತ್ರ ಶ್ರೀಮಂತರಾಗುತ್ತಿದ್ದಾರೆ. ನಿಮ್ಮ ಸಂಪತ್ತಿಗೆ ನನ್ನ ಸವಾಲಿದೆ ಎಂದರು.

    "ಕಾಶಿಗೆ ಹೋಗಿ ಬಂದರೆ ಕಾಗೆ ಕೋಗಿಲೆಯಾಗಲ್ಲ, ವಿಜುಗೌಡ ಅತ್ತ ಮಾತ್ರಕ್ಕೆ ಅನುಕಂಪ ಸಿಗಲ್ಲ": ಜೆಡಿಎಸ್ ಅಭ್ಯರ್ಥಿ ಹೊನವಾಡ ವಾಗ್ದಾಳಿ

    ಕಾಂಗ್ರೆಸ್‌ನವರು ಅಭಿವೃದ್ಧಿ ಮಾಡಿದ್ದರೆ ಸೀರೆ ಹಂಚುವ ಪ್ರಮೇಯ ಬರುತ್ತಿರಲಿಲ್ಲ. ಜನರೇ ಸೀರೆ, ಕುಪ್ಪಸ ನೀಡಿ ಉಡಿ ತುಂಬುತ್ತಿದ್ದರು. ಇವರಿಗೆ ಅಭಿವೃದ್ಧಿ ಬಗ್ಗೆ ಮಾತನಾಡಿ ಗೊತ್ತಿಲ್ಲ. ಬರೀ ಆಸ್ತಿ ಬಗ್ಗೆ ಮಾತನಾಡುತ್ತಾರೆ. ದಾರು, ನೀರು ಬಿಟ್ಟರೆ ಬೇರೆ ಚರ್ಚೆಯೇ ಇಲ್ಲ. ನೀರು ನೀರು ಎನ್ನುತ್ತೀರಲ್ಲ ನಿಮ್ಮ ಮನೆಯಿಂದ ಕೊಟ್ಟಿದ್ದೀರಾ? ದೇವೇಗೌಡರು ಆಲಮಟ್ಟಿ ಡ್ಯಾಂ ಕಟ್ಟಿದರಲ್ಲಾ….ಎಂದಾದರೂ ನಾ ಕಟ್ಟಿದ್ದೇನೆ ಎಂದು ಹೇಳಿದ್ದಾರಾ? ಎಂದು ಎಂ.ಬಿ. ಪಾಟೀಲ ವಿರುದ್ಧ ಹರಿಹಾಯ್ದರು.

    ಅಪಪ್ರಚಾರವೇ ಕಾಂಗ್ರೆಸ್ ಅಜೆಂಡಾ:

    ಅಪಪ್ರಚಾರವೇ ಕಾಂಗ್ರೆಸ್ ಅಜೆಂಡಾ ಎಂದ ಹೊನವಾಡ, ಅಭ್ಯರ್ಥಿಯನ್ನು ಖರೀದಿ ಮಾಡುತ್ತೇವೆಂದು ಅಪಪ್ರಚಾರ ಮಾಡಿದರು. ಕಣದಿಂದ ಹಿಂದೆ ಸರಿಯುತ್ತಾರೆ ಎಂದರು. ಇದೀಗ ನಾಮಪತ್ರ ಹಿಂಪಡೆಯುವ ದಿನ ಮುಗೀತಲ್ಲ…ಎಲ್ಲಿ ಹೋದರು ಖರೀದಿ ಮಾಡುವವರು? ಇನ್ಮುಂದಾದರೂ ನಿಯತ್ತಿನಿಂದ ರಾಜಕಾರಣ ಮಾಡ್ರಿ. ನಿಮ್ಮ ಆಟ ನಡೆಯಲ್ಲ. ಪ್ರತಿ ಮನೆಯಲ್ಲೂ ಕ್ರಾಂತಿಕಾರಿಗಳು ಹುಟ್ಟಿದ್ದಾರೆ. ಬಬಲೇಶ್ವರ ಸದಾಶಿವ ಮುತ್ಯಾನ ಮೇಲೆ ಆಣೆ. ಹಾನೆಸ್ಟ್ ಆಗಿ ಚುನಾವಣೆ ಮಾಡುತ್ತೇನೆ. ಅಪಪ್ರಚಾರ ಮಾಡುವವರ ಬಾಯಿಗೆ ಹುಳಾ ಬೀಳಲಿ ಎಂದರು.

    ಹಾಲುಮತ ಸಮಾಜದ ಸ್ವಾಭಿಮಾನ:

    ಕಾಂಗ್ರೆಸ್ ನಾಯಕ ಬಬಲೇಶ್ವರದಲ್ಲಿ ಲೀಡರ್ ಬೆಳೆಸಲಿಲ್ಲ; ಏಜೆಂಟ್‌ರನ್ನು ಬೆಳೆಸಿದರು. ಬಂಡಾರ ಹಚ್ಚಿಕೊಂಡು ಬಂದವರಿಗೆ ಹೊರಗೆ ಕೂರಿಸಿದರು. ಹೀಗಾಗಿ ನೇಪಥ್ಯಕ್ಕೆ ಸಿರದ ನಾಯಕರ ಪ್ರತಿನಿಧಿಯಾಗಿ ನಾನು ಪ್ರತಿನಿಧಿಸುತ್ತಿದ್ದೇನೆ. ದರ್ಪ, ದಬ್ಬಾಳಿಕೆಗೆ ತುತ್ತಾದವರ ಪ್ರತಿನಿಧಿಯಾಗಿದ್ದೇನೆ. ಹಾಲುಮತ ಸಮಾಜದ ಮಾನಾಭಿಮಾನದ ಪ್ರತೀಕವಾಗಿದ್ದೇನೆ. ಹಿಂದುಳಿದ, ಅಲ್ಪಸಂಖ್ಯಾತ, ದಲಿತರ ಪರ ಧ್ವನಿಯಾಗಿದ್ದೇನೆ. ಈ ಬಾರಿ ನನ್ನ ಗೆಲುವು ನಿಶ್ಚಿತ ಎಂದರು.

    ಮುಖಂಡ ಅಬ್ದುಲ್ ಸಾಬ ಉಮರಾಣಿ ಮಾತನಾಡಿ, ಅಲ್ಪಸಂಖ್ಯಾತರು, ದೀನರು, ದಲಿತರು, ಶೋಷಿತರು ಜೆಡಿಎಸ್ ಪರ ಇದ್ದೇವೆ ಎಂದರು. ಮುಖಂಡರಾದ ಅಬ್ದುಲ್‌ಸಾಬ ಮುಲ್ಲಾ, ಶಂಕರ ಹಾಲಳ್ಳಿ, ಶಿವಾಜಿ ಸಿಂಗಾಡಿ, ರಂಜಾನ್ ಜಮಾದಾರ, ಸೋಮನಾಥ ಧನಗೊಂಡ, ಬೀರಪ್ಪ ಟಕ್ಕಳಕಿ, ಚೇತನ ಗವಾರಿ, ರಾಜೇಶ ಮತ್ತಿತರರಿದ್ದರು.

    ವಿಜಯಪುರ ಖಾಸಗಿ ಹೋಟೆಲ್‌ನಲ್ಲಿ ಜೆಡಿಎಸ್ ಅಭ್ಯರ್ಥಿ ಬಸವರಾಜ ಹೊನವಾಡ ಸುದ್ದಿಗೋಷ್ಠಿ ನಡೆಸಿದರು. ಅಬ್ದುಲ್ ಸಾಬ ಉಮರಾಣಿ, ಅಬ್ದುಲ್‌ಸಾಬ ಮುಲ್ಲಾ, ಶಂಕರ ಹಾಲಳ್ಳಿ ಮತ್ತಿತರರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts