More

    ಜೆಡಿಎಸ್ ಹಣಿಯಲು ಷಡ್ಯಂತ್ರ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

    ಮಂಡ್ಯ: ಜೆಡಿಎಸ್ ಹಾಗೂ ರವೀಂದ್ರ ಶ್ರೀಕಂಠಯ್ಯ ಅವರನ್ನು ಹಣಿಯಲು ಯಾರ‌್ಯಾರೋ ಚಿತಾವಣೆ ನಡೆಸಿ ನಮ್ಮ ಹಳೆಯ ಸ್ನೇಹಿತ ತಗ್ಗಹಳ್ಳಿ ವೆಂಕಟೇಶ್ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದಾರೆ. ಆದರೆ ವೆಂಕಟೇಶ್ ಸೇರಿದಂತೆ ಇನ್ಯಾರ ಬಗ್ಗೆಯೂ ನಾನು ಮಾತನಾಡುವುದಿಲ್ಲ. ಅವರಿಗೆ ಪ್ರೀತಿ ಕೊಟ್ಟಿದ್ದೇವೆ. ಜಿಲ್ಲೆಯಲ್ಲಿ ಯಾರಿಗೂ ನಾವು ಅನ್ಯಾಯ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
    ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಾಲೂಕಿನ ತಗ್ಗಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಪರ ಮತಯಾಚನೆ ಸಭೆಯಲ್ಲಿ ಮಾತನಾಡಿದರು. ಮಂಡ್ಯ ಜಿಲ್ಲೆಯಲ್ಲಿರುವುದು ಪ್ರಬುದ್ಧ ಮತದಾರರು. ರಾಜ್ಯದ ರಾಜಕಾರಣ ಒಂದು ಭಾಗವಾದರೆ, ಮಂಡ್ಯವೇ ಮತ್ತೊಂದು ಭಾಗ. ಜಿಲ್ಲೆಯ ಜನರು ಅಧಿಕಾರ, ಹಣಕ್ಕೆ ಎಂದೂ ಪ್ರಾಶಸ್ತ್ಯ ನೀಡಿದವರಲ್ಲ. ಆದರೂ ಈ ಬಾರಿ ಜೆಡಿಎಸ್ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ವಿರುದ್ಧ ಕೆಲವರು ಷಡ್ಯಂತ್ರ ನಡೆಸಿದ್ದಾರೆ ಎಂದರು.
    ಮಂಡ್ಯ ಜಿಲ್ಲೆಯ ಜನರು ಪ್ರೀತಿ, ವಿಶ್ವಾಸ ತೋರುವವರನ್ನು ಹೆಗಲ ಮೇಲೆತ್ತುಕೊಂಡು ಮೆರೆಸುತ್ತಾರೆ. ಒಂದು ವೇಳೆ ಪ್ರೀತಿಗೆ ಚ್ಯುತಿ ಬಂದರೆ ನೆಲಕ್ಕೆ ಹಾಕಿ ತುಳಿಯುತ್ತಾರೆ. ರವೀಂದ್ರ ಶ್ರೀಕಂಠಯ್ಯ ನೇರ ನುಡಿ ವ್ಯಕ್ತಿತ್ವ. ಆದರೆ ಮನಸ್ಸಿನಲ್ಲಿ ಕಲ್ಮಶವಿಲ್ಲ. ತಾಯಿ ಹೃದಯ ರವೀಂದ್ರ ಅವರಿಗೆ ಮತ್ತೊಮ್ಮೆ ಅವಕಾಶ ಕೊಡಬೇಕು. ನಾಡಿನ ಜನರಿಗಾಗಿ ನನ್ನ ಆರೋಗ್ಯವನ್ನು ಲೆಕ್ಕಿಸದೇ ಕಳೆದ ನಾಲ್ಕೂವರೆ ತಿಂಗಳಿಂದ ಪಂಚರತ್ನ ಯಾತ್ರೆ ಹೆಸರಿನಲ್ಲಿ ರಾಜ್ಯದಲ್ಲಿ ಹಗಲಿರುಳು ಪ್ರವಾಸ ಮಾಡಿ ಪಕ್ಷವನ್ನು ಬಲಗೊಳಿಸಿದ್ದೇನೆ ಎಂದು ಹೇಳಿದರು.
    ಮಂಡ್ಯ ಜಿಲ್ಲೆಯ ಜನ ಕಳೆದ ಬಾರಿ ಏಳು ಸ್ಥಾನ ಗೆಲ್ಲಿಸುವುದರ ಜತೆಗೆ ನನ್ನನ್ನು ಸಿಎಂ ಹುದ್ದೆಗೇರುವಂತೆ ಮಾಡಿತ್ತು. ಪರಿಣಾಮ ಜಿಲ್ಲೆಯ ರೈತರ 750 ಕೋಟಿ ರೂ ಸಾಲ ಮನ್ನಾ ಮಾಡಿದ್ದೆ. ನನ್ನ ಸಂಕಷ್ಟ ಅರಿತು ಎಚ್.ಡಿ.ದೇವೇಗೌಡರು ಹಾಸಿಗೆಯಿಂದ ಎದ್ದು ಲವಲವಿಕೆಯಿಂದ ಪ್ರತಿದಿನ ನಾಲ್ಕು ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಇದು ದೈವ ಲೀಲೆ, ಅವರ ಚೈತನ್ಯ ನೋಡಿದರೆ ನನಗೆ ಮತ್ತಷ್ಟು ಹುರುಪು ಬಂದತಾಗುತ್ತದೆ. ಈ ಬಾರಿಯೂ ಜಿಲ್ಲೆಯ ಜನರು ಏಳು ಸ್ಥಾನದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಪುನರಾಯ್ಕೆ ಮಾಡಬೇಕೆಂದು ಮನವಿ ಮಾಡಿದರು.
    ಶಾಸಕ ರವೀಂದ್ರ ಶ್ರೀಕಂಠಯ್ಯ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಸಂತೋಷ್, ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಪೈ.ಮುಕುಂದ, ಜಿಪಂ ಮಾಜಿ ಸದಸ್ಯ ಮರೀಗೌಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts