More

    ಜೆಡಿಎಸ್ ನಿರ್ನಾಮ ಯಾವತ್ತಿಗೂ ಅಸಾಧ್ಯ

    ಶಿರಾ: ಉಪಸಮರ ರಣಾಂಗಣದಲ್ಲಿ ಮತಬೇಟೆಗೆ ಬಿಜೆಪಿ-ಕಾಂಗ್ರೆಸ್ ಜಾತಿವಾರು ನಾಯಕರ ಮೊರೆಹೋಗಿದ್ದರೆ, ಜೆಡಿಎಸ್ ಪರ ದೊಡ್ಡಗೌಡರ ಇಡೀ ಕುಟುಂಬ ಹೋರಾಟ ನಡೆಸುತ್ತಿದೆ. ಕ್ಷೇತ್ರದಲ್ಲಿ ಕನಕಪುರ ‘ಬಂಡೆ’ ಕೆಪಿಸಿಸಿ ಸಾರಥಿ ಡಿ.ಕೆ.ಶಿವಕುಮಾರ್ ಆರ್ಭಟವೂ ಜೋರಾಗಿದೆ.

    ಪ್ರಾದೇಶಿಕ ಪಕ್ಷ ಜೆಡಿಎಸ್ ರಾಜ್ಯದಲ್ಲಿ ನೆಲೆ ಕಳೆದುಕೊಂಡಿದೆ ಎಂದು ನಮ್ಮ ಪಕ್ಷದಿಂದಲೇ ಬೆಳೆದ ರಾಷ್ಟೀಯ ಪಕ್ಷದ ಕೆಲವು ನಾಯಕರು ಹೇಳುತ್ತಾರೆ. ಆದರೆ, ಶಿರಾ ಉಪ ಚುನಾವಣೆಯಲ್ಲಿ ಪಕ್ಷವು ಫಿನಿಕ್ಸ್‌ನಂತೆ ಎದ್ದು ಬರಲಿದ್ದು ಈ ಫಲಿತಾಂಶವು ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಜೆಡಿಎಸ್ ಪರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭವಿಷ್ಯ ನುಡಿದರು.

    ಶಿರಾ ತಾಲೂಕಿನ ಕಾಮಗೊಂಡನಹಳ್ಳಿಯಲ್ಲಿ ಮಂಗಳವಾರ ಜೆಡಿಎಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕೆಳಹಂತದ ಸಮುದಾಯಗಳಾದ ವಾಲ್ಮೀಕಿ, ಕುರುಬ, ಮಡಿವಾಳ, ಗೊಲ್ಲ, ಮುಸ್ಲಿಂ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿದ್ದು ಈ ದೇವೇಗೌಡ. ಮೀಸಲಾತಿ ನೀಡಿದ ಕಾರಣ ಎಲ್ಲ ಸಮುದಾಯಗಳು ಆರ್ಥಿಕ, ಸಾಮಾಜಿಕವಾಗಿ ಸಮಾಜದ ಮುನ್ನೆಲೆಗೆ ಬಂದಿದ್ದಾರೆ. ಇಂತಹ ಜನಪರ ಕಾಳಜಿ ಹೊಂದಿರುವ ಜೆಡಿಎಸ್ ನಿರ್ನಾಮ ಯಾವತ್ತಿಗೂ ಸಾಧ್ಯವಿಲ್ಲ ಎಂದು ಗುಡುಗಿದರು.

    ಮಾಜಿ ಸಚಿವ ಎಚ್.ಡಿ.ರೇವಣ್ಣ, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ, ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ಸುರೇಶ್ ಬಾಬು, ಜಿಪಂ ಸದಸ್ಯ ರಾಮಕೃಷ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಸಿ.ಆರ್.ಉಮೇಶ್, ಇಮ್ರಾನ್, ನಜ್ಮಾ ಪಾಲ್ಗೊಂಡಿದ್ದರು.

    ಹೇಮೆ ಹರಿಸಲು ನಾನು ಕಾರಣ: ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ಪ್ರಸ್ತಾವಕ್ಕೆ ನಾನು ಮುಖ್ಯಮಂತ್ರಿಯಾಗಿದ್ದಾಗ ಮಂಜೂರಾತಿ ನೀಡಿದೆ, ಶಿರಾ ಭಗೀರಥ ಎಂದು ಹೇಳುವ ಜಯಚಂದ್ರ ಯಾವ ವೇದಿಕೆಯಲ್ಲಿ ಕರಿತಾರೋ ಅಲ್ಲೇ ಚರ್ಚೆ ಮಾಡಲು ನಾನು ಸಿದ್ಧ, ನೀರಿನ ರಾಜಕೀಯ ಶಿರಾ ಕ್ಷೇತ್ರದಲ್ಲಿ ನಡೆಯಲ್ಲ ಎಂದು ತಾವರೆಕೆರೆಯಲ್ಲಿ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕುಟುಕಿದರು.

    ಶಿರಾ ತಾಲೂಕಿನ 17 ಸಾವಿರ ರೈತರ 87 ಕೋಟಿ ಸಾಲಮನ್ನಾ ಮಾಡಿದ್ದೇನೆ. 9 ತಿಂಗಳು ಕಳೆದರೂ ವೃದ್ಧ ಅಂಗವಿಕಲರಿಗೆ, ವಿಧವೆಯರಿಗೆ ಮಾಸಾಶನ ಹಣ ನೀಡಲು ಸಾಧ್ಯವಿಲ್ಲದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಿಂದ ಕೊಡಿಟ್ಟ ಹಣದಿಂದ ಮತದಾರರಿಗೆ ಆಮಿಷ ಒಡ್ಡಿ ಚುನಾವಣೆ ಗೆಲ್ಲಲು ವಾಮ ಮಾರ್ಗ ಹಿಡಿದಿದೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts