More

    ಪರಸ್ಪರ ಟೀಕೆ ಬಿಟ್ಟು ಅಭಿವೃದ್ಧಿಗೆ ಕೈ ಜೋಡಿಸಿ ; ಸಚಿವ ಮಾಧುಸ್ವಾಮಿ ಸಲಹೆ

    ತುಮಕೂರು : ಜಿಲ್ಲೆಯಲ್ಲಿ ನಾಯಕರು ಒಬ್ಬರಿಗೊಬ್ಬರು ಪರಸ್ಪರ ಟೀಕೆ ಮಾಡುವುದನ್ನು ಬಿಟ್ಟು ಅಭಿವೃದ್ಧಿಗೆ ಕೈಜೋಡಿಸಬೇಕು, ಮಕ್ಕಳಲ್ಲಿ ನೆಲ, ಜಲ, ಭಾಷೆ, ದೇಶದ ಬಗ್ಗೆ ಅಭಿಮಾನ ಬರುವಂತೆ ನಡೆದುಕೊಳ್ಳಬೇಕು ಎಂದು ಕಾನೂನು, ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ 75ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಜಿಲ್ಲೆಯ ಜನರಿಗೆ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದ ಅವರು, 45 ನಿಮಿಷದ ಭಾಷಣದಲ್ಲಿ ಇತಿಹಾಸವನ್ನು ನೆನೆದರು. ವರ್ತಮಾನದ ಪ್ರಗತಿಯ ಜತೆಗೆ ಭವಿಷ್ಯದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಕನಸು ಬಿಚ್ಚಿಟ್ಟರು.
    ಮೈಸೂರು ಸಂಸ್ಥಾನ ಸ್ವಾತಂತ್ರ್ಯ ಪೂರ್ವದಲ್ಲಿಯೇ ಅಭಿವೃದ್ಧಿಗೆ ಹೆಸರು ಪಡೆದಿತ್ತು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನಾವು ಸ್ಮರಿಸಬೇಕು, ಅಂದಿಗೆ ರಾಷ್ಟ್ರದಲ್ಲಿ ಅಭಿವೃದ್ಧಿಗೆ ಓಂಕಾರ ಹಾಕಿದ್ದರು, ಜತೆಗೆ ಸಿದ್ಧಗಂಗಾ ಮಠ ಸೇರಿ ನಾಡಿನ ಧಾರ್ಮಿಕ ಮಠಗಳೂ ಶೈಕ್ಷಣಿಕ ಅಭಿವೃದ್ಧಿಗೆ ಪಟ್ಟಶ್ರಮ ಶ್ರೇಷ್ಠವಾಗಿದೆ, ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕಿದೆ, ಅಭಿವೃದ್ಧಿಯಲ್ಲಿ ಇನ್ನೂ ಬಹಳಷ್ಟು ದೂರ ಹೋಗಬೇಕಿದೆ ಎಂದರು.

    ಜನಪ್ರತಿನಿಧಿಯಾದವರಿಗೆ ಮತ ಪಡೆಯುವುದಷ್ಟೇ ಶ್ರೇಷ್ಠವ್ಲ, ನಮ್ಮನ್ನು ನಂಬಿದವರ ಋಣ ತೀರಿಸುವುದು ಶ್ರೇಷ್ಠ ಎಂದು ಭಾವಿಸಿದ್ದೇನೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕನಸು ಕಟ್ಟಿಕೊಂಡಿದ್ದೇನೆ, ಈ ನಿಟ್ಟಿನಲ್ಲಿ ನಮಗೆ ಕರೊನಾ ಮಹಾಮಾರಿ, ಪ್ರಕೃತಿ ವಿಕೋಪಗಳು ಅಡ್ಡಿಯಾಗಿದ್ದರೂ ಎಲ್ಲರ ಸಹಕಾರದಿಂದ ಮೆಟ್ಟಿನಿಂತು ದೇಶಕಟ್ಟುವ ಕೈಂಕರ್ಯ ಮುಂದುವರಿದಿದೆ ಎಂದರು.

    ಪರಿಹಾರದ ತಾರತಮ್ಯ: ಎತ್ತಿನಹೊಳೆ ಯೋಜನೆಯಲ್ಲಿ ಕೊರಟಗೆರೆ ತಾಲೂಕು ಬೈರಗೊಂಡ್ಲು ಬಳಿ ನಿರ್ಮಿಸಬೇಕಿರುವ ಡ್ಯಾಂಗೆ ಸ್ವಲ್ಪ ಅಡ್ಡಿಯಾಗಿದೆ, ರೈತರ ಭೂಮಿಗೆ ನೀಡುವ ಪರಿಹಾರದ ತಾರತಮ್ಯ ಸರಿಪಡಿಸಲು ಯೋಚನೆ ನಡೆಯುತ್ತಿದೆ, ಅದಾಗದಿದ್ದರೆ ಒಂದೇ ಜಿಲ್ಲೆಯಲ್ಲಿ ಡ್ಯಾಂ ನಿರ್ಮಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ಮಾಧುಸ್ವಾಮಿ ಹೇಳಿದರು.
    ಪ್ರಕೃತಿ ವಿಕೋಪಗಳನ್ನು ಎದುರಿಸಿ ಅಭಿವೃದ್ಧಿ ಪಥದಲ್ಲಿ ಸಾಗೋಣ. ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗಿದೆ, ಸಂಶೋಧನೆಗಳನ್ನು ಹೆಚ್ಚು ಮಾಡುವ ನಿಟ್ಟಿನಲ್ಲಿ ಚರ್ಚೆ ಮಾಡೋಣ, ಕಾಲಕ್ಕನುಗುಣವಾಗಿ ಸಂಶೋಧನೆ ಅಗತ್ಯವಿದೆ ಎಂದರು.

    ಬಿಕ್ಕೆಗುಡ್ಡ, ಹಾಗಲವಾಡಿ, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಹಾಗೂ ಶಿರಾ ಭಾಗದಲ್ಲಿ ಸಾಕಷ್ಟು ನೀರಾವರಿ ಯೋಜನೆಗಳನ್ನು ಅನುಷ್ಟಾನ ಮಾಡಲಾಗುತ್ತಿದೆ, ಮುಂದಿನ ಒಂದೆರಡು ವರ್ಷದಲ್ಲಿ ಭದ್ರ ನೀರು ಜಿಲ್ಲೆಗೆ ಹರಿಯಲಿದ್ದು ಈ ನಿಟ್ಟಿನಲ್ಲಿ ಸಮರ್ಪಕ ಕೆಲಸ ನಡೆಯುತ್ತಿದೆ ಎಂದರು.

    ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಚಿದಾನಂದಗೌಡ, ಮೇಯರ್ ಬಿ.ಜಿ.ಕೃಷ್ಣಪ್ಪ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುವಾರ್ ಶಹಾಪುರ ವಾಡ್ ಸೇರಿ ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು ಇದ್ದರು.

    ವಿಜಯವಾಣಿ ‘ಅಮೃತ ಭಾರತ’ ಬಿಡುಗಡೆ : 75ನೇ ಸ್ವಾತಂತ್ರ್ಯ ಸಂಭ್ರಮದ ಸವಿನೆನಪಿಗಾಗಿ ‘ವಿಜಯವಾಣಿ’ ಹೊರತಂದಿರುವ ತುಮಕೂರು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತುಗಳ ಹೂರಣ ‘ಅಮೃತ ಭಾರತ’ ವಿಶೇಷ ಸಂಚಿಕೆಯನ್ನು ಸಚಿವ ಜೆ.ಸಿ.ಮಾಧುಸ್ವಾಮಿ ಬಿಡುಗಡೆ ಮಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ತುಮಕೂರು ಜಿಲ್ಲೆಯ ಮಹನೀಯರ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಲು ಸಂಗ್ರಹಯೋಗ್ಯ ಸಂಚಿಕೆಯನ್ನು ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹೊರತಂದಿರುವುದು ಸಂತೋಷದ ವಿಷಯ ಎಂದು ಮಾಧುಸ್ವಾಮಿ ಶ್ಲಾಸಿದರು.

    ಶಾಸಕ ಜಿ.ಬಿ.ಜ್ಯೋತಿಗಣೇಶ್, ತುಮಕೂರು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ರಾಹುಲ್‌ಕುಮಾರ್ ಮತ್ತಿತರರು ಇದ್ದರು.

    ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ ನೀಡಲಾಗುವುದು, ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಡ್ರಾಗನ್ ಪ್ರೂಟ್ ಬೆಳೆಯಲು ಉತ್ತೇಜನ ನೀಡಲಾಗಿದ್ದು ಇದರ ಸಂಸ್ಕರಣೆಗೆ ಶಿರಾದಲ್ಲಿ ಟಕ ಆರಂಭಿಸಲಾಗುವುದು, ಮೋಸಂಬಿ ಕೂಡ ಈ ವಾತಾವರಣದಲ್ಲಿ ಬೆಳೆಯಲು ಅವಕಾಶವಿದೆ. ಈ ನಿಟ್ಟಿನಲ್ಲಿ ಯೋಚಿಸಲಾಗಿದೆ. ಸ್ವಾತಂತ್ರ್ಯದ ಮೂಲ ಆಶಯದಂತೆ ಜನರ ಸಬಲೀಕರಣವಾಗಬೇಕು, ಗುಡಿ ಕೈಗಾರಿಕೆ ಉಳಿದು, ಬೆಳೆಯಬೇಕು.
    ಜೆ.ಸಿ.ಮಾಧುಸ್ವಾಮಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts