More

    ಮೆಣಸು ಬೆಳೆದು ಮಾದರಿಯಾದ ರೈತ ಜಯರಾಮಯ್ಯ

    ಅರಣ್ಯ ಕೃಷಿ, ಹೈನುಗಾರಿಕೆಗೂ ಸೈ

     

    ವಿಭೂತಿಕೆರೆ ಶಿವಲಿಂಗಯ್ಯಕೈಲಾಂಚ

    ಆಧುನಿಕ ಪದ್ಧತಿ ಅಳವಡಿಸಿಕೊಂಡು ಲಾಭ ತರುವ ಅಪರೂಪದ ಬೆಳೆಗಳನ್ನು ಬೆಳೆದು ಲಾಭದಾಯಕ ಕೃಷಿ ಮಾಡಿ ಯಶಸ್ಸು ಕಾಣುತ್ತಿರುವ ಹಲವಾರು ಮಂದಿ ನಮ್ಮ ನಡುವೆ ಇದ್ದಾರೆ. ಅಂತಹವರ ಸಾಲಿನಲ್ಲಿ ರಾಮನಗರ ತಾಲೂಕಿನ, ಕೈಲಾಂಚ ಹೋಬಳಿಯ ಹೊಸದೊಡ್ಡಿ ಗ್ರಾಮದ ರೈತ ಜಯರಾಮಯ್ಯ ಒಬ್ಬರು. ಹಳೇ ಪದ್ಧತಿ ಬೇಸಾಯ ಅವಲಂಬಿಸದೆ ಆಧುನಿಕ ಪದ್ಧತಿ ಅಳವಡಿಸಿಕೊಂಡು ಕೃಷಿಯಲ್ಲಿ ಯಶಸ್ಸು ಸಾಧಿಸಿದ್ದಾರೆ.

    ಜಯರಾಮಯ್ಯ ಅವರಿಗೆ 20 ಎಕರೆ ಜಮೀನಿದ್ದು, ಕಳೆದ 3-4 ವರ್ಷಗಳ ಮುಂಚೆ ತೆಂಗು, ಬಾದಾಮಿ, ಸೇಂದೂರ ಮಾವು, ರಾಗಿಗಷ್ಟೇ ಸೀಮಿತ ಕಂಡಿತ್ತು. ಆದರೆ ಈಗ ಅವರ ಜಮೀನಿನಲ್ಲಿ ಅಪರೂಪವಾದ ಇಮಾಮ್ ಫಸಂದ್ ವಿಶೇಷ ತಳಿಯ ಮಾವು ಹಾಗೂ ಈ ಭಾಗದಲ್ಲಿ ವಿರಳವಾದ ಮೆಣಸು ಕೃಷಿ ಮಾಡಿ ಮಾದರಿ ರೈತರಾಗಿ ಗುರುತಿಸಿಕೊಂಡಿದ್ದಾರೆ. ಇಬ್ಬರು ಸೋದರಿಯರು ಇವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.

    ಕೃಷಿ, ತೋಟಗಾರಿಕೆ, ಅರಣ್ಯ, ಮೇವಿನ ಬೆಳೆ, ಹೈನುಗಾರಿಕೆ ನಡೆಸುತ್ತಿದ್ದಾರೆ. ಮೂರು ಬೋರ್‌ವೆಲ್ ಇದ್ದು, ಬೆಳೆ ಬೆಳೆಯಲು ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಕೊಟ್ಟಿಗೆ ಗೊಬ್ಬರ ಬಳಸುತ್ತಾರೆ.

     

    ಮೆಣಸು ಬೆಳೆದು ಮಾದರಿಯಾದ ರೈತ ಜಯರಾಮಯ್ಯ

    ಮೆಣಸು

    ಸಾಮಾನ್ಯವಾಗಿ ಮಲೆನಾಡು ಭಾಗಕ್ಕಷ್ಟೇ ಸೀಮಿತವಾಗಿದ್ದ ಮೆಣಸು ಜಿಲ್ಲೆಯಲ್ಲಿ ಅಪರೂಪ. ಈಗೀಗ ಜಿಲ್ಲೆಯಲ್ಲೂ ಬೆರಳೆಣಿಕೆಯಷ್ಟು ರೈತರು ಅರಣ್ಯ ಕೃಷಿ ಮಾಡುವವರು ಮೆಣಸು ಬೆಳೆಯಲು ಚಿತ್ತ ಹರಿಸಿದ್ದಾರೆ. ಅಂತಹವರ ಪೈಕಿ ಜಯರಾಮಯ್ಯ ಒಬ್ಬರು. ಇವರು ಜಮೀನಿನಲ್ಲಿ ಅರಣ್ಯ ಕೃಷಿ ನಡೆಸಿದ್ದು ಪ್ರಾಯೋಗಿಕವಾಗಿ 100 ಕಾಳುಮೆಣಸಿನ ಬಳ್ಳಿಗಳನ್ನು ನೆಟ್ಟು ಉತ್ತಮ ಫಸಲು ಪಡೆದಿದ್ದಾರೆ. ಇಂದು ಇವರ ಜಮೀನಿನಲ್ಲಿ 500ಕ್ಕೂ ಹೆಚ್ಚಿನ ಮೆಣಸು ಗಿಡಗಳಿದ್ದು, ಲಾಭ ಕಂಡುಕೊಂಡಿದ್ದಾರೆ.

    ವಿಶೇಷ ತಳಿ ಮಾವು

    ರಾಮನಗರ ಜಿಲ್ಲೆಯಲ್ಲಿ ಪ್ರಮುಖವಾಗಿ ಬಾದಾಮಿ, ಸೆಂದೂರ, ರಸಪುರಿ, ಮಲಗೋವ, ಮಲ್ಲಿಕಾ ಮಾವಿನ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಆದರೆ ಜಯರಾಮಯ್ಯ ಅವರು ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚಿನ ವಿವಿಧ ತಳಿಯ ಮಾವಿನಮರಗಳನ್ನು ಬೆಳೆಸಿದ್ದು ಪ್ರಸ್ತುತ ಹಿಮಾಮ್ ಪಸಂದ್ ಎಂಬ ವಿಶೇಷ ತಳಿಯ 250ಕ್ಕೂ ಹೆಚ್ಚಿನ ಮಾವು ಮರ ಬೆಳೆಸಿ ಕಳೆದ ವರ್ಷದಿಂದ ಫಸಲು ಕಾಣುತ್ತಿದ್ದಾರೆ.

    ಮಾರುಕಟ್ಟೆ

    ಇವರು ಬೆಳೆಯುವ ಮಾವು ಯಾವುದೇ ಮಾರುಕಟ್ಟೆಗೆ ಹೋಗುವುದಿಲ್ಲ. ನೇರವಾಗಿ ಜಯರಾಮಯ್ಯ ಅವರೇ ಹಣ್ಣುಗಳನ್ನು ಕೊಯ್ಲು ಮಾಡಿ ರಾಸಾಯನಿಕ ಬಳಸದೆ ಸ್ವಾಭಾವಿಕವಾಗಿ ಹಣ್ಣು ಮಾಡಿ ಬೆಂಗಳೂರು ಹಾಪ್‌ಕಾಮ್ಸ್, ದೊಡ್ಡ ಮಾಲ್‌ಗಳು, ಅಪಾರ್ಟ್‌ಮೆಂಟ್‌ಗಳಿಗೆ ತಮ್ಮದೇ ಪ್ಯಾಕೆಟ್‌ಗಳಲ್ಲಿ ಸರಬರಾಜು ಮಾಡುತ್ತಾರೆ. ಇದರಿಂದ ಹೆಚ್ಚಿನ ಲಾಭವೂ ಉಂಟು ಎನ್ನುತ್ತಾರೆ.

    ಜಾನುವಾರು ಸಾಕಣೆ

    ಹೈನುಗಾರಿಕೆ ಮಾಡುವ ಜಯರಾಮಯ್ಯ ಅವರು, ಮಿಶ್ರತಳಿಯ ಆರು ಹಸು ಸಾಕಿದ್ದಾರೆ. ಉತ್ತಮ ಹಾಲು ಉತ್ಪಾದನೆಯಲ್ಲೂ ಲಾಭ ಕಾಣುತ್ತಿದ್ದಾರೆ. ಜತೆಗೆ ಮೇಕೆ, ಕುರಿ, 100ಕ್ಕೂ ಹೆಚ್ಚು ನಾಟಿ ಕೋಳಿ, ಮೊಟ್ಟೆ ಕೋಳಿ ಸಾಕಣೆ ಮಾಡಿದ್ದಾರೆ. ಪ್ರಸ್ತುತ ಹೊಸದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    ಹಲವು ಕೃಷಿ

    ಬಾಳೆ, ಪಪ್ಪಾಯ, ಅಡಕೆ, ಮುಸುಕಿನಜೋಳ, ಮಾವು, ತೆಂಗು, ರಾಗಿ, ನುಗ್ಗೆ, ಹೈನುಗಾರಿಕೆ ಮೇವು, ತರಕಾರಿ ಬೆಳೆಗಳ ಕೃಷಿ ಜತೆಗೆ ಹೆಬ್ಬೇವು, ಆರ್ಕಿಲಸ್, ತೇಗ, ಸಿಲ್ವರ್, ಮಹಾಗನಿ ಶ್ರೀಗಂಧ ಇತರ ಅರಣ್ಯ ಕೃಷಿ ಮರಗಳನ್ನು ಬೆಳೆಸಿದ್ದಾರೆ. ಮಾವಿನ ತೋಟದಲ್ಲಿ ತೊಗರಿ, ಅಲಸಂದೆ, ಅವರೆ, ರಾಗಿ, ಜೋಳ, ಹುರುಳಿಯನ್ನು ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಬೆಳೆಗಳಿಗೆ ಹೆಚ್ಚಾಗಿ ರಸಗೊಬ್ಬರ ನೀಡದೆ ಕೊಟ್ಟಿಗೆ ಗೊಬ್ಬರ ನೀಡುವ ಜಯರಾಮಯ್ಯ ಸಾವಯವ ಕೃಷಿಯತ್ತ ಚಿತ್ತ ಹರಿಸಿದ್ದಾರೆ. ಜಮೀನಿನ ಇಕ್ಕೆಲಗಳಲ್ಲಿ ಅರಣ್ಯ ಕೃಷಿ ಮರ ನೆಡಲಾಗಿದ್ದು, ಹನಿ ನೀರಾವರಿ ಮೂಲಕ ಮತ್ತಷ್ಟು ವಿಸ್ತಾರದಲ್ಲಿ ಮೆಣಸು ಕೃಷಿಗೆ ಉತ್ತೇಜನ ನೀಡಲು ತಯಾರಿ ನಡೆಸಿದ್ದಾರೆ. ಜತೆಗೆ ವಿಶೇಷ ತಳಿಯ ವಿದೇಶಿ ಮಾವು ಬೆಳೆ ಬೆಳೆಯಲು ಆಸಕ್ತಿ ವಹಿಸಿದ್ದಾರೆ.

    ಆನೆ ಕಾಟಕ್ಕೆ ಸೋಲಾರ್ ಉಪಾಯ

    ತೆಂಗಿನಕಲ್ಲು ಅರಣ್ಯದ ಸಮೀಪವೇ ಹೊಸದೊಡ್ಡಿ ಗ್ರಾಮವಿರುವ ಕಾರಣ ಆನೆಗಳ ಕಾಟ ತಪ್ಪಿದ್ದಲ್ಲ. ಆನೆಗಳ ದಾಳಿಯಿಂದ ಮಾವು ಸೇರಿ ತೆಂಗಿನಮರ ಇವರ ಜಮೀನಿನಲ್ಲಿ ನಾಶವಾಗುತ್ತಿದ್ದವು. ಆನೆಗಳ ದಾಳಿಯಿಂದ ಬೆಳೆಗಳನ್ನು, ಬೆಳೆದ ಮರಗಳನ್ನು ರಕ್ಷಿಸಿಕೊಳ್ಳಲು ಉಪಾಯ ಕಂಡುಕೊಂಡಿರುವ ಜಯರಾಮಯ್ಯ, ಜಮೀನಿನ ಸುತ್ತಲೂ ಸೋಲಾರ್ ಬೇಲಿ ಅಳವಡಿಸಿಕೊಂಡಿದ್ದಾರೆ.

     

    ಮೆಣಸು ಬೆಳೆದು ಮಾದರಿಯಾದ ರೈತ ಜಯರಾಮಯ್ಯ

    ಸಕಲೇಶಪುರದ ಕಡೆಗೆ ಹೋದ ಸಂದರ್ಭದಲ್ಲಿ ಮೆಣಸು ಕೃಷಿ ಕಂಡಿದ್ದೆ. ಅಲ್ಲಿನ ಕೃಷಿಕರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮಾಹಿತಿ ತಿಳಿದು ನಮ್ಮಲ್ಲೂ ಮೆಣಸು ಬೆಳೆಯಬಹುದಲ್ಲ ಎಂದೆನಿಸಿ ಪ್ರಾಯೋಗಿಕವಾಗಿ 100 ಸಸಿಗಳನ್ನು ನೆಡಲಾಯಿತು. ಇವು ಉತ್ತಮ ಫಸಲು ನೀಡಿದವು. ಈಗ 500ಕ್ಕೂ ಹೆಚ್ಚಿನ ಗಿಡಗಳಿವೆ. ಉತ್ತಮ ಫಸಲು ಕೈಸೇರುತ್ತಿದ್ದು ಲಾಭ ನೋಡುವಂತಾಗಿದೆ. ಮುಂದೆ ಮೆಣಸು ಮತ್ತು ವಿಶೇಷ ತಳಿಯ ಹಿಮಾಮ್ ಪಸಂದ್ ಮಾವು ಬೆಳೆ ಪ್ರದೇಶವನ್ನು ಮತ್ತಷ್ಟು ವಿಸ್ತರಿಸಬೇಕು ಎಂಬ ಚಿಂತನೆ ಇದೆ.

    ಜಯರಾಮಯ್ಯ, ಮಾದರಿ ಕೃಷಿಕ

    ಸಂಪರ್ಕ ವಿವರ
    ಮಾಹಿತಿಗೆ ಸಂಪರ್ಕಿಸಬೇಕಾದ ಮೊ.ಸಂಖ್ಯೆ 99729 60372 (ಸಮಯ ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts