More

    ಸದಾಶಿವ ಶಿವಯೋಗಿಗಳ ಜಾತ್ರಾ ಮಹೋತ್ಸವ, ಕಾಲಜ್ಞಾನಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿ

    ವಿಜಯಪುರ: ಹೆಲಿಕಾಪ್ಟರ್ ಮೂಲಕ ಪುಷ್ಪ ಸಮರ್ಪಣೆ, ಗ್ರಂಥ ಲೋಕಾರ್ಪಣೆ, ಧಾರ್ಮಿಕ ಪೂಜೆ ಹಾಗೂ ಪುನಸ್ಕಾರಗಳೊಂದಿಗೆ ಕತಕನಹಳ್ಳಿಯ ಶ್ರೀಗುರು ಚಕ್ರವರ್ತಿ ಸದಾಶಿವ ಶಿವಯೋಗಿಗಳ ಜಾತ್ರಾ ಮಹೋತ್ಸವ ಬುಧವಾರ ಅದ್ದೂರಿಯಾಗಿ ನೆರವೇರಿತು.

    ಕಾಲಜ್ಞಾನಕ್ಕೆ ಹೆಸರಾದ ಸದಾಶಿವ ಶಿವಯೋಗಿಗಳ ಚರಿತ್ರೆಯ ‘ಲೀಲಾಮೃತ’ ಕೃತಿ ಬಿಡುಗಡೆಗೊಳಿಸಿದ ಇಂಗಳೇಶ್ವರದ ವಚನ ಶಿಲಾಮಂಟಪದ ಚನ್ನಬಸವ ಮಹಾಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯ ಹಾಗೂ 12 ನೇ ಶತಮಾನದಲ್ಲಿ ಸಾಮಾಜಿಕ ಬದಲಾವಣೆಗಾಗಿ ನಡೆದಂತಹ ಬೆಳವಣಿಗೆಗಳ ಬಗ್ಗೆ ಸಂಶೋಧನೆಯಾಗಬೇಕಾಗಿದೆ. ಸಂಸ್ಕೃತದಲ್ಲಿ ಇರುವಂತಹ ಹಳೆಯ ಕಟ್ಟುಗಳನ್ನು ತೆರೆದು ಓದಬೇಕು ಎಂದರು.

    ವೇದಮೂರ್ತಿ ಶ್ರೀಶೈಲ ಹಿರೇಮಠ ಅವರ ಮಸ್ತಕದಿಂದ ಬಂದ ಮಾಹಿತಿ ಇಂದು ಪುಸ್ತಕವಾಗಿ ಹೊರ ಬಂದಿದೆ. ಸ್ವಾಮಿಗಳು ಇಂತಹ ದೊಡ್ಡ ಗ್ರಂಥವನ್ನು ತಲೆಯಲ್ಲಿ ಹೊತ್ತುಕೊಂಡು ತಿರುಗಾಡಿ ಪುಸ್ತಕ ರೂಪದಲ್ಲಿ ಭಕ್ತರಿಗೆ ನೀಡಿದ್ದಾರೆ. ಇದರಲ್ಲಿ ಸಂಸ್ಕೃತ, ಹಿಂದಿ, ಕನ್ನಡ ಸೇರಿ ಹಲವು ಭಾಷೆಗಳ ಪದಗಳನ್ನು ಬಳಕೆ ಮಾಡಲಾಗಿದೆ. ದಾಖಲೆಗಳು ಬೇರೆ, ಬೇರೆ ಭಾಷೆಯಲ್ಲಿ ಇರುವುದರಿಂದ ಹಾಗೆ ಬಳಕೆ ಮಾಡಲಾಗಿದೆ. ಆದ್ದರಿಂದ ಎಲ್ಲರೂ ಈ ಪುಸ್ತಕ ಓದಬೇಕು. ಇದರಿಂದ ನಮ್ಮ ಮಸ್ತಕ ಜ್ಞಾನದಿಂದ ತುಂಬಿಕೊಳ್ಳುತ್ತದೆ ಎಂದರು.

    ಗ್ರಂಥ ಕರ್ತೃ ಶ್ರೀಶೈಲ ಹಿರೇಮಠ ಮಾತನಾಡಿ, ಶಿವಯ್ಯ ಅಪ್ಪನವರು 48 ವರ್ಷಗಳವರೆಗೆ ನಿರಂತರ ಅಧ್ಯಯನ ಮಾಡಿದ್ದಾರೆ. ನಾನು ಮಾಡಿದ್ದು ಹುಲ್ಲು ಕಡ್ಡಿಗೆ ಸಮ. ಬಬಲಾದಿ ಸದಾಶಿವನ ಚರಿತ್ರೆ ಸಾಗರವಿದ್ದಂತೆ. ಶಿವಯ್ಯ ಅಪ್ಪನವರು ನನಗೆ ಪುರಾಣ ರಚನೆಗೆ ಹೇಳಿದಾಗ ಕೇವಲ ಅಕ್ಷರ ಬರೆಯುವುದು ಅಷ್ಟೇ ಅದನ್ನು ನೀವೇ ಬರೆಯಬೇಕು ಎಂದು ಪ್ರಾರಂಭಿಸಿದೆ. ಕೇವಲ 7 ನೇ ತರಗತಿ ಓದಿದ್ದೇನೆ. ಹೆಸರಿಲ್ಲದೆ ಅನಾಥನಾಗಿ ಹೋಗುವಂಥ ನನಗೆ ಇಂಥಹ ಪುಣ್ಯ ಕಾರ್ಯ ಮಾಡಲು ಪ್ರೆರೇಪಿಸಿದರು ಎಂದು ಭಾವುಕರಾದರು.

    ಕತಕನಳ್ಳಿ ಶಿವಯ್ಯ ಮಹಾಸ್ವಾಮೀಜಿ ಮಾತನಾಡಿ, ಭಕ್ತರು ಮಠಕ್ಕೆ ತನು ಮನ ಧನದಿಂದ ಸಾಕಷ್ಟು ಸಹಾಯ ಸಹಕಾರ ನೀಡಿದ್ದಾರೆ. ಈ ಗ್ರಂಥ ಬಹಳಷ್ಟು ವಿಶೇಷ ಸ್ಥಾನ ಪಡೆದುಕೊಂಡಿದೆ ಎಂದರು.

    ಹಂಪಿ ವಿವಿ ಹಸ್ತ ಪ್ರತಿ ವಿಭಾಗದ ಮುಖ್ಯಸ್ಥ ಡಾ.ಕೆ. ರವೀಂದ್ರ ಮಾತನಾಡಿ, ಕತಕನಹಳ್ಳಿ ಮಠದ ಪರಂಪರೆಯಲ್ಲಿ ಈ ದಿನ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು ಎಂದರು.

    ಮೆರೇಗುದ್ದಿ ಅಡವಿಸಿದ್ದೇಶ್ವರಮಠದ ನಿರುಪಾಧೀಶ್ವರ ಮಹಾಸ್ವಾಮೀಜಿ, ನಿಡಸೋಸಿ ಸಿದ್ಧಸಂಸ್ಥಾನ ಮಠದ ಜಗದ್ಗುರು ಪಂಚಮಶಿವಲಿಂಗೇಶ್ವರ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.

    ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಪ ಸದಸ್ಯ ಸುನೀಲಗೌಡ ಪಾಟೀಲ, ಉದ್ಯಮಿಗಳಾದ ಬಾಬುಗೌಡ ಬಿರಾದಾರ, ರಾಜು ಗುಡ್ಡೋಡಗಿ, ವಾಸ್ತು ತಜ್ಞ ಗೀರಿಧರ ರಾಜು, ಮಹಾಂತೇಶ ಬಿರಾದಾರ, ಗಂಗಾಧರ ಸಂಬಣ್ಣಿ, ಪ್ರಕಾಶ ಪಾಟೀಲ, ಅಪ್ಪಾಸಾಹೇಬ ಕೊಟ್ಯಾಳ, ಮಲ್ಲು ಕವಲಗಿ, ಸಿದ್ಧಲಿಂಗ ಹಂಚನಾಳ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts