More

    ಮೈದಾನಕ್ಕೆ ನುಗ್ಗಿದ್ದ ಇಂಗ್ಲೆಂಡ್ ಪ್ರೇಕ್ಷಕನಿಗೆ ನಿಷೇಧ ಹೇರಿದ ಯಾರ್ಕ್‌ಷೈರ್

    ನವದೆಹಲಿ: ಲಾರ್ಡ್ಸ್ ಹಾಗೂ ಲೀಡ್ಸ್‌ನಲ್ಲಿ ಟೆಸ್ಟ್ ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ್ದ ಯೂಟೂಬರ್ ಡೇನಿಯಲ್ ಜಾರ್ವಿಸ್ ಉರುಫ್ ‘ಜಾರ್ವೋ 69’ ಎಂಬಾತನನ್ನು ಹೆಡಿಂಗ್ಲೆ ಮೈದಾನಕ್ಕೆ ಜೀವಮಾನ ನಿಷೇಧ ಹೇರಲಾಗುವುದು ಎಂದು ಇಂಗ್ಲೀಷ್ ಕೌಂಟಿ ಯಾರ್ಕ್‌ಷೈರ್ ತಿಳಿಸಿದೆ. ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಭಾರತ ತಂಡದ ಜೆರ್ಸಿ ಧರಿಸಿ ಮೈದಾನಕ್ಕೆ ನುಗ್ಗಿ ಫೀಲ್ಡಿಂಗ್ ಮಾಡಲು ಜಾರ್ವೋ ಮುಂದಾಗಿದ್ದರೆ, ಲೀಡ್ಸ್ ಪಂದ್ಯದ ವೇಳೆ ಶುಕ್ರವಾರ ಭಾರತದ ಪರ ಬ್ಯಾಟಿಂಗ್ ಮಾಡಲು ಪ್ಯಾಡ್ ಕಟ್ಟಿ ಮೈದಾನಕ್ಕಿಳಿದಿದ್ದ. ‘ಹೌದು ಡೇನಿಯಲ್ ಜಾರ್ವಿಸ್ ಎಂಬಾತನನ್ನು ಹೆಡಿಂಗ್ಲೆ ಮೈದಾನದಿಂದ ಜೀವಮಾನ ನಿಷೇಧ ಹೇರಲಾಗಿದೆ. ಜತೆಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸಲಾಗುವುದು’ ಎಂದು ಯಾರ್ಕ್‌ಷೈರ್ ಸಿಸಿಸಿ ಕ್ರೀಡಾ ವಕ್ತಾರ ತಿಳಿಸಿದ್ದಾರೆ.

    ಇದನ್ನೂ ಓದಿ: 3ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಮುಗ್ಗರಿಸಿದ ಭಾರತ, 1-1 ರಿಂದ ಸರಣಿ ಸಮಬಲ

    ಆತನ ಜೆರ್ಸಿ ಹಿಂದೆ ಜಾರ್ವೋ 69 ಎಂದು ಬರೆದಿತ್ತು. ಆತ ಇಂಗ್ಲೆಂಡ್‌ನ ಜನಪ್ರಿಯ ಪ್ರಾಂಕ್‌ಸ್ಟಾರ್ ಎಂದೂ ಹೇಳಲಾಗಿದೆ. ಆತ ಭಾರತೀಯ ಜೆರ್ಸಿ ಧರಿಸಿ ಮೈದಾನಕ್ಕೆ ನುಗ್ಗಿ ಆಟಗಾರರಿಗೆ ಕಸಿವಿಸಿ ಹುಟ್ಟಿಸಿದ್ದ. ಜತೆಗೆ ಸರ್ಜಿಕಲ್ ಮಾಸ್ಕ್ ಕೂಡ ಧರಿಸಿದ್ದ. ಇದೊಂದು ತಮಾಷೆಯ ಘಟನೆಯಾಗಿದ್ದರೂ, ಭದ್ರತಾ ಮತ್ತು ಬಯೋಬಬಲ್ ಉಲ್ಲಂಘನೆಯ ಆತಂಕವನ್ನು ಸೃಷ್ಟಿಸಿತ್ತು. ಭಾರತ-ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಚಹಾ ವಿರಾಮದ ಬಳಿಕ ರೋಹಿತ್ ಶರ್ಮ ಔಟಾಗಿ ನಿರ್ಗಮಿಸಿದಾಗ ಈ ಪ್ರೇಕ್ಷಕ ಪ್ಯಾಡ್ ಧರಿಸಿ, ಬ್ಯಾಟ್ ಹಿಡಿದು ಬ್ಯಾಟ್ಸ್‌ಮನ್ ರೀತಿಯಲ್ಲಿ ಮೈದಾನಕ್ಕೆ ನುಗ್ಗಿದ. ಈ ಮೂಲಕ ಭಾರತ ತಂಡದ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಎನ್ನುವ ರೀತಿಯಲ್ಲಿ ವರ್ತಿಸಿದ. ಆಗ ಮೈದಾನದ ಭದ್ರತಾ ಸಿಬ್ಬಂದಿ ಆತನನ್ನು ಮೈದಾನದಿಂದ ಹೊರಗೆ ಎಳೆದೊಯ್ದಿದ್ದರು.

    ಕೋವಿಡ್ ಕಾಲದಲ್ಲಿ ಬಯೋಬಬಲ್ ವ್ಯಾಪ್ತಿಯಲ್ಲಿ ಹೀಗೆ ಏಕಾಏಕಿ ಮೈದಾನಕ್ಕೆ ನುಗ್ಗುವುದು ಆತಂಕಕ್ಕೆ ಕಾರಣವಾಗಿತ್ತು. ಭಾರತ ತಂಡದ ಮಾಜಿ ಆಟಗಾರರು ಈ ಕುರಿತು ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಜಾರ್ವೋ ಬಗ್ಗೆ ಟೀಮ್ ಇಂಡಿಯಾದಿಂದ ಅಧಿಕೃತ ದೂರು ದಾಖಲಾಗಿಲ್ಲ ಎಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts