More

    ಅದೊಂದು ಶಕ್ತಿ ಮುಂದೆ ಯಾರು ದೊಡ್ಡವರು ಹೇಳಿ? ಜೀವನದ ಬಗ್ಗೆ, ಜೀವದ ಬಗ್ಗೆ ಎಲ್ಲರೂ ಚಿಂತಿಸುವಂತಾಗಿದೆ!

    ಆತ್ಮಶೋಧನೆಯು ‘ನನ್ನ ಮುಂಚೆಯೇ ಭೂಮಿಯಲ್ಲಿ ಯಾವುದೋ ಇದೆ. ಅದು ಕಣ್ಣಿಗೆ ಕಾಣಿಸಿಕೊಳ್ಳದಿದ್ದರೂ ಆ ಶಕ್ತಿ ಎಲ್ಲವನ್ನೂ ನಿರ್ವಹಿಸುತ್ತದೆ’ ಎಂಬ ಅರಿವು ಮೂಡಿಸುತ್ತದೆ. ಮನುಷ್ಯನನ್ನು ವಿನೀತನನ್ನಾಗಿ ಮಾಡುತ್ತದೆ. ಈ ಶೋಧ, ಅದರ ನಿಷ್ಕರ್ಷವೇ ಧರ್ಮ ಎಂದೆನಿಸಿಕೊಳ್ಳುತ್ತದೆ.

    ಜೀವನದ ಬಗ್ಗೆ, ಜೀವದ ಬಗ್ಗೆ ಎಲ್ಲರೂ ಚಿಂತಿಸುವಂತಾಗಿದೆ!

    ಅದೊಂದು ಶಕ್ತಿ ಮುಂದೆ ಯಾರು ದೊಡ್ಡವರು ಹೇಳಿ? ಜೀವನದ ಬಗ್ಗೆ, ಜೀವದ ಬಗ್ಗೆ ಎಲ್ಲರೂ ಚಿಂತಿಸುವಂತಾಗಿದೆ!ವೈರಸ್ ಅನ್ನು ನಿಮಿತ್ತವಾಗಿಟ್ಟುಕೊಂಡು ಪ್ರಕೃತಿ ಮನುಷ್ಯನಿಗೆ ಪಾಠ ಕಲಿಸಲು ಹೊರಟಿದೆ. ಹಣ, ಅಧಿಕಾರ, ಅಂತಸ್ತು, ಪ್ರತಿಷ್ಠೆ, ಅಹಂಕಾರ, ವರ್ಚಸ್ಸು ಹೀಗೆ ಭೌತಿಕದ ಎಲ್ಲ ‘ಬೇಕು’ಗಳನ್ನು ಹೊಂದಿರುವ ಜನರೂ ಈಗ ಜಪಿಸುತ್ತಿರುವ ಮಂತ್ರ ‘ಬಚ್ನೇ ಕೇಲಿಯೆ ಕುಛ್ ತೋ ಕರೊನಾ’ (ಬದುಕುಳಿಯಲು ಏನಾದರೂ ಮಾಡಿ)! ಹಾಗಿದ್ದರೆ, ಜೀವನದಲ್ಲಿ ಯಾವುದು ಶ್ರೇಷ್ಠ? ಎಂಬುದು ಯಕ್ಷಪ್ರಶ್ನೆಯಾಗಿ ಕಾಡುತ್ತಿರುವ ಹೊತ್ತಿದು. ಸಂಕಟದ ಕಾಲದಲ್ಲಿ ನೆರವಿಗೆ ಬರುತ್ತದೆ ಎಂದು ಹಣ ಗುಡ್ಡೆ ಹಾಕಿಕೊಳ್ಳುತ್ತಾರಲ್ಲ, ಆ ಹಣ ಕರೊನಾವನ್ನು ಓಡಿಸಬಲ್ಲದೆ? ‘ಅಧಿಕಾರ ಇದೆ, ಎಲ್ಲರೂ ನಾನು ಹೇಳಿದ ಹಾಗೆ ಕೇಳುತ್ತಾರೆ’ ಎಂದು ಬೀಗುತ್ತಿದ್ದವರು ಕರೊನಾಗೆ ಆರ್ಡರ್ ಕೊಡಬಲ್ಲರಾ? ಲಂಚ, ಆಮಿಷ ಇತ್ಯಾದಿ ಒಡ್ಡಿ ತಮ್ಮ ಕೆಲಸ ಮಾಡಿಸಿಕೊಳ್ಳುತ್ತಿದ್ದವರು ವೈರಸ್​ಗೆ ಯಾವ ಆಮಿಷ ಒಡ್ಡಿಯಾರು? ಅಂದರೆ, ಸಂಪತ್ತು, ಪ್ರತಿಷ್ಠೆ ಯಾವುದೂ ಜೀವ ಉಳಿಸಲು ಬರುವುದಿಲ್ಲ; ಹೀಗಿದ್ದರೂ ಮನುಷ್ಯರ ಅಹಂಕಾರ ತಣಿಯುತ್ತಿಲ್ಲ; ಸ್ವಾರ್ಥ ಕರಗುತ್ತಿಲ್ಲ! ಪ್ರಕೃತಿ ಏನು ಹೇಳಲು ಹೊರಟಿದೆ ಎಂದು ಗಂಭೀರವಾಗಿ ಕೇಳಿಸಿಕೊಳ್ಳಲು ಮುಂದಾಗುತ್ತಿಲ್ಲ.

    ನಾವು ಎಲ್ಲೋ ಎಡವಿರಬೇಕಲ್ಲ, ಪೋಷಿಸಬೇಕಾದ ಪ್ರಕೃತಿಯೇ ಹೀಗೆ ತಿರುಗಿ ಬಿದ್ದಿದೆ, ಶವಗಳ ರಾಶಿ ಕಣ್ಣೆದುರು ಕಾಣುತ್ತಿದೆ ಎಂದರೆ ಜೀವನಧರ್ಮ ಎಲ್ಲೋ ಹಾದಿತಪ್ಪಿದೆ ಎಂದೇ ಅರ್ಥ ಅಲ್ಲವೇ? ಅದನ್ನು ವಿವೇಚಿಸುವುದನ್ನು ಬಿಟ್ಟು ‘ನಾನು ಅವಿನಾಶಿ, ಚಿರಂಜೀವಿ’ ಎಂಬಂತೆ ವರ್ತಿಸಿದರೆ ಆ ಪ್ರಕೃತಿ ನಮ್ಮನ್ನೆಲ್ಲ ಕ್ಷಮಿಸುವುದೇ? ಇಂಥ ಮಾರಕ ವೈರಸ್ ಹುಟ್ಟಿಗೆ ಕಾರಣವಾದ ಚೀನಾ ಈ ಬಗ್ಗೆ ಏನೂ ಮಾತಾಡುತ್ತಿಲ್ಲ, ವೈರಸ್ ಹುಟ್ಟಲು ಕಾರಣವೇನು ಎಂದೂ ತಿಳಿಸುತ್ತಿಲ್ಲ (ಆ ದೇಶದ ಆಹಾರಪದ್ಧತಿ, ಎಲ್ಲವನ್ನೂ ಭಕ್ಷಿಸುವ ವಿಕೃತಿ ಇಂಥ ಸ್ಥಿತಿಗೆ ಕಾರಣ ಎಂಬ ಆಕ್ಷೇಪದ ದನಿ ಜೋರಾಗಿದೆ). ಭಾರತ ಸೇರಿ 180ಕ್ಕೂ ಅಧಿಕ ರಾಷ್ಟ್ರಗಳು ಹೊಸ ಬಗೆಯ ಸಂಕಟಕ್ಕೆ ಸಿಲುಕಿವೆ. ಅಪಾಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಡೀ ರಾಷ್ಟ್ರ, ಅರ್ಧಕ್ಕಿಂತಲೂ ಜಗತ್ತು ಮನೆಯಲ್ಲಿ ಬಂಧಿಯಾಗುವಂತೆ ಆಗಿದೆ. ಇಂದು ಅಡಿಯಿಡುತ್ತಿರುವ ಹೊಸ ಸಂವತ್ಸರದ ಬಗ್ಗೆ ಯಾರಿಗೂ ಸಂಭ್ರಮವಿಲ್ಲ, ಹಬ್ಬ ಮಾಡಬೇಕಾದ ಮನಸುಗಳಲ್ಲಿ ಆತಂಕ ಮನೆ ಮಾಡಿದೆ. ಅದು ಸ್ವಾಭಾವಿಕವೂ ಬಿಡಿ. ಹಬ್ಬ ಮತ್ತೊಮ್ಮೆ ಬರಬಹುದು. ಆದರೆ, ಈಗ ಜೀವ ಉಳಿಸಿಕೊಳ್ಳುವುದು ಮುಖ್ಯ ಅಲ್ಲವೆ? ಔಷಧವೂ ಇಲ್ಲದ, ತೀವ್ರವಾಗಿ ಹರಡುವ ಈ ಕಾಯಿಲೆ ವಿರುದ್ಧ ಸಂಯಮದಿಂದ ಹೋರಾಡುವುದೇ ಏಕೈಕ ಮಾರ್ಗ. ಪರಿಸ್ಥಿತಿ ಸರಿಯಾಗಲು ಒಂದೆರಡು ತಿಂಗಳು ಅಥವಾ ಅದಕ್ಕಿಂತ ಕೊಂಚ ಹೆಚ್ಚೇ ಸಮಯ ಬೇಕಾಗಬಹುದು ಎಂಬುದು ತಜ್ಞರ ಅಂಬೋಣ. ಆ ಬಳಿಕ ಕರೊನಾದಿಂದ ಉಂಟಾದ ನಷ್ಟದ ಲೆಕ್ಕಾಚಾರ ಆರಂಭ! ಆರ್ಥಿಕ ಹಾನಿ ಸರಿಪಡಿಸಿಕೊಳ್ಳಲಂತೂ ಹಲವು ವರ್ಷಗಳೇ ಬೇಕಾಗಬಹುದು ಅನಿಸುತ್ತದೆ.

    ಅದೇನೆ ಇದ್ದರೂ ಮಾನವ ಮರೆತೇ ಹೋಗಿರುವ ಸಂಗತಿಗಳನ್ನು, ಜೀವನಧರ್ಮವನ್ನು ಮತ್ತೆ ಆವಾಹನೆ ಮಾಡಿಕೊಳ್ಳಲು, ಮಾಡಿರುವ ಅಧ್ವಾನಗಳನ್ನು ತಿದ್ದಿಕೊಳ್ಳಲು ಇದು ಸರಿಯಾದ ಸಮಯ. ಈ ಸೃಷ್ಟಿಗೆಲ್ಲ ಮೂಲ ಒಂದು ಅಸಾಧಾರಣ ಶಕ್ತಿ ಎಂದು ಹೇಳಲಾಗಿದೆ. ಅದಕ್ಕೆ ದೇವರಾದರೂ ಎನ್ನಿ, ವಿಜ್ಞಾನ ಅಂದಾದರೂ ಎನ್ನಿ; ಅಥವಾ ಮತ್ತೆ ಯಾವುದೇ ಹೆಸರಿನಿಂದ ಕರೆದರೂ ಶಕ್ತಿ ಇರುವುದಂತೂ ನಿಜ. ಅದರ ಸಾಮರ್ಥ್ಯದ ಮುಂದೆ ಹುಲುಮಾನವರೆಲ್ಲ ನಗಣ್ಯರು ಎಂಬುದು ಚರಿತ್ರೆಯಲ್ಲೂ ಸಾಬೀತಾಗಿದೆ; ವರ್ತಮಾನದಲ್ಲೂ ಢಾಳಾಗಿ ಕಾಣುತ್ತಿದ್ದೇವೆ. ಆದರೆ, ಆ ಶಕ್ತಿಯ ಕಡೆ ನಿರ್ಲಕ್ಷಿಸಿ, ಎಲ್ಲೆಲ್ಲೋ ಮುಖ ಮಾಡಿ ಸಾಗುತ್ತಿದ್ದೇವಲ್ಲ, ನಮ್ಮ ಸಂಸ್ಕೃತಿಯ ವಿರುದ್ಧ ದಿಕ್ಕಿಗೆ ಪಯಣಿಸುತ್ತಿದ್ದೇವಲ್ಲ…. ಒಮ್ಮೆ ಯೋಚಿಸಬೇಕಲ್ಲವೆ…?

    ಬನ್ನಿ, ಮತ್ತೊಮ್ಮೆ ಬದುಕೋಣ ಬನ್ನಿ! ಮುಖ್ಯವಾಗಿ, ಪ್ರಕೃತಿಗೂ ಸಂಸ್ಕೃತಿಗೂ ಇರುವ ಅವಿನಾಭಾವ ಸಂಬಂಧವನ್ನು ಮನುಷ್ಯ ಅರಿತುಕೊಳ್ಳಬೇಕಿದೆ. ಮನುಷ್ಯ ಹುಟ್ಟುತ್ತಾ ಹೀಗಿರಲಿಲ್ಲ. ಆದಿಮಾನವನ ರೂಪದಲ್ಲಿದ್ದಾಗ ಪ್ರಾಣಿಗಳ ಬೇಟೆಯಾಡಿ ಬದುಕುತ್ತಿದ್ದ. ಅನೇಕ ಭಾಷೆ, ಭಾವನೆ, ನಡೆ-ನುಡಿಯಿಂದ ಸಂಸ್ಕೃತಿ ರೂಪಿಸಿಕೊಂಡ. ಆಗಿನಿಂದಲೂ, ಸಂಸ್ಕೃತಿ-ಪ್ರಕೃತಿ ನಿರಂತರವಾದ ಸಂಬಂಧ ಕಾಯ್ದುಕೊಂಡಿವೆ. ಪ್ರಕೃತಿ ಬಿಟ್ಟರೆ ಸಂಸ್ಕೃತಿ ಇರಲಿಲ್ಲ. ಎಷ್ಟು ಎಂದರೆ ಸೂರ್ಯ, ಚಂದ್ರ, ಭೂಮಿ, ನಕ್ಷತ್ರ, ವೃಕ್ಷ, ಗಿಡ, ಮರ, ನದಿಗಳನ್ನು ಮನುಷ್ಯ ಸಂಬಂಧದಿಂದಲೇ ಕಂಡಿದ್ದೇವೆ. ಭೂಮಿ, ನದಿ, ವೃಕ್ಷವನ್ನೆಲ್ಲ ತಾಯಿಯೆಂದೇ ಸಂಬೋಧಿಸಿ, ಚಂದ್ರನನ್ನು ಮುದ್ದಿನ ಮಾಮಾ ಮಾಡಿಕೊಂಡಿದ್ದೇವೆ. ಅಂದರೆ ಅವುಗಳನ್ನು ಬಿಟ್ಟು ನಮ್ಮ ಬದುಕಿಲ್ಲ, ಸಾಧನೆ ಇಲ್ಲ ಎಂಬುದು ಅರ್ಥ. ಆದರೆ, ಇವುಗಳ ಜತೆಜತೆಯಾಗಿಯೇ ಬದುಕುವ, ಶಕ್ತಿಯೊಂದಿಗೆ ಸಂವಾದ ಸಾಧಿಸುವ ಆತ್ಮಶಕ್ತಿಯನ್ನೂ ಲೌಕಿಕದ ಧಾವಂತದಲ್ಲಿ ಕಳೆದುಕೊಳ್ಳುತ್ತಿದ್ದೇವೆ. ಅಂತರಂಗದ ಪಯಣವನ್ನು ನಿಲ್ಲಿಸಿ, ಹೊರಗಿನ ಓಟಕ್ಕೆ ತೊಡಗಿಕೊಂಡರೆ ಇನ್ನೇನಾದೀತು?

    ಉಪನ್ಯಾಸವೊಂದರಲ್ಲಿ ಅಧ್ಯಾತ್ಮ ಚಿಂತಕಿ ಡಾ.ವೀಣಾ ಬನ್ನಂಜೆ ಹೇಳಿದ ಅರ್ಥಪೂರ್ಣ ಘಟನೆಯೊಂದನ್ನು ಇಲ್ಲಿ ಮೆಲುಕು ಹಾಕಬೇಕು. ಕರ್ನಾಟಕದಲ್ಲೇ ಅವಧೂತರೊಬ್ಬರನ್ನು ಅವರು ಭೇಟಿ ಆದಾಗಿನ ಸಂದರ್ಭ. ಏನೂ ಓದದ, ಸೀದಾಸಾದಾ ವ್ಯಕ್ತಿತ್ವದ ಆ ಅವಧೂತರು ಭಕ್ತರು ಯಾರೇ ಬಂದರೂ ಅವರೊಡನೆ ಪ್ರೀತಿಯಿಂದ ಮಾತನಾಡಿಸಿ, ಅಡುಗೆಯನ್ನೂ ಮಾಡಿ ಊಟಕ್ಕೆ ಬಡಿಸುತ್ತಾರಂತೆ. ಅವರ ಒಂದೊಂದು ಮಾತೂ ತುಂಬ ಶಕ್ತಿಶಾಲಿ. ಯಾರೋ ಕೇಳಿದ ಪ್ರಶ್ನೆಗೆ ಆ ಅವಧೂತರು-‘ಸ್ಮೃತಿ, ಕೃತಿ, ಮತಿ ಎಲ್ಲವೂ ಸಮ್ಯಕ್ ಆದರೆ ಅದುವೇ ಸಂಸ್ಕೃತಿ’ ಎಂದರಂತೆ. ಎಂಥ ಅರ್ಥಪೂರ್ಣ ಮಾತು! ಇದ್ದಕ್ಕಿದ್ದ ಹಾಗೆ ಸಂಸ್ಕೃತದಲ್ಲಿ ಮಾತನಾಡುವ, ಶ್ಲೋಕಗಳನ್ನು ಉಚ್ಚರಿಸುವ ಅವರನ್ನು ‘ನೀವು ಸಂಸ್ಕೃತ ಕಲಿತಿದ್ದಿರಾ?’ ಎಂದು ಕೇಳಿದಾಗ, ಮುಗಿಲ ಕಡೆ ಕೈ ಮಾಡಿ ‘ಅಲ್ಲಿಂದ ಕೇಳಸ್ತದ್, ನಾ ಮಾತಾಡ್ತೀನಿ’ ಅಂದರಂತೆ. ಹಾಗಾದರೆ, ‘ಆಕಾಶದಿಂದ ನಮಗೇಕೆ ಕೇಳಿಸುವುದಿಲ್ಲ’ ಎಂದಾಗ ಅವಧೂತರು ಥಟ್ಟನೇ-‘ಭೂ ಅಂತ ಗದ್ದಲದಾಗ ಬ್ಯಾರೆ ಎಲ್ಲ ಕೇಳೋದ್ರಾಗ ಮುಳುಗಿವಿ. ಮ್ಯಾಲ್ ನೋಡಿ ಕೇಳೋದ ಕಲಿರಿ, ಆಗ ಕೇಳಸ್ತದ್’ ಅಂದರು. ಇದು ತಾನೇ ನಾವು ಮರೆತುಬಿಟ್ಟಿರುವ ಜೀವನಧರ್ಮ? ಆ ಶಕ್ತಿಯ ಮಾತನ್ನು ಕೇಳಿಸಿಕೊಳ್ಳುವುದನ್ನೇ ನಿಲ್ಲಿಸಿಬಿಟ್ಟಿದ್ದಿವಿ ಮತ್ತು ್ಚಠಞಜ್ಚಿ ಛ್ಞಿಛ್ಟಿಜಢ ತನಗೆ ಬೇಕಾದುದನ್ನು ಉಳಿಸಿಕೊಳ್ಳುವ, ಬೇಡವಾದದ್ದನ್ನು ಕಳಚಿಕೊಳ್ಳುವ ಸಾಮರ್ಥ್ಯ ಇದೆ ಎಂದು ಮರೆತುಬಿಟ್ಟಿದ್ದಿವಿ.

    ಅವತಾರ ವರಿಷ್ಠ ರಾಮಕೃಷ್ಣ ಪರಮಹಂಸರು ತಮ್ಮ ಲೀಲೆಗಳಿಂದ ಹೆಜ್ಜೆಹೆಜ್ಜೆಗೂ ಮನುಷ್ಯ ಬದುಕಬೇಕಾದ ಪಥವನ್ನು ದರ್ಶಿಸಿ ಕೊಟ್ಟರು. ಅಂತಿಮ ಸತ್ಯವನ್ನು ನಿರಾಕರಿಸಿ, ಮನುಕುಲ ಎಂದೂ ಉತ್ಕರ್ಷದ ಹಾದಿಯಲ್ಲಿ ಸಾಗಲು ಸಾಧ್ಯವಿಲ್ಲ.

    ದೇವರು ಇಲ್ಲ ಎಂದು ಸಾಬೀತುಪಡಿಸಲು ಚೀನಾ, ರಷ್ಯಾದಂಥ ಕಮ್ಯುನಿಸ್ಟ್ ರಾಷ್ಟ್ರಗಳು ಇನ್ನಿಲ್ಲದ ಕಸರತ್ತು ನಡೆಸುತ್ತವೆಯಂತೆ. ಈ ಘಟನೆಯನ್ನು ವೀಣಕ್ಕ ವಿವರಿಸಿದ್ದು ಹೀಗೆ, ಅಲ್ಲಿನ ತಂದೆ-ತಾಯಿ ಮಕ್ಕಳಿಗೆ ‘ನಿಮಗೆ ಸೇಬು ಬೇಕೆ?’ ಎಂದು ಪ್ರಶ್ನಿಸುವುದು, ‘ಸೇಬು ಬೇಕಾದರೆ (ಯಾವುದೋ ಚಿತ್ರ ಮುಂದಿಟ್ಟು) ದೇವರನ್ನು ಪ್ರಾರ್ಥಿಸು’ ಎಂದು ಹೇಳುವುದು. ‘ನೀನು ದೇವರಲ್ಲಿ ಸರಿಯಾಗಿ ಕೇಳಿಲ್ಲ, ಮತ್ತೊಮ್ಮೆ ಪ್ರಾರ್ಥಿಸು’ ಎಂದು ಹೇಳಿದ ಬಳಿಕ ಏನೂ ಸಿಗದಿದ್ದಾಗ ಮಗು ಅಳಲು ಆರಂಭಿಸುತ್ತದೆ. ಆಗ ಅಪ್ಪ-ಅಮ್ಮ, ‘ತಗೋ ಇದು ಸೇಬು; ದೇವರು ಎಂಬುದೇ ಇಲ್ಲ. ಏನೇ ಬೇಕಿದ್ದರೂ ಕೊಡಲು ಸಾಧ್ಯವಿರುವುದು ನಮ್ಮಿಂದಲೇ, ನಾವೆ ಎಲ್ಲ’ ಎಂದು ಹೇಳುತ್ತಾರೆ. ಭಾರತೀಯ ದರ್ಶನ, ಇಲ್ಲಿಯ ಚಿಂತನೆ ತುಂಬ ಭಿನ್ನ, ವಿಶಿಷ್ಟ. ಇಲ್ಲಾದರೆ, ಆ ಸೇಬು ಎಲ್ಲಿಂದ ಬಂದದ್ದು, ಅದು ಹೇಗೆ ಹುಟ್ಟಿಕೊಂಡಿತು, ಅಪ್ಪ-ಅಮ್ಮ ಹೇಗೆ ಬಂದರು ಎಂದೆಲ್ಲ ಶೋಧಿಸುತ್ತ ಕಡೆಗೆ ‘ನಾನು ಯಾರು’ ಎಂಬ ಆತ್ಮಶೋಧನೆಗೆ ತೊಡಗುವಂತೆ ಮಾಡುತ್ತದೆ. ಈ ಶೋಧನೆಗೆ ಪ್ರಮುಖ ಕಾರಣ ಹೃದಯಭಾವದ ಜಾಗೃತಿ ಎಲ್ಲೆಡೆಗಿಂತ ಭಾರತದಲ್ಲಿ ಹೆಚ್ಚಾಗಿರುವುದು. ಈ ವಿಸ್ಮಯ ಅಥವಾ ಆದಿಮೂಲವೇ-‘ನನ್ನ ಮುಂಚೆಯೇ ಭೂಮಿಯಲ್ಲಿ ಯಾವುದೋ ಇದೆ. ಅದು ಕಣ್ಣಿಗೆ ಕಾಣಿಸಿಕೊಳ್ಳದಿದ್ದರೂ ಆ ಶಕ್ತಿ ಎಲ್ಲವನ್ನೂ ನಿರ್ವಹಿಸುತ್ತದೆ’ ಎಂಬ ಅರಿವು ಮೂಡಿಸುತ್ತದೆ. ಮನುಷ್ಯನನ್ನು ವಿನೀತನನ್ನಾಗಿ ಮಾಡುತ್ತದೆ. ಈ ಶೋಧ, ಅದರ ನಿಷ್ಕರ್ಷವೇ ಧರ್ಮ ಎಂದೆನಿಸಿಕೊಳ್ಳುತ್ತದೆ. ಪಾಶ್ಚಾತ್ಯ ರಾಷ್ಟ್ರಗಳಿಗೆ ಆ ದೃಷ್ಟಿಯಿಲ್ಲ, ಈ ದೃಷ್ಟಿ ಇರುವ ಭಾರತೀಯರು ಎಲ್ಲೆಲ್ಲೋ ನೋಡುತ್ತಿದ್ದಾರೆ. ನಮ್ಮೆಡೆಗೆ ಮರಳುವ ಅದ್ಭುತ ಅವಕಾಶ ಮತ್ತೆ ಒದಗಿ ಬಂದಿದೆ.

    ಜಗದ ಎಲ್ಲರೂ ಕೂಡಿ ಅವನೊಬ್ಬನೇ

    ಗೆಲುವವ ಗೆಲಿಸುವವ ಎಂಬ ಸಂಭ್ರಮದ

    ಸಂತಸ ಅವನಿಗೇ ಕೇಳುವಂತೆ

    ನಾವಿನ್ನೂ ನಿನ್ನ ಪುಣ್ಯದಿಂದ ಬದುಕಿದ್ದೇವೆ

    ನೋಡು ಎಂದು ಅವನಿಗೇ ತಿಳಿಸುವಂತೆ

    ಚಪ್ಪಾಳೆ ತಟ್ಟೋಣ ಬನ್ನಿ (ವೀಣಾ ಬನ್ನಂಜೆ)

    ಪ್ರಕೃತಿಯ ಚೇತನದ ಪರಧಿಯ ಪರಿಯನ್ನರಿಯಲು

    ಪರಬ್ರಹ್ಮ ದಿವ್ಯ ಜನುಮವ ಎನಗೆ ನೀಡಿರಲು

    ಪ್ರಭೆಯೊಳು ಬೆರೆತು ಪರಮಯೋಗವನರಿಯಲು

    ಪರಿತಪಿಸುತಿದೆ ತನುಮನವು ನಿಜಸುಖವನರಿಯಲು

    (ಅಧ್ಯಾತ್ಮ ಚಿಂತಕ ರಾಮಣ್ಣ ಪಾಟೀಲ್)

    ಇಂಥ ಸತ್ಯದ ಶೋಧನೆ ಆರಂಭಿಸಬೇಕಿದೆ. ಒಂದಂತೂ ಸತ್ಯ. ಕರೊನಾ ಸಂಕಟವಿರಲಿ, ಮತ್ತೊಂದು ಆಪತ್ತು ಇರಲಿ ಭಾರತ ಗೆದ್ದೇ ಗೆಲ್ಲುತ್ತದೆ. ಒಳಿತು ಮಾಡಲು ಹುಟ್ಟಿರುವುದು ನಾಶವಾಗುವುದಿಲ್ಲ. ನಾಶ ಮಾಡಲು ಹುಟ್ಟಿದ್ದು ವಿನಾಶವಾಗುತ್ತದೆ. ಭಾರತ ಮತ್ತೊಮ್ಮೆ ತನ್ನ ಸಮರ್ಥ ಶಕ್ತಿಯನ್ನು ಸಾಬೀತುಪಡಿಸಲಿದೆ. ನಾವುಗಳೆಲ್ಲ ಮತ್ತೆ ನಿಜವಾದ ಜೀವನಧರ್ಮದತ್ತ ಮರಳಬೇಕಿದೆ, ಆ ಶಕ್ತಿಯನ್ನು ಆಶ್ರಯಿಸಬೇಕಿದೆ. ಅದಕ್ಕಿಂತ ದೊಡ್ಡವರು ಯಾರೂ ಇಲ್ಲ ಎಂಬ ಸತ್ಯವನ್ನು ಅರಿಯಬೇಕಿದೆ. ನಿಸರ್ಗದತ್ತ ಮರಳುವ, ಅದರ ಜತೆ ಸೌಜನ್ಯದಿಂದ ಬದುಕುವ ಸತ್ಯವನ್ನೇ ಯುಗಾದಿ ಪ್ರತಿಪಾದಿಸುತ್ತದೆ. ಈ ಯುಗಾದಿ ನಮ್ಮೆಲ್ಲರ ಒಳಗಣ್ಣು ತೆರೆಸಲಿ. ಹೊಸ ಸಂವತ್ಸರ ಒಳಿತಿನೆಡೆಗೆ ಕರೆದುಕೊಂಡು ಹೋಗಲಿ. ನವಯಾತ್ರೆ ಆರಂಭವಾಗಲಿ. ಎಲ್ಲರಿಗೂ ಯುಗಾದಿ-ಹೊಸ ವರ್ಷದ ಶುಭಾಶಯಗಳು.

    ‘ಕೊರೊನಾ -ಕೋಯಿ ರೋಡ್​ ಪರ್​ ನ ನಿಕಲೆ’ ಎಂದು ವ್ಯಾಖ್ಯಾನಿಸಿದ ಪ್ರಧಾನಿ ಮೋದಿ; ವೈದ್ಯಕೀಯ ಸೌಲಭ್ಯ ಬಲಪಡಿಸಲು 15,000 ಕೋಟಿ ರೂ. ಪ್ಯಾಕೇಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts