More

    ನಿತ್ಯ, ಸತ್ಯವಾದದ್ದನ್ನು ಮರೆತು ಹೊರಟಿದ್ದಾದರೂ ಎಲ್ಲಿಗೆ..?: ಜರೂರ್​ ಮಾತು

    ನಿತ್ಯ, ಸತ್ಯವಾದದ್ದನ್ನು ಮರೆತು ಹೊರಟಿದ್ದಾದರೂ ಎಲ್ಲಿಗೆ..?: ಜರೂರ್​ ಮಾತು

    ಭಕ್ತನೊಬ್ಬ ಧಾವಿಸಿ ಬಂದು, ಸಂತ ಏಕನಾಥ್ ಮಹಾರಾಜರ ಪಾದಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದ. ‘ಗುರುಗಳೇ, ನಿಮ್ಮ ಜೀವನವೆಷ್ಟು ಮಧುರ, ಶಾಂತ. ತಾಪತ್ರಯಗಳೇ ಇಲ್ಲ. ನಿಮ್ಮಂತೆ ಶಾಂತಿಯಿಂದ ಬದುಕಲು ನನಗೆ ಒಂದು ನಿಮಿಷವೂ ಸಾಧ್ಯವಾಗುತ್ತಿಲ್ಲ… ಏನು ಮಾಡಲಿ?’ ಎಂದು ಗೋಳಾಡಿದ. ಏಕನಾಥರು, ಮುಗುಳ್ನಗೆ ಬೀರಿ, ‘ಜೀವನದ ಬಗ್ಗೆ ತಿಳಿದುಕೊಳ್ಳಬೇಕೇನು… ನಿನ್ನ ಬಳಿ ಸಮಯ ತುಂಬ ಕಡಿಮೆ ಇದೆ, ಬರೀ ಎಂಟು ದಿನ. ಈ ಅವಧಿಯನ್ನು ವ್ಯರ್ಥ ಮಾಡಬೇಡ ಹೋಗು’ ಎಂದರು. ಆ ವ್ಯಕ್ತಿಗೆ ದಿಗಿಲೋ ದಿಗಿಲು. ಅಯ್ಯೋ ಏನು ಮಾಡಲಿ ಎಂಟೇ ದಿನದಲ್ಲಿ! ತಂದೆ-ತಾಯಿ ಬಳಿ ಹೋದ, ‘ನಾನು ನಿಮ್ಮ ಮೇಲೆ ಸಿಡುಕಿದೆ, ರೇಗಿದೆ, ಅಗೌರವಿಸಿದೆ. ನೀವು ನನಗಾಗಿ ಎಷ್ಟೆಲ್ಲ ಮಾಡಿದಿರಿ, ಆದರೆ, ನಾನು ನಿಮಗೆ ಬರೀ ನೋವನ್ನೇ ಕೊಟ್ಟೆ, ಸಾಧ್ಯವಾದರೆ ಕ್ಷಮಿಸಿಬಿಡಿ’ ಎಂದು ಹೇಳಿ ಪತ್ನಿಯ ಬಳಿ ಹೋದ, ‘ನೀನು ನಮ್ಮ ಸಂಸಾರಕ್ಕಾಗಿ ಎಷ್ಟೆಲ್ಲ ತ್ಯಾಗ ಮಾಡಿದೆ, ಆದರೆ ನಾನು ನಿನಗೆ ಎಷ್ಟೋ ಕಷ್ಟಗಳನ್ನು ಕೊಟ್ಟೆ, ಕ್ಷಮಿಸು’ ಎಂದ. ಬಳಿಕ ಮಕ್ಕಳ ಬಳಿ ಹೋಗಿ, ‘ಯಾವುದೋ ಸಿಟ್ಟನ್ನು ನಿಮ್ಮ ಮೇಲೆ ತೆಗೆದು ಹೊಡೆದಿದ್ದೇನೆ, ಬೈದಿದ್ದೇನೆ, ಮಕ್ಕಳೇ ಕ್ಷಮಿಸಿ’ ಎಂದು ಕೇಳಿಕೊಂಡ. ಹೀಗೆ ಯಾರೆಲ್ಲರ ಜತೆ ಒರಟಾಗಿ, ಅಸೌಜನ್ಯಪೂರ್ವಕವಾಗಿ ನಡೆದುಕೊಂಡಿದ್ದನೋ ಅವರೆಲ್ಲರ ಬಳಿಗೆ ಹೋಗಿ ಕ್ಷಮೆ ಯಾಚಿಸಿದ. ಹೀಗೆ ಮಾಡ್ತಾ ಮಾಡ್ತಾ ಎಂಟು ದಿನ ಕಳೆದುಹೋಯಿತು. ಒಂಬತ್ತನೇ ದಿನ ಏಕನಾಥರ ಸಾನಿಧ್ಯಕ್ಕೆ ಹೋಗಿ ನಿಂತುಕೊಂಡ. ಏಕನಾಥರು, ‘ಎಂಟು ದಿನ ಭೋಗ-ವಿಲಾಸ ಆನಂದದಲ್ಲಿ ಕಳೆದಿರಬೇಕಲ್ಲ?’ ಎಂದರು. ಆತ ಹಾಗೇನಿಲ್ಲ ಅಂತ ತಲೆ ಅಲ್ಲಾಡಿಸುತ್ತ, ‘ನಾಥರೇ ಈಗ ನನಗೆಷ್ಟು ಸಮಯ ಉಳಿದಿದೆ ಅಂತ ದಯವಿಟ್ಟು ಹೇಳಿ, ತುಂಬ ಭಯವಾಗುತ್ತಿದೆ’ ಎಂದು ಬಿನ್ನವಿಸಿಕೊಂಡ. ‘ಹುಚ್ಚಪ್ಪ, ನಿನ್ನ ಆಯಸ್ಸನ್ನು ನಿಗದಿ ಮಾಡುವವ ಆ ಪರಮಾತ್ಮ, ನೀನು ಜೀವನದ ಕಡೆ ನಿಖರವಾಗಿ ನೋಡಬೇಕು ಎಂದು ಹಾಗೆ ಹೇಳಿದೆ ಅಷ್ಟೆ, ಅದಿರಲಿ ಎಂಟು ದಿನಗಳು ಹೇಗೆ ಕಳೆದವು, ಹೇಳು’ ಎಂದಾಗ ‘ಈ ಅವಧಿಯಲ್ಲಿ ನನಗೆ ಮೃತ್ಯುವಿನ ಹೊರತು ಬೇರಾವುದೂ ಕಾಣಲಿಲ್ಲ. ಹಾಗಾಗಿ, ನನ್ನಿಂದ ಮಾಡಲ್ಪಟ್ಟ ಪಾಪಕಾರ್ಯಗಳು ನೆನಪಾಗಿ, ಕ್ಷಣಕ್ಷಣಕ್ಕೂ ಕಾಡಿದವು. ಅವುಗಳ ಪಶ್ಚಾತ್ತಾಪದಲ್ಲಿಯೇ ಈ ಅವಧಿ ಕಳೆದುಹೋಯಿತು’ ಎಂದ.

    ಏಕನಾಥರು ಆಗ ಅರಿವಿನ ಬೆಳಕು ನೀಡುತ್ತ, ‘ಯಾವ ಪ್ರಜ್ಞೆಯನ್ನು ಇರಿಸಿಕೊಂಡು ನೀನು ಎಂಟು ದಿನಗಳನ್ನು ಕಳೆದಿರುವೆಯೋ, ಸದಾ ಇದೇ ಪ್ರಜ್ಞೆಯೊಂದಿಗೆ ಸಾಧು, ಸಂತರು-ಮಹಂತರು ಜೀವನ ಸಾಗಿಸುತ್ತಾರೆ. ಈ ದೇಹ ಕ್ಷಣಿಕವಾದದ್ದೇ. ಒಂದಿಲ್ಲ ಒಂದು ದಿನ, ಇದು ಅಗ್ನಿಗೋ, ಮಣ್ಣಿಗೋ ಸೇರಲೇಬೇಕು. ಹಾಗಿರುವಾಗ, ದೇಹಕ್ಕೆ ಗುಲಾಮನಾಗಿರುವುದಕ್ಕಿಂತ ಆ ಭಗವಂತನಿಗೆ ಶರಣಾಗುವುದೇ ಶ್ರೇಯಸ್ಸು. ಎಲ್ಲರೊಡನೆಯೂ ಸಮಾನ ಭಾವದೊಂದಿಗೆ ವ್ಯವಹರಿಸುತ್ತ ಆನಂದದೊಂದಿಗೇ ಸಾಗುವುದೇ ಜೀವನದ ಸಾರ್ಥಕತೆ’ ಎಂದರು. ಭಕ್ತಿ, ಜೀವನೋದ್ದೇಶ, ಜೀವನಪಥ, ಉತ್ಕರ್ಷದತ್ತ ಪಯಣ, ಪ್ರತೀ ಮನುಷ್ಯಜೀವಿಯಲ್ಲೂ ಭಗವತ್ ಅಂಶ ಕಾಣುವ ಬಗೆ ಇದೆಲ್ಲವನ್ನೂ ತೋರಿಸಿಕೊಟ್ಟ ಮಹಾನ್ ಸಂತ ಏಕನಾಥರು ಎಲ್ಲಕ್ಕಿಂತ ಮಿಗಿಲಾದದ್ದು ಮಾನವೀಯ ಧರ್ಮವೇ ಎಂದು ಸಾರಿ, ಅದರಂತೆ ನಡೆದುಕೊಂಡರು.

    ಇಂಥದ್ದೊಂದು ‘ಒಳಗಿನ ಪಯಣ’ಕ್ಕೆ (ಭೌತಿಕಕ್ಕೆ ಹೊರತಾದದ್ದು) ತುಂಬ ಜನ ತುಡಿಯುತ್ತಾರಾದರೂ, ಹೊರಗಿನ ಆಕರ್ಷಣೆ ಅವರನ್ನು ಸೆರೆಯಾಗಿಸಿದೆ. ಇತ್ತೀಚಿನ ದಿನಗಳಲ್ಲಿ ಯಾರಿಗೆ ಕೇಳಿದರೂ ಕಾಡುತ್ತಿರುವ ಕೊರತೆ ಎಂದರೆ ನೆಮ್ಮದಿ ಮರೀಚಿಕೆ ಆಗಿರುವುದು! ಅದು ಬೇಕು, ಇದು ಬೇಕು ಎಂದೆಲ್ಲ ಚಡಪಡಿಸುತ್ತ ಆ ಬೇಕುಗಳಲ್ಲೇ ಸಂತಸ ಇದೆ ಎಂದು ಭ್ರಮಿಸಿದ್ದ ಮನುಷ್ಯ ನೆಮ್ಮದಿ ಕಳೆದುಕೊಂಡಿರುವುದಾದರೂ ಏಕೆ? ಅದಕ್ಕೆ ದಾರ್ಶನಿಕರೊಬ್ಬರು ನೀಡಿದ ಸರಳ ಉತ್ತರವೆಂದರೆ, ‘ನಮ್ಮ ಸುತ್ತಲಿನ ಕುರಿತು (ಭೌತಿಕ ಸಂಗತಿ) ಅನಾಸಕ್ತಿ ಹೆಚ್ಚಿಸಿಕೊಂಡಷ್ಟು ನೈಜ ಜೀವನದ ಬಗೆಗಿನ ಆಸಕ್ತಿ ಹೆಚ್ಚುತ್ತದೆ’ ಅಂತ. ಆದರೆ, ನಮ್ಮಗಳ ಬದುಕು ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವಾಗ ನೈಜ ಗಮ್ಯ ತಲುಪಲು ಹೇಗೆ ತಾನೇ ಸಾಧ್ಯ? ನಿತ್ಯಸತ್ಯ, ಅಂತಿಮ ಸತ್ಯವನ್ನು ಮರೆತು ಕ್ಷಣಿಕ ಸತ್ಯದೆಡೆಗೆ ವಾಲಿರುವಾಗ ಭ್ರಮೆಗಳೇ ನಿಜವೆನಿಸುತ್ತವೆ, ಆಕರ್ಷಣೆಗಳೇ ಸೆಳೆಯುತ್ತವೆ! ಆಗ ಮತ್ತಷ್ಟು ಪಡೆಯಬೇಕೆಂಬ ಹಪಹಪಿ, ಎಲ್ಲವನ್ನೂ ನನ್ನದಾಗಿಸಿಕೊಳ್ಳಬೇಕು, ಎಲ್ಲವೂ ನನಗೇ ಸಿಗಬೇಕು, ಅಧಿಕಾರ, ಐಶ್ವರ್ಯಕ್ಕಾಗಿ ಎಷ್ಟೊಂದು ಜಂಜಾಟ…. ಆದರೆ, ಬಂದಿರುವ ದಾರಿ, ನೈಜೋದ್ದೇಶವನ್ನೇ ಮರೆತರೆ ಪಯಣ ಎಲ್ಲೆಲ್ಲಿಗೋ ಸಾಗುತ್ತದೆ.

    ಎಷ್ಟು ವಿಚಿತ್ರ ನೋಡಿ, ದೇವರ ಮುಂದೆ ನಿಂತರೂ ನಾವು ‘ಬೇಡಿಕೆ ಪಟ್ಟಿ’ ಸಲ್ಲಿಸುತ್ತೇವೆ, ಆ ದೇವರಿಗೂ ಒಂದಿಷ್ಟು ಆಮಿಷವೊಡ್ಡುತ್ತೇವೆ (ಆ ಭಗವಂತ ನಮ್ಮಿಂದ ಏನೂ ಬಯಸುವುದಿಲ್ಲ ಎಂದು ಗೊತ್ತಿದ್ದರೂ)! ಅಕಸ್ಮಾತ್ ಡಿಮಾಂಡ್​ಗಳು ಈಡೇರದಿದ್ದಲ್ಲಿ ಆ ಪರಮಶಕ್ತಿಯನ್ನೂ ಬೈಯುತ್ತೇವೆಯೇ ಹೊರತು ನಾವು ಸಾಗಬೇಕಾದ ದಾರಿ ಇದಲ್ಲ ಅಂತ ಅವಲೋಕಿಸಿಕೊಳ್ಳುವುದೇ ಇಲ್ಲ. ಕೆಲವರಂತೂ, ಅಧ್ಯಾತ್ಮ ಎಂದರೆ ಬಲು ಜಟಿಲ. ಹಾಗಾಗಿಯೇ, ನಾವು ಅದರಿಂದ ದೂರ ಇರುತ್ತೇವೆ ಎನ್ನುತ್ತಾರೆ, ಅಂದರೆ ಹೆತ್ತ ತಂದೆ-ತಾಯಿಯಿಂದಲೇ ನಾವು ದೂರವಿದ್ದಂತೆ! ಅದು, ಇದು ಬೇಡುವುದಕ್ಕಿಂತ, ‘ಪರಮಾತ್ಮನೇ ಯಾವ ಉದ್ದೇಶಕ್ಕಾಗಿ ನನ್ನನ್ನು ಇಲ್ಲಿಗೆ (ಭೂಮಿಗೆ) ಕಳುಹಿಸಿರುವೆಯೋ, ಆ ಉದ್ದೇಶವನ್ನು ಪೂರ್ಣ ಮಾಡು, ಅದಕ್ಕಾಗಿ ಶಕ್ತಿ ನೀಡು’ ಎಂದರೆ ಸಾಕಲ್ಲವೇ? ಅಧ್ಯಾತ್ಮ ಜೀವನಧರ್ಮವೇ ಹೊರತು ಬದುಕನ್ನು ಗೋಜಲುಗೊಳಿಸುವಂಥದ್ದಲ್ಲ. ಈ ಸತ್ಯವನ್ನು, ಅಧ್ಯಾತ್ಮದ ಒಳತಿರುಳನ್ನು ಅತ್ಯಂತ ಸರಳವಾಗಿ ಜನರ ಮನಸ್ಸಿಗೆ ನಾಟಿಸುವ, ಆ ಮೂಲಕ ಜೀವನದ ನೈಜೋದ್ದೇಶವನ್ನು ಸಾಕ್ಷಾತ್ಕರಿಸುವ ಮಹಾತ್ಮರು ನಮ್ಮ ನಡುವೆಯೇ ಇರುತ್ತಾರೆ. ಆದರೆ, ಆ ಜ್ಞಾನನಿಧಿಯ ಮಾತುಗಳಿಗೆ ನಮ್ಮ ಹೃದಯ, ಬುದ್ಧಿ ತೆರೆದುಕೊಳ್ಳಬೇಕಷ್ಟೇ.

    ಇಂಥ ಜ್ಞಾನಸುಧೆಯನ್ನು ಹಂಚುತ್ತಿರುವ ಶ್ರೀ ಆಶ್ರಮ ಹ್ಯಾಪಿ ಲಿವಿಂಗ್ ಫೌಂಡೇಷನ್ (ಧಾರವಾಡ ಹೊರವಲಯದಲ್ಲಿರುವ ಚಿಕ್ಕಮಲ್ಲಿಗವಾಡ) ನಿಜವಾದ ನೆಮ್ಮದಿಯನ್ನು ಜನರಿಗೆ ತಿಳಿಸಿ ಕೊಡುತ್ತಿದೆ. ಅಧ್ಯಾತ್ಮದಲ್ಲಿ ಎತ್ತರದ ಸಾಧನೆ ಮಾಡಿದರೂ, ವನಸುಮವಾಗಿ ಉಳಿಯಲು ಇಚ್ಛಿಸುವ ಶ್ರೀ ಎ.ಪಿ.ಪಾಟೀಲ್ ಗುರೂಜಿ ಬದುಕಿನ ತತ್ತ್ವಗಳನ್ನು ನಿತ್ಯಾನುಷ್ಠಾನಗೊಳಿಸುವ ಮಾರ್ಗ ತೋರುತ್ತಿದ್ದಾರೆ. ಅವರ ಕೆಲವೇ ಮಾತುಗಳು ಆಂತರ್ಯದ ಪಯಣದ ಕಡೆಗೆ ಕೊಂಡೊಯ್ಯುತ್ತವೆ. ಅಂಥ ಮಾತುಗಳ ಬೆಳಕಿನಲ್ಲಿ ಅಸಂಖ್ಯ ಜನರ ಬಾಳಿನ ಕತ್ತಲೆ ದೂರವಾಗಿದೆ. ಕೆಲ ನಿದರ್ಶನಗಳನ್ನು ನೋಡಿ- ‘ನೀವು ನಿಮ್ಮ ಅಸಹಾಯಕತೆಯನ್ನು ತೋರಿಸಿಕೊಳ್ಳಲು ದೇವರ ಮೊರೆ ಹೋಗುತ್ತೀರಿ. ನೀವು ದೇವರನ್ನು ಭಕ್ತಿಯಿಂದ ಪೂಜಿಸುತ್ತಿಲ್ಲ. ಬದಲಾಗಿ ನಿಮ್ಮ ಅವಶ್ಯಕತೆಗಳ ಪೂರೈಕೆಗಾಗಿ ದೇವರ ಪೂಜೆ’! ‘ಅಧ್ಯಾತ್ಮ ಎಂಬುದು ಹೇಡಿಗಳಿಗಲ್ಲ, ಆಧ್ಯಾತ್ಮಿಕ ಹಂತ ಮುಟ್ಟಿಯೇ ತೀರುತ್ತೇನೆ ಎಂಬ ಕ್ರಾಂತಿಕಾರಿಗಳಿಗೆ’. ‘ಅಧ್ಯಾತ್ಮದಲ್ಲಿ ಆಂತರಿಕ ಹಸಿವು ಮುಖ್ಯ. ಹಾಗಾಗಿ, ಮೊದಲು ಪ್ರಶ್ನಿಸಿಕೊಳ್ಳಿ, ನನಗೆಷ್ಟು ಆಂತರಿಕ ಹಸಿವಿದೆ? ನನಗೆಷ್ಟು ತವಕ ಇದೆ? ನೀವು ಎಲ್ಲೇ ಹೋದರೂ ಆಂತರಿಕ ಹಸಿವಿನ ಬಗ್ಗೆ ಗಮನ ಇರಲಿ. ಒಳಗಿನ ಬೆಂಕಿ, ಕಿಚ್ಚು ಆರದಂತೆ ನೋಡಿಕೊಳ್ಳಿ’. ದೈವತ್ವ ಮತ್ತು ಗುರುವನ್ನು ವ್ಯಾಖ್ಯಾನಿಸಿರುವ ಬಗೆ ಸತ್ಯದರ್ಶನ ಮಾಡಿಸುತ್ತದೆ. ಅವರೆನ್ನುತ್ತಾರೆ-‘ದೈವತ್ವಕ್ಕೆ ಅದರದೇ ಆದ ಅಸ್ತಿತ್ವ ಹಾಗೂ ಕಾನೂನುಗಳಿವೆ. ಆ ವ್ಯಾಪ್ತಿಯೊಳಗಿರುವ ವ್ಯಕ್ತಿಗೆ ದೈವತ್ವ ಎಲ್ಲವನ್ನೂ ಒದಗಿಸುತ್ತದೆ. ಆತ್ಮವಿಶ್ವಾಸದಿಂದ ‘ನಾನು ಬದಲಾಗುತ್ತೇನೆ’ ಎಂದು ವ್ಯಕ್ತಿ ಒಂದು ಹೆಜ್ಜೆ ಮುಂದೆ ಇಟ್ಟರೆ, ದೈವತ್ವ ಆತನೊಂದಿಗೆ ನೂರು ಹೆಜ್ಜೆ ಹಾಕಲು ಸಿದ್ಧವಿರುತ್ತದೆ. ದೈವತ್ವ ಅಂತರ್ಗತ, ಅದನ್ನು ಎಲ್ಲಿಯೂ ಹುಡುಕುವ ಅವಶ್ಯಕತೆಯಿಲ್ಲ. ಒಳಿತಿರಲಿ, ಕೆಡುಕಿರಲಿ, ತಪ್ಪಿರಲಿ, ನೋವಿರಲಿ, ನಲಿವಿರಲಿ ಎಲ್ಲವನ್ನೂ ಮರೆತು ಪ್ರೀತಿ ಹಂಚುವುದೇ ನಿಜವಾದ ದೈವತ್ವ. ಪ್ರಯತ್ನದಿಂದ ಅಪ್ರಯತ್ನದ ಕಡೆಗೆ ಕೊಂಡೊಯ್ಯುವುದೇ ದೈವತ್ವ. ಆಗ ಘಟಿಸುವುದು ಸತ್ಯದ ಶಕ್ತಿ. ಅಪ್ರಯತ್ನದ ಕಡೆಗೆ ಬರುವವರೆಗೂ ಪ್ರಯತ್ನ ನಿಲ್ಲಿಸಬೇಡಿ. ಸಕಲರಲ್ಲಿ ದೇವರನ್ನು ಕಾಣುವಂಥ ವ್ಯಕ್ತಿ ದೈವತ್ವವನ್ನು ಕಾಣಲು ಸಾಧ್ಯ. ಹಲವಾರು ವರ್ಷಗಳಿಂದ ಮನಸ್ಸಿನ ದಾಸ್ಯಕ್ಕೆ ಒಳಪಟ್ಟ ವ್ಯಕ್ತಿ ಅದರಿಂದ ಹೊರಬಂದು ಪ್ರಜ್ವಲಿಸಲು ಕ್ರಾಂತಿ ಸ್ಪೋಟಿಸಬೇಕು. ಹೃದಯ ತುಂಬಿದ ಪ್ರೀತಿಯ ಭಾವದಲ್ಲಿ ದೇವರು ಸಿಗುತ್ತಾನೆ. ದೇವರು ಪ್ರೀತಿಯ ಸಾಗರ. ಕೊರತೆಯೆಂಬುದು ನಮ್ಮ ಭಾವದಲ್ಲಿರುತ್ತದೆ. ನಿಜವಾದ ಪ್ರೀತಿ ಕೊರತೆಯನ್ನು ತುಂಬುತ್ತದೆ. ಹಾಗಾಗಿಯೇ, ಪ್ರೀತಿ ಕೊಡುವ ಮಹಾರಾಣಿ/ಮಹಾರಾಜರುಗಳಾಗಿ; ಪ್ರೀತಿ ಬೇಡುವ ಭಿಕ್ಷುಕರಾಗಬೇಡಿ’ ಎನ್ನುತ್ತಲೇ ‘ಆನಂದವೇ ದೇವರು. ಆ ಆನಂದದೆಡೆಗೆ ಸಾಗಲು ಆಸೆಗಳಿಗೆ ಮಿತಿಯಿರಲಿ, ಮನಸ್ಸಿನ ಅಲೆದಾಟದ ಮೇಲೆ ನಿಯಂತ್ರಣವಿರಲಿ, ಮಾಡುವ ಪ್ರತಿ ಕೆಲಸವೂ ಅರಿವಿನಿಂದ ಕೂಡಿರಲಿ’ ಎಂಬ ಗಮ್ಯದತ್ತ ಕೊಂಡೊಯ್ಯುತ್ತಾರೆ ಗುರೂಜಿ. ಶ್ರೀಕೃಷ್ಣ ಹೇಳಿದ್ದು ಇದನ್ನೇ-‘ನನ್ನನ್ನು ನಂಬುವುದಾದರೆ ಪೂರ್ತಿಯಾಗಿ ನಂಬು. ಅನುಮಾನವಿಲ್ಲದೆ ಶುದ್ಧ ಮನಸ್ಸಿನಿಂದ ನಂಬು. ಮಗು ತಾಯಿಯನ್ನು ಅಪು್ಪವ ಹಾಗೆ ನಂಬು… ಹಾಗಿದ್ದಲ್ಲಿ ಮಾತ್ರ ನಾನು ನಿನಗೆ ಸಿಗುತ್ತೇನೆ’. ಇಂಥ ಅರಿವಿನ ಬೆಳಕು ವಿಸ್ತರಿಸಿಕೊಂಡಂತೆ ಆ ದಾರಿಯಲ್ಲಿ ನೆಮ್ಮದಿ ಕಾಣಿಸಿಕೊಂಡು, ಖಿನ್ನತೆ, ದುಃಖ, ನೋವು ಮರೆಯಾಗಿ ನೈಜಾನಂದದ ಅನುಭವವಾಗುತ್ತದೆ. ಅದುವೇ ನಮ್ಮ ಅಧ್ಯಾತ್ಮದ ವೈಶಿಷ್ಟ್ಯವೂ ಹೌದು. ನಮ್ಮ ನಾಳೆಗಳ ಅಗತ್ಯವೂ ಹೌದು.

    (ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts