More

    ಕೋವಿಡ್ ಬಳಿಕ ಜನೌಷಧ ಕೇಂದ್ರ ಹೆಚ್ಚಳ

    ಭರತ್ ಶೆಟ್ಟಿಗಾರ್ ಮಂಗಳೂರು
    ಕರೊನಾ ಲಾಕ್‌ಡೌನ್ ಬಳಿಕ ರಾಜ್ಯದಲ್ಲೇ ದ.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ಜನೌಷಧ ಕೇಂದ್ರಗಳು ಆರಂಭವಾಗಿವೆ.
    ಬೆಂಗಳೂರು ಹೊರತುಪಡಿಸಿದರೆ ದ.ಕ ಜಿಲ್ಲೆಯಲ್ಲೇ ಅತ್ಯಧಿಕ ಜನೌಷಧ ಕೇಂದ್ರಗಳಿದ್ದು, ವಿದೇಶಗಳಿಂದ ಬಂದು ಇಲ್ಲಿ ಸ್ವಉದ್ಯೋಗ ಆರಂಭಿಸಲು ಉದ್ದೇಶಿಸಿದವರು, ಲಾಕ್‌ಡೌನ್ ಹಿನ್ನೆಲೆಯಲ್ಲಿ ಊರಿಗೆ ವಾಪಸಾದವರು ಕೇಂದ್ರ ತೆರೆಯುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಸುತ್ತಿದ್ದಾರೆ.

    ಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನೆಯನ್ನು ಬ್ಯೂರೋ ಆಫ್ ಫಾರ್ಮಾ ಪಿಎಸ್‌ಯುಎಸ್ ಆಫ್ ಇಂಡಿಯಾ (ಬಿಪಿಪಿಐ) ದೇಶಾದ್ಯಂತ ಅನುಷ್ಠಾನಗೊಳಿಸುವ ಹೊಣೆ ಹೊತ್ತಿದೆ. ಬಿಪಿಪಿಐ ದ.ಕ ಜಿಲ್ಲೆಯಲ್ಲಿ 54 ಮತ್ತು ಉಡುಪಿ ಜಿಲ್ಲೆಯಲ್ಲಿ 36 ಕೇಂದ್ರಗಳಿಗೆ ಈಗಾಗಲೇ ಅವಕಾಶ ನೀಡಿದೆ. ದೇಶದಲ್ಲಿರುವ ಬಡವರಿಗೂ ಕೈಗೆಟಕುವ ದರದಲ್ಲಿ ಉತ್ತಮ ದರ್ಜೆಯ ಔಷಧ ದೊರೆಯಬೇಕೆನ್ನುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದಿರುವ ಜನೌಷಧ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ದ.ಕ ಮತ್ತು ಉಡುಪಿ ಜಿಲ್ಲೆ ರಾಜ್ಯದಲ್ಲಿ ಮುಂದಿವೆ.

    ಔಷಧ ಮಾರಾಟದಲ್ಲಿ ಬೆಂಗಳೂರನ್ನು ಹೊರತುಪಡಿಸಿದರೆ ಉಡುಪಿಯ ಮಳಿಗೆಗಳು ಮುಂಚೂಣಿಯಲ್ಲಿವೆ. ನಂತರದ ಸ್ಥಾನದಲ್ಲಿ ಶಿವಮೊಗ್ಗ, ಮೂರನೇ ಸ್ಥಾನದಲ್ಲಿ ಮೈಸೂರು ಮತ್ತು ನಾಲ್ಕನೇ ಸ್ಥಾನದಲ್ಲಿ ದ.ಕ ಜಿಲ್ಲೆ ಇದೆ. ಪ್ರಸಕ್ತ ಸಾಲಿನಲ್ಲಿ ರಾಜ್ಯಕ್ಕೆ 125 ಕೋಟಿ ರೂ.ವಹಿವಾಟಿಗೆ ಗುರಿ ನಿಗದಿಪಡಿಸಲಾಗಿದ್ದು, ಈಗಾಲೇ 91.2 ಕೋಟಿ ರೂ, ವಹಿವಾಟು ನಡೆಸುವ ಮೂಲಕ ಶೇ.73ರಷ್ಟು ಗುರಿ ಸಾಧಿಸಲಾಗಿದೆ. ಕೋವಿಡ್ ಅವಧಿಯಲ್ಲಿ ದೇಶದಲ್ಲಿ ಅಂದಾಜು ನೂರು ಕೋಟಿ ರೂಪಾಯಿಗೂ ಅಧಿಕ ವ್ಯವಹಾರ ನಡೆದಿದೆ.

    ಲಕ್ಷಾಂತರ ರೂ.ವಹಿವಾಟು: ದ.ಕ ಜಿಲ್ಲೆಯಲ್ಲಿ ಕೆಲವು ಮಳಿಗೆಗಳಲ್ಲಿ ತಿಂಗಳಿಗೆ 50 ಲಕ್ಷ ರೂ.ವರೆಗೆ ವಹಿವಾಟು ದಾಖಲಾದರೆ, ಉಡುಪಿ ಜಿಲ್ಲೆಯಲ್ಲಿ 5 ಲಕ್ಷ ರೂ.ವರೆಗಿದೆ. ಇದೇ ವೇಳೆ ತಿಂಗಳಿಗೆ 10 ಸಾವಿರವರೆಗಿನ ವ್ಯಾಪಾರವನ್ನೂ ನಡೆಸದ ಮಳಿಗೆಗಳೂ ಇವೆ. ಕೆಲವು ಮಳಿಗೆಗಳು ಜನೌಷಧ ಹೆಸರಿನಲ್ಲಿ ಬೇರೆ ಕಂಪನಿಗಳ ಔಷಧಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಅಂತಹ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಬಿಪಿಪಿಐನ ಮಾರಾಟ ಮತ್ತು ಮಾರುಕಟ್ಟೆ ಸಹಾಯಕ ಪ್ರಬಂಧಕಿ ಡಾ.ಅನಿಲಾ ದೀಪಕ್ ಶೆಟ್ಟಿ ತಿಳಿಸಿದ್ದಾರೆ.

    ಔಷಧ ಇಲ್ಲವೆಂಬ ದೂರು ಕಡಿಮೆ: ಕರಾವಳಿ ಜಿಲ್ಲೆಗಳ ಜನೌಷಧ ಕೇಂದ್ರಗಳ ಮಾಲೀಕರು ವಿತರಕರಿಗೆ, ಕೇಂದ್ರ ಸರ್ಕಾರಕ್ಕೆ ನಿಗದಿತ ಸಮಯಕ್ಕೆ ಹಣ ಪಾವತಿ ಮಾಡುವಲ್ಲಿ ಇತರ ಜಿಲ್ಲೆಗಳಿಗಿಂತ ಮುಂದಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಔಷಧಗಳು ದೊರೆಯುವುದಿಲ್ಲ ಎನ್ನುವ ದೂರು ಕಡಿಮೆ. ಎಲ್ಲ ವಿತರಕರು ಬೇಡಿಕೆಗೆ ತಕ್ಕಂತೆ ಔಷಧ ಪೂರೈಸುತ್ತಾರೆ. 1200 ಬಗೆಯ ಮೆಡಿಸಿನ್ ಇದ್ದರೂ, ಕೆಲವು ಜಿಲ್ಲೆಗಳಲ್ಲಿ ಜನೌಷಧ ಕೇಂದ್ರಗಳಲ್ಲಿ ಔಷಧ ದೊರೆಯುವುದಿಲ್ಲ ದೂರಿದೆ. ಕೇಂದ್ರಗಳ ಮಾಲೀಕರು ನಿಗದಿತ ಸಮಯಕ್ಕೆ ಪಾವತಿ ಮಾಡದಿರುವುದೇ ಇದಕ್ಕೆ ಕಾರಣ.

    ಜನೌಷಧ ಕೇಂದ್ರಗಳ ಒಟ್ಟು ವ್ಯವಹಾರದಲ್ಲಿ ಕರ್ನಾಟಕ ದೇಶದಲ್ಲೇ ಮುಂದಿದೆ. ರಾಜ್ಯದಲ್ಲಿ ಬೆಂಗಳೂರು ಹೊರತು ಪಡಿಸಿದರೆ ದ.ಕ, ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ವ್ಯವಹಾರ ನಡೆಯುತ್ತದೆ. ಕೋವಿಡ್ ಬಳಿಕ ಔಷಧ ಕೇಂದ್ರಗಳನ್ನು ತೆರೆಯಲು ಆಸಕ್ತಿ ತೋರಿಸುತ್ತಿರುವವರ ಸಂಖ್ಯೆ ದ್ವಿಗುಣವಾಗಿದೆ.
    – ಡಾ.ಅನಿಲಾ ದೀಪಕ್ ಶೆಟ್ಟಿ, ಸಹಾಯಕ ಪ್ರಬಂಧಕಿ, ಮಾರಾಟ ಮತ್ತು ಮಾರುಕಟ್ಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts