More

    ಬೆಳ್ಳಾವಿ ಹೋಬಳಿ ಕೆರೆಗಳಿಗೆ ಹೇಮೆ ; ಜನತಾದರ್ಶನದಲ್ಲಿ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಭರವಸೆ

    ತುಮಕೂರು: ಎತ್ತಿನಹೊಳೆ ಯೋಜನೆಯಿಂದ ಬೆಳ್ಳಾವಿ ಹೋಬಳಿಯ ಕೆರೆಗಳಿಗೆ ನೀರು ಹರಿಸಲು ಕ್ರಮವಹಿಸಲಾಗಿದ್ದು, ಹೇಮಾವತಿ ನೀರಿನಿಂದ ವಂಚಿತವಾಗಿರುವ ಕೆರೆಗಳು ತುಂಬಲು ಸಾಧ್ಯವಾಗಲಿದೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.

    ಬೆಳ್ಳಾವಿ ಹೋಬಳಿಯಲ್ಲಿ ಮಂಗಳವಾರ ಆಯೋಜಿಸಿದ್ದ ಜನತಾದರ್ಶನದಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಬೆಳ್ಳಾವಿ ಹೋಬಳಿಯ ಕೆರೆಗಳನ್ನು ತುಂಬಿಸಿ ಕಳೆದ ವರ್ಷ ಬಾಗಿನ ಅರ್ಪಿಸಿದ್ದೆ. ಅದೇ ರೀತಿ ಈ ಬಾರಿಯೂ ಹೇಮಾವತಿ ನೀರನ್ನು ತುಂಬಿಸುತ್ತೇನೆ. ಅಲ್ಲದೆ, ಎತ್ತಿನಹೊಳೆ ಯೋಜನೆ ನೀರನ್ನು ಈ ಭಾಗದ ಇನ್ನಷ್ಟು ಕೆರೆಗಳನ್ನು ತುಂಬಿಸುವ ನಿಟ್ಟಿನಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೇ ಮನವಿ ಸಲ್ಲಿಸಿದ್ದೆ ಎಂದು ಹೇಳಿದರು.

    ನಿವೇಶನಕ್ಕೆ ಜಾಗ ಗುರುತಿಸಿ: ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ನಿವೇಶನ ಹಂಚಲು ಸರ್ಕಾರಿ ಭೂಮಿಯನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಡಿಸೆಂಬರ್ ಅಂತ್ಯದೊಳಗೆ ಸರ್ಕಾರದ ವತಿಯಿಂದಲೇ ನಿವೇಶನವನ್ನು ಹಂಚಲು ಕ್ರಮವಹಿಸುವುದಾಗಿ ಗೌರಿಶಂಕರ್ ಹೇಳಿದರು.  ತಾಪಂ ಇಒ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಸರ್ಕಾರಿ ಭೂಮಿ ಗುರುತಿಸಿ, ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿ ನಿವೇಶನ ಮಾಡಲು ಕ್ರಮವಹಿಸಬೇಕು ಎಂದರು.

    ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಲ್ಲಿ ಪರ್ಯಾಯ ನೀರಿನ ವ್ಯವಸ್ಥೆ ಮಾಡಬೇಕು. ಅಗತ್ಯವಿದ್ದಲ್ಲಿ ಕೊಳವೆಬಾವಿಗಳನ್ನು ಕೊರೆಸುವ ಮೂಲಕ ನೀರಿನ ಸಮಸ್ಯೆ ಎದುರಾಗದಂತೆ ಕ್ರಮಕೈಗೊಳ್ಳಲು ತಾಪಂ ಇಒ ಜೈಪಾಲ್ ಅವರಿಗೆ ಸೂಚಿಸಿದ ಶಾಸಕ ಗೌರಿಶಂಕರ್, ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

    3 ಲಕ್ಷ ಧನ ಸಹಾಯ: ಜನತಾದರ್ಶನ ವೇಳೆ ವೈಯಕ್ತಿಕ ಹಾಗೂ ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿಗಳ ಸಮಸ್ಯೆಗಳನ್ನು ಆಲಿಸಿದ ಶಾಸಕ ಗೌರಿಶಂಕರ್ ಸ್ಥಳದಲ್ಲೇ 3 ಲಕ್ಷ ರೂ.,ಗಳ ಧನ ಸಹಾಯವನ್ನು ವೈಯಕ್ತಿಕವಾಗಿ ನೀಡಿದರು. ಜನತಾದರ್ಶನಕ್ಕೆ ಬಂದಿದ್ದ 2000 ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆಯನ್ನು ಸ್ವತಃ ಶಾಸಕರೇ ಕಲ್ಪಿಸಿದ್ದರು.
    ಕಾರ್ಯಕ್ರಮದಲ್ಲಿ ತಾಪಂ ಇಒ ಜೈಪಾಲ್, ಕಂದಾಯ, ಬೆಸ್ಕಾಂ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ರಾಮಚಂದ್ರಪ್ಪ, ಹಿರೇಹಳ್ಳಿ ಮಹೇಶ್, ಹಾಲನೂರು ಅನಂತ್, ಜಯಂತ್‌ಗೌಡ, ಉಮೇಶ್, ಕೆಂಪನರಸಯ್ಯ, ತಾಪಂ ಸದಸ್ಯ ಶಿವಣ್ಣ ಇದ್ದರು.

    600 ಅರ್ಜಿ ವಿಲೇವಾರಿ:ಬೆಳ್ಳಾವಿ ಹೋಬಳಿ ಕೇಂದ್ರದಲ್ಲಿ ಆಯೋಜಿಸಿದ್ದ ಶಾಸಕ ಡಿ.ಸಿ.ಗೌರಿಶಂಕರ್ ಅವರ ಜನತಾದರ್ಶನದಲ್ಲಿ ವೃದ್ಧಾಪ್ಯ ವೇತನ, ಪಹಣಿ ಬದಲಾವಣೆ, ಪೌತಿ ಬದಲಾವಣೆ ಸೇರಿ ಒಟ್ಟು 1500ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದವು. 600ಕ್ಕೂ ಹೆಚ್ಚು ಅರ್ಜಿಗಳನ್ನು ಸ್ಥಳದಲ್ಲಿ ವಿಲೇ ಮಾಡಲಾಗಿದ್ದು, 200ಕ್ಕೂ ಹೆಚ್ಚು ಮಂದಿಗೆ ಸ್ಥಳದಲ್ಲಿಯೇ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನದ ಮಂಜೂರಾತಿ ಆದೇಶವನ್ನು ವಿತರಿಸಲಾಯಿತು. ಅರ್ಹ ಫಲಾನುಭವಿಗಳಿಗೆ ಕೃಷಿ ಉಪಕರಣಗಳನ್ನು ವಿತರಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts