More

    ಜನತಾ ಕರ್ಫ್ಯೂಗೆ ಸಾಥ್

    ಅಥಣಿ: ಮಾರಣಾಂತಿಕ ಕರೊನಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಸಾರ್ವಜನಿಕರಿಂದ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.

    ಅಥಣಿ ತಾಲೂಕಿನ ಜನತೆ ಜನತಾ ಕರ್ಫ್ಯೂಗೆ ಸಾಥ್ ನೀಡಿದರು. ಭಾನುವಾರದ ವಾರದ ಸಂತೆ, ಜಾನುವಾರ ಸಂತೆ ನಡೆಯಲಿಲ್ಲ. ಸಾರಿಗೆ ಸಂಸ್ಥೆ ಬಸ್‌ಗಳು ಸಂಪೂರ್ಣ ಬಂದ್ ಆಗಿದ್ದವು. ಪಟ್ಟಣದ ಎಲ್ಲ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಅಲ್ಲಲ್ಲಿ ಪೊಲೀಸರ ಸಂಚಾರ ಮಾತ್ರ ಇತ್ತು. ಮನೆಯಿಂದ ಯಾರೂ ಹೊರಬರಲಿಲ್ಲ. ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರವೇ ಸಾರ್ವಜನಿಕರು ತಮ್ಮ ದೈನಂದಿನ ಬದುಕಿಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಿದ್ದರು. ಹೀಗಾಗಿ ಭಾನುವಾರ ಯಾರೂ ಮಾರುಕಟ್ಟೆಗೆ ಬರಲಿಲ್ಲ.

    ಸಾರಿಗೆ ಬಸ್ ಸಂಚಾರ ಸ್ಥಗಿತ: ಅಥಣಿ ಸಾರಿಗೆ ಘಟಕದಲ್ಲಿನ 120ಕ್ಕೂ ಹೆಚ್ಚು ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಸೋಮವಾರ ದ್ವಿತೀಯ ಪಿಯು ಪರೀಕ್ಷೆ ಇರುವುದರಿಂದ ಅಗತ್ಯವಿರುವ ಗ್ರಾಮಗಳಿಗೆ ಮಾತ್ರ 30 ಬಸ್‌ಗಳನ್ನು ರಾತ್ರಿ ಬಿಡಲಾಗುವುದು. ಉಳಿದಂತೆ ಮಹಾರಾಷ್ಟ್ರಕ್ಕೆ ಸಂಪೂರ್ಣ ಬಸ್ ಸಂಚಾರ ಬಂದ್ ಮಾಡಲಾಗಿದೆ ಎಂದು ಘಟಕ ವ್ಯವಸ್ಥಾಪಕ ಪಿ.ಆರ್. ಕಿರಣಗಿ ತಿಳಿಸಿದರು.

    ಕೋಹಳ್ಳಿ ವರದಿ: ಕೋಹಳ್ಳಿ ಗ್ರಾಮದಲ್ಲಿ ಜನತಾ ಕರ್ಫ್ಯೂಗೆ ಜನರು ಸಾಥ್ ನೀಡಿದರು. ಯಾರೂ ಮನೆ ಬಿಟ್ಟು ಹೊರ ಬರಲಿಲ್ಲ. ವ್ಯಾಪಾರಸ್ಥರು ಅಂಗಡಿ, ಹೋಟೆಲ್ ಬಂದ್ ಮಾಡಿದ್ದರು. ವಾಹನಗಳಿಂದ ತುಂಬಿ ತುಳುಕುತ್ತಿದ್ದ ಕೊಟ್ಟಲಗಿ-ಅಥಣಿ ರಸ್ತೆ ವಾಹನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತು. ಸಾರಿಗೆ ಸಂಚಾರ್ ಬಂದ್ ಆಗಿತ್ತು. ಕೂಲಿ ಕಾರ್ಮಿಕರು ಕರ್ಫ್ಯೂಗೆ ಬೆಂಬಲ ನೀಡಿದ್ದರು.

    ಐಗಳಿ ವರದಿ: ಗ್ರಾಮದಲ್ಲಿ ಜನತಾ ಕರ್ಫ್ಯೂಗೆ ಭಾನುವಾರ ಉತ್ತಮ ಪ್ರತಿಕ್ರಿಯೆ ದೊರೆಯಿತು. ಜನರು ಮನೆಯಿಂದ ಹೊರಬರದೇ ಮನೆಯಲ್ಲಿ ಕುಳಿತಿದ್ದರು. ಎಲ್ಲ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿತ್ತು.

    ಉತ್ತಮ ಪ್ರತಿಕ್ರಿಯೆ

    ಜನತಾ ಕರ್ಫ್ಯೂಗೆ ಬೋರಗಾಂವ ಪಟ್ಟಣದಲ್ಲಿ ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಯಿತು. ಸ್ವಂಯ ಪ್ರೇರಣೆಯಿಂದ ವ್ಯಾಪಾರಿಗಳು ಅಂಗಡಿ ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದರು. ಪಟ್ಟಣದಲ್ಲಿ ಭಾನುವಾರ ಶಾಂತ ವಾತಾವರಣ ಮನೆಮಾಡಿತ್ತು. ಭಾನುವಾರದ ಸಂತೆಯನ್ನು ಸಹ ರದ್ದು ಮಾಡಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಗಡಿಭಾಗದಲ್ಲಿ ನಿರ್ಮಿಸಿದ ಚೆಕ್ ಪೋಸ್ಟ್‌ನಲ್ಲಿ ಸದಲಗಾ ಪೊಲೀಸರಿಂದ ಕಟ್ಟೆಚ್ಚರ ವಹಿಸಲಾಗಿತ್ತು. ಮಹಾರಾಷ್ಟ್ರದಿಂದ ಯಾವುದೇ ವಾಹನಗಳು ಬರದಂತೆ ಕ್ರಮ ಕೈಗೊಳ್ಳಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts