More

    ಜಾನಪದ ಲೋಕೋತ್ಸವಕ್ಕೆ ತೆರೆ: ವಿದೇಶಿಗರೂ ಸೇರಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಾಕ್ಷಿ

    ರಾಮನಗರ: ಮೂರು ದಿನಗಳಿಂದ ಜರುಗಿದ ಜಾನಪದಲೋಕದ ಬೆಳ್ಳಿ ಹಬ್ಬ ಮತ್ತು ಪ್ರವಾಸಿ ಜಾನಪದ ಲೋಕೋತ್ಸವ ಕಾರ್ಯಕ್ರಮ ಮಂಗಳವಾರ ತೆರೆಕಂಡಿತು.

    ಬೆಳ್ಳಿ ಹಬ್ಬ ಮತ್ತು ಲೋಕೋತ್ಸವದ ಮೊದಲ ದಿನದ ಕಾರ್ಯಕ್ರಮವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಿದರು. ಸಮಾರೋಪ ಸಮಾರಂಭ ದ ಸಾನ್ನಿಧ್ಯವನ್ನು ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮೀಜಿ ವಹಿಸಿದ್ದರು.

    ಬೆಳ್ಳಿ ಹಬ್ಬದ ಪ್ರಯುಕ್ತ ಜಾನಪದಲೋಕವನ್ನು ಸಂಪೂರ್ಣ ಗ್ರಾಮೀಣ ಮಾದರಿಯಲ್ಲಿ ಸಿಂಗರಿಸ ಲಾಗಿತ್ತು. ಎರಡು ದಿನದ ಈ ಕಾರ್ಯಕ್ರಮಕ್ಕೆ ವಿದೇಶಿಗರೂ ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಮಂದಿ ಸಾಕ್ಷಿಯಾದರು. ಮಂಗಳವಾರ ಇಳಿ ಸಂಜೆಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಜಾನಪದ ಕಲಾವಿದರನ್ನು ಸನ್ಮಾನಿಸಲಾಯಿತು.

    ಮೂರು ದಿನಗಳ ಕಾಲ ನಡೆದ ಈ ಬೆಳ್ಳಿ ಹಬ್ಬದ ಮಹೋತ್ಸವಕ್ಕೆ ಕರ್ನಾಟಕ ಜಾನಪದ ಪರಿಷತ್ತು, ರಾಜ್ಯ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಸಹಯೋಗ ನೀಡಿದ್ದವು. ಲೋಕೋತ್ಸವದ ಪ್ರಯುಕ್ತ ಜಾನಪದ ಕಲಾತಂಡಗಳ ಮೆರವಣಿಗೆ ಕೂಡ ಹಮ್ಮಿಕೊಳ್ಳಲಾಗಿತ್ತು ಮೂಲ ಜಾನಪದ ಕಲಾವಿದರಿಂದ ಜನಪದ ಗೀತೆ ಜತೆಗೆ, ವಾದ್ಯ, ಕೊಂಬು ಕಹಳೆ, ಪೂಜಾ ಕುಣಿತ, ಪಟ ಕುಣಿತ, ಡೊಳ್ಳು ಕುಣಿತಗಳು ನೋಡುಗರನ್ನು ಮಂತ್ರ ಮುಗ್ಧವನ್ನಾಗಿಸಿದವು.

    ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಜಾನಪದ ಪರಿಷತ್‌ನ ಅಧ್ಯಕ್ಷ ತಿಮ್ಮೇಗೌಡ, ರಾಜ್ಯದಲ್ಲಿ ಅಸಂಖ್ಯಾತ ಜಾನಪದ ಕಲಾವಿದರಿದ್ದಾರೆ. ಇವರು ಸಂಕಷ್ಟದಲ್ಲಿ ಜೀವನ ದೂಡುತ್ತಿದ್ದಾರೆ. 50 ವರ್ಷ ದಾಟುತ್ತಲೇ ತಮ್ಮ ಶ್ರಮ ಮತ್ತು ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಸರ್ಕಾರ ಇವರಿಗೆ ಮಾಶಾಸನ ನೀಡಲು 60 ವರ್ಷ ನಿಗದಿಪಡಿಸಿದೆ.

    ಕಲಾವಿದರಿಗೆ ಮಾಶಾಸನ ಬದಲಿಗೆ ಗೌರವಧನ ನೀಡಬೇಕು ಎಂದು ಆಗ್ರಹಿಸಿದರು. ಶಾಸಕಿ ಅನಿತಾಕುಮಾರಸ್ವಾಮಿ ಮಾತನಾಡಿ, ಈಗಿನ ಕಾಲದಲ್ಲಿ ಜಾನಪದ ಕಲೆಗಳು, ಕಲಾವಿದರು ಮರೆಯಾಗುತ್ತಿದ್ದಾರೆ. ಆದರೆ ಜಾನಪದ ಲೋಕದಲ್ಲಿ ಕಳೆದ 25 ವರ್ಷಗಳಿಂದ ಜಾನಪದ ಕಲೆಗಳ ಜತೆಗೆ, ಕಲಾವಿದರನ್ನ ಉಳಿಸುವ ಕಾರ್ಯ ನಡೆಯುತ್ತಿದೆ. ಅದಕ್ಕಾಗಿ ಜಾನಪದಲೋಕದ ನಿರ್ಮಾತೃ ಎಚ್.ಎಲ್.ನಾಗೇಗೌಡರಿಗೆ ಧನ್ಯವಾದ ತಿಳಿಸುತ್ತೇನೆಂದು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿ ಜಾನಪದ ಕಲೆಗಳು, ಕಲಾವಿದರು ಬೆಳೆಯಬೇಕು. ಆಮೂಲಕ ತಮ್ಮ ಶ್ರೀಮಂತ ಸಂಸ್ಕೃತಿ ಉಳಿಯಬೇಕು ಎಂದು ತಿಳಿಸಿದರು.

    20ಕ್ಕೂ ಹೆಚ್ಚು ಸ್ಟಾಲ್: ಜಾನಪದ ಲೋಕದ ಆವರಣದಲ್ಲಿ 20ಕ್ಕೂ ಹೆಚ್ಚು ವಿವಿಧ ರೀತಿಯ ಸ್ಟಾಲ್‌ಗಳನ್ನು ಹಾಕಲಾಗಿತ್ತು. ಇದರಲ್ಲಿ ಆಹಾರ ಮೇಳ, ಕರಕುಶಲ ಮೇಳಗಳು ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು. ಮಣ್ಣಿನ ಕುಡಿಕೆ ಮಾಡುವ ಪ್ರಾತ್ಯಕ್ಷಿಕೆ ಗಮನ ಸೆಳೆಯಿತು. ವಿದೇಶಿಗರು ಮೇಳದಲ್ಲಿ ಭಾಗವಹಿಸುವ ಮೂಲಕ ಮತ್ತಷ್ಟು ರಂಗು ತುಂಬಿದರು.

    ಮಾಸಾಶನದಲ್ಲಿ ಸಾವಿರ ರೂ. ಹೆಚ್ಚಳ: ಜಾನಪದ ಕಲಾವಿದರಿಗೆ ನೀಡುತ್ತಿರುವ ಮಾಶಾಸನ ವನ್ನು ಈಗಿರುವ ಒಂದೂವರೆ ಸಾವಿರದಿಂದ ಎರಡೂವರೆ ಸಾವಿರಕ್ಕೆ ಹೆಚ್ಚಿಸುವ ಭರವಸೆ ಸರ್ಕಾರದಿಂದ ದೊರೆತಿದೆ ಎಂದು ಜಾನಪದ ಪರಿಷತ್ ಅಧ್ಯಕ್ಷ ತಿಮ್ಮೇಗೌಡ ತಿಳಿಸಿದರು. ಮೇ ತಿಂಗಳಿಂದ ಅರ್ಹ ಕಲಾವಿದರಿಗೆ ಮಾಶಾಸನ ನೀಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಭರವಸೆ ನೀಡಿದ್ದಾರೆ ಎಂದು ಸಮಾರೋಪ ಸಮಾರಂಭದ ಭಾಷಣದಲ್ಲಿ ಹೇಳಿದರು.

    ಸಮಾರೋಪದಲ್ಲಿದ್ದ ಗಣ್ಯರು: ಆದಿಚುಂಚನಗಿರಿ ಶಾಖಾ ಮಾಠಾಧೀಶ ಅನ್ನದಾನೇಶ್ವರನಾಥ ಸ್ವಾಮೀಜಿ ಜಾನಪದ ವಿದ್ವಾಂಸ ರಾಮಚಂದ್ರೇಗೌಡ, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ, ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯಾನಂಜಾರಾಜ್, ಜಾನಪದ ಲೋಕದ ಮುಖ್ಯ ಆಡಳಿತಾಧಿಕಾರಿ ಎಂ.ಎನ್. ರುದ್ರಪ್ಪ, ಆಡಳಿತಾಧಿಕಾರಿ ಕುರುವ ಬಸವರಾಜ್ ಸೇರಿದಂತೆ ಹಲವು ಗಣ್ಯರು ಸಮಾರೋಪ ಸಮಾರಂಭಕ್ಕೆ ಸಾಕ್ಷಿಯಾದರು.

    33 ಕಲಾವಿದರಿಗೆ ಸನ್ಮಾನ: ರಾಜ್ಯದ 33 ಜಾನಪದ ಕಲಾವಿದರಿಗೆ ಜಾನಪದ ಲೋಕದ ಬೆಳ್ಳಿ ಹಬ್ಬ ಮತ್ತು ಲೋಕೋತ್ಸವದ ಪ್ರಯುಕ್ತ ಸನ್ಮಾನ ಮಾಡಲಾಯಿತು. ಕಲಾವಿದರಾದ ರಾಮೇಗೌಡ, ಭಾಗ್ಯಮ್ಮ, ಜಯಮ್ಮ, ಚೌಡಿಕೆ ಮಾರಣ್ಣ, ಸಿದ್ದಲಿಂಗಪ್ಪ ಸಣ್ಣಕಲ್, ಮಾಯಾಣ್ಣ, ಗೋವಿಂದಯ್ಯ, ಬಸವರಾಜು, ಪುಟ್ಟರಾಜಮ್ಮ, ಶಿವನಗೌಡ ಪಾಟೀಲ, ಶಿವಮ್ಮ, ಎಲ್.ಶಂಕರ್, ಅಬ್ದುಲ್ ಲತೀಫ್ ಪೇರೂರು, ಹಾಲಯ್ಯ, ಉಸ್ಮಾನ್, ಆರ್.ಎಸ್.ತಮ್ಮಯ್ಯ, ಸಿ.ಎಸ್.ಆರಾಧ್ಯ, ಮೇಟಿಕೋಟ್ರಪ್ಪ, ಶಿವಮಲ್ಲೇಗೌಡ, ಒಟ್ಟೂರು ಕೆಂದಪ್ಪ, ಶಿವಪ್ಪ ಗುರುಸಿದ್ದಪ್ಪ, ಮಲ್ಲೇಶಪ್ಪ, ಮಾದನಾಯಕ, ಜಿ.ಕೆ.ರಾಮು, ನವಲಿಂಗ ಪಾಟೀಲ, ರಾಮಯ್ಯ, ಮುನಿರೆಡ್ಡಿ, ಶಾಂತಪ್ಪ ಶಿವಯೋಗಪ್ಪ ತಳವಾರ, ಶರಣಪ್ಪ, ಮಾಡ್ನಾಳ, ಸಹದೇವಪ್ಪ ರಾಯಪ್ಪ ಕಮಡೊಳ್ಳಿ, ಗಣಪತಿ ಈರಪ್ಪ ಬಡಿಗೇರ, ಅಕ್ಷತಾ ಕೃಷ್ಣಮೂರ್ತಿ ಅವರಿಗೆ ಜಾನಪದ ಲೋಕ ಸೇರಿದಂತೆ ವಿವಿಧ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts