More

    ಜನಮತ | ಗ್ರಂಥಾಲಯಗಳ ನಿರ್ಲಕ್ಷ್ಯ ಸಲ್ಲ

    ಕನ್ನಡ ಸಾಹಿತ್ಯವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಿಗೆ ಬೆಳೆಯಬೇಕು ಎಂದೆಲ್ಲ ಹಿಂದಿನ ಹಾಗೂ ಇಂದಿನ ಸರ್ಕಾರಗಳೂ ಘೊಷಿಸುತ್ತಲೇ ಬಂದಿವೆ. ಆದರೆ ಕನ್ನಡ ಸಾಹಿತ್ಯ ಪುಸ್ತಕಗಳ ಓದು ಕ್ಷೀಣಿಸುತ್ತಿದೆ ಎಂಬುದನ್ನು ಸರ್ಕಾರಗಳು ಮನಗಂಡಂತಿಲ್ಲ. ಈ ಮಧ್ಯೆ, ಗ್ರಂಥಾಲಯ ವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸುವ ಕ್ರಮಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮುಂದಾಗಿದೆ. ಪಬ್ಲಿಕ್ ಲೈಬ್ರರಿಗಳಿಗೆ ಪ್ರತಿವರ್ಷ ಖರೀದಿಸಲಾಗುವ ಪುಸ್ತಕಗಳಿಗೆ ನೀಡಲಾಗುವ ಅನುದಾನದಲ್ಲಿ ಶೇಕಡ 30ರಷ್ಟನ್ನು ಕಡಿತ ಮಾಡಲಾಗಿದೆ. ಈಗ ಕರೊನಾ ಮಾರಿ ತಂದ್ದೊಡ್ಡಿರುವ ಸಂಕಷ್ಟದಿಂದ ವಾಚಕರು ಗ್ರಂಥಾಲಯಕ್ಕೆ ಹೋಗದಂತಾಗಿದೆ. ದಿನಪತ್ರಿಕೆ ಮತ್ತು ನಿಯತಕಾಲಿಕಗಳ ಖರೀದಿಗೆ ಮೀಸಲಿಡುತ್ತಿದ್ದ ಅನುದಾನದಲ್ಲೂ ಶೇ.5ರಷ್ಟು ಕತ್ತರಿ ಹಾಕಲಾಗಿದೆ. ಉಳಿಯುವ ಮೊತ್ತದಲ್ಲಿ ಹೆಚ್ಚಿನ ಹಣ ಗ್ರಂಥಾಲಯ ನಿರ್ವಹಣೆ ಹಾಗೂ ಮೂಲಸೌಕರ್ಯಗಳಿಗೆ ನೀಡಲಾಗಿದೆ. ಗ್ರಂಥಾಲಯಗಳ ಡಿಜಿಟಲೀಕರಣ, ಇ-ಪುಸ್ತಕಗಳ ಖರೀದಿಗೆ ಇಲಾಖೆ ಮುಂದಾಗಿದ್ದು, 10 ಕೋಟಿ ರೂಪಾಯಿಗಳನ್ನು ಇದಕ್ಕಾಗಿ ಮೀಸಲಿಟ್ಟಿದೆ.

    ಜ್ಞಾನವು ಎಲ್ಲರಿಗೂ ಮುಕ್ತ ಹಾಗೂ ಲಭ್ಯವಾಗಿರಬೇಕು ಎಂಬ ಆಶಯದಿಂದ ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆ ರೂಪುಗೊಂಡಿದೆ. ಅನೇಕ ತಲೆಮಾರುಗಳೇ ಈ ವ್ಯವಸ್ಥೆಯ ಲಾಭವನ್ನು ಪಡೆದಿವೆ; ಈಗಲೂ ಪಡೆಯುತ್ತಿವೆ. ಕನ್ನಡದಲ್ಲಿ ಪ್ರತಿವರ್ಷ 5000-6000 ಪುಸ್ತಕಗಳು ಬಿಡುಗಡೆಯಾಗುತ್ತವೆ. ಅದರಲ್ಲಿ ಮುಖ್ಯವೆನಿಸಿದವನ್ನು ಆಯ್ಕೆ ಮಾಡಿ ಗ್ರಂಥಾಲಯ ಇಲಾಖೆ ಖರೀದಿಸುತ್ತದೆ. ಈ ಖರೀದಿಯಲ್ಲೂ ಸಾಕಷ್ಟು ಅವ್ಯವಹಾರ ನಡೆಯುತ್ತದೆ ಎಂಬ ಆರೋಪಗಳಿವೆ. ಇದಕ್ಕೊಂದು ಪಾರದರ್ಶಕ ವ್ಯವಸ್ಥೆ ಇಲ್ಲ, ಲೆಕ್ಕ ಪರಿಶೋಧನೆಯಂತೂ ಇಲ್ಲವೇ ಇಲ್ಲ. ಖರೀದಿ ಪಟ್ಟಿಯನ್ನು ನೋಡಿದರೆ ಮಾರುಕಟ್ಟೆಯಲ್ಲಿ ಕಾಣಿಸದ, ಯಾರೂ ಹೆಸರೇ ಕೇಳಿರದ ಲೇಖಕರ ಪುಸ್ತಕಗಳು ತುಂಬಿರುವುದುಂಟು. ಇಂಥ ಪುಸ್ತಕಗಳು ಯಾರಿಂದಲಾದರೂ ಓದಲ್ಪಡುತ್ತವೆ ಎಂಬುದೇ ಅನುಮಾನ. ಕೆಲವು ಅಮೂಲ್ಯ ಪುಸ್ತಕಗಳು ಖರೀದಿಯೇ ಆಗುವುದಿಲ್ಲ. ಅನೇಕ ಪ್ರಬುದ್ಧ ಪ್ರಕಾಶಕರು ಈ ಅವ್ಯವಹಾರಕ್ಕೆ ಹೇಸಿ ಇದರಿಂದ ದೂರವೇ ನಿಂತಿದ್ದಾರೆ.

    ಹಲವು ವರ್ಷಗಳಿಂದ ಗ್ರಂಥಾಲಯ ಕಟ್ಟಡಗಳು ಶಿಥಿಲಗೊಂಡಿದ್ದರೂ ದುರಸ್ತಿ ಕಾರ್ಯಗಳಾಗಿಲ್ಲ. ಕಟ್ಟಡಗಳನ್ನು ದುರಸ್ತಿಗೊಳಿಸದೆ ಡಿಜಿಟಲೀಕರಣ ಹಾಗೂ ಇ-ಬುಕ್​ಗಳ ಖರೀದಿಗೆ ಹೆಚ್ಚಿನ ಹಣ ಮೀಸಲಿಡುತ್ತಿರುವುದು ಸದ್ಯಕ್ಕೆ ಅವ್ಯಾವಹಾರಿಕ, ಅಪ್ರಾಯೋಗಿಕ ಕೂಡ. ಕನ್ನಡದಲ್ಲಿ ಇ-ಬುಕ್​ಗಳು ಬೆರಳೆಣಿಕೆಯಷ್ಟಿವೆ. ಕೆಲವರು ಕನ್ನಡದಲ್ಲಿ ಇ-ಪುಸ್ತಕಗಳ ಮಾರುಕಟ್ಟೆ ಸೃಷ್ಟಿಗೆ ಪ್ರಯತ್ನಿಸಿ ಕೈಸೋತಿದ್ದಾರೆ. ಇಂಥ ಸನ್ನಿವೇಶದಲ್ಲಿ ಇ-ಬುಕ್​ಗಳನ್ನು ಎಲ್ಲಿಂದ ಖರೀದಿಸುತ್ತಾರೆ? ಅಸ್ತಿತ್ವದಲ್ಲೇ ಇಲ್ಲದ ವಸ್ತುವೊಂದನ್ನು ಇದೆಯೆಂದು ಕಣ್ಕಟ್ಟು ಮಾಡಿ ಖರೀದಿಸಿದ ನಾಟಕ ಮಾಡಿದರೆ ಯಾರಿಗೆ ಲಾಭ? ಹೋಗಲಿ, ಇ-ಬುಕ್​ಗಳನ್ನು ಓದುಗರಿಗೆ ಹಂಚುವ, ಹಿಂಪಡೆಯುವ ವ್ಯವಸ್ಥೆ ಹೇಗೆ? ಅದಕ್ಕೆ ಬೇಕಾಗುವಷ್ಟು ಮೂಲಸೌಕರ್ಯಗಳು ಇಲಾಖೆಯಲ್ಲಿವೆಯೇ? ಸಿಬ್ಬಂದಿಗೆ ಈ ಆಧುನಿಕ ವ್ಯವಸ್ಥೆಯ ತರಬೇತಿ ಇದೆಯೇ? ಈಗಿನ್ನೂ ಅಮೂಲ್ಯ ಗ್ರಂಥಗಳ ಡಿಜಿಟಲೀಕರಣದ ವ್ಯವಸ್ಥೆ ಆರಂಭವಾಗಿದೆ. ಭವಿಷ್ಯದ ಓದುವಿಕೆಯ ಕ್ಷೇತ್ರವು ಡಿಜಿಟಲ್ ಆಗಿರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಅದಕ್ಕಾಗಿ ಸಿದ್ಧತೆಗಳೂ ಆಗಬೇಕು. ಆದರೆ ಆ ಕಾಲವಿನ್ನೂ ದೂರವಿದೆ. ಕನ್ನಡ ಮಾತ್ರವಲ್ಲ, ಇಂಗ್ಲಿಷ್ ಓದುಗರೂ ಇ-ಬುಕ್​ಗಳನ್ನು ಓದುವುದಕ್ಕಿಂತಲೂ ಕಾಯಂಪ್ರತಿಗಳನ್ನು ಓದುವುದನ್ನೇ ಇಷ್ಟಪಡುತ್ತಾರೆ.

    ಡಿಜಿಟಲ್ ವ್ಯವಸ್ಥೆಗೆ ಹೊಂದಿಕೊಳ್ಳಲು ಸಾಧ್ಯವಿಲ್ಲದ ವಯಸ್ಕರು ಮೊದಲಿನ ವ್ಯವಸ್ಥೆಯಲ್ಲೇ ಉಳಿಯುತ್ತಾರೆ. ಮುದ್ರಿತ ಪುಸ್ತಕಗಳನ್ನು ಕೊಂಡುಕೊಳ್ಳುವುದನ್ನು ಕಡಿಮೆ ಮಾಡುವುದರಿಂದ ಇವರನ್ನು ಓದುವಿಕೆಯ ಸಾಧ್ಯತೆಗಳಿಂದ ವಂಚಿಸಿದಂತಾಗುತ್ತದೆ. ಸದ್ಯಕ್ಕೆ ಗ್ರಂಥಾಲಯ ವ್ಯವಸ್ಥೆಗೆ ಕಾಯಕಲ್ಪ ಆಗಬೇಕು. ಪ್ರಕಾಶಕರ ಹಾಗೂ ಓದುಗರ ಹಿತ ಕಾಪಾಡಿಕೊಳ್ಳುವಂತೆ ಅನುದಾನ ಮರುಹಂಚಿಕೆ, ಡಿಜಿಟಲೀಕರಣ, ಪುಸ್ತಕ ಖರೀದಿಯಲ್ಲಿ ಪಾರದರ್ಶಕತೆಗಳು ಮೂಡಬೇಕು.

    | ಸಂದೀಪ್ ಶರ್ಮಾ ಬೆಂಗಳೂರು

    ಗ್ರಾ.ಪಂ. ಸದಸ್ಯರು ಶಾಲೆಗಳಿಗೆ ಭೇಟಿ ನೀಡಿ

    ರಾಜ್ಯದಲ್ಲಿ ನೂತನವಾಗಿ ಚುನಾಯಿತರಾಗಿರುವ ಗ್ರಾಮ ಪಂಚಾಯಿತಿ ಸದಸ್ಯರು ಮೊದಲು ಆಯಾ ಊರಿನ ಶಾಲೆಗಳಿಗೆ ಭೇಟಿ ನೀಡಬೇಕು. ಕರೊನಾ ಸೋಂಕಿನ ಹಾವಳಿಯ ಪರಿಣಾಮ ಮುಚ್ಚಿದ್ದ ಶಾಲೆಗಳು 10 ತಿಂಗಳ ಬಳಿಕ ತೆರೆದಿವೆ. ಕೆಲವೆಡೆ ಶಾಲೆಗಳಲ್ಲಿ ಸ್ವಚ್ಛತೆ ಕಾಯ್ದುಕೊಂಡಿಲ್ಲವಾದರೆ, ಮತ್ತೆ ಕೆಲವು ಕಡೆ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಇದರಿಂದ ಮಕ್ಕಳು, ಶಿಕ್ಷಕರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದೆ. ಶಾಲೆಗಳಲ್ಲಿ ಮೊದಲಿನಂತೆ ಕಲಿಕಾ ವಾತಾವರಣ ನಿರ್ವಿುಸುವುದು ಅಗತ್ಯವಾಗಿದೆ. ಅದು ಸಾಧ್ಯವಾಗಬೇಕಾದರೆ ಅಲ್ಲಿನ ಕುಂದುಕೊರತೆಗಳನ್ನು ನಿವಾರಿಸಬೇಕು. ಹಾಗಾಗಿ, ಗ್ರಾಮಾಭಿವೃದ್ಧಿಯ ಆಶ್ವಾಸನೆ ನೀಡಿ ಗೆದ್ದುಬಂದಿರುವ ಗ್ರಾಮ ಪಂಚಾಯಿತಿ ಸದಸ್ಯರು ಮೊದಲು ಶಾಲೆಗಳ ಸುಧಾರಣೆಗೆ ಶ್ರಮಿಸಬೇಕು.

    | ಶಂಕರಗೌಡ ಬಿರಾದಾರ ಮುಳಸಾವಳಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts