More

    ಇನ್ನೊಂದು ಸಾಮೂಹಿಕ ವಲಸೆ? ಹಿಂದುಗಳಲ್ಲಿ ಟಾರ್ಗೆಟ್ ಆತಂಕ | 72 ತಾಸಲ್ಲಿ ಮತ್ತೊಂದು ಹತ್ಯೆ

    ಶ್ರೀನಗರ: ಕಾಶ್ಮೀರದಲ್ಲಿ 2020ರ ಡಿಸೆಂಬರ್​ನಿಂದೀಚೆಗೆ ಟಾರ್ಗೆಟ್ ಹತ್ಯೆ ಪ್ರಕರಣ ಹೆಚ್ಚಾಗಿದೆ. ಉಗ್ರರು ಇದುವರೆಗೆ ಅಲ್ಪಸಂಖ್ಯಾತ ಸಮುದಾಯದ 18 ಸದಸ್ಯರನ್ನು ಟಾರ್ಗೆಟ್ ಮಾಡಿ ಹತ್ಯೆ ಮಾಡಿದ್ದಾರೆ. ಕುಲ್ಗಾಂನಲ್ಲಿ ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ಹತ್ಯೆ ಇದಕ್ಕೆ ಹೊಸ ಸೇರ್ಪಡೆ ಆಗಿದೆ. ಉಗ್ರರ ಇಂಥ ಕೃತ್ಯದಿಂದ 1990ರ ದಶಕದ ಸಮೂಹ ವಲಸೆಯ ಆತಂಕ ಪಂಡಿತರನ್ನು ಹಾಗೂ ಹಿಂದುಗಳನ್ನು ಮತ್ತೆ ಕಾಡಿದೆ.

    ಪ್ರಧಾನ ಮಂತ್ರಿಯವರ ವಿಶೇಷ ಪುನರ್ವಸತಿ ಪ್ಯಾಕೇಜ್ ಪ್ರಕಾರ ಕಾಶ್ಮೀರ ಕಣಿವೆಯಲ್ಲಿ ಜಮ್ಮುವಿನ ಹಿಂದು ಉದ್ಯೋಗಿಗಳನ್ನು ಎಸ್​ಸಿ ಕೋಟಾದಲ್ಲಿ ನೇಮಕ ಮಾಡಲಾಗಿದೆ. ಇದೇ ರೀತಿ, 4,000 ಕಾಶ್ಮೀರಿ ಪಂಡಿತರನ್ನೂ ನೇಮಕ ಮಾಡಿಕೊಳ್ಳಲಾಗಿದೆ. ಟಾರ್ಗೆಟ್ ಹತ್ಯೆ ಹೆಚ್ಚಾಗುತ್ತಿರುವ ಕಾರಣ, ಎಲ್ಲರೂ ಪುನಃ ಜಮ್ಮುವಿಗೆ ಹಿಂದಿರುಗಲು ಒಲವು ತೋರಿದ್ದಾರೆ.

    ವರ್ಗಾವಣೆ ಕೋರಿದ್ದ ಶಿಕ್ಷಕಿ ರಜನಿ: ಉಗ್ರರು ಟಾರ್ಗೆಟ್ ಹತ್ಯೆ ಮಾಡುತ್ತಿರುವ ಕಾರಣ, ಕಾಶ್ಮೀರಿ ಪಂಡಿತರ ಹೊರತಾದ ಹಿಂದುಗಳು ಕೂಡ ಭಯಭೀತರಾಗಿದ್ದಾರೆ. ಅನೇಕರು ಕಾಶ್ಮೀರ ಬಿಟ್ಟು ತೆರಳುವ ಆಲೋಚನೆಯಲ್ಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚೆಗೆ ಹತ್ಯೆಯಾದ ಶಿಕ್ಷಕಿ ರಜನಿ ಬಾಲಾ ಕೂಡ, ಉಗ್ರ ದಾಳಿಯ ಆತಂಕದಿಂದಲೇ ವರ್ಗಾವಣೆ ಬೇಕು ಎಂದು ಮುಖ್ಯ ಶಿಕ್ಷಣ ಅಧಿಕಾರಿಗೆ ಪತ್ರ ಬರೆದಿದ್ದರು ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

    ಬ್ಯಾಂಕ್ ಮ್ಯಾನೇಜರ್ ಬಲಿ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂವ್ ಜಿಲ್ಲೆಯಲ್ಲಿ ರಾಜಸ್ಥಾನ ಮೂಲದ ಬ್ಯಾಂಕ್ ಮ್ಯಾನೇಜರ್ ವಿಜಯ ಕುಮಾರ್ ಅವರನ್ನು ಉಗ್ರನೊಬ್ಬ ಹತ್ಯೆ ಮಾಡಿದ್ದಾನೆ. ಇದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲು ಆಗಿದೆ. ಕೊಲೆಗಾರ ಬ್ಯಾಂಕ್ ಶಾಖೆಯೊಳಗೆ ಪ್ರವೇಶಿಸಿ, ವಿಜಯ ಕುಮಾರ್ ಕಡೆಗೆ ಗುಂಡು ಹಾರಿಸಿ ಪರಾರಿಯಾಗುವ ದೃಶ್ಯವಿದೆ. ಪೊಲೀಸರು ಸ್ಥಳವನ್ನು ಸುತ್ತುವರಿದಿದ್ದು, ಆರೋಪಿ ಉಗ್ರನ ಪತ್ತೆಗೆ ಶೋಧ ಆರಂಭಿಸಿದ್ದಾರೆ. ವಿಜಯ್ ಕುಮಾರ್ ಎಸ್​ಬಿಐ ಪ್ರಾಯೋಜಿತ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಆಗಿರುವ ಇಲಾಖಾಹಿ ದೇಹತಿ ಬ್ಯಾಂಕ್​ನ ಅರೇಹ್ ಶಾಖೆಯ ಮ್ಯಾನೇಜರ್ ಆಗಿ ಇತ್ತೀಚೆಗಷ್ಟೆ ಅಧಿಕಾರ ವಹಿಸಿಕೊಂಡಿದ್ದರು. ವಿಜಯ ಕುಮಾರ್ ರಾಜಸ್ಥಾನದ ಹನುಮಾನ್​ಗಢ ಜಿಲ್ಲೆಯ ನಿವಾಸಿ.

    ಕಳೆದ ಮೂರು ವರ್ಷಗಳಲ್ಲಿ ರಾಷ್ಟ್ರವಾದಿಗಳಾಗಿರುವ ಕಾಶ್ಮೀರಿ ಪಂಡಿತರು ಮತ್ತು ಹಿಂದುಗಳ ಹತ್ಯೆ ಹೆಚ್ಚಾಗಿದೆ. ಇವರು ಮುಕ್ತವಾಗಿ ರಾಷ್ಟ್ರವಾದ ಮತ್ತು ಸರ್ಕಾರವನ್ನು ಬೆಂಬಲಿಸುವವರು. ಕಾಶ್ಮೀರದಲ್ಲಿ ನೇಮಕವಾಗಿರುವ ಜಮ್ಮುವಿನ ಉದ್ಯೋಗಿಗಳು ಈಗ ಉಗ್ರರ ನೇರ ದಾಳಿಗೆ ಗುರಿಯಾಗುತ್ತಿದ್ದಾರೆ. ಗರಿಷ್ಠ ಭದ್ರತೆಯ ಕಚೇರಿಯಾಗಿದ್ದರೂ, ಹಾಡುಹಗಲಲ್ಲೇ ಹತ್ಯೆಗಳಾಗುತ್ತಿವೆ. ಹಿಂದುಗಳು ಮತ್ತು ಪಂಡಿತರನ್ನು ಬಲಿಪಶುಗಳನ್ನಾಗಿಸಲಾಗುತ್ತಿದೆ.

    | ಸತೀಶ್ ಕಿಸ್ಸು ಕಾಶ್ಮೀರಿ ಪಂಡಿತ್ಸ ಯುನೈಟೆಡ್ ಫ್ರಂಟ್​ನ ಸಮನ್ವಯಕಾರ

    ಷಾ-ದೋವಲ್ ಚರ್ಚೆ: ಜಮ್ಮು-ಕಾಶ್ಮೀರದಲ್ಲಿ ಬ್ಯಾಂಕ್ ಮ್ಯಾನೇಜರ್ ಹತ್ಯೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಗುರುವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜತೆಗೆ ಮಾತುಕತೆ ನಡೆಸಿದರು. ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಕೂಡ ಸಭೆಯಲ್ಲಿ ಹಾಜರಿದ್ದರು. ಅಮಿತ್ ಷಾ ಶುಕ್ರವಾರ ಸುರಕ್ಷಾ ಪರಾಮರ್ಶೆ ಸಭೆ ನಡೆಸಲಿದ್ದಾರೆ. ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

    ಲಷ್ಕರ್ ನಂಟಿನ ವ್ಯಕ್ತಿ ಸೆರೆ: ಲಷ್ಕರ್ ಎ ತೊಯ್ಬಾ (ಎಲ್​ಇಟಿ) ‘ನೇಮಕಗಾರ’ ಜುನೈದ್ ಮೊಹಮ್ಮದ್ ಜತೆಗೆ ನಂಟು ಹೊಂದಿದ ವ್ಯಕ್ತಿಯನ್ನು ಜಮ್ಮುವಿನ ಕಿಶ್ತವಾರದಲ್ಲಿ ಮಹಾರಾಷ್ಟ್ರದ ಆಂಟಿ ಟೆರರಿಸಂ ಸ್ಕಾ್ವಡ್ (ಎಟಿಎಸ್) ಗುರುವಾರ ಬಂಧಿಸಿದೆ. ಬಂಧಿತ ವ್ಯಕ್ತಿಯ ವಿವರ ಇನ್ನೂ ಬಹಿರಂಗವಾಗಿಲ್ಲ. ಜುನೈದ್ ಮೊಹಮ್ಮದ್(28)ನನ್ನು ಎಟಿಎಸ್ ಮೇ 24ರಂದು ಪುಣೆಯ ದಾಪೋಡಿಯಲ್ಲಿ ಬಂಧಿಸಿತ್ತು. ಈತನನ್ನು ಕೋರ್ಟ್ ಜೂನ್ 3ರ ತನಕ ಏಜೆನ್ಸಿ ಕಸ್ಟಡಿಗೆ ಒಪ್ಪಿಸಿತ್ತು. ವಿಚಾರಣೆಯಲ್ಲಿರುವಾಗಲೇ ಜುನೈದ್ ಬ್ಯಾಂಕ್ ಖಾತೆಗೆ 10,000 ರೂಪಾಯಿ ಜಮ್ಮು-ಕಾಶ್ಮೀರದ ಬ್ಯಾಂಕ್​ನಿಂದ ಜಮೆಯಾಗಿತ್ತು. ಈ ಸುಳಿವು ಮತ್ತು ಜುನೈದ್ ನೀಡಿದ ಮಾಹಿತಿ ಆಧರಿಸಿ ಎಟಿಎಸ್ ಜಮ್ಮು-ಕಾಶ್ಮೀರದಲ್ಲಿ ಶೋಧ ನಡೆಸಿದೆ.

    ದಾಳಿಯಲ್ಲಿ ಹಲವರಿಗೆ ಗಾಯ: ಕುಲ್ಗಾಂ ಪಕ್ಕದ ಶೋಪಿಯಾನ್ ಜಿಲ್ಲೆಯಲ್ಲಿ ನಾಗರಿಕನೊಬ್ಬನ ಮೇಲೆ ಉಗ್ರರು ನಿಶ್ಚಿತ ದಾಳಿ ನಡೆಸಿದ್ದರು. ಬುಧವಾರ ಸಂಜೆ ಮನೆಯ ಆವರಣದಲ್ಲಿದ್ದಾಗ ಈ ದಾಳಿ ನಡೆದಿತ್ತು. ದಾಳಿಗೊಳಗಾದ ನಾಗರಿಕನನ್ನು ಫಾರೂಕ್ ಅಹಮದ್ ಶೇಖ್ ಎಂದು ಗುರುತಿಸಲಾಗಿದೆ. ಆದರೆ, ಪ್ರಾಣಕ್ಕೇನೂ ಅಪಾಯವಾಗಿಲ್ಲ. ಇನ್ನೊಂದು ಪ್ರಕರಣದಲ್ಲಿ ಖಾಸಗಿ ವಾಹನದಲ್ಲಿ ಸ್ಪೋಟ ಸಂಭವಿಸಿ ಮೂವರು ಯೋಧರು ಗಾಯ ಗೊಂಡಿದ್ದಾರೆ. ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಗ್ರ ನಿಗ್ರಹ ಕಾರ್ಯಕ್ಕೆ ಯೋಧರು ಖಾಸಗಿ ವಾಹನ ಬಳಸಿದ್ದರು. ಸ್ಪೋಟಕ್ಕೆ ಕಾರಣ ವೇನು? ಯಾವುದು ಸ್ಪೋಟವಾಗಿದ್ದು ಎಂಬಿತ್ಯಾದಿ ವಿವರ ಇನ್ನೂ ದೃಢಪಟ್ಟಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts