More

    ಶ್ರೀಗಂಧದ ಮರಗಳ ಮಾರಣಹೋಮ

    ಜಮಖಂಡಿ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಶ್ರೀಗಂಧದ ಮರಗಳು ದಿನ ಕಳೆದಂತೆ ಕಳ್ಳರ ಪಾಲಾಗುತ್ತಿವೆ. ಇದನ್ನು ತಡೆಯಬೇಕಾದ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ.

    ತಾಲೂಕಿನ ಕೃಷ್ಣಾ ನದಿ ತೀರದ ಶಿರಗುಪ್ಪಿ, ಮೈಗೂರ, ಮುತ್ತೂರ, ಕಂಕನವಾಡಿ, ಕಡಕೋಳ, ತುಬಚಿ, ಶೂರ್ಪಾಲಿ, ಆಲಗೂರ ಸೇರಿ ನದಿ ತೀರದ ಗ್ರಾಮಗಳಲ್ಲಿ, ಹಳ್ಳದ ದಡಗಳಲ್ಲಿ, ರೈತ ಜಮೀನುಗಳಲ್ಲಿ ನೈಸರ್ಗಿಕವಾಗಿ ಬೆಳೆದಿದ್ದ ಶ್ರೀಗಂಧ ಮರಗಳು ಈಗ ಕಣ್ಮರೆಯಾಗುತ್ತಿವೆ. ಗಂಧದ ಮರಗಳ ಸಂರಕ್ಷಣೆ ಹೊಣೆ ಇರುವ ಸಂಬಂಧಿಸಿದ ಅಧಿಕಾರಿಗಳು ಕಂಡು ಕಾಣದಂತೆ ಇದ್ದಾರೆ ಎನ್ನುವುದು ಪರಿಸರ ಪ್ರಿಯರ ಆರೋಪವಾಗಿದೆ.

    ಹೈಟೆಕ್ ಯಂತ್ರ ಬಳಕೆ
    ರಾತ್ರೋರಾತ್ರಿ ಮರ ಕತ್ತರಿಸುವ ಯಂತ್ರಗಳೊಂದಿಗೆ ಆಗಮಿಸುವ ಮರಗಳ್ಳರು, ಗಿಡಗಳನ್ನು ಯಾವುದೇ ರೀತಿ ಶಬ್ದ ಬರದಂತೆ ಕತ್ತರಿಸಿಕೊಂಡು ಸಾಗಿಸುತ್ತಾರೆ. ದಂಧೆಕೋರರು ಉಪಾಯದಿಂದ ಮರಗಳನ್ನು ಕಳ್ಳತನ ಮಾಡುತ್ತಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ತನಿಖೆಗೆ ಮುಂದಾಗದಿರುವುದು ಸಾರ್ವಜನಿರಕಲ್ಲಿ ಅನುಮಾನ ಮೂಡಿಸುವಂತಾಗಿದೆ.

    ಅರಣ್ಯ ಸಂಪತ್ತು ಉಳಿಸಿ
    ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯಿಂದ ಹಸಿರು ಕರ್ನಾಟಕ ಆಂದೋಲನ ನಡೆಯುತ್ತಿದೆ. ವಿಪರ್ಯಾಸ ಎಂದರೆ ಶ್ರೀಗಂಧ ಮರಗಳ ಕಳ್ಳತನ ನಡೆಯುತ್ತಿದ್ದರೂ ಇತ್ತ ಯಾರೂ ಚಿತ್ತ ಹರಿಸಿಲ್ಲ. ಭದ್ರತಾ ಸಿಬ್ಬಂದಿ ನಿಯೋಜನೆ ಮಾಡದಿರುವುದು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸಕಾಲಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸದಿರುವುದರಿಂದ ಶ್ರೀಗಂಧ ಮರಗಳ ಮಾರಣ ಹೋಮ ನಡೆಯುತ್ತಿದೆ. ಅರಣ್ಯ ಸಂಪತ್ತು ಉಳಿಸುವ ನಿಟ್ಟಿನಲ್ಲಿ ಮೇಲಧಿಕಾರಿಗಳು ಗಮನ ಹರಿಸಬೇಕು ಎಂಬುದು ಪರಿಸರ ಪ್ರೇಮಿಗಳು ಒತ್ತಾಯವಾಗಿದೆ.

    ಕೇವಲ ಎರಡು ದೂರು ದಾಖಲು
    2020-21ರಲ್ಲಿ ಅಖಂಡ ಜಮಖಂಡಿ ತಾಲೂಕಿನ ಬನಹಟ್ಟಿ, ತೇರದಾಳದಲ್ಲಿ ಶ್ರೀಗಂಧ ಮರ ಕಳ್ಳತನವಾಗಿರುವ ಕುರಿತು ಕೇವಲ 2ದೂರುಗಳು ಮಾತ್ರ ದಾಖಲಾಗಿವೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲೂ ಯಾವುದೇ ದೂರುಗಳು ದಾಖಲಾಗಿಲ್ಲ.

    ನದಿ ತೀರದ ಪ್ರದೇಶದಲ್ಲಿ ಹಾಗೂ ಜಮೀನು ವ್ಯಾಪ್ತಿಯಲ್ಲಿ ಶ್ರೀಗಂಧದ ಮರಗಳನ್ನು ಕಳ್ಳರು ಕಡಿದಿರುವ ಬಗ್ಗೆ ಯಾವುದೇ ಗ್ರಾಮಗಳಿಂದ ಇಲಾಖೆಗೆ ದೂರು ಬಂದಿಲ್ಲ. ಆ ಭಾಗಕ್ಕೆ ಸಿಬ್ಬಂದಿ ಕಳುಹಿಸಿ ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
    ಪ್ರಶಾಂತ ಶಂಕಿನಮಠ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಗಲಕೋಟೆ



    ಶ್ರೀಗಂಧದ ಮರಗಳ ಮಾರಣಹೋಮ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts