More

    ಪತ್ರಿಕೆಗಳು ನೊಂದವರ ಧ್ವನಿ ಆಗಲಿ

    ಜಮಖಂಡಿ: ಭವ್ಯ ಭಾರತದ ನಿರ್ಮಾಣಕ್ಕೆ ಪತ್ರಿಕೆಗಳ ವರದಿಗಳು ಜೀವಾಮೃತವಾಗಲಿ. ಅಣ್ಣ ಬಸವಣ್ಣನ ವಚನ ನುಡಿದಂತೆ ನಡೆಯಾಗಲಿ, ಯುವ ಜನಾಂಗಕ್ಕೆ ನಿಮ್ಮ ಸಂದೇಶ ಉತ್ತಮವಾಗಲಿ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

    ನಗರದ ಬಸವ ಭವನದಲ್ಲಿ ಜಮಖಂಡಿ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಜಮಖಂಡಿ ಉಪವಿಭಾಗಮಟ್ಟದ ಪತ್ರಕರ್ತರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಪತ್ರಕರ್ತರು ಬರೆಯುವ ಲೇಖನಗಳು ನಿರ್ಭಿತ, ನಿಷ್ಠುರವಾಗಿರಬೇಕು. ಧರ್ಮ, ಜಾತಿಯ ಬೀಜ ಬಿತ್ತುವ ಕೆಲಸ ಮಾಡಬಾರದು. ನೊಂದವರಿಗೆ ಧ್ವನಿಯಾಗಿ ಕಾರ್ಯ ಮಾಡಬೇಕು. ದೇಶದ ಏಕತೆ ನಮ್ಮೆಲ್ಲರ ಉಸಿರಾಗಿರಬೇಕು ಎಂದು ಹೇಳಿದರು.

    ಪತ್ರಕರ್ತರು ಸ್ವಯಂ ನಿರ್ಬಂಧ ಹಾಕಿಕೊಂಡು ಸ್ವ ನೀತಿ ಸಂಹಿತೆ ಪಾಲಿಸಬೇಕು. ಮುಂದಿನ ಜನಾಂಗವನ್ನು ಗಮನದಲ್ಲಿಟ್ಟುಕೊಂಡು ವರದಿ ಬರೆಯದಿದ್ದರೆ ಪತ್ರಕರ್ತರನ್ನು ಸಮಾಜ ಸಹಿಸುವುದಿಲ್ಲ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರೇರಣೆಯಿಂದ ದೇಶದ 23 ಭಾಷೆಗಳಲ್ಲಿ ಪತ್ರಿಕೆಗಳು ಹುಟ್ಟಿಕೊಂಡಿದ್ದವು. ಗಾಂಧೀಜಿ ಅವರೇ ಸ್ವತಃ ಯಂಗ್ ಇಂಡಿಯಾ ಮತ್ತು ಹರಿಜನ ಪತ್ರಿಕೆಗಳನ್ನು ಹುಟ್ಟು ಹಾಕಿದ್ದರು ಎಂದರು.

    ಸಾಮಾಜಿಕ ನ್ಯಾಯಕ್ಕಾಗಿ, ಸುಂದರ ಸಮಾಜ ನಿರ್ಮಾಣಕ್ಕಾಗಿ ಲೇಖನಗಳು ಇರಬೇಕು ಎಂಬುದು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಸಂದೇಶವಾಗಿದೆ. ಪತ್ರಿಕೋದ್ಯಮ ವ್ಯಾಪಾರ ಆಗಬಾರದು. ಪತ್ರಕರ್ತರು ನಿವೃತ್ತಿ ನಂತರವೂ ಸಮಾಜದಲ್ಲಿ ಜೀವಂತವಾಗಿರಬೇಕು ಎಂದರು.

    ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಿಕಾ ಭವನದ ನಿರ್ಮಾಣ ಕಾರ್ಯ ಪ್ರತಿ ತಾಲೂಕುಮಟ್ಟದಲ್ಲಿ ನಡೆಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

    ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಅವಾಚ್ಯ ಶಬ್ದಗಳ ಬಳಕೆಗೆ ಪತ್ರಕರ್ತರು ಸ್ವಯಂ ಮೂಗುದಾರ, ಅಂಕುಶ ಹಾಕಿಕೊಳ್ಳಬೇಕು. ಪ್ರಾಣ ತೆತ್ತರೂ ಪರವಾಗಿಲ್ಲ ಸತ್ಯವನ್ನು ಬಿತ್ತರಿಸಬೇಕು ಎಂದರು.

    ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಪತ್ರಿಕೆಗಳಲ್ಲಿ ನಿಖರವಾಗಿ ಬಂದಿರುವ ವರದಿಗಳನ್ನು ಗಮನಿಸಿ ಅಭಿವೃದ್ಧಿಗೆ ಹಿನ್ನಡೆ, ಮುನ್ನಡೆಯಾಗಿರುವ ವಿಷಯಗಳ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದೇನೆ. ರೈತರ ಸಹಕಾರದಿಂದ ದಿ.ಸಿದ್ದು ನ್ಯಾಮಗೌಡರ ಬ್ಯಾರೇಜ್ ನಿರ್ಮಾಣದ ವಿಷಯವನ್ನು ಪತ್ರಿಕೆಗಳು ರಾಷ್ಟ್ರದ ಗಮನ ಸೆಳೆದಿವೆ ಎಂದರು.

    ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಹೊಗಳಿಕೆ ಅಥವಾ ತೆಗಳಿಕೆಗೆ ಮಣಿಯದೆ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗಾಗಿ ಪತ್ರಕರ್ತರು ವೃತ್ತಿಧರ್ಮ ಪಾಲನೆ ಮಾಡಬೇಕು ಎಂದರು.

    ಓಲೆಮಠದ ಡಾ.ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಪ್ರಪಂಚಕ್ಕಾಗಿ ಮತ್ತು ಪ್ರಪಂಚದವರಾಗಿ ಪತ್ರಕರ್ತರು ಕೆಲಸ ಮಾಡಬೇಕು. ಪತ್ರಕರ್ತರು ಬಹಳ ಸೂಕ್ಷ್ಮವಾಗಿ ನಡೆದುಕೊಳ್ಳಬೇಕಾಗುತ್ತದೆ ಎಂದು ಆಶೀರ್ವಚನ ನೀಡಿದರು.

    ಕಾನಿಪ ರಾಜ್ಯ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಈಶ್ವರ ಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪತ್ರಕರ್ತರಾದ ರಾಮ ಮನಗೂಳಿ, ಮುತ್ತು ನಾಯ್ಕರ್, ನಗರಸಭೆ ಅಧ್ಯಕ್ಷ ಸಿದ್ದು ಮೀಶಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಯಮನೂರ ಮೂಲಂಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಉದ್ದಿಮೆದಾರ ಜಗದೀಶ ಗುಡಗುಂಟಿ, ಕಾನಿಪ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೋಳಿ, ಪತ್ರಕರ್ತ ಈರಣ್ಣ ಗೌಡರ, ಏಗಪ್ಪ ಸವದಿ, ಬಸವರಾಜ ಸಿಂಧೂರ, ಉಮೇಶ ಮಹಾಬಳಶೆಟ್ಟಿ, ಡಾ.ವಿಜಯಲಕ್ಷ್ಮೀ ತುಂಗಳ, ಕಾಡು ಮಾಳಿ, ಕಾನಿಪ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಸ ಹೊದ್ಲೂರ, ಪ್ರಧಾನ ಕಾರ್ಯದರ್ಶಿ ಎಂ.ಎನ್. ಶಾಲಗಾರ, ಕಾನಿಪ ಜಮಖಂಡಿ ಘಟಕದ ಅಧ್ಯಕ್ಷ ಎಂ.ಎನ್. ನದಾಫ್ ಇದ್ದರು.

    ಭಾರತಿ ಮದಿನವರ, ಪಿ.ಎಸ್. ಕಟ್ಟಿಮನಿ ಪ್ರಾರ್ಥನೆ ಗೀತೆ ಹಾಡಿದರು. ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿದರು. ಡಾ.ಮಲ್ಲಿಕಾರ್ಜುನ ಮಠ, ಶಂಕರ ಲಮಾಣಿ ನಿರೂಪಿಸಿದರು. ಅಪ್ಪು ಪೋತರಾಜ ವಂದಿಸಿದರು.

    ಕಾನಿಪದಿಂದ ಮನವಿ
    ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಾಯಕ ನಿರ್ದೇಶಕರ ಹುದ್ದೆಯನ್ನು ಜಮಖಂಡಿಗೆ ಮಂಜೂರು ಮಾಡಲು ಹಾಗೂ ಪತ್ರಿಕಾ ಭವನ ನಿರ್ಮಾಣಕ್ಕೆ ಜಮಖಂಡಿ ನಗರದಲ್ಲಿ ನಿವೇಶನ ಮಂಜೂರು ಮಾಡಲು ಒತ್ತಾಯಿಸಿ ಉಪಮುಖ್ಯಮಂತ್ರಿಗಳಿಗೆ, ಶಾಸಕರಿಗೆ ಕಾನಿಪ ಸಂಘದ ಜಮಖಂಡಿ ಘಟಕದ ಪರವಾಗಿ ಮನವಿ ಸಲ್ಲಿಸಲಾಯಿತು.



    ಪತ್ರಿಕೆಗಳು ನೊಂದವರ ಧ್ವನಿ ಆಗಲಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts