More

    ಅಧಿಕಾರಿಗಳು ನಿಗಾ ವಹಿಸಲಿ

    ಜಮಖಂಡಿ: ಮಧ್ಯಾಹ್ನ 1 ಗಂಟೆ ನಂತರ ನಗರ ಹಾಗೂ ಗ್ರಾಮಿಣ ಪ್ರದೇಶಗಳಲ್ಲಿ ಜನರು ರಸ್ತೆಗಳಲ್ಲಿ, ಮನೆಯಿಂದ ಹೊರಗಡೆ ಕಾಣಿಸಿಕೊಳ್ಳಬಾರದು. ಅಧಿಕಾರಿಗಳು ಈ ಕುರಿತು ನಿಗಾ ವಹಿಸಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

    ನಗರದ ಮಿನಿ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ನಗರ ಹಾಗೂ ಗ್ರಾಮಿಣ ಪ್ರದೇಶಗಳಲ್ಲಿ ಜನರ ಓಡಾಟ ಹೆಚ್ಚಾಗಿದೆ. ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆವರೆಗೆ ದಿನಸಿ ವಸ್ತುಗಳು, ಔಷಧ ಖರೀದಿಗೆ ಅವಕಾಶ ನೀಡಬೇಕು. ನಂತರ ರಸ್ತೆಯಲ್ಲಿ ಸಾರ್ವಜನಿಕರು ಯಾರೂ ಕಾಣಿಸಬಾರದು. ಆಸ್ಪತ್ರೆ ಹತ್ತಿರದ ಔಷಧ ಅಂಗಡಿಗಳು ತೆರೆದಿರಲಿ ಎಂದು ಹೇಳಿದರು.

    ಹೋಂ ಕ್ವಾರಂಟೈನ್‌ನಲ್ಲಿದ್ದವರ ಮನೆಯ ಹೊರಗಡೆ ನಿಂತು ಕರೆಯದೆ ಅವರ ನಿವಾಸದೊಳಗೆ ಹೋಗಿ ಆಶಾ-ಅಂಗನವಾಡಿ ಕಾರ್ಯಕರ್ತೆಯರು ಮಾಹಿತಿ ಪಡೆಯಬೇಕು. ನಗರದ ಕಟ್ಟೆ ಕೆರೆ ಸೇರಿ ವಿವಿಧ ಬಾವಿಗಳಲ್ಲಿ ಯುವಕರು ಈಜಾಡುವುದನ್ನು ತಡೆಯಬೇಕು ಎಂದು ನಗರಸಭೆ ಪೌರಾಯುಕ್ತ ರಾಮಕೃಷ್ಣ ಸಿದ್ದನಕೊಳ್ಳ ಅವರಿಗೆ ಸೂಚಿಸಿದರು.

    ಕೆಲವು ಗ್ರಾಮಿಣ ಪ್ರದೇಶಗಳಲ್ಲಿ ಡಿಡಿಟಿ ಪೌಡರ್ ಹಾಕಿಲ್ಲ. ನಗರದ ಕೆಲ ಗಲ್ಲಿಗಳಲ್ಲಿಯ ಕಸದ ರಾಶಿ ತೆರವುಗೊಳಿಸಬೇಕು. ಗ್ರಾಮಗಳಿಂದ ಆಸ್ಪತ್ರೆಗೆ ಬರುವವರು ಆಯಾ ಗ್ರಾಮ ಪಂಚಾಯಿತಿಯಿಂದ ಪ್ರಮಾಣ ಪತ್ರ ತರಬೇಕು. ತುರ್ತು ಚಿಕಿತ್ಸೆಗೆ ಬರುವವರಿಗೆ ಪ್ರಮಾಣಪತ್ರದ ಅವಶ್ಯಕತೆ ಇರುವುದಿಲ್ಲ. ಮುಂಜಾಗ್ರತೆ ಕ್ರಮವಾಗಿ ಜಮಖಂಡಿ ನಗರದಲ್ಲಿ 250 ಬೆಡ್‌ನಲ್ಲಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಎರಡು ಬಿಸಿಎಂ ಹಾಸ್ಟೆಲ್‌ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

    ಗ್ರಾಮಿಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಜಾಗ್ರತೆ ವಹಿಸಿ ಅಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನಿ ಎಂದು ತಾಪಂ ಇಒ ಸಂಜು ಹಿಪ್ಪರಗಿ ಅವರಿಗೆ ಸೂಚಿಸಿದರು.

    ಎಸಿ ಡಾ.ಸಿದ್ದು ಹುಲ್ಲೊಳಿ ಮಾತನಾಡಿ, ಕೆಎಂಎಫ್ ಹಾಲನ್ನು ಬಡ ಕುಟುಂಬಗಳ ಕಾಲನಿ, ಗಲ್ಲಿಗಳಲ್ಲಿ ಉಚಿತವಾಗಿ ವಿತರಿಸಲಾಗುವುದು. ಯಾವುದೇ ಕ್ಷಣದಲ್ಲಿ ಸೋಂಕು ಕಂಡು ಬಂದಲ್ಲಿ ಆ ಸ್ಥಳದಿಂದ 5 ಕಿ.ಮೀ. ವರೆಗೆ ತಕ್ಷಣ ದಿಗ್ಬಂಧನ ವಿಧಿಸಲಾಗುವುದು ಎಂದರು.

    ಡಿವೈಎಸ್‌ಪಿ ಆರ್.ಕೆ. ಪಾಟೀಲ, ತಹಸೀಲ್ದಾರ್ ಸಂಜಯ ಇಂಗಳೆ, ತಾಪಂ ಇಒ ಸಂಜು ಹಿಪ್ಪರಗಿ, ತಾಲೂಕು ಆರೋಗ್ಯಾಧಿಕಾರಿ ಡಾ. ಜಿ.ಎಸ್. ಗಲಗಲಿ, ಮುಖ್ಯಆರೋಗ್ಯಾಕಾರಿ ಡಾ. ಕೃಷ್ಣಾ ಬಣ್ಣದ, ಸಿಪಿಐ ಡಿ.ಕೆ. ಪಾಟೀಲ, ಪೌರಾಯುಕ್ತ ರಾಮಕೃಷ್ಣ ಸಿದ್ದನಕೊಳ್ಳ, ಪಿಎಸ್‌ಐಗಳಾದ ಬಸವರಾಜ ಅವಟಿ, ಗೋವಿಂದಗೌಡ ಪಾಟೀಲ ಇತರರು ಇದ್ದರು.

    ಜಮಖಂಡಿ ಸಕ್ಕರೆ ಕಾರ್ಖಾನೆ ವತಿಯಿಂದ ತಾಲೂಕಿನಲ್ಲಿನ ಪ್ರತಿ ಬೂತ್‌ಗೆ ಹಾಗೂ ಎಲ್ಲ ಇಲಾಖೆ ಕಚೇರಿಗಳಿಗೆ 10 ಲೀಟರ್ ಸ್ಯಾನಿಟೈಸರ್ ಉಚಿತವಾಗಿ ನೀಡಲಾಗುವುದು. ಅಗತ್ಯಬಿದ್ದರೆ ಹೆಚ್ಚಿಗೆ ಪೂರೈಸಲಾಗುವುದು.
    ಆನಂದ ನ್ಯಾಮಗೌಡ ಶಾಸಕ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts