More

    ದಿವಾಳಿ ಅಂಚಿನಲ್ಲಿ ಕೇಂದ್ರ, ರಾಜ್ಯ ಸರ್ಕಾರ

    ಜಮಖಂಡಿ: ರಾಜ್ಯದ ಅಭಿವೃದ್ಧಿ, ಪ್ರವಾಹಕ್ಕೆ ಅನುದಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸುತ್ತಿದ್ದು, ಒಳಗೊಳಗೆ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಹುನ್ನಾರ ಬಿಜೆಪಿಯಲ್ಲಿ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಹೊಸ ಬಾಂಬ್ ಸಿಡಿಸಿದರು.

    ರಾಜ್ಯಕ್ಕೆ ಪ್ರತಿ ತಿಂಗಳು 3.5 ಸಾವಿರ ಕೋಟಿ ರೂ. ಜಿಎಸ್‌ಟಿ ಹಣ ಬರಬೇಕಾಗಿತ್ತು. ಆದರೆ, ಕಳೆದ ನಾಲ್ಕು ತಿಂಗಳಿನಿಂದ ಕೇಂದ್ರ ಸರ್ಕಾರ ನೀಡುತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಿವಾಳಿ ಅಂಚಿನಲ್ಲಿವೆ ಎಂದು ನಗರದ ರಮಾ ನಿವಾಸದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸಂಸದರು ರಾಜ್ಯದ ಬಗ್ಗೆ ಚಿಂತನೆ ಮಾಡುತಿಲ್ಲ. ಹೆಸರಿಗೆ ಮಾತ್ರ ಸಂಸದರಾಗಿದ್ದಾರೆ. ರಾಜ್ಯದ ಖಜಾನೆ ಖಾಲಿಯಾಗಿದ್ದು, ಬರುವ ದಿನಗಳಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಜೆಟ್ ಹೇಗೆ ಮಂಡಿಸುತ್ತಾರೆ? ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ಒಂದು ಧರ್ಮವನ್ನು ಗುರಿಯಾಗಿಟ್ಟುಕೊಂಡು ದೇಶದಲ್ಲಿ ಕೋಮುಗಲಭೆ, ವಿಭಜನೆ ಮಾಡಲು ಹೊರಟಿದ್ದಾರೆ ಎಂದು ದೂರಿದರು.

    ಬಿಜೆಪಿಯವರದ್ದು ಹೋಡಿ ಬಡಿ ಸಂಸ್ಕೃತಿ. ಸೋಮಶೇಖರ ರೆಡ್ಡಿ, ಅನಂತಕುಮಾರ ಹೆಗಡೆ ಪ್ರಚೋದನಕಾರಿಯಾಗಿ ಮಾತನಾಡಿ, ದೇಶ, ರಾಜ್ಯದಲ್ಲಿ ಕೋಮುಗಲಭೆಗೆ ಉತ್ತೇಜನ ನೀಡುತ್ತಿದ್ದಾರೆ. ಅಂತಹವರ ಮೇಲೆ ಕ್ರಮ ಕೈಕೊಳ್ಳದಿರುವುದು ಖಂಡನಿಯ ಎಂದರು.

    ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷ ಸ್ಥಾಪಿಸಿದ ಸಂಸ್ಥೆಗಳನ್ನು ಬಿಜೆಪಿಯವರು ಮಾರಾಟ ಮಾಡುತ್ತಿದ್ದಾರೆ. ಕೆಲ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಕರಣ ಮಾಡಿ, ಅಲ್ಲಿಯ ಸಿಬ್ಬಂದಿಯನ್ನು ಬೀದಿ ಪಾಲು ಮಾಡುತ್ತಿದ್ದಾರೆ ಎಂದರು.

    ಶ್ಯಾಮರಾವ ಘಾಟಗೆ, ಸಿದ್ದು ಮಿಶಿ, ಎಂ.ಸಿ. ಗೊಂದಿ, ಮುತ್ತಣ್ಣ ಮೇತ್ರಿ, ದಾನೇಶ ಘಾಟಗೆ, ಮಲ್ಲಪ್ಪ ಚಾಮೋಜಿ, ಪರಮಾನಂದ ಗವರೋಜಿ, ಬಸವರಾಜ ಹರಕಂಗಿ, ಅಬುಬಕರ ಕುಡಚಿ ಇತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts