More

    ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಿ

    ಜಮಖಂಡಿ: ಜಿಲ್ಲೆಯಲ್ಲಿ ಕೋವಿಡ್ ತಡೆಗಟ್ಟಲು ಎಲ್ಲ ಕಠಿಣ ಕ್ರಮಗಳನ್ನು ಕೈಗೊಂಡು ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ನೀಡಬೇಕು. ಆಕ್ಸಿಜನ್, ರೆಮ್‌ಡೆಸಿವಿರ್ ಹಾಗೂ ಲಸಿಕೆ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.

    ನಗರದ ಮಿನಿವಿಧಾನಸೌಧದ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ಶನಿವಾರ ನಡೆದ ಜಮಖಂಡಿ ತಾಲೂಕು ಮಟ್ಟದ ಕೋವಿಡ್ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

    ಗ್ರಾಮೀಣ ಭಾಗದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಹೋಮ್ ಐಸೋಲೇಷನ್‌ನಲ್ಲಿರುವ ಸೋಂಕಿತರ ಮನೆ ಮನೆಗೆ ಆರೋಗ್ಯ ಸಿಬ್ಬಂದಿ, ಆಶಾ, ಅಂಗನವಾಡಿ, ಶಾಲಾ ಶಿಕ್ಷಕರು ಭೇಟಿ ನೀಡಿ ಅವರನ್ನು ಕರೊನಾ ಕೇರ್ ಸೆಂಟರ್‌ಗೆ ಕರೆತಂದು ಚಿಕಿತ್ಸೆ ನೀಡಬೇಕು. ಒಂದು ವೇಳೆ ಸೋಂಕಿತರು ಬರದೆ ಇದ್ದರೆ ಪೊಲೀಸ್ ಇಲಾಖೆ ಸಹಾಯ ಪಡೆದುಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲೆಗೆ 10 ಸಾವಿರಕ್ಕೂ ಹೆಚ್ಚು ರೆಮ್‌ಡೆಸಿವಿರ್ ಇಂಜೆಕ್ಷನ್ ತರಿಸಲಾಗಿದೆ. ಆದರೆ, ಖಾಸಗಿ ಆಸ್ಪತ್ರೆಗಳಿಗೆ ರೆಮ್‌ಡೆಸಿವಿರ್ ಇಂಜೆಕ್ಷನ್ ಸರಬರಾಜಿನಲ್ಲಿ ವಿಳಂಬವಾಗುತ್ತಿದೆ ಎಂದು ಡಾ.ವಿಜಯ ಮೈತ್ರಿ ಹಾಗೂ ಡಾ.ಧರೇಪ್ಪ ಕೊಕಟನೂರ ದೂರಿದರು. ಇದಕ್ಕೆ ಸಚಿವ ಕತ್ತಿ ಪ್ರತಿಕ್ರಿಯಿಸಿ, ವಿಳಂಬವಾದಲ್ಲಿ ನೋಡಲ್ ಅಧಿಕಾರಿಯಾದ ಜಿಪಂ ಸಿಇಒ ಅವರನ್ನು ಸಂಪರ್ಕಿಸಿ ತಕ್ಷಣ ತರಿಸಲು ಸೂಚಿಸಿದರು.

    ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ತಾಲೂಕಿಗೆ ರೋಗಿಗಳ ಅನುಸಾರ ಇಂಜೆಕ್ಷನ್, ಆಕ್ಸಿಜನ್, ಲಸಿಕೆ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸಚಿವ ಕತ್ತಿ ಪ್ರತಿಕ್ರಿಯಿಸಿ ಅದನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

    ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಜಮಖಂಡಿ ಉಪವಿಭಾಗ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ರೋಗಿಗಳನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ ಎಂದಾಗ ಗ್ರಾಮೀಣ ಭಾಗದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ವೈದ್ಯರನ್ನು ಹಾಗೂ ಸಿಬ್ಬಂದಿ ನೇಮಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

    ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆ ಚಾಲ್ತಿಯಲ್ಲಿಲ್ಲ ಎಂದು ದೂರಿದರು. ಸಚಿವರು ಮಾತನಾಡಿ, ಆಸ್ಪತ್ರೆಯಲ್ಲಿನ ವ್ಯವಸ್ಥೆಯನ್ನು ಸರಿಪಡಿಸುವಂತೆ ಡಿಎಚ್‌ಒ ಡಾ.ಅನಂತ ದೇಸಾಯಿ ಅವರಿಗೆ ಸೂಚಿಸಿದರು.

    ಸಂಸದ ಪಿ.ಸಿ. ಗದ್ದಿಗೌಡರ, ಜಿಲ್ಲಾಧಿಕಾರಿ ಕೆ.ರಾಜೇಂದ್ರ, ಎಸ್‌ಪಿ ಲೊಕೇಶ ಜಗಲಾಸರ್, ಜಿಪಂ ಸಿಇಒ ಟಿ.ಭೂಬಾಲನ್, ವಿಪ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಜಿಲ್ಲಾ ಆಹಾರ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೋಳ್ಳಿ, ಡಿಎಸ್‌ಪಿ ಪಾಂಡುರಂಗಯ್ಯ, ತಹಸೀಲ್ದಾರ್ ಪ್ರಶಾಂತ ಚನಗೊಂಡ, ತಾಪಂ ಇಒ ಅಬೀದ ಗದ್ಯಾಳ, ಟಿಎಚ್‌ಒ ಡಾ. ಜಿ.ಎಸ್. ಗಲಗಲಿ, ಸಿಪಿಐ ಈರಯ್ಯ ಮಠಪತಿ, ಮುಖಂಡ ಜಗದೀಶ ಗುಡಗುಂಟಿ, ಡಾ.ವಿಜಯಲಕ್ಷ್ಮೀ ತುಂಗಳ ಇತರರು ಇದ್ದರು.

    ಆರ್‌ಟಿಪಿಸಿಆರ್ ಪರೀಕ್ಷೆ ಕೇಂದ್ರ ಪ್ರಾರಂಭಿಸಿ
    ಜಮಖಂಡಿಯಲ್ಲಿ ಆರ್.ಟಿ.ಪಿ.ಸಿ.ಆರ್. ಪರೀಕ್ಷಾ ಕೇಂದ್ರ ಪ್ರಾರಂಭಿಸಬೇಕು, ಸಿಟಿ ಸ್ಕಾೃನಿಂಗ್ ಸೆಂಟರ್ ಪ್ರಾರಂಭಿಸಿದರೆ ಈ ಭಾಗದ ಸೋಂಕಿತರಿಗೆ ಅನುಕೂಲವಾಗುವುದು ಎಂದು ಹಿರಿಯ ವೈದ್ಯ ಡಾ.ಎಚ್.ಜಿ. ದಡ್ಡಿ ಸಚಿವರಿಗೆ ಆಗ್ರಹಿಸಿದರು. ಸಚಿವರು ಮಾತನಾಡಿ, ನುರಿತ ತರಬೇತಿ ಸಿಬ್ಬಂದಿ ಕೊರತೆ ಇದೆ, ಮುಂಬರುವ ದಿನಗಳಲ್ಲಿ ಪ್ರಾರಂಭಿಸಲಾಗುವುದು ಎಂದರು.

    ಖಾಸಗಿ ವೈದ್ಯರು ಸರ್ಕಾರದ ಜತೆ ಕೈಜೋಡಿಸಲಿ
    ಜಮಖಂಡಿ: ಸರ್ಕಾರದ ಎಲ್ಲ ಸೌಲಭ್ಯಗಳನ್ನು ಖಾಸಗಿ ವೈದ್ಯರಿಗೆ ನೀಡಲಾಗುತ್ತದೆ. ದಯವಿಟ್ಟು ಖಾಸಗಿ ವೈದ್ಯರು ಸರ್ಕಾರದ ಜತೆಗೆ ಕೈಜೋಡಿಸಿ ಸೇವೆಗೆ ಮುಂದಾಗಬೇಕು ಎಂದು ಸಚಿವ ಉಮೇಶ ಕತ್ತಿ ಮನವಿ ಮಾಡಿದರು.

    18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. 45ರ ಮೇಲ್ಪಟ್ಟ ಜನರು ಪ್ರಥಮ ಹಾಗೂ ದ್ವಿತೀಯ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸಾರ್ವಜನಿಕರು ಆತಂಕ ಮತ್ತು ಭಯ ಸೃಷ್ಟಿಯಾಗುವಂತಹ ದೃಶ್ಯಗಳು ಹಾಗೂ ಸುದ್ದಿಗಳನ್ನು ಮಾಧ್ಯಮದವರು ಪ್ರಸಾರ ಮಾಡಬಾರದು. ಸೋಂಕಿತರಿಗೆ ಧೈರ್ಯ ಮತ್ತು ಆತಸ್ಥೈರ್ಯ ತುಂಬುವ ಸುದ್ದಿ ಮತ್ತು ದೃಶ್ಯಗಳನ್ನು ಬಿಂಬಿಸಬೇಕು ಎಂದು ಮನವಿ ಮಾಡಿದರು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts