More

    ಬೃಹತ್ ಟ್ರಾೃಕ್ಟರ್ ರ‌್ಯಾಲಿ

    ಜಮಖಂಡಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಗರದಲ್ಲಿ ಶಾಸಕ ಆನಂದ ನ್ಯಾಮಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಟ್ರಾೃಕ್ಟರ್ ರ‌್ಯಾಲಿ, ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

    ನಗರದ ಬಸವೇಶ್ವರ ಸರ್ಕಲ್‌ನಿಂದ ಟಿಪ್ಪು ಸುಲ್ತಾನ್ ವೃತ್ತ, ಹಳೇ ತಹಸೀಲ್ದಾರ್ ಕಚೇರಿ ಮಾರ್ಗವಾಗಿ ಕಡಪಟ್ಟಿ ಬಸವೇಶ್ವರ ದೇವಸ್ಥಾನದ ಆವರಣದವರೆಗೆ ರ‌್ಯಾಲಿ ನಡೆಯಿತು. ನಂತರ ತಹಸೀಲ್ದಾರ್ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಲಾಯಿತು.

    ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ನೂತನ ಕೃಷಿ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಮೂಲಕ ರೈತರ ವಿರುದ್ಧ ಕೇಂದ್ರ ಸರ್ಕಾರ ಮರಣಶಾಸನ ಜಾರಿ ಮಾಡುತ್ತಿದೆ. ರೈತರ ಹೋರಾಟವನ್ನು ಹತ್ತಿಕ್ಕುವ ಹುನ್ನಾರ ಕೇಂದ್ರ ಸರ್ಕಾರ ಮಾಡುತ್ತಿದೆ. ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರಿಗೆ ಯಾವುದೇ ರೀತಿ ಸ್ಪಂದನೆ ನೀಡುತ್ತಿಲ್ಲ. ರೈತರನ್ನು ನಿರ್ಲಕ್ಷಿಸುತಿದ್ದಾರೆ ಎಂದು ಆರೋಪಿಸಿದರು.

    ಯುಪಿಎ ಸರ್ಕಾರದಲ್ಲಿ 72 ಸಾವಿರ ಕೊಟಿ ರೂ. ರೈತರ ಸಾಲ ಮನ್ನಾ ಮಾಡಲಾಗಿತ್ತು. ಸಿದ್ದರಾಮಯ್ಯ ಅವರು ಕಬ್ಬಿಗೆ ಬೆಂಬಲ ಬೆಲೆ ನೀಡಿ ರೈತರ ಹಿತ ಕಾಪಾಡುವ ಕಾರ್ಯ ಮಾಡಿದ್ದಾರೆ. ಆದರೆ, ಈಗಿನ ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 2 ಸಾವಿರ ಹಣ ನೀಡಿ ದೊಡ್ಡ ಪ್ರಚಾರ ಮಾಡಿಕೊಳ್ಳುತ್ತಿದೆ ಎಂದು ಟೀಕಿಸಿದರು.

    ಬಾಗಲಕೋಟೆ ಜಿಲ್ಲೆಯಲ್ಲಿನ ರೈತರಿಗೆ ಇನ್ನೂ 100 ಕೋಟಿ ರೂ.ಗೂ ಅಧಿಕ ಸಾಲ ಮನ್ನಾದ ಹಣ ಬರಬೇಕಾಗಿದೆ. ಇಲ್ಲಿಯವರೆಗೆ ಸಾಲ ಮನ್ನಾ ಹಣ ನೀಡದೆ ರೈತರಿಗೆ ಮೋಸ ಮಾಡುತ್ತಿದೆ ಎಂದು ದೂರಿದರು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಕೇಂದ್ರ ಸರ್ಕಾರ ಸಹಕಾರಿ ತತ್ವವನ್ನು ಮುರಿದು ಸಾವಕಾರ ತತ್ವವನ್ನು ಜಾರಿಗೆ ತರುತ್ತಿದೆ. 600 ಕೋಟಿ ರೂ. ಉತ್ಪಾದನೆಯಲ್ಲಿ ಕೇವಲ 60 ಕೋಟಿ ರೂ. ಉತ್ಪಾದನೆ ಮಾಡುವ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಅಭಿವೃದ್ಧಿಗೆ ಮಾರಕ ಕಾಯ್ದೆಗಳನ್ನು ಜಾರಿ ತರುವುದಕ್ಕೆ ನಾವು ಬಿಡುವುದಿಲ್ಲ ಎಂದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ದಮಾನ ನ್ಯಾಮಗೌಡ, ಜವಳಿ ನಿಗಮ ಮಾಜಿ ಉಪಾಧ್ಯಕ್ಷ ನಜೀರ ಕಂಗನೊಳ್ಳಿ ಮಾತನಾಡಿದರು. ನಗರಸಬೆ ಅಧ್ಯಕ್ಷ ಸಿದ್ದು ಮೀಶಿ, ಮಹೇಶ ಕೋಳಿ, ಈಶ್ವರ ಕರಬಸಣ್ಣವರ, ಬಸವರಾಜ ನ್ಯಾಮಗೌಡ, ನಿಂಗಪ್ಪ ಕಡಪಟ್ಟಿ, ಕಲ್ಲಪ್ಪ ಗಿರಡ್ಡಿ, ಮಹಾಬಲ ಸದಲಗಿ, ಎನ್.ಬಿ.ಗಸ್ತಿ, ಈಶ್ವರ ವಾಳೆನ್ನವರ, ವಿ.ವಿ. ತುಳಶಿಗೇರಿ, ಸಂತೋಷ ಬಗಲಿ, ಬಸವರಾಜ ಕೊಕಟನೂರ, ಮಲ್ಲಪ್ಪ ಪೂಜಾರಿ, ಸುಭಾಸ ಪಾಟೋಳಿ, ನಾಗಪ್ಪ ಹೆಗಡಿ, ಆನಂದ ಶಿಂಪಿ, ಮೀರಾ ಒಂಟಮೂರಿ, ಅಕ್ಬರ್ ಜಮಾದಾರ, ಮುಬಾರಕ ಸಾರವಾಣ, ಎಂ.ಎಸ್. ಜಕ್ಕಣ್ಣವರ, ಕುಮಾರ ಆಲಗೂರ, ಅಬುಬಕರ ಕುಡಚಿ ಇದ್ದರು.

    ಉರುಳು ಸೇವೆ
    ಕಾಂಗ್ರೆಸ್ ಜಿಲ್ಲಾ ಕಿಸಾನ್ ಮೊರ್ಚಾ ಉಪಾಧ್ಯಕ್ಷರಾದ ಪ್ರಕಾಶ ಕಣಬೂರ, ಮಹಾದೇವಗೌಡ ಪಾಟೀಲ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಯನ್ನು ಖಂಡಿಸಿ ಮೆರವಣಿಗೆಯಲ್ಲಿ ಉರುಳು ಸೇವೆ ಮಾಡಿ ಆಕ್ರೋಶ ಹೊರಹಾಕಿದರು.



    ಬೃಹತ್ ಟ್ರಾೃಕ್ಟರ್ ರ‌್ಯಾಲಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts