More

    ಶ್ರೀರಾಮ ಒಂದೇ ಜಾತಿ, ಧರ್ಮಕ್ಕೆ ಸೀಮಿತವಲ್ಲ

    ಜಮಖಂಡಿ: ಶ್ರೀರಾಮ ಮಂದಿರ ನಿರ್ಮಾಣವಾಗಬೇಕೆಂಬ ಎಲ್ಲ ವರ್ಗದ ಜನರ ಕನಸು ಇಂದು ನನಸಾಗಿದೆ. ದೇಶದಲ್ಲಿರುವ ಸರ್ವ ಜನಾಂಗದವರು ಸೇರಿ ಈ ದಿವಸವನ್ನು ಖುಷಿ ಸಂತೋಷದಿಂದ ಆಚರಣೆ ಮಾಡುತ್ತಿದ್ದೇವೆ ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.

    ನಗರದ ಹನುಮಾನ ದೇವಸ್ಥಾನ ಬಳಿ ನಡೆದ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಶ್ರೀರಾಮನ ಭಾವಚಿತ್ರಕ್ಕೆ ಹಾಗೂ ಹನುಮಾನ ದೇವರಿಗೆ ಪೂಜೆ ಸಲ್ಲಿಸಿ ನಂತರ ಅನ್ನ ಪ್ರಸಾದಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಶ್ರೀರಾಮ ಎಂದರೆ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ, ಶ್ರೀರಾಮನ ಆದರ್ಶಗಳನ್ನು ಸ್ಮರಿಸಿಕೊಂಡು ಅವರಂತೆಯೇ ನಡೆಯಬೇಕಾಗಿದೆ. ರಾಮಚಂದ್ರ ಒಬ್ಬ ಉತ್ತಮ ಆಡಳಿತಗಾರರಾಗಿದ್ದರು. ಅವರು 14 ವರ್ಷ ವನವಾಸ ಅನುಭವಿಸಿದ್ದರು. ಯಾವುದಕ್ಕೂ ಹಿಂಜರಿಯದೇ ಕಷ್ಟ ಸುಖಗಳನ್ನು ಸರಿ ಸಮಾನವಾಗಿ ಸ್ವೀಕರಿಸಿದ ಏಕೈಕ ಶ್ರೀರಾಮಚಂದ್ರ ಪ್ರಭು ಆಗಿದ್ದರು ಎಂದರು.

    ಇಡೀ ವಿಶ್ವವೇ ಅವರನ್ನು ಸ್ಮರಿಸುವ ಜತೆ ಹಬ್ಬದ ವಾತಾವರಣದಂತೆ ಮಂದಿರ ಉದ್ಘಾಟನೆಯನ್ನು ಅತಿ ಸಂಭ್ರಮದಿಂದ ಆಚರಿಸುತ್ತಿದ್ದೇವೆ ಎಂದರು.
    ಮುತ್ತಿನಕಂತಿ ಮಠದ ಶಿವಲಿಂಗ ಪಂಡಿತರಾಧ್ಯ ಶಿವಾಚಾರ್ಯರು ಮಾತನಾಡಿ, ನಮ್ಮ ದೇಶ ಅನೇಕ ಸಂತರು, ಮಹಾತ್ಮರು, ಶರಣರು ನಡೆದಾಡಿದ ದೇಶವಾಗಿದೆ. ಅದಕ್ಕಾಗಿ ನಮ್ಮ ದೇಶ ದೇವರ ಮನೆ ಇದ್ದ ಹಾಗಿದೆ. ಚಿನ್ನದ ಗಣಿ ಸಂಪತ್ತಿಗೆ ಹಾಗೂ ಶ್ರೀಮಂತಿಕೆಗೆ ಗೌರವ ಬಂದಿರುವುದಿಲ್ಲ. ಇಲ್ಲಿ ಶ್ರೀರಾಮನಂತ ದೇವರು ಆಳಿದ ಕಾರಣಕ್ಕಾಗಿ ದೇಶಕ್ಕ ಗೌರವ ಬಂದಿದೆ. ಅವರನ್ನು ಸ್ಮರಿಸುವ ಜತೆಗೆ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಪಾಲಿಸಬೇಕೆಂದು ಹೇಳಿದರು.

    ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯರು ಮಾತನಾಡಿ, ಇಂತಹ ವೈಭವ ಸಂಭ್ರಮ ಇಡೀ ಜಗತ್ತಿನಲ್ಲಿಯೇ ಕಾಣುತ್ತಿದೆ. ರಾಮ ಮಂದಿರ ನಿರ್ಮಾಣಕ್ಕಾಗಿ ಮೂರು ಲಕ್ಷಕ್ಕೂ ಅಧಿಕ ಜನ ಹುತಾತ್ಮರಾಗಿದ್ದಾರೆ. ಅವರ ತ್ಯಾಗ ಬಲಿದಾನದಿಂದ ಇಂದು ರಾಮಮಂದಿರ, ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಲು ಕಾರಣವಾಗಿದೆ ಎಂದರು.

    ಪ್ರತಿ ಜಾತಿಯಲ್ಲಿ ರಾಮ ನಾಮಗಳಿವೆ. ಎಲ್ಲರೂ ಪೂಜ್ಯತಾ ಭಾವದಿಂದ ಶ್ರೀರಾಮನನ್ನು ಗೌರವಿಸಬೇಕು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನ ನ್ಯಾಮಗೌಡ, ಕಲ್ಲಪ್ಪ ಗಿರಡ್ಡಿ, ನಗರಸಭೆ ಮಾಜಿ ಅಧ್ಯಕ್ಷ ಸಿದ್ದು ಮೀಶಿ, ಅರ್ಜುನ ದಳವಾಯಿ, ಬಸವರಾಜ ಸಿಂಧೂರ, ಶ್ಯಾಮರಾವ ಘಾಟಗೆ, ಮಹೇಶ ಕೋಳಿ, ಈಶ್ವರ ವಾಳೆನ್ನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts