More

    ಧರ್ಮಾ ಜಲಾಶಯದಲ್ಲಿ ಜಲಕಂಟಕ

    ಮುಂಡಗೋಡ: ತಾಲೂಕಿನ ಪಾಳಾ ಹಾಗೂ ಇತರ ಹನ್ನೊಂದು ಹಾಗೂ ಬದನಗೋಡ ಭಾಗದ ಆರು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಳಗಿ ಸಮೀಪದ ಧರ್ಮಾ ಜಲಾಶಯದಲ್ಲಿನ ನೀರಿನ ಮಟ್ಟ ತೀವ್ರ ಕುಸಿತವಾಗಿದೆ.

    ಪರಿಣಾಮ ವಾರದೊಳಗೆ ಮಳೆಯಾಗದಿದ್ದರೆ ಕುಡಿಯುವ ನೀರು ಪೂರೈಕೆಗೆ ಸಮಸ್ಯೆ ಎದುರಾಗಲಿದೆ.
    ತಾಲೂಕಿನ ಮಳಗಿ ಸನಿಹದ ಧರ್ಮಾ ಜಲಾಶಯದಿಂದ ಹಾವೇರಿ ಜಿಲ್ಲೆಯ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಯುತ್ತದೆ.
    ಈ ನೀರಿನಿಂದ ಸಾವಿರಾರು ರೈತರು ಬೆಳೆ ಬೆಳೆಯುತ್ತಾರೆ. ಹಾವೇರಿ ಜಿಲ್ಲೆಯ ರೈತರ ಜೀವನದಿಯಾಗಿರುವ ಧರ್ಮಾ ಜಲಾಶಯದ ಒಡಲು ಇದೀಗ ಬರಿದಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

    ಕುಡಿಯುವ ನೀರು

    ಹತ್ತು ವರ್ಷಗಳ ಹಿಂದೆ ತಾಲೂಕಿನ ಧರ್ಮಾ ಜಲಾಶಯದಿಂದ ನೀರನ್ನು ಶುದ್ಧೀಕರಣ ಮಾಡಿ ಪಾಳಾ ಹಾಗೂ ಇತರ ಹನ್ನೊಂದು ಗ್ರಾಮಗಳಿಗೆ ಹಾಗೂ ಶಿರಸಿ ತಾಲೂಕಿನ ಬದನಗೋಡ ಭಾಗದ ಆರು ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಸರಬರಾಜು ಮಾಡಲಾಗಿದೆ.
    18 ಗ್ರಾಮಗಳಲ್ಲಿನ 30 ಸಾವಿರಕ್ಕೂ ಅಧಿಕ ಜನಸಂಖ್ಯೆಗೆ ಧರ್ಮಾ ಜಲಾಶಯದಿಂದಲೇ ಕುಡಿಯಲು ನೀರು ಸರಬರಾಜು ಮಾಡಲಾಗುತ್ತಿದೆ.
    ಪರ್ಯಾಯ ವ್ಯವಸ್ಥೆಗೆ ಪತ್ರ:
    ಮಳಗಿ ಧರ್ಮಾ ಜಲಾಶಯದಿಂದ ನೀರು ಪೂರೈಕೆಯಾಗುವ ಮಳಗಿ, ಕೊಡಂಬಿ, ಪಾಳಾ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆದಿದ್ದು, ಧರ್ಮಾ ಜಲಾಶಯದಲ್ಲಿ ನೀರು ಸಂಗ್ರಹ ಖಾಲಿಯಾಗಿದ್ದು, ಮುಂದಿನ ವಾರದಿಂದ ನೀರು ಪೂರೈಕೆಯಲ್ಲಿ ತೊಂದರೆಯಾಗುತ್ತದೆ.
    ತಮ್ಮ ತಮ್ಮ ಪಂಚಾಯಿತಿ ವ್ಯಾಪ್ತಿಗಳ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯವರು ಪತ್ರ ಬರೆದು ತಿಳಿಸಿದ್ದಾರೆ.
    ಹಾನಗಲ್ಲ ಭಾಗಕ್ಕೆ ನೀರು ಹಾಯಿಸಿಕೊಳ್ಳಬಾರದು ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ ಎಂದು ಹಾನಗಲ್ಲ ನೀರಾವರಿ ಇಲಾಖೆಗೂ ಪತ್ರ ಬರೆಯಲಾಗಿದೆ.

    ಧರ್ಮಾ ಜಲಾಶಯದಲ್ಲಿ ನೀರಿನ ಪ್ರಮಾಣ ತುಂಬ ಕಡಿಮೆಯಾಗಿದೆ. ಮುಂದಿನ ವಾರದಿಂದ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗಲಿದೆ. ಕುಡಿಯುವ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಈಗಾಗಲೇ ಮೂರು ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆಯಲಾಗಿದೆ. ವಾರದೊಳಗೆ ಉತ್ತಮ ಮಳೆಯಾಗಿ ಜಲಾಶಯಕ್ಕೆ ನೀರು ಹರಿದು ಬಂದರೆ ಅನುಕೂಲವಾಗಲಿದೆ.
    — ಪ್ರದೀಪ ಭಟ್, ಇಂಜಿನಿಯರ್ ಪಂಚಾಯತ್ ರಾಜ್ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts