More

    ಜಕಣಾಚಾರಿ ನಾಡಿನ ಹಿರಿಮೆ ಪ್ರತೀಕ

    ಚಿಕ್ಕಮಗಳೂರು: ಅಮರಶಿಲ್ಪಿ ಜಕಣಾಚಾರಿ ಅವರ ವಿಶಿಷ್ಟ ಶಿಲ್ಪಕಲೆ, ಕೆತ್ತನೆ ನೈಪುಣ್ಯತೆ ಕನ್ನಡ ನಾಡಿನ ಹಿರಿಮೆ ಪ್ರತೀಕ ಎಂದು ನಿವೃತ್ತ ಹಿರಿಯ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಹೇಳಿದರು.
    ನಗರದ ಕುವೆಂಪು ಕಲಾಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣೆ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
    ಕರ್ನಾಟಕ ಸಾಹಿತ್ಯ, ಶಿಲ್ಪಕಲೆಗಳ ತವರೂರು. ಹೊಯ್ಸಳರು, ಕದಂಬರು ಸೇರಿದಂತೆ ಅನೇಕ ರಾಜ ಮನೆತನಗಳು ಆಳ್ವಿಕೆ ನಡೆಸಿವೆ. ಕವಿಗಳು, ಶಿಲ್ಪಿ, ಸಾಹಿತಿ, ಸಂಗೀತಗಾರರು ಸೇರಿದಂತೆ ಪ್ರತಿಭಾನ್ವಿತ ವಿದ್ವಾಂಸರಿಗೆ ಆಶ್ರಯದಾತರಾಗಿ ಕಲಾ ಸೇವೆ ಮೆರೆದಿದ್ದಾರೆ. ಈ ಪೈಕಿ ಅಮರಶಿಲ್ಪಿ ಜಕಣಾಚಾರಿ ಕೂಡ ಒಬ್ಬರು. ಹೊಯ್ಸಳ ಅರಸ ವಿಷ್ಣುವರ್ಧನದ ಕಾಲಘಟ್ಟದಲ್ಲಿ ಬೇಲೂರು, ಹಳೇಬೀಡು ದೇವಾಲಯಗಳ ಶಿಲ್ಪಗಳ ಕೆತ್ತನೆ ಮೂಲಕ ಪ್ರಖ್ಯಾತಿಯಾಗಿದ್ದರು. ಅವರ ಕಾರ್ಯ ಎಂದೆಂದಿಗೂ ಚಿರಸ್ಥಾಯಿ ಎಂದು ಸ್ಮರಿಸಿದರು.
    ವಿಶ್ವಕರ್ಮ ಸಮುದಾಯದಲ್ಲಿ ಮರಗೆಲಸ, ಚಿನ್ನಾಭರಣ ಕುಸುರಿ, ವಿಗ್ರಹ ಕೆತ್ತನೆ ಸಹಿತ ಮೊದಲಾದ ಕೌಶಲಗಳು ಅಡಗಿವೆ. ಇಂದಿನ ಯುವಜನತೆ ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣದ ಜತೆಗೆ ಲಲಿತ ಕಲೆಗಳನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಬೇಲೂರು ಚೆನ್ನಕೇಶವ ದೇವಾಲಯದ ಶಿಲ್ಪಕಲೆ ಕೆತ್ತನೆ. ಡಂಕಣ, ಜಕಣಾಚಾರಿ ಅವರ ನೈಪುಣ್ಯತೆ ಕನ್ನಡಿಯಾಗಿದೆ. ಕೈದಾಳ ಚೆನ್ನಕೇಶವ ಮೂರ್ತಿ ಕೆತ್ತನೆ ರೂವಾರಿಗಳಾದ ಜಿಲ್ಲೆಯ ಶಿಲ್ಪಿಗಳಾದ ಜಯಣ್ಣಾಚಾರ್ ಅವರಿಗೆ ಈ ಬಾರಿ ರಾಜ್ಯಮಟ್ಟದ ಅಮರ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ಸಮಾಜ ಸೇವಾ ಸಂಘದ ಅಧ್ಯಕ್ಷ ಉಮಾಶಂಕರ್ ಮಾತನಾಡಿ, ಚಿಕ್ಕ ಸಮುದಾಯವೆಂಬ ಅಸಡ್ಡೆ ಮನೋಭಾವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಇರಬಹುದು. ಆ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಸಂಘಟಿತರಾಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯವರು ಪಾಲ್ಗೊಂಡು ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಬೇಕು. ಆಗ ಎಲ್ಲರೂ ನಮ್ಮ ಕಾರ್ಯಕ್ರಮಗಳಿಗೆ ಬರುತ್ತಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts