More

    20ರ ತರುಣನಿಗೆ ಇಂದು ಜೈನಮುನಿ ದೀಕ್ಷೆ; ಪಾರಿವಾಳಗುಟ್ಟದ ಜೈನ್‌ಧಾಮದಲ್ಲಿ ಕುಟುಂಬ, ಗುರುಗಳ ಸಮ್ಮುಖ ಕಾರ್ಯಕ್ರಮ

    ದೇವನಹಳ್ಳಿ: ಭಗವಾನ್ ಮಹಾವೀರ ಹಾಗೂ ಜೈನಮುನಿಗಳ ಬಗ್ಗೆ ಅಪಾರ ನಂಬಿಕೆ ಹಾಗೂ ಭಕ್ತಿ ಹೊಂದಿರುವ ಯುವಕನೊಬ್ಬ ಪಟ್ಟಣದ ಪಾರಿವಾಳಗುಟ್ಟದ ಸಿದ್ಧಾಚಲ ಪ್ರಭಾವಕ್ ಶಾಸನ ಸ್ಥೂಲಭದ್ರಧಾಮದ ಚಂದ್ರಯಶ್ ಸುರೀಶ್ವರಜೀ ಅವರಿಂದ ಗುರುವಾರ (ಜು.2) ಸನ್ಯಾಸ ದೀಕ್ಷೆ ಪಡೆದುಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕೆ ಕುಟುಂಬವೂ ಸಮ್ಮತಿಸಿದೆ.

    ಚಿತ್ರದುರ್ಗದ ಆಗರ್ಭ ಶ್ರೀಮಂತ ಕುಟುಂಬದ ಯುವಕ ಹಾರ್ದಿಕ್ ಕುಮಾರ್ ತಾರಾಚಂದ್ ಜೀ ಡೆಲಿಡಿಯಾ ಮೆಹ್ತಾ (20)ಈ ನಿರ್ಣಯ ಕೈಗೊಂಡಿದ್ದು, ಬುಧವಾರ ಹಣ, ಒಡವೆ, ವಸ್ತ್ರದಾನ ಸಂಪ್ರದಾಯ ಪಾರಿವಾಳಗುಟ್ಟದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿತು.

    ಗುರುವಾರ ಬೆಳಗ್ಗೆ 8 ರಿಂದ 9-30ರ ಸಮಯದಲ್ಲಿ ದೇವನಹಳ್ಳಿಯ ಜೈನಧಾಮದಲ್ಲಿ ಚಂದ್ರಯಶ್ ಸುರೀಶ್ವರಜೀ ಮತ್ತು ಇತರ ಜೈನ ಮುನಿಗಳಿಂದ ದೀಕ್ಷೆ ಪಡೆಯಲಿದ್ದಾರೆ.

    ನಿರ್ಗತಿಕರ ಸೇವೆಯಲ್ಲೇ ಭಗವಂತನನ್ನು ಕಾಣುವೆ: ಚಿತ್ರದುರ್ಗದ ವ್ಯಾಪಾರಿಗಳಾದ ತಾರಾಚಂದ್ ಮೆಹ್ತಾ ಹಾಗೂ ಮಮತಾ ಮೆಹ್ತ್ತಾರ ಏಕೈಕ ಪುತ್ರ ಹಾರ್ದಿಕ್ ಕುಮಾರ್ ಬಿಕಾಂ ಪದವೀಧರರು. ‘ನನಗೆ 5-6 ವರ್ಷಗಳಿಂದ ಮಹಾವೀರ ಜೈನರ ಸಿದ್ಧಾಂತ ಹಾಗೂ ಜೈನಮುನಿಗಳ ಬಗ್ಗೆ ಒಲವು ಮೂಡಿತ್ತು. ಸನ್ಯಾಸ ದೀಕ್ಷೆ ಪಡೆಯಬೇಕೆಂಬ ಬಯಕೆಯೊಂದಿಗೆ ಚಂದ್ರಯಶ್ ಸ್ವಾಮೀಜಿ ಒಡನಾಟದಲ್ಲಿದ್ದೆ. ಜೈನ ಮುನಿಯಾಗಬೇಕಾದರೆ ಪಾಲಿಸಬೇಕಾದ ಕಠಿಣ ವ್ರತ ಮತ್ತು ಕಟ್ಟುಪಾಡುಗಳ ಬಗ್ಗೆ ಅಧ್ಯಯನ ಮಾಡಿ ಸಂತೋಷವಾಗಿ ಪರಿವಾರವನ್ನೆಲ್ಲ ತ್ಯಜಿಸಿ ಈ ವಿಶ್ವವೇ ನನ್ನ ಪರಿವಾರ ಎಂಬ ತೀರ್ಮಾನ ಕೈಗೊಂಡಿದ್ದೇನೆ. ಸತ್ಯಸಂದೇಶ, ಅಹಿಂಸಾ ತತ್ವ ಬೋಧನೆ ಮಾಡುತ್ತ ಗುರುಗಳ ಮಾರ್ಗದಲ್ಲಿ ಸಮಾಜಸೇವೆ ದೀನದಲಿತರ ಬಡವರ, ನಿರ್ಗತಿಕರ ಸೇವೆ ಮಾಡುವುದರ ಮೂಲಕ ಭಗವಂತನನ್ನು ಕಾಣುತ್ತೇನೆ ಎಂದು ಹಾರ್ದಿಕ್ ತಿಳಿಸಿದರು.

    ತಾರಾನಾಥ್ ಮೆಹ್ತಾ ಮಾತನಾಡಿ, ‘ನನಗೆ ಇಬ್ಬರು ಮಕ್ಕಳು. ಒಬ್ಬ ಮಗ ಮತ್ತು ಒಬ್ಬ ಮಗಳು. ಮಗ ಬೆಳೆದಂತೆ ಜೈನ ಧರ್ಮದ ಬಗ್ಗೆ ಅಪಾರ ಆಸಕ್ತನಾಗಿದ್ದ. 6 ವರ್ಷಗಳ ಹಿಂದಿನಿಂದಲೂ ಸನ್ಯಾಸಿಯಾಗುತ್ತೇನೆ, ಜೈನ ಮುನಿಯಾಗುತ್ತೇನೆ ಎಂದು ಪ್ರಸ್ತಾಪ ಮಾಡುತ್ತಿದ್ದ. ಹಲವು ಬಾರಿ ಬೇಡ ಎಂದರೂ ಆತನ ಮನಸ್ಸು ಬದಲಾಗಲಿಲ್ಲ. ಕೊನೆಗೆ ಗುರುಗಳ ಸಲಹೆ ಪಡೆದು ಒಪ್ಪಿಗೆ ಕೊಟ್ಟೆವು. ಚಿತ್ರದುರ್ಗದಲ್ಲಿ 9 ಹೆಣ್ಣುಮಕ್ಕಳು ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದಾರೆ. ಪುರುಷರಲ್ಲಿ ಪ್ರಥಮವಾಗಿ ನನ್ನ ಮಗ ದೀಕ್ಷೆ ಪಡೆಯುತ್ತಿದ್ದಾನೆ ಎಂದು ತಿಳಿಸಿದರು.

    ಆಶ್ರಮದ ಚಂದ್ರಯಶ್ ಸುರೀಶ್ವರಜೀ ಮಾತನಾಡಿ, ಸನ್ಯಾಸಿಯಾಗುತ್ತಿರುವ ಹಾರ್ದಿಕ್ 5 ವರ್ಷಗಳ ಹಿಂದಿನಿಂದಲೇ ನಮಗೆ ಪರಿಚಯ. ಅವರಲ್ಲಿ ಜೈನಮುನಿಯಾಗುವ ಎಲ್ಲ ಲಕ್ಷಣಗಳನ್ನು ಕಂಡಿದ್ದೆವು. ಅವರು ಸಂಪತ್ತು, ಹಣ, ಒಡವೆ ವಸ್ತ್ರ ತೊರೆದಿದ್ದಾರೆ. ಶ್ವೇತವಸ್ತ್ರಧಾರಿಯಾಗಿ ಜೈನಗುರುಗಳ ಮಾರ್ಗ ಅನುಸರಿಸಲಿದ್ದಾರೆ ಎಂದರು.

    ಜಿಪಂ ಸದಸ್ಯೆ ಅನಂತಕುಮಾರಿ ಚಿನ್ನಪ್ಪ, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ಪುರಸಭಾ ಸದಸ್ಯರಾದ ಡಿ.ಆರ್.ಬಾಲರಾಜು, ರೇಖಾ ವೇಣುಗೋಪಾಲ್, ಮಂಜುನಾಥ್, ಚೈತ್ರಾ ವಿಜಯಕುಮಾರ್, ಲಕ್ಷ್ಮೀನಾರಾಯಣ್, ಸಮಾಜ ಸೇವಕ ಮಹೇಶ್, ಹಾರ್ದಿಕ್ ಅವರ 60ಕ್ಕೂ ಹೆಚ್ಚು ಕುಟುಂಬಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts