More

    ಜಗಳೂರು ಪಪಂ ರೂ. 2 ಲಕ್ಷ ಉಳಿತಾಯ ಬಜೆಟ್

    ಜಗಳೂರು: ಪಟ್ಟಣ ಪಂಚಾಯತಿಯ 2023-24ನೇ ಸಾಲಿನಲ್ಲಿ ರೂ. 2,30,340 ಉಳಿತಾಯ ಬಜೆಟ್ ಅನ್ನು ಪಟ್ಟಣ ಪಂಚಾಯತಿ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್ ಘೋಷಿಸಿದರು.

    ಇಲ್ಲಿನ ಪಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಆಯವ್ಯಯ ಮುಂಗಡಪತ್ರ ಘೋಷಣೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಪ್ರಾರಂಭಿಕ ಶುಲ್ಕ ಸೇರಿದಂತೆ ಆದಾಯ ರೂ. 52,44,28,117, ನಿರೀಕ್ಷಿತ ಖರ್ಚು ರೂ. 52,41,97,777 ಒಳಗೊಂಡಂತೆ ಒಟ್ಟು 2,30,340 ಉಳಿತಾಯ ಬಜೆಟ್ ಘೋಷಣೆ ಮಾಡಲಾಗಿದೆ ಎಂದರು.

    ಸರ್ಕಾರಿ ನಿಯಮದಂತೆ ಪ.ಜಾತಿ ಹಾಗೂ ಪ. ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ, ವಿಕಲಚೇತನರ ಕಲ್ಯಾಣಕ್ಕಾಗಿ ರೂ. 24,63,210 ಅನುದಾನ ಕಾಯ್ದಿರಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸಿಸಿ ರಸ್ತೆ, ಬಾಕ್ಸ್ ಚರಂಡಿ ಡಕ್ ನಿರ್ಮಾಣ, ಬೀದಿಗಳಿಗೆ ನಾಮಫಲಕ ಅಳವಡಿಕೆ, ಪಾರ್ಕ್ ಅಭಿವೃದ್ಧ್ದಿ, ಶೌಚಾಲಯ, ಬೀದಿ ದೀಪ, ಘನತ್ಯಾಜ್ಯ ಸಂಸ್ಕರಣೆ, ಮುಕ್ತಿ ವಾಹನ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳಿಗೆ ಆದಾಯದಲ್ಲಿ ಅನುದಾನ ಅಂದಾಜಿಸಲಾಗಿದೆ ಎಂದು ತಿಳಿಸಿದರು.

    ಅಧಿಕಾರಿಗಳಿಗೆ ತರಾಟೆ: ಕಳೆದ ವರ್ಷ ಘೋಷಿಸಿದ ಬಜೆಟ್ ಕಾರ್ಯರೂಪಗೊಳಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಾರಿ ಬಜೆಟ್ ಕೇವಲ ಘೋಷಣೆಗೆ ಸೀಮಿತವಾಗಬಾರದು. ಮಖ್ಯಾಧಿಕಾರಿ ತಮ್ಮ ಸಿಬ್ಬಂದಿಗೆ ಕರವಸೂಲಿಗೆ ಮಾಡುವಂತೆ ಖಡಕ್ ಸೂಚನೆ ನೀಡಬೇಕು. ಸಮರ್ಪಕ ಅಭಿವೃದ್ಧಿ ಕಾಮಗಾರಿಗೆ ಒತ್ತು ನೀಡಬೇಕು ಎಂದು ಸದಸ್ಯರಾದ ರವಿಕುಮಾರ್, ದೇವರಾಜ್ ಅಧಿಕಾರಿಗಳಿಗೆ ತಿಳಿಸಿದರು.

    ನಾಮನಿರ್ದೇಶಿತ ಸದಸ್ಯ ಬಿ.ಪಿ. ಸುಬಾನ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿನ ಕರ ವಸೂಲಾತಿ ಸಂಪನ್ಮೂಲದ ನಿಗದಿತ ಅಂಕಿಅಂಶದ ಮಾಹಿತಿ ಹಾಗೂ ವರ್ಗ-1ರ ಖಚಿತ ಅನುದಾನದ ಬಗ್ಗೆ ಬಜೆಟ್‌ನಲ್ಲಿ ನಮೂದಿಸಿಲ್ಲ. ಯಾವ ರೀತಿ ಆದಾಯ, ಖರ್ಚು ನಿರೀಕ್ಷಿಸಿರುವಿರಿ? ಎಂದು ಪ್ರಶ್ನಿಸಿದರು.

    ಪಪಂ ಸದಸ್ಯ ಆರ್. ತಿಪ್ಪೇಸ್ವಾಮಿ ಮಾತನಾಡಿ, ಪಪಂ ಸದಸ್ಯರಿಗೆ ಗೌರವಧನ ಹೆಚ್ಚಿಸಬೇಕು. ಗ್ರಾಪಂಗಿಂತಲೂ ಕಡಿಮೆ ಅನುದಾನವಿರುವ ಪಪಂ ಬಗ್ಗೆ ತಾತ್ಸಾರ ಸಲ್ಲದು ಎಂದರು.
    ಪಪಂ ಸದಸ್ಯ ರಮೇಶ್ ರೆಡ್ಡಿ ಮಾತನಾಡಿ, ಆಯವ್ಯಯ ಬಜೆಟ್‌ನಲ್ಲಿ ಪಟ್ಟಣದ ಸ್ವಚ್ಛತೆಗೆ ಬಳಕೆ ಮಾಡುವ ಯಂತ್ರೋಪಕರಣಗಳ ರಿಪೇರಿ, ಖರೀದಿ ಕುರಿತು ಅನುದಾನ ಮೀಸಲಿಟ್ಟಿಲ್ಲ. ತಂತ್ರಜ್ಞಾನ ಪ್ರಗತಿಯಲ್ಲೂ ಪೌರಕಾರ್ಮಿಕರನ್ನೇ ಅವಲಂಬಿಸಿರುವುದು ಬೇಸರ ತಂದಿದೆ ಎಂದರು.
    ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಪ್ರತಿಕ್ರಿಯಿಸಿ, ಸರ್ವ ಸದಸ್ಯರ ಸಲಹೆ ಸೂಚನೆ ಪಾಲಿಸುವೆ. ಸಂಪನ್ಮೂಲ ಕ್ರೂಢೀಕರಣ, ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
    ಪಪಂ ಉಪಾಧ್ಯಕ್ಷೆ ನಿರ್ಮಲಕುಮಾರಿ, ಸದಸ್ಯರಾದ ಲಲಿತಮ್ಮ, ಸರೋಜಮ್ಮ, ಲೋಲಾಕ್ಷಮ್ಮ, ಸಿದ್ದಪ್ಪ, ಲುಕ್ಮಾನ್ ಖಾನ್, ಮಂಜುನಾಥ್, ಕಂದಾಯ ನಿರೀಕ್ಷಕ ಮೋಹಿದ್ದೀನ್, ಇಂಜಿನಿಯರ್ ಶೃತಿ, ಆರೋಗ್ಯ ನಿರೀಕ್ಷಕ ಕಿಫಾಯತ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts