More

    ಹಸಿರು ತೊಟ್ಟು ಸಿಂಗಾರಗೊಂಡ ಭೂರಮೆ

    ಜಗಳೂರು: ತಾಲೂಕಿನಲ್ಲಿ ಈ ಬಾರಿ ಸುರಿದ ಉತ್ತಮ ಮಳೆಯಿಂದ 41ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, ಎಲ್ಲೆಡೆ ಬೆಳೆಗಳು ಹಸಿರಿನಿಂದ ನಳನಳಿಸುತ್ತಿವೆ.

    ಮುಂಗಾರು ಹಂಗಾಮಿನಲ್ಲಿ 54 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶದ ಗುರಿ ಹೊಂದಲಾಗಿದ್ದು, ಬಿಳಿಚೋಡು ಮತ್ತು ಸೊಕ್ಕೆ ಹೋಬಳಿಯಲ್ಲಿ ಶೇ.90ರಷ್ಟು ಬಿತ್ತನೆಯಾಗಿದೆ.

    ಕಸಬಾ, ತೊರೆಸಾಲು ಭಾಗದಲ್ಲಿ ಇತ್ತೀಚೆಗೆ ಮಳೆಯಾಗಿದ್ದು, ಈಗ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಈವರೆಗೆ ಮೆಕ್ಕೆಜೋಳ 27.650 ಹೆಕ್ಟೇರ್, ತೊಗರಿ 980 ಹೆಕ್ಟೇರ್, ಶೇಂಗಾ 11694 ಹೆಕ್ಟೇರ್, ಹತ್ತಿ 435 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.

    ಸೂಲಂಗಿ ನಂತರ ಗೊಬ್ಬರ ಕೊಡಬೇಡಿ: ಮೆಕ್ಕೆಜೋಳ ಸೂಲಂಗಿ ಹೊಡೆಯುವ ಮುನ್ನ ಗೊಬ್ಬರ ಕೊಡುವ ಕೆಲಸ ಮುಗಿಸಬೇಕು. ಯಾವುದೇ ಕಾರಣಕ್ಕೂ ಸೂಲಂಗಿ ನಂತರ ಕೊಡಬಾರದು, ಒಂದು ಎಕರೆ ಬೆಳೆಗೆ ಮೇಲ್ಗೊಬ್ಬರವಾಗಿ 25 ಕೆಜಿಗಿಂತ ಹೆಚ್ಚು ಹಾಕುವಂತಿಲ್ಲ. ಹೆಚ್ಚಾದರೆ ಲದ್ದಿ ಸೇರಿ ಇತರೆ ಕೀಟಾಣುಗಳ ಕಾಟ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

    ರಸಗೊಬ್ಬರ ಕೊರತೆ ಇಲ್ಲ: ಮೂರು ದಿನಗಳಲ್ಲಿ ನಾಲ್ಕು ಹೋಬಳಿಗಳಲ್ಲಿ 270 ಟನ್ ಯೂರಿಯಾ ದಾಸ್ತಾನು ಮಾಡಲಾಗಿದೆ. ಎಲ್ಲಾ ಪರಿಕರ ಮಾರಾಟಗಾರರು ಒಬ್ಬ ರೈತರಿಗೆ ಎಕರೆಗೆ ನಾಲ್ಕು ಚೀಲ ವಿತರಣೆ ಮಾಡಲು ಸೂಚನೆ ನೀಡಲಾಗಿದೆ. ಸರ್ಕಾರದ ನಿಗದಿತ ಬೆಲೆಗಿಂತ ದುಬಾರಿ ಬೆಲೆಗೆ ಯೂರಿಯಾ ಗೊಬ್ಬರ ಮಾರಾಟ ಮಾಡಿದರೆ ಅಂಥವರ ವಿರುದ್ಧ ಪರವಾನಿಗೆ ರದ್ದು ಪಡಿಸಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಶ್ರೀನಿವಾಸಲು ಎಚ್ಚರಿಕೆ ನೀಡಿದ್ದಾರೆ.

    ಆರಂಭದಲ್ಲಿ ಯೂರಿಯಾ ಗೊಬ್ಬರದ ಕೊರತೆಯುಂಟಾಗಿತ್ತು. ಆದರೆ ಈಗ ಸಾಕಷ್ಟು ಗೊಬ್ಬರ ಸರಬರಾಜು ಆಗುತ್ತಿದ್ದು, ರೈತರು ಗೊಂದಲ ಮಾಡಿಕೊಳ್ಳುವುದು ಬೇಡ. ಕರೊನಾ ಇರುವುದರಿಂದ ಸರ್ಕಾರಿ ಸೌಲಭ್ಯಗಳ ಮಾಹಿತಿ ಪಡೆಯಲು ರೈತರು ಅನವಶ್ಯಕವಾಗಿ ಕೇಂದ್ರ ಕಚೇರಿಗಳಿಗೆ ಹಣ, ಸಮಯ ವೆಚ್ಚ ಮಾಡಿಕೊಂಡು ಬರುವುದಕ್ಕಿಂತ ಆಯಾ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳಬಹುದು.
    > ಶ್ರೀನಿವಾಸಲು ಸಹಾಯಕ ಕೃಷಿ ನಿರ್ದೇಶಕರು ಜಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts