More

    ಜಗದಗಲ | ಚೀನಾ ಹಿಂದೆ ಸರಿದಿಲ್ಲ, ಹಿಂದಕ್ಕೆ ದೂಡಿಸಿಕೊಂಡಿದೆ!

    ಸೇನಾ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ನೇರ ಕ್ರಮಗಳನ್ನು ಕೈಗೊಂಡ ಭಾರತ ತೆರೆಯ ಹಿಂದೆ ವ್ಯಾಪಕ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿತು. ಪ್ರಮಖ ರಾಜಧಾನಿಗಳಲ್ಲಿನ ಭಾರತೀಯ ದೂತಾವಾಸಗಳು ಭಾರತದ ಪರವಾಗಿ ಅಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಯುದ್ಧಸನ್ನದ್ಧತೆಯ ವೇಗದಲ್ಲಿ ಕಾರ್ಯತತ್ಪರವಾದವು. ಪರಿಣಾಮವಾಗಿ ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ಅಮೆರಿಕಗಳು ಅಧಿಕೃತವಾಗಿ ಭಾರತದ ಪರ ನಿಂತವು.

    ಜಗದಗಲ | ಚೀನಾ ಹಿಂದೆ ಸರಿದಿಲ್ಲ, ಹಿಂದಕ್ಕೆ ದೂಡಿಸಿಕೊಂಡಿದೆ!ಜಗದಗಲ | ಚೀನಾ ಹಿಂದೆ ಸರಿದಿಲ್ಲ, ಹಿಂದಕ್ಕೆ ದೂಡಿಸಿಕೊಂಡಿದೆ!ಜೂನ್ 22ರ ಲೆಫ್ಟಿನೆಂಟ್ ಜನರಲ್ ಮಟ್ಟದ ಮಾತುಕತೆಗಳು ಮತ್ತು ಒಪ್ಪಂದವನ್ನು ಚೀನಾ ಏಕಪಕ್ಷೀಯವಾಗಿ ಗಾಳಿಗೆ ತೂರಿ ಮೂರೇ ದಿನಗಳಲ್ಲಿ ಪಂಗೊಂಗ್ ತ್ಸೊ, ಗಲ್ವಾನ್ ಕಣಿವೆಯಲ್ಲಿ ಭಾರಿ ಪ್ರಮಾಣದ ಸೇನೆ ಜಮಾಯಿಸಿ, ದೆಪ್​ಸಂಗ್​ನಲ್ಲಿ ಹೊಸದಾಗಿ ಆಕ್ರಮಣವನ್ನು ಪ್ರಾರಂಭಿಸಿತಷ್ಟೇ. ಹೊಸದಾಗಿ ಬಂದ ಚೀನೀ ಸೈನಿಕರಲ್ಲಿ ಕುಂಗ್​ಫುನಂತಹ ಶಸ್ತ್ರಾಸ್ತ್ರರಹಿತ ಹೋರಾಟಕಲೆಗಳಲ್ಲಿ ತರಬೇತುಗೊಂಡ ಸೈನಿಕರೂ ಇದ್ದರು. ಜೂನ್ 15ರ ಘರ್ಷಣೆಗಳಲ್ಲಿ ಮೊಳೆಗಳನ್ನು ಜೋಡಿಸಿದ ಉಕ್ಕಿನ ದೊಣ್ಣೆಗಳು ಮತ್ತು ಕಲ್ಲುಗಳನ್ನು ಆಯುಧಗಳಾಗಿ ಬಳಸುವ ಮೂಲಕ ಚೀನೀಯರು ಎರಡೂ ದೇಶಗಳ ನಡುವೆ 1996 ಮತ್ತು 2005ರಲ್ಲಿ ಸಹಿಯಾದ ಒಪ್ಪಂದಗಳ ಪ್ರಕಾರ ಹತೋಟಿ ರೇಖೆಯಲ್ಲಿ ಪಹರೆಯಲ್ಲಿರುವ ಸೈನಿಕರು ಶಸ್ತ್ರಾಸ್ತ್ರಗಳನ್ನು ಹೊಂದಿರಬಾರದೆಂಬ ನಿಯಮವನ್ನು ತಿರಚುವ ಧೂರ್ತತನವನ್ನು ಪ್ರದರ್ಶಿಸಿದ್ದನ್ನು ನೋಡಿದ್ದೇವೆ. ಆದಾಗ್ಯೂ, ಭಾರತೀಯ ಸೇನೆಗಿಂತಲೂ ಚೀನೀ ಸೇನೆ ಹೆಚ್ಚು ಪ್ರಾಣಹಾನಿಯನ್ನು ಅನುಭವಿಸಿದ್ದನ್ನೂ ನೋಡಿದ್ದೇವೆ. (ಇತ್ತೀಚಿನ ವರದಿಗಳು ಚೀನಿ ಸಾವಿನ ಸಂಖ್ಯೆಯನ್ನು ನೂರರ ಗಡಿ ದಾಟಿಸುತ್ತವೆ!)

    ಈಗ ಮಾರ್ಷಲ್ ಆರ್ಟ್ಸ್​ ಪ್ರವೀಣ ಸೈನಿಕರನ್ನು ಹತೋಟಿ ರೇಖೆಗೆ ತರುವ ಮೂಲಕ ಮುಂದಿನ ಕಾಳಗಗಳಲ್ಲಿ ಭಾರತೀಯ ಸೇನೆಗೆ ನಿಶ್ಚಿತವಾಗಿಯೂ ಹೆಚ್ಚಿನ ಹಾನಿಯನ್ನು ಉಂಟುಮಾಡಲೇಬೇಕೆಂದು ಚೀನೀಯರು ಹಂಚಿಕೆ ಹಾಕಿದ್ದಾರೆ ಎನ್ನುವುದು ಸ್ಪಷ್ಟವಾಯಿತು. ಅದರ ಪ್ರಕಾರ. ಮುಂದಿನ ಘರ್ಷಣೆ ಹೆಚ್ಚೇನೂ ದೂರವಿಲ್ಲ ಎನ್ನುವುದೂ ಸ್ಪಷ್ಟವಾಯಿತು. ಆ ಘರ್ಷಣೆಗಳು ವ್ಯಾಪಕವಾಗಬಹುದೆಂಬ ಸೂಚನೆಯೂ ಸಿಕ್ಕಿದ್ಕು ಮುಂದಿನ ಒಂದೆರಡು ದಿನಗಳಲ್ಲೇ ಹತೋಟಿರೇಖೆಯಲ್ಲಿನ ಚೀನೀ ಸೈನಿಕರ ಸಂಖ್ಯೆ ಇಪ್ಪತ್ತು ಸಾವಿರವನ್ನು ದಾಟಿದಾಗ ಮತ್ತು ಟಿಬೆಟ್​ನಲ್ಲಿನ ವಾಯುನೆಲೆಗಳಲ್ಲಿ ಚೀನೀ ಯುದ್ಧವಿಮಾನಗಳು ಕಾಣಸಿಕೊಂಡಾಗ. ಇದೆಲ್ಲದರ ಅರ್ಥ ಭಾರಿ ಪ್ರಮಾಣದ ಘರ್ಷಣೆ ಯಾವ ಕ್ಷಣದಲ್ಲಾದರೂ ಆರಂಭವಾಗಬಹುದು ಎಂಬ ಸನ್ನಿವೇಶವನ್ನು ಚೀನಾ ನಿರ್ವಿುಸಿತ್ತು.

    ಈ ನಡುವೆ ಎರಡೂ ಸೇನೆಗಳ ನಡುವೆ ಮೂರನೆಯ ಸುತ್ತಿನ ಉಚ್ಚಸ್ತರೀಯ ಮಾತುಕತೆಗಳು ಜೂನ್ 30ರಂದು ಚುಶೂಲ್​ನಲ್ಲಿ ಜರುಗಿದವು. ಹತೋಟಿ ರೇಖೆಯಿಂದ ಎರಡೂ ಸೇನೆಗಳು ಹಿಂದೆಗೆಯಬೇಕು ಮತ್ತು ಶಾಂತಿ ಸ್ಥಾಪಿಸಲು ಪ್ರಯತ್ನಿಸಬೇಕು ಎಂಬ ಒಪ್ಪಂದವೂ ಆಯಿತು. ಆದರೆ ಹಿಂದಿನ ಎರಡು ಕಹಿ ಅನುಭವಗಳ ಕಾರಣ ಈ ಬಾರಿಯ ಒಪ್ಪಂದವನ್ನು ಚೀನಾ ಪಾಲಿಸುತ್ತದೆಂಬ ನಂಬಿಕೆ ಭಾರತದಲ್ಲಿ ಯಾರಿಗೂ ಇರಲಿಲ್ಲ. ತನ್ನ ಬಗ್ಗೆ ಭಾರತೀಯರಲ್ಲಿದ್ದ ತೀವ್ರ ಅಪನಂಬಿಕೆಯನ್ನು ವೃದ್ಧಿಸುವಂತಹ ಋಣಾತ್ಮಕ ಕ್ರಮಗಳನ್ನು ಚೀನಾ ಅವ್ಯಾಹತವಾಗಿ ಮುಂದುವರಿಸಿಯೇ ಇತ್ತು.

    ಪಂಗೊಂಗ್ ತ್ಸೋ ಸರೋವರದ ಉತ್ತರ ತಟದಲ್ಲಿ ಫಿಂಗರ್ 4 ಮತ್ತು 8ರ ನಡುವೆ ತಾನು ಮುಂದೊತ್ತಿ ಬಂದು ಆಕ್ರಮಿಸಿಕೊಂಡಿದ್ದ ಪ್ರದೇಶದಲ್ಲಿ ನೆಲದ ಮೇಲೆ ಚೀನೀ ಸೇನೆ 80 ಮೀಟರ್​ಗಳಷ್ಟು ಅಗಲವಾದ ಚೀನಾದ ಭೂಪಟವನ್ನು ಬಿಡಿಸಿತು ಮತ್ತು ಆ ಪ್ರದೇಶ ಚೀನಾಗೆ ಸೇರಿದ್ದು ಎಂದು ಸಾರುವ ಮ್ಯಾಂಡರೀನ ಪದಗಳನ್ನೂ ಚಿತ್ರಿಸಿತು. ಇಷ್ಟು ಅಗಲವಾದ ಬಣ್ಣದ ಭೂಪಟವನ್ನು ಮತ್ತು ಅಕ್ಷರಗಳನ್ನು ನೆಲದ ಮೇಲೆ ರಚಿಸುವ ಉದ್ದೇಶ ಅವುಗಳನ್ನು ಮೇಲೆ ಭೂಮಿಯನ್ನು ಸುತ್ತು ಹಾಕುತ್ತಿರುವ ವಿವಿಧ ದೇಶಗಳ ನೂರಾರು ಉಪಗ್ರಹಗಳು ಗುರುತಿಸಲಿ ಮತ್ತು ಆ ಮೂಲಕ ಈ ಪ್ರದೇಶ ಚೀನಾದ್ದು ಎಂದು ಜಗತ್ತು ನಂಬಲಿ ಎಂದು. ನೆಲದ ತುಣುಕೊಂದನ್ನು ತನ್ನದೆಂದು ಹೇಳಿಕೊಳ್ಳಲು ನಾಗರಿಕ ದೇಶವೊಂದು ಇಂತಹ ವಿಚಿತ್ರ ಮಾರ್ಗ ಹಿಡಿದ ಉದಾಹರಣೆ ಮತ್ತೊಂದಿರಲಾರದು.

    ಇಂತಹ ಚೀನಾ ಸೋಮವಾರ, ಜುಲೈ 6ರಂದು ಅಲ್ಲಿಯವರೆಗಿನ ತನ್ನೆಲ್ಲ ನಡೆಗಳಿಗೆ ವಿರುದ್ಧವಾದ ನಡೆಯನ್ನು ಪ್ರದರ್ಶಿಸಿದೆ. ಜೂನ್ 15ರಂದು ಘರ್ಷಣೆಗಳಾಗಿದ್ದ ಗಲ್ವಾನ್ ಕಣಿವೆಯ ಪಿಪಿ-14 (ಪೆಟ್ರೋಲ್ ಪಾಯಿಂಟ್, ಪಹರೆ ಬಿಂದು-14) ಈಗ ಬೇರೊಂದು ಬೆಳವಣಿಗೆಗೆ ಸಾಕ್ಷಿಯಾಗಿದೆ. ಚೀನೀ ಸೇನೆ ಅಲ್ಲಿ ತಾನು ನಿರ್ವಿುಸಿದ್ದ ಶಿಬಿರಗಳನ್ನು ಕಿತ್ತುಹಾಕಿ, ತಾನಲ್ಲಿಗೆ ತಂದಿದ್ದ ಸೇನಾ ಹಾಗೂ ವೈದ್ಯಕೀಯ ವಾಹನಗಳನ್ನು ತೆಗೆದುಕೊಂಡು ಎರಡು ಕಿಲೋಮೀಟರ್ ಹಿಂದೆ ಸರಿದಿದೆ. ಹಾಗೆಯೇ, ಪಂಗೊಂಗ್ ತ್ಸೋ ತೀರದ ‘ಫಿಂಗರ್ 4’ನಲ್ಲಿ ತಾನು ನಿರ್ವಿುಸಿದ್ದ ಬಿಲ್​ಬಾಕ್ಸ್ ಮತ್ತು ಬಂಕರ್​ಗಳಂಥ ಕಾಂಕ್ರೀಟ್ ರಚನೆಗಳನ್ನೂ ತನ್ನ ಕೈಯಾರೆ ತಾನೇ ಕೆಡವಿ ಹಿಂದೆ ಸರಿದಿದೆ! ಇದೆಲ್ಲ ಹೇಗಾಯಿತು? ಜೂನ್ 25ರ ತರುವಾಯ ಭಾರತ ಕೈಗೊಂಡ ಕ್ರಮಗಳು ಮತ್ತು ಲಡಾಖ್​ನ ಪ್ರಾಕೃತಿಕ ವಾಸ್ತವಗಳು ಈ ಪ್ರಶ್ನೆಗೆ ಉತ್ತರ ಒದಗಿಸುತ್ತವೆ. ಅವುಗಳನ್ನಿಲ್ಲಿ ವಿವರವಾಗಿ ನೋಡೋಣ.

    ಚೀನಾದ ಧೂರ್ತ ಹಾಗೂ ಆಕ್ರಮಣಕಾರಿ ಹುನ್ನಾರಗಳಿಗೆ ಭಾರತದ ಪ್ರತಿಕ್ರಿಯೆ ಸೇನಾ, ಆರ್ಥಿಕ ಹಾಗೂ ರಾಜತಾಂತ್ರಿಕ ಆಯಾಮಗಳಲ್ಲಿತ್ತು. ಮೊದಲಿಗೆ, ಹತೋಟಿ ರೇಖೆಯಲ್ಲಿನ ಸೈನಿಕರು ಶಸ್ತ್ರಾಸ್ತ್ರ ಹೊಂದಿರಬಾರದೆಂಬ ನಿಯಮಕ್ಕೆ ತಣ್ಣಗೆ ಕಸದಬುಟ್ಟಿಯ ದಾರಿ ತೋರಿಸಿದ ಸರ್ಕಾರ ಹತೋಟಿ ರೇಖೆಯಲ್ಲಿ ಉದ್ಭವಿಸುವ ಪರಿಸ್ಥಿತಿಗೆ ಅನುಗುಣವಾಗಿ ಶಸ್ತ್ರಾಸ್ತ್ರ ಬಳಕೆ ಅಥವಾ ಇನ್ನಾವುದೇ ಸೂಕ್ತ ಕ್ರಮಗಳನ್ನು ತಾನೇ ರೂಪಿಸಿಕೊಳ್ಳುವ ಸ್ವಾತಂತ್ರ್ಯವನ್ನು ಸೇನೆಗೆ ನೀಡಿತು. ಮುಂದಿನ ಒಂದು ವಾರದಲ್ಲಿ ಭಾರತ, ಹತೋಟಿ ರೇಖೆಯಲ್ಲಿ ಎಲ್ಲೆಲ್ಲಿ ಚೀನಾ ಅಧಿಕ ಪ್ರಮಾಣದಲ್ಲಿ ಸೈನಿಕರನ್ನು ನಿಯೋಜಿಸಿತ್ತೋ ಅಲ್ಲೆಲ್ಲ ಮತ್ತು ಚೀನಾ ಹೊಸದಾಗಿ ಅತಿಕ್ರಮಣಕ್ಕೆ ಮುಂದಾಗಬಹುದಾದ ಸಾಧ್ಯತೆ ಕಂಡುಬಂದ ಪ್ರದೇಶಗಳಲ್ಲಿ ಒಟ್ಟಾರೆ 30 ಸಾವಿರ ಸೈನಿಕರನ್ನು ನಿಯೋಜಿಸಿತು. ಜತೆಗೆ, ಟ್ಯಾಂಕ್​ಗಳನ್ನೂ ಬೊಫೋರ್ಸ್ ಫಿರಂಗಿಗಳನ್ನೂ ಹತೋಟಿ ರೇಖೆಯ ಸನಿಹದಲ್ಲಿ ಸಜ್ಜುಗೊಳಿಸಿತು. ಭೂಸೇನೆಯ ಜತೆಗೂಡಿದ ವಾಯುಸೇನೆ ಶತ್ರು ಶಿಬಿರಗಳ ಮೇಲೆ ಆಕ್ರಮಣವೆಸಗಬಲ್ಲ ಅಪಾಚೆ ಹೆಲಿಕಾಪ್ಟರ್​ಗಳನ್ನು ಮುಂಚೂಣಿ ನೆಲೆಗಳಿಗೆ ಕೊಂಡೊಯ್ದಿತು. ಯಾವುದೇ ವಿಷಮ ಕ್ಷಣದಲ್ಲಿ ಸೈನಿಕರು ಮತ್ತು ಭಾರಿ ಯುದ್ಧೋಪಕರಣಗಳನ್ನು ಬೇರೆಡೆಗಳಿಂದ ಮುಂಚೂಣಿ ಪ್ರದೇಶಕ್ಕೆ ತುರ್ತಾಗಿ ಸಾಗಿಸಲು ಅನುಕೂಲವಾಗುವ ಸಿ-17 ಸರಕು ಸಾಗಣಿಕೆ ವಿಮಾನಗಳು ಮತ್ತು ಚಿನುಕ್ ಹೆಲಿಕಾಪ್ಟರ್​ಗಳನ್ನು ಸಜ್ಜಾಗಿರಿಸಿತು. ಅಲ್ಲದೆ ಅವಂತೀಪುರ, ಪಠಾಣ್​ಕೋಟ್, ಸಿರ್ಸಾ, ಅಂಬಾಲಾ ಮತ್ರು ಆಗ್ರಾ ಮುಂಚೂಣಿ ವಾಯುನೆಲೆಗಳನ್ನು ಯುದ್ಧಸನ್ನದ್ಧ ಸ್ಥಿತಿಗೆ ಕೊಂಡೊಯ್ದು ಅಲ್ಲಿ ಸುಕೋಯ್-30, ಮಿರಾಜ್-2000 ಮತ್ತು ಮಿಗ್-29 ಯುದ್ಧವಿಮಾನಗಳನ್ನು ಸಜ್ಜುಗೊಳಿಸಿತು.

    ಈ ಸೇನಾಕ್ರಮಗಳ ಜತೆಜತೆಯೇ ಆರ್ಥಿಕ ಕ್ರಮಗಳನ್ನೂ ಭಾರತ ಕೈಗೊಂಡಿತು. ಮೊದಲಿಗೆ ಜೂನ್ 29ರಂದು 59 ಚೀನೀ ಮೊಬೈಲ್ ಆಪ್​ಗಳನ್ನು ನಿಷೇಧಿಸುವ ಮೂಲಕ ಚೀನಾದ ಸಾಫ್ಟ್ ಪವರ್​ಗೆ ಭಾರತ ಮೊದಲ ಹೊಡೆತ ನೀಡಿತು. ಟಿಕ್​ಟಾಕ್ ಒಂದೇ ಭಾರತದಲ್ಲಿ ಜಾಹೀರಾತುಗಳ ಮೂಲಕ ಮಾಸಿಕ ಒಂದೂವರೆ ಮಿಲಿಯನ್ ಡಾಲರ್ ಆದಾಯವನ್ನು ಗಳಿಸುತ್ತಿತ್ತು. ಈ ಕ್ರಮದ ಹಿಂದೆಯೇ ದೇಶದಲ್ಲಿ ರಸ್ತೆ ನಿರ್ಮಾಣ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ ಚೀನೀ ಸಂಸ್ಥೆಗಳ ಸಹಭಾಗಿತ್ವವನ್ನು ಸರ್ಕಾರ ನಿಷೇಧಿಸಿತು. ಚೀನೀ ಕಮ್ಯೂನಿಸ್ಟ್ ಪಾರ್ಟಿಯ ನೇರ ಅಥವಾ ಪರೋಕ್ಷ ಒಡೆತನದಲ್ಲಿರುವ ಧೂರ್ತ ಚೀನೀ ಸಂಸ್ಥೆಗಳು ಕಳಪೆ ರಸ್ತೆಗಳನ್ನು ನಿರ್ವಿುಸುವುದರ ಮೂಲಕ ಹಾಗೂ ವಿದ್ಯುತ್ ಉಪಕರಣಗಳಲ್ಲಿ ಬೇಹುಗಾರಿಕಾ ತಂತ್ರಾಂಶಗಳನ್ನು ರಹಸ್ಯವಾಗಿ ಆಳವಡಿಸುವುದರ ಮೂಲಕ ಸೂಕ್ಷ್ಮ ಸನ್ನಿವೇಶಗಳಲ್ಲಿ ಆ ಎರಡು ಪ್ರಮುಖ ಕ್ಷೇತ್ರಗಳಲ್ಲಿ ಭಾರತಕ್ಕೆ ಹಾನಿಯಾಗುವಂತೆ ಮಾಡಬಹುದು ಎಂದು ಭಾರತ ಸರ್ಕಾರ ಶಂಕಿಸಿದ್ದು ಅರ್ಥಪೂರ್ಣವೇ ಆಗಿದೆ.

    ಹೀಗೆ ಸೇನಾ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ನೇರ ಕ್ರಮಗಳನ್ನು ಕೈಗೊಂಡ ಭಾರತ ತೆರೆಯ ಹಿಂದೆ ವ್ಯಾಪಕ ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿತು. ಪ್ರಮಖ ರಾಜಧಾನಿಗಳಲ್ಲಿನ ಭಾರತೀಯ ದೂತಾವಾಸಗಳು ಭಾರತದ ಪರವಾಗಿ ಅಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಯುದ್ಧಸನ್ನದ್ಧತೆಯ ವೇಗದಲ್ಲಿ ಕಾರ್ಯತತ್ಪರವಾದವು. ಪರಿಣಾಮವಾಗಿ ಜಪಾನ್, ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ಅಮೆರಿಕಗಳು ಅಧಿಕೃತವಾಗಿ ಭಾರತದ ಪರ ನಿಂತವು. ಈ ದೇಶಗಳ ಜತೆಗೆ ಜರ್ಮನಿ, ಬ್ರಿಟನ್, ತೈವಾನ್ ಮತ್ತಿತರ ಹಲವು ಹತ್ತು ದೇಶಗಳ ನೂರಾರು ಶಾಸಕರು ಭಾರತದ ಪರವಾಗಿ, ಚೀನಾದ ವಿರುದ್ಧವಾಗಿ ಹೇಳಿಕೆಗಳನ್ನು ನೀಡತೊಡಗಿದರು.

    ಹೀಗೆ ಸೇನಾ, ಆರ್ಥಿಕ, ರಾಜತಾಂತ್ರಿಕ ಕ್ರಮಗಳಿಂದ ಸಜ್ಜುಗೊಂಡ ಪ್ರಧಾನಿ ನರೇಂದ್ರ ಮೋದಿ ಸುರಕ್ಷಾಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಜತೆಗೂಡಿ ಜುಲೈ 3ರಂದು ಮುಂಚೂಣಿ ಪ್ರದೇಶಕ್ಕೆ ಭೇಟಿ ನೀಡಿ ಗಲ್ವಾನ್ ಘರ್ಷಣೆಯಲ್ಲಿ ಗಾಯಗೊಂಡು ಶುಶ್ರೂಷೆ ಪಡೆಯುತ್ತಿದ್ದ ಸೈನಿಕರನ್ನು ಕಂಡು ಅವರ ಯೋಗಕ್ಷೇಮ ವಿಚಾರಿಸಿದರು. ಅವರಲ್ಲಿ ಆತ್ಮವಿಶ್ವಾಸ ವೃದ್ಧಿಸಲು ಪ್ರಯತ್ನಿಸಿದ್ದಲ್ಲದೆ ನಿಮುವಿನಲ್ಲಿ ಸೈನಿಕರನ್ನು ಉದ್ದೇಶಿಸಿ ಅವರ ಆತ್ಮಸ್ಥೈರ್ಯವನ್ನು ವೃದ್ಧಿಸುವ ಮಾತುಗಳನ್ನಾಡಿದರು. ಅಧ್ಯಕ್ಷ ಷಿ ಜಿನ್​ಪಿಂಗ್ ಸೇರಿ ಚೀನಾದ ಪ್ರಮುಖ ನಾಯಕರು ಗಡಿಯಲ್ಲಿನ ತಮ್ಮ ಸೈನಿಕರಿಗಿರಲಿ ದೇಶದೊಳಗಿನ ನಾಗರಿಕರಿಗೇ ಮುಖ ತೋರಿಸದೆ ಎಲ್ಲೋ ಅಡಗಿ ಕುಳಿತಿರುವಾಗ ಪ್ರಧಾನಿ ಮೋದಿಯವರ ಈ ನಡೆ ಶ್ಲಾಘನೀಯ. ಜತೆಗೆ, ಪ್ರಧಾನಿ ಅಲ್ಲಿ ಹೇಳಿದ ಮಾತುಗಳನ್ನು ಗಮನಿಸಬೇಕು.

    2014ರಲ್ಲಿ ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ಜಪಾನ್​ಗೆ ಭೇಟಿ ನೀಡಿದ ಮೋದಿ ಚೀನಾದ ಪೂರ್ವದ ಆ ನೆಲದಲ್ಲಿ ನಿಂತು ‘ವಿಸ್ತಾರವಾದದ ಯುಗ ಮುಗಿದುಹೋಯಿತು’ ಎಂದು ಚೀನಾಗೆ ಬುದ್ಧಿಮಾತು ಹೇಳಿದ್ದರು. ಇಂದವರು ಚೀನಾದ ಪಶ್ಚಿಮದಲ್ಲಿ ನಿಂತು ಆ ದೇಶಕ್ಕೆ ಅದೇ ಬುದ್ಧಿಮಾತು ಹೇಳುವುದರ ಜತಗೆ, ‘ವಿಸ್ತಾರವಾದದ ಹಾದಿ ಹಿಡಿದ ದೇಶಗಳು ನಾಶವಾಗಿವೆ’ ಎಂದು ಇತ್ತೀಚಿನವೇ ಐತಿಹಾಸಿಕ ವಾಸ್ತವಗಳನ್ನು ಆ ದುರುಳ ದೇಶದ ಮುಖಕ್ಕೆ ಹಿಡಿದರು. ಭಾರತದ ನಾಯಕತ್ವದ ಈ ಎಲ್ಲ ಸೇನಾ, ಆರ್ಥಿಕ ಮತ್ತು ರಾಜತಾಂತ್ರಿಕ ಕ್ರಮಗಳು ತಾನಿಂದು ಎದುರಿಸುತ್ತಿರುವುದು ಬಲಿಷ್ಠ ಹಾಗೂ ದೃಢನಿಶ್ಚಯದ ಭಾರತವನ್ನು ಎಂದು ಚೀನೀಯರಿಗೆ ಮನಗಾಣಿಸಿದವು.

    ಪರಿಣಾಮವಾಗಿ ಜುಲೈ 5ರಂದು ಭಾರತದ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಅಜಿತ್ ದೊವಾಲ್ ಜತೆಗಿನ ದೂರವಾಣಿ ಮಾತುಕತೆಯಲ್ಲಿ ಚೀನೀ ವಿದೇಶಮಂತ್ರಿ ಮತ್ತು ಸ್ಟೇಟ್ ಕೌನ್ಲಿಲರ್ ವಾಂಗ್ ಯಿ ತಮ್ಮ ಹಿಂದಿನ ವೂಲ್್ಪ ವಾರಿಯರ್ ಧೋರಣೆಯನ್ನು ತೊರೆದು ಶಾಂತಿಯ ಹಾದಿಗೆ ಬಂದರು. ಆ ಪ್ರಕಾರ ಜೂನ್ 30ರ ಒಪ್ಪಂದವನ್ನು ಜಾರಿಗೊಳಿಸಲು, ಆ ಮೂಲಕ ಹತೋಟಿ ರೇಖೆಯಲ್ಲಿ ಶಾಂತಿ ಸ್ಥಾಪಿಸಲು ಉಭಯ ದೇಶಗಳ ಈ ಇಬ್ಬರು ಉಚ್ಚ ಪ್ರತಿನಿಧಿಗಳು ಒಮ್ಮತಕ್ಕೆ ಬಂದರು. ಈ ಕುರಿತಾಗಿ ಎರಡೂ ಸರ್ಕಾರಗಳಿಂದ ಮರುದಿನ ಅಂದರೆ ಸೋಮವಾರ ಅಧಿಕೃತ ಪ್ರಕಟಣೆಗಳು ಹೊರಬಂದವು. ಅಷ್ಟರಲ್ಲಾಗಲೇ ಹತೋಟಿ ರೇಖೆಯಿಂದ ಚೀನೀ ಸೇನೆಯ ಹಿಂಪಯಣ ಆರಂಭವಾಗಿತ್ತು.

    ಇಷ್ಟಾಗಿಯೂ, ಇನ್ನು ಎಲ್ಲವೂ ಸರಿಹೋಯಿತು ಎಂದು ಭಾರತ ನೆಮ್ಮದಿಯಿಂದ ಇರುವ ಹಾಗಿಲ್ಲ. ಚೀನಾ ಬಗ್ಗೆ ಕಟ್ಟೆಚ್ಚರ ಅತ್ಯಗತ್ಯ. ಯಾಕೆಂದರೆ ಅನಿರೀಕ್ಷಿತವಾಗಿ ಬದಲಾದ ಚೀನೀ ನಡವಳಿಕೆಯ ಹಿಂದೆ ಪ್ರಕೃತಿಯೂ ಕೆಲಸ ಮಾಡಿದೆ. ಬೇಸಿಗೆಯ ತಾಪಮಾನ ತೀವ್ರವಾಗಿ ಏರಲಾರಂಭಿಸಿರುವ ಈ ದಿನಗಳಲ್ಲಿ ಪರ್ವತಗಳ ಹಿಮ ವೇಗವಾಗಿ ಕರಗತೊಡಗಿದೆ. ಹೀಗಾಗಿ ಗಲ್ವಾನ್ ನದಿಯಲ್ಲಿ ನೀರಿನ ಮಟ್ಟ ಮತ್ತು ಸೆಳವು ಅಧಿಕವಾಗಿದೆ. ಬದಲಾದ ಈ ಸನ್ನಿವೇಶದಲ್ಲಿ ನದಿಕಣಿವೆಯಲ್ಲಿ ಸೈನಿಕರ ಶಿಬಿರಗಳಿಗೆ ಹಾನಿ ತಟ್ಟುವುದರ ಜತೆಗೇ ಸೇನಾ ವಾಹನಗಳ ಸಂಚಾರವೂ ಬಾಧೆಗೊಳಗಾಗುತ್ತದೆ. ಹಾಗೆಯೇ, ಬೇಸಿಗೆಯಲ್ಲಿ ಕರಗುವ ಹಿಮವನ್ನೇ ತನ್ನ ನೀರಿನ ಏಕೈಕ ಮೂಲವಾಗಿ ಹೊಂದಿರುವ ಪಂಗೊಂಗ್ ತ್ಸೋನ ಪಾತಳಿಯೂ ಈಗ ಬದಲಾಗುತ್ತಿದೆ. ಪರ್ವತ ಸಾಲಿನಿಂದ ಇಳಿದು ಬರುತ್ತಿರುವ ನೀರು ಸರೋವರದ ಮಟ್ಟವನ್ನು ಒಂದೇಸಮನೆ ಏರಿಸುತ್ತಿದೆ ಮತ್ತು ಪರ್ವತ ಹಾಗೂ ಸರೋವರದ ನಡುವಿನ ಕಿರಿದಾದ ತೀರ ತಾತ್ಕಾಲಿಕವಾಗಿ ಮಾಯವಾಗತೊಡಗಿದೆ. ಈ ಬೆಳವಣಿಗೆ ಸಹಜವಾಗಿಯೇ ಯಾವುದೇ ಪ್ರಕಾರದ ಸೇನಾಕಾರ್ಯಾಚರಣೆಗಳಿಗೆ ಅನುಕೂಲವಲ್ಲ. ಇದೆಲ್ಲದರ ಅರ್ಥ ಭಾರತದ ವಿವಿಧ ಕ್ರಮಗಳ ಜತೆಗೇ ಪ್ರಕೃತಿಯೂ ಚೀನಾವನ್ನು ಹತೋಟಿ ರೇಖೆಯಿಂದಾಚೆಗೆ ದೂಡಿದೆ!

    ಲಡಾಖ್​ನ ಈ ಪ್ರಾಕೃತಿಕ ವಾಸ್ತವ ನಮಗೊಂದು ಐತಿಹಾಸಿಕ ಪಾಠವನ್ನು ನೆನಪಿಸುತ್ತದೆ. ಇಂದು ದೊಡ್ಡದಾಗಿ ಸುದ್ದಿಯಾಗಿರುವ ಇದೇ ಗಲ್ವಾನ್ ಕಣಿವೆಯಿಂದ, ಇಂತಹದೇ ಪ್ರಾಕೃತಿಕ ಕಾರಣಗಳಿಂದಾಗಿ 1962ರಲ್ಲಿ ಇಂತಹದೇ ಜುಲೈನಲ್ಲಿ ಹಿಂದೆ ಸರಿದ ಚೀನೀ ಸೇನೆ ಮುಂದಿನ ನೂರು ದಿನಗಳಲ್ಲಿ ಚಳಗಾಲ ಆರಂಭವಾಗಿ ತನಗೆ ಅನುಕೂಲ ಒದಗಿಸಿದೊಡನೇ ಪೂರ್ಣ ತಯಾರಿಯೊಂದಿಗೆ ದೊಡ್ಡ ಪ್ರಮಾಣದಲ್ಲಿ ದಾಳಿ ಎಸಗಿದ್ದನ್ನು ನಾವೆಂದಿಗೂ ಮರೆಯಬಾರದು.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು) 

    ಆಂತರಿಕ, ಬಾಹ್ಯ ಇಕ್ಕಟ್ಟಿನ ಸುಳಿಯಲ್ಲಿ ಚೀನಾ

    ಗಾಯಗೊಂಡ ಹಿಮಾಲಯಕ್ಕೆ ಸದ್ಯಕ್ಕಂತೂ ನಿದ್ದೆಯಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts