More

    ರೈತರ ಕಷ್ಟ ನಷ್ಟ ಅಧ್ಯಯನವಾಗಲಿ

    ಕೋಟ: ದೇಶದ ಬೆನ್ನೆಲುಬು ರೈತ ಎನ್ನುವ ಕಾಲಘಟ್ಟದಲ್ಲಿ ರೈತನ ಕಷ್ಟ ನಷ್ಟಗಳ ಬಗ್ಗೆ ಹೆಚ್ಚು ಅಧ್ಯಯನ ಅಗತ್ಯ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಹೇಳಿದರು.

    ಶುಕ್ರವಾರ ಸಾಲಿಗ್ರಾಮ ಮೊಗವೀರ ಸಭಾಭವನದಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ, ಕೃಷಿ ಡಿಪ್ಲೊಮಾ ಮಹಾವಿದ್ಯಾಲಯ ಬ್ರಹ್ಮಾವರ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಆಶ್ರಯದಲ್ಲಿ ಅಂತಿಮ ವರ್ಷದ ಡಿಪ್ಲೊಮಾ ಕೃಷಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಲಿಕೋತ್ಸವ 2020 ಉದ್ಘಾಟಿಸಿ ಮಾತನಾಡಿದರು.
    ಉಡುಪಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಕೃಷಿ ವಸ್ತು ಪ್ತದರ್ಶನ ಉದ್ಘಾಟಿಸಿ ಮಾತನಾಡಿ, ಇಂದಿನ ಕೃಷಿ ಪದ್ಧತಿಯಲ್ಲಿ ಅತಿ ಹೆಚ್ಚು ರಾಸಾಯನಿಕ ಪದಾರ್ಥಗಳನ್ನು ಬಳಸುತ್ತಾರೆ. ಇದು ಕೃಷಿಗೆ ಮಾರಕವಾಗಿ ಪರಿಣಮಿಸಿದೆ. ಸರ್ಕಾರ ಕೂಡ ಇದಕ್ಕೆ ಕಡಿವಾಣ ಹಾಕುತ್ತಿದೆ. ಸಾವಯವ ಕೃಷಿಗೆ ಉತ್ತೇಜನ ನೀಡುತ್ತಿದೆ. ಕೃಷಿ ಕ್ಷೇತ್ರದಲ್ಲಿ ವಿನೂತನ ತಂತ್ರಗಳಿಗೆ ಮೊರೆಹೊಗಬೇಕಿದೆ. ಈ ಕಾರ್ಯಕ್ಕೆ ಯುವ ಸಮೂಹ ಕೃಷಿ ಕಾಯಕದಲ್ಲಿ ತೊಡಗಿಕೊಳ್ಳಬೇಕು ಎಂದರು.

    ಬ್ರಹ್ಮಾವರ ಕೃಷಿ ವಲಯ ಸಂಶೋಧನಾ ಕೇಂದ್ರ ಸಹಸಂಶೋಧನಾ ನಿರ್ದೇಶಕ ಡಾ.ಎಸ್.ಯು.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
    ಕೋಟ ಸಹಕಾರಿ ವ್ಯವಸಾಯಕ ಸಂಘ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ತಾಂತ್ರಿಕ ಕೈಪಿಡಿ ಬಿಡುಗಡೆಗೊಳಿಸಿದರು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಧರ್ಮದರ್ಶಿ ಕೆ.ಅನಂತಪದ್ಮನಾಭ ಐತಾಳ್, ಉಡುಪಿ ತಾಲೂಕು ಕೃಷಿ ಸಂಘದ ಕಾರ್ಯದರ್ಶಿ ಜಿ. ಆಸ್ತಿಕ್ ಶಾಸ್ತ್ರಿ, ಕುಂದಾಪುರ ಸಹಾಯಕ ತೋಟಗಾರಿಕಾ ನಿವೃತ್ತ ನಿರ್ದೇಶಕ ಕುಚೇಲಯ್ಯ, ಉಳ್ಳಾಲ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಲಕ್ಷ್ಮಣ ಉಪಸ್ಥಿತರಿದ್ದರು. ರಾವೆ ಕ್ಯಾಂಪ್ ಸ್ಥಳೀಯರಾದ ಪಿ.ವೈಕುಂಠ ಹೇರ್ಳೆ ಅವರನ್ನು ಸನ್ಮಾನಿಸಲಾಯಿತು.
    ಗ್ರಾಮೀಣ ಕೃಷಿ ಕಲಿಕಾ ಅನುಭವ ವರದಿಯನ್ನು ವಿದ್ಯಾರ್ಥಿ ಚಿರಂಜೀವಿ, ಪ್ರದೀಪ್, ಅಶ್ವಿನಿ, ಹರ್ಷಿತಾ, ವಿದ್ಯಾಶ್ರೀ ವಿವರಿಸಿದರು. ರೈತರ ಅನಿಸಿಕೆಯನ್ನು ಸಾಲಿಗ್ರಾಮದ ಪ್ರಗತಿಪರ ಕೃಷಿಕ ರಮೇಶ್ ಹೇರ್ಳೆ ಹೇಳಿದರು.
    ಬ್ರಹ್ಮಾವರ ಕೃಷಿ ಡಿಪ್ಲೊಮಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೆ.ವಿ.ಸುಧೀರ್ ಕಾಮತ್ ಪ್ರಸ್ತಾವಿಸಿ, ಸ್ವಾಗತಿಸಿದರು. ಸಹಾಯಕ ಕುಲಸಚಿವ ಡಾ.ಜಯಪ್ರಕಾಶ್ ಆರ್.ವಂದಿಸಿದರು. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಿ.ಎನ್.ಇ ನವೀನ್ ಕಾರ್ಯಕ್ರಮ ನಿರೂಪಿಸಿದರು.

    ಇಪ್ಪತ್ತು ದಿನಗಳಿಂದ ಕೃಷಿ ಅಧ್ಯಯನ: ಇಪ್ಪತ್ತು ದಿನಗಳಿಂದ ಕೃಷಿ ಡಿಪ್ಲೊಮಾ ವಿದ್ಯಾರ್ಥಿಗಳು ಪಾಂಡೇಶ್ವರ, ಗುಂಡ್ಮಿ, ಸಾಲಿಗ್ರಾಮ,ಚಿತ್ರಪಾಡಿ ಹೀಗೆ ನಾನಾ ಕಡೆಗಳಲ್ಲಿ ಗ್ರಾಮ ವಾಸ್ತವ್ಯ ಹೂಡಿ ರೈತರ ಜಮೀನಿನಲ್ಲಿ ಮಣ್ಣು ಪರೀಕ್ಷೆ, ರೈತರೊಂದಿಗೆ ಗುಂಪು ಸಭೆ, ಸಂವಾದ ಹೀಗೆ ನಾನಾ ರೀತಿಯ ಅಧ್ಯಯನ ನಡೆಸಿದರು.

    ಗಮನ ಸೆಳೆದ ಮಳಿಗೆ: ಕಾರ್ಯಕ್ರಮದ ಹೊರಾಂಗಣದಲ್ಲಿ ಕೃಷಿ ವಸ್ತು ಪ್ರದರ್ಶನ ಹಾಗೂ ಮಳಿಗೆ, ಡಿಪ್ಲೊಮಾ ವಿದ್ಯಾರ್ಥಿ ರಚಿಸಿದ ಕೃಷಿ ಚಿತ್ರಣ ಗಮನ ಸೆಳೆಯಿತು. ಗುಂಡ್ಮಿ ಗ್ರಾಮದ ಮಳಿಗೆಯಲ್ಲಿ ಶೂನ್ಯ ಬಂಡವಾಳದಲ್ಲಿ ಕೃಷಿ, ಚಿತ್ರಪಾಡಿ ಗ್ರಾಮದ ತೋಟಗಾರಿಕಾ ಪ್ರದರ್ಶನ, ಕಾರ್ಕಡ ಗ್ರಾಮದ ಕೃಷಿ ಯಂತ್ರೋಪಕರಣ, ಸಾಲಿಗ್ರಾಮದ ಸಮಗ್ರ ಕೃಷಿ ಪದ್ಧತಿ, ಪಾಂಡೇಶ್ವರದ ಕೃಷಿ ಬೆಳೆಗಳು ಮತ್ತು ಗ್ರಾಮೀಣ ಪದ್ಧತಿ.. ಜನತಾ ಅಗ್ರಿ ಪ್ರೊಡಕ್ಟ್ ಸಾವಯೊವ ಗೊಬ್ಬರ, ಕಿಸಾನ್ ಅಗ್ರೋಟೆಕ್ ಪ್ರದರ್ಶನ ಗಮನ ಸೆಳೆಯಿತು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts