More

    ಕೆಪಿಎಸ್ಸಿಯನ್ನೇ ರದ್ದುಪಡಿಸುವುದಕ್ಕೆ ಇದು ಸಕಾಲ: ಅಕ್ರಮಗಳ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ

    ಬೆಂಗಳೂರು: ಪತ್ರಾಂಕಿತ ಹುದ್ದೆಗಳ ನೇಮಕಾತಿಯಲ್ಲಿ ಜೇಷ್ಠತೆ, ಪಾರದರ್ಶಕತೆ ಕಾಯ್ದುಕೊಳ್ಳದೆ ಅಕ್ರಮಗಳ ಕೂಪವಾಗಿರುವ ಕರ್ನಾಟಕ ಲೋಕಸೇವಾ ಆಯೋಗವನ್ನು (ಕೆಪಿಎಸ್‌ಸಿ) ರದ್ದುಪಡಿಸಿ, ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮಾದರಿಯಲ್ಲಿ ಹೊಸ ಪದ್ದತಿ ಪರಿಚಯಿಸುವುದು ಸೂಕ್ತ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

    1998ನೇ ಸಾಲಿನ ಕೆಎಎಸ್ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಮಧ್ಯಂತರ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

    ಈಗಾಗಲೇ ನಡೆದಿರುವ ಅಕ್ರಮಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಇನ್ನು ಮುಂದಾದರೂ ನೇಮಕ ವ್ಯವಸ್ಥೆ ಸರಿಯಾಗಬೇಕಾದರೆ, ಕೆಪಿಎಸ್‌ಸಿಯನ್ನು ರದ್ದುಪಡಿಸುವುದೇ ಸೂಕ್ತ ಹಾಗೂ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಕ್ಕೆ ಯುಪಿಎಸ್‌ಸಿ ಮಾದರಿಯ ವ್ಯವಸ್ಥೆ ಪರಿಚಯಿಸುವುದು ಉತ್ತಮ ಎಂದು ಹೈಕೋರ್ಟ್ ಹೇಳಿದೆ.

    ಈ ಎಲ್ಲ ವ್ಯಾಜ್ಯಗಳಿಗೆ ಸರ್ಕಾರಗಳೂ ಕಾರಣವಾಗಿವೆ. ಸರ್ಕಾರಗಳಿಗೆ ನಿಜಕ್ಕೂ ಸಾರ್ವಜನಿಕರ ಹಿತಾಸಕ್ತಿ ಕಾಯುವ ಆಸಕ್ತಿ ಇದ್ದರೆ ಪ್ರಾಮಾಣಿಕತೆ, ದಕ್ಷತೆ ಮತ್ತು ಅರ್ಹ ವ್ಯಕ್ತಿಗಳನ್ನು ನೇಮಕ ಮಾಡಲು ಕೆಪಿಎಸ್‌ಸಿಗೆ ಸೂಚಿಸುತ್ತಿತ್ತು. ಆ ಮೂಲಕ ರಾಜ್ಯದ ಆಡಳಿತ ಸೇವೆಗೆ ಉತ್ತಮ ಅಭ್ಯರ್ಥಿಗಳು ಆಯ್ಕೆಯಾಗುವಂತೆ ಮಾಡುತ್ತಿತ್ತು. ಆದರೆ, ಸರ್ಕಾರ ಹಾಗೂ ಆಯೋಗದ ನಿರ್ಲಕ್ಷ್ಯತನದಿಂದ ಸಾರ್ವಜನಿಕರ ಹಿತ ಬಲಿಯಾಗುತ್ತಿದೆ. ಕೆಪಿಎಸ್‌ಸಿಯಲ್ಲಿ ಪಾರದರ್ಶಕತೆಯೇ ಇಲ್ಲದಂತಾಗಿದೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ.

    ಕಳಂಕಿತರಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವೇ?: 1998, 1999 ಹಾಗೂ 2004ನೇ ಸಾಲಿನ ನೇಮಕ ಕಾನೂನುಬದ್ಧವಾಗಿಲ್ಲ ಎಂದು ಈಗಾಗಲೇ ಹೈಕೋರ್ಟ್ ಹೇಳಿದೆ. ಪಾರದರ್ಶಕ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯದಿರುವುದರಿಂದ ಅನರ್ಹರು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್‌ನಂಥ ಪ್ರತಿಷ್ಠಿತ ಹುದ್ದೆಗಳಲ್ಲಿ ಮುಂದುವರಿದಿದ್ದಾರೆ. ಅಕ್ರಮವಾಗಿ ಹುದ್ದೆ ಪಡೆದವರು ರಾಜ್ಯದ ಆಡಳಿತ ಸೇವೆಯಲ್ಲಿ ಮತ್ತು ಅರೆ ನ್ಯಾಯಾಂಗ ಅಧಿಕಾರದಲ್ಲಿದ್ದಾರೆ. ಅಂಥ ಅಧಿಕಾರಿಗಳಿಂದ ಸಾರ್ವಜನಿಕರು ಯಾವ ರೀತಿಯ ನ್ಯಾಯ ನಿರೀಕ್ಷಿಸಲು ಸಾಧ್ಯ ಎಂದು ಹೈಕೋರ್ಟ್ ಪ್ರಶ್ನಿಸಿದೆ.

    1998ರ ನೇಮಕಾತಿ ವ್ಯಾಜ್ಯ ಈಗಲೂ ನಡೆಯುತ್ತಿದೆ. ಕೆಪಿಎಸ್‌ಸಿ ಹಾಗೂ ಸರ್ಕಾರಗಳು ಮಾಡಿರುವ ತಪ್ಪುಗಳೇ ಇದಕ್ಕೆ ಕಾರಣ. 2002ರಿಂದಲೂ ಈ ವ್ಯಾಜ್ಯ ಕೆಎಟಿ, ಹೈಕೋರ್ಟ್, ಸುಪ್ರೀಂಕೋರ್ಟ್‌ಗಳ ಮುಂದೆ ಬರುತ್ತಲೇ ಇವೆ. ಕೆಲ ಅಭ್ಯರ್ಥಿಗಳು ಮತ್ತು ಅಧಿಕಾರಿಗಳು ನಿಯಮಗಳಲ್ಲಿ ಆಗಿರುವ ತಪ್ಪುಗಳನ್ನಿಟ್ಟುಕೊಂಡು ನ್ಯಾಯಾಲಯಗಳನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

    10 ಮಧ್ಯಂತರ ಅರ್ಜಿಗಳು ವಜಾ: ಹೈಕೋರ್ಟ್ ವಿಭಾಗೀಯಪೀಠ 2016ರ ಜೂ.21ರಂದು ನೀಡಿದ್ದ ತೀರ್ಪಿನ ಹಲವು ಅಂಶಗಳ ಜಾರಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ 10 ಮಧ್ಯಂತರ ಅರ್ಜಿಗಳನ್ನು ವಜಾಗೊಳಿಸಿರುವ ಪೀಠ, ಈ ಎಲ್ಲ ಮಧ್ಯಂತರ ಅರ್ಜಿಗಳಲ್ಲಿ ವೈಯಕ್ತಿಕ ವಿಚಾರಗಳಿವೆ. ಆದ್ದರಿಂದ, ಅವುಗಳನ್ನು ನ್ಯಾಯಾಲಯ ಪರಿಗಣಿಸಲಾಗದು. ಈ ಬಗ್ಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮುಂದೆ ಅರ್ಜಿ ಸಲ್ಲಿಸಿ, ಪರಿಹಾರಗಳನ್ನು ಕಂಡುಕೊಳ್ಳಬಹುದು ಎಂದು ಹೈಕೋರ್ಟ್ ತನ್ನ 105 ಪುಟಗಳ ಆದೇಶದಲ್ಲಿ ಸ್ಪಷ್ಟಪಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts