More

    ಅದ್ಭುತ ಆಟವಾಡಿಯೂ ಗೆಲುವು ಕೈತಪ್ಪಿದ್ದಕ್ಕೆ ಮಯಾಂಕ್ ಅಗರ್ವಾಲ್ ಏನಂದರು?

    ದುಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ 158 ರನ್ ಸವಾಲಿಗೆ ಪ್ರತಿಯಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೇವಲ 55 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿತ್ತು. ಆದರೆ ಸೋಲಿನ ದವಡೆಯಿಂದ ಗೆಲುವನ್ನು ಕಸಿದು ತರುವಂಥ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ತೋರಿದ ಕನ್ನಡಿಗ ಮಯಾಂಕ್ ಅಗರ್ವಾಲ್ (89 ರನ್, 60, 7 ಬೌಂಡರಿ, 4 ಸಿಕ್ಸರ್) ತಂಡವನ್ನು ಬಹುತೇಕ ಗೆಲುವಿನ ದಡ ಸೇರಿಸಿದ್ದರು. ನಿರ್ಣಾಯಕ ಘಟ್ಟದಲ್ಲಿ ಮಾಡಿದ ಎಡವಟ್ಟಿನಿಂದ ಕಿಂಗ್ಸ್ ಇಲೆವೆನ್ ತಂಡ ಟೈಗೆ ತೃಪ್ತಿಪಟ್ಟಿತು ಮತ್ತು ಸೂಪರ್ ಓವರ್‌ನಲ್ಲಿ ಹೀನಾಯ ಸೋಲು ಕಂಡಿತು. ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರೂ ಪಂದ್ಯವನ್ನು ಗೆಲುವಿನೊಂದಿಗೆ ಮುಗಿಸಿ ಕೊಡದ ಬಗ್ಗೆ ಮಯಾಂಕ್ ಅಗರ್ವಾಲ್ ಬೇಸರಿಸಿದ್ದಾರೆ.

    ಡೆಲ್ಲಿ ತಂಡ 8 ವಿಕೆಟ್‌ಗೆ 157 ರನ್ ಗಳಿಸಿದರೆ, ಕಿಂಗ್ಸ್ ಇಲೆವೆನ್ ಪಂಜಾಬ್ ಕೂಡ ಇಷ್ಟೇ ವಿಕೆಟ್‌ಗೆ ಇಷ್ಟೇ ರನ್ ಗಳಿಸಿತು. ಬಳಿಕ ಸೂಪರ್ ಓವರ್‌ನಲ್ಲಿ ಎರಡೇ ರನ್‌ಗೆ ಎರಡೂ ವಿಕೆಟ್ ಕಳೆದುಕೊಂಡರೆ, ಡೆಲ್ಲಿ ತಂಡ ಎರಡೇ ಎಸೆತಗಳಲ್ಲಿ ಗೆಲುವಿನ ದಡ ಸೇರಿತು. ಮಯಾಂಕ್ ಅಗರ್ವಾಲ್ ಐಪಿಎಲ್ ಪಂದ್ಯವೊಂದರಲ್ಲಿ ತಮ್ಮ ಗರಿಷ್ಠ ರನ್ ಸಂಪಾದಿಸಿದರು. 2015ರಲ್ಲಿ ಡೆಲ್ಲಿ ತಂಡದಲ್ಲಿದ್ದಾಗ ಪಂಜಾಬ್ ವಿರುದ್ಧ 68 ರನ್ ಗಳಿಸಿದ್ದು ಅವರ ಹಿಂದಿನ ಗರಿಷ್ಠ ಐಪಿಎಲ್ ಗಳಿಕೆ.

    ‘ನಮಗಿದು ಕಠಿಣ ದಿನವಾಗಿತ್ತು. ಪಂದ್ಯದಲ್ಲಿ ನಮಗೆ ಸಾಕಷ್ಟು ಸಕಾರಾತ್ಮಕ ಅಂಶಗಳು ದೊರೆತವು. ನಾವು ಪಂದ್ಯದಲ್ಲಿ ಮೇಲೆದ್ದು ಬಂದ ರೀತಿ ಅದ್ಬುತವಾಗಿತ್ತು. ಹೊಸ ಚೆಂಡಿನಲ್ಲಿ ಅಮೋಘ ದಾಳಿ ನಡೆಸಿದ್ದೆವು. ಆದರೆ ಪಂದ್ಯದಲ್ಲಿ ನಾವು ಸುಸ್ಥಿತಿಯಲ್ಲಿ ಇದ್ದ ಹೊರತಾಗಿಯೂ ಗೆಲುವು ಒಲಿಸಿಕೊಳ್ಳದಿರುವುದು ಸಾಕಷ್ಟು ನೋವು ತಂದಿದೆ’ ಎಂದು ಮಯಾಂಕ್ ಪಂದ್ಯದ ಬಳಿಕ ಹೇಳಿದ್ದಾರೆ.

    ಇದನ್ನೂ ಓದಿ: ಅರಬ್ ರಾಷ್ಟ್ರದಲ್ಲಿ ಐಪಿಎಲ್ ಬಿಸಿ ಏರಿಸಿದ ‘ಶಾರ್ಟ್ ರನ್’ ವಿವಾದ!

    ‘ನಮಗಿದು ಮೊದಲ ಪಂದ್ಯವಷ್ಟೇ. ನಾವು ಮತ್ತೆ ಲಯಕ್ಕೆ ಮರಳಬಹುದಾಗಿದೆ. ಮುಂದಿನ ಪಂದ್ಯಗಳಲ್ಲಿ ಆಟಗಾರರು ಇದೇ ರೀತಿಯ ಪ್ರಯತ್ನಗಳನ್ನು ನಡೆಸಿದರೆ ಗೆಲುವು ಒಲಿಸಿಕೊಳ್ಳಬಹುದು. ಕೇವಲ ಒಂದು ರನ್ ಬೇಕಾಗಿದ್ದ ವೇಳೆಯಲ್ಲೇ ನಾವು ಪಂದ್ಯವನ್ನು ಗೆದ್ದುಬಿಡಬೇಕಾಗಿತ್ತು’ ಎಂದು 29 ವರ್ಷದ ಮಯಾಂಕ್ ಹೇಳಿದ್ದಾರೆ.

    21 ಎಸೆತಗಳಲ್ಲಿ 53 ರನ್ ಸಿಡಿಸಿದ್ದಲ್ಲದೆ, ಕೊನೇ ಓವರ್‌ನಲ್ಲಿ 2 ವಿಕೆಟ್ ಕೂಡ ಕಬಳಿಸಿ ಡೆಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟ ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್ ನಿರ್ವಹಣೆಯನ್ನು ಮಯಾಂಕ್ ಹೊಗಳಿದರು.

    2014ರಲ್ಲಿ ಯುಎಇಯಲ್ಲಿ ಐಪಿಎಲ್ ಮೊದಲಾರ್ಧ ನಡೆದ ವೇಳೆ ಎಲ್ಲ 5 ಪಂದ್ಯಗಳನ್ನು ಗೆದ್ದು ಅಜೇಯವಾಗಿದ್ದ ಪಂಜಾಬ್‌ಗೆ ಅರಬ್ ನೆಲದಲ್ಲಿ ಇದು ಮೊದಲ ಸೋಲಾಗಿದೆ. ಪಂಜಾಬ್ ತಂಡ ಸೂಪರ್ ಓವರ್‌ನಲ್ಲಿ ಕೇವಲ 2 ರನ್ ಗಳಿಸಿತು. ಇದು ಐಪಿಎಲ್‌ನ 10 ಟೈ ಪಂದ್ಯಗಳ ಪೈಕಿ ಕನಿಷ್ಠ ಮೊತ್ತವಾಗಿದೆ.

    ‘ಸ್ಟೋಯಿನಿಸ್ ಪಂದ್ಯದ ದಿಕ್ಕನ್ನೇ ಬದಲಾಯಿಸಿದರೆ, ಕಗಿಸೊ ರಬಾಡ ಅದ್ಭುತ ಸೂಪರ್ ಓವರ್ ಮೂಲಕ ಗೆಲುವು ತಂದರು’ ಎಂದು ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಹೇಳಿದ್ದಾರೆ.

    ‘ಇದೊಂದು ಸಿಹಿಕಹಿ ಪಂದ್ಯ. ಈ ಮೊದಲ ಪಂದ್ಯದಿಂದ ಸಾಕಷ್ಟು ಕಲಿತಿದ್ದೇವೆ. ಮಯಾಂಕ ಆಟ ನಂಬಲಸಾಧ್ಯವಾಗಿತ್ತು. ತಂಡವನ್ನು ಅವರೊಬ್ಬರೇ ಗೆಲುವಿನ ಸನಿಹ ತಂದಿದ್ದು ಮ್ಯಾಜಿಕ್‌ನಂತಿತ್ತು. ಅವರ ಈ ಆಟ ತಂಡಕ್ಕೆ ಸಾಕಷ್ಟು ಆತ್ಮವಿಶ್ವಾಸವನ್ನು ತುಂಬಿದೆ’ ಎಂದು ಪಂಜಾಬ್ ನಾಯಕ ಕೆಎಲ್ ರಾಹುಲ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts