More

    ಸೌಲಭ್ಯ ಅರ್ಹರನ್ನು ತಲುಪಿದರೆ ಸಾರ್ಥಕ

    ಹುಣಸೂರು: ಸಂಘ, ಸಂಸ್ಥೆಗಳು ನೀಡುವ ಸಾಮಾಜಿಕ ಸೇವೆಗಳು ಪ್ರಚಾರ ಪಡೆಯುವುದಕ್ಕಿಂತ ಪರಿಣಾಮಕಾರಿಯಾಗಿ ಅರ್ಹರನ್ನು ಸೇರುವಂತೆ ಮಾಡಿದಲ್ಲಿ ಸೇವೆಯು ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ರೋಟರಿ ಜಿಲ್ಲೆ 3181ರ ಜಿಲ್ಲಾ ಗವರ್ನರ್ ರೊ.ಮೇಜರ್ ಡೋನರ್ ಎಚ್.ಆರ್.ಕೇಶವ ಅಭಿಪ್ರಾಯಪಟ್ಟರು.

    ಶನಿವಾರ ಆಯೋಜಿಸಿದ್ದ ಹುಣಸೂರು ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ದಿನಗಳಲ್ಲಿ ಸಾಕಷ್ಟು ಸರ್ಕಾರೇತರ ಸಂಘ, ಸಂಸ್ಥೆಗಳು ಸಾಮಾಜಿಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಗುರುತಿಸಲ್ಪಡುತ್ತಿವೆ. ರೋಟರಿ ಸಂಸ್ಥೆ ಶತಮಾನಗಳ ಇತಿಹಾಸ ಹೊಂದಿದ್ದು ಸಮುದಾಯಕ್ಕೆ ನಿಸ್ವಾರ್ಥ ಸೇವೆ ನೀಡುತ್ತಲೇ ಬಂದಿದೆ. ನಾವೆಲ್ಲರೂ ನೀಡುವ ಸೇವೆ ಕೇವಲ ಪ್ರಚಾರಕ್ಕಾಗಿ ಮಾತ್ರ ಎನ್ನುವ ಮನೋಭಾವನೆ ತೊರೆಯಬೇಕಿದೆ. ಬದಲಾಗಿ ಅಗತ್ಯವುಳ್ಳವರಿಗೆ ನೀಡಿದ ಸೇವೆ ಎಷ್ಟು ಪರಿಣಾಮಕಾರಿಯಾಗಿದೆ? ಯೋಜನೆಯ ಸಾರ್ಥಕತೆ ಎಷ್ಟು ಎನ್ನುವುದರ ಕಡೆ ಗಮನ ನೀಡಬೇಕಿದೆ ಎಂದರು.

    ರೋಟರಿ ಸಂಸ್ಥೆ ಪೋಲಿಯೋ ಅಭಿಯಾನದ ನಂತರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಆದರೆ ಇವೆಲ್ಲವೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪವಾಗಬೇಕಿದೆ. ಆಗ ಮಾತ್ರ ಸ್ವಾರ್ಥವನ್ನು ಮೀರಿದ ಸೇವೆ ಎನ್ನುವ ನಮ್ಮ ಉದ್ದೇಶ ಈಡೇರಲು ಸಾಧ್ಯ. ಹುಣಸೂರು ರೋಟರಿ ಸಂಸ್ಥೆಯು ಈ ಬಾರಿ ಕೇವಲ 218 ದಿನದಲ್ಲಿ 230 ಕಾರ್ಯಕ್ರಮಗಳನ್ನು ಅಯೋಜಿಸುವ ಮೂಲಕ, ನಮ್ಮ ರೋಟರಿ ಜಿಲ್ಲೆಯಲ್ಲಿ ಮಾದರಿ ಕ್ಲಬ್ ಆಗಿ ಹೊರಹೊಮ್ಮಿದೆ ಎಂದು ಶ್ಲಾಘಿಸಿದರು.

    ಜಿಲ್ಲಾ ಗರ್ವನರ್ ಅಧಿಕೃತ ಭೇಟಿ ಅಂಗವಾಗಿ ಹುಣಸೂರು ರೋಟರಿ ಸಂಸ್ಥೆಯಿಂದ ಸಮಾಜ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಪೇದೆ ಎಸ್.ಎ.ಮನೋಹರ್, ನಗರದ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಶುಶ್ರೂಶಕಿ ಮಹದೇವಮ್ಮ ಮತ್ತು ಕರವೇ ತಾಲೂಕು ಅಧ್ಯಕ್ಷ ಪುರುಷೋತ್ತಮ ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ ವಿವಿಧ ಗ್ರಾಮಗಳ ಅಂಗನವಾಡಿಗಳಿಗೆ ಆಟಿಕೆ ಸಾಮಾಗ್ರಿಗಳನ್ನು ವಿತರಿಸಲಾಯಿತು. ವಿಶೇಷ ಚೇತನ ಮಕ್ಕಳಿಬ್ಬರಿಗೆ ವಾಕರ್‌ಗಳನ್ನು ನೀಡಲಾಯಿತು.

    ಧರ್ಮಾಪುರ ಪ್ರೌಢಶಾಲೆಗೆ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ, ಪ್ಯಾಡ್ ಬನಿರ್ಂಗ್ ಮೆಷಿನ್, ಚೇರ್‌ಗಳು ಮತ್ತು ವಿದ್ಯಾರ್ಥಿಗಳಿಗೆ ಕೈ ತೊಳೆಯುವ ಘಟಕ ನಿರ್ಮಿಸಿಕೊಡಲಾಯಿತು. ಉತ್ತಮ ಇಂಟರಾಕ್ಟ್ ಕ್ಲಬ್ ಪ್ರಶಂಸೆಗೆ ಪಾತ್ರವಾದ ಸರ್ಕಾರಿ ಆದರ್ಶ ಶಾಲೆ ಚಿಕ್ಕಹುಣಸೂರು , ಧರ್ಮಾಪುರ ಸರ್ಕಾರಿ ಪ್ರೌಢಶಾಲೆ ಮತ್ತು ಟ್ಯಾಲೆಂಟ್ ಪಬ್ಲಿಕ್ ಸ್ಕೂಲ್‌ಗಳಿಗೆ ನೆನಪಿನ ಕಾಣಿಕೆ ಮತ್ತು ಪ್ರಶಂಸಾ ಪತ್ರಗಳನ್ನು ವಿತರಿಸಲಾಯಿತು.

    ಕಾರ್ಯಕ್ರಮದಲ್ಲಿ ಹುಣಸೂರು ರೋಟರಿ ಅಧ್ಯಕ್ಷ ರೊ. ಚೆನ್ನಕೇಶವ, ಕಾರ್ಯದರ್ಶಿ ರೊ.ಡಾ.ಕೆ.ಪಿ.ಪ್ರಸನ್ನ, ವಲಯ ಸೇನಾನಿ ರೊ.ಡಾ.ಕೆ.ಬಸವರಾಜ್, ಸಹಾಯಕ ಗವರ್ನರ್ ಕೆ.ಎ.ಸತ್ಯನಾರಾಯಣ, ಹುಣಸೂರು ಕ್ಲಬ್‌ನ ಎಲ್ಲ ಸದಸ್ಯರು ಮತ್ತು ಕುಟುಂಬ ವರ್ಗ, ಪಿರಿಯಾಪಟ್ಟಣ, ಕೆ.ಆರ್.ನಗರ, ಗೋಣಿಕೊಪ್ಪ, ಸೋಮವಾರ ಪೇಟೆ, ಮಡಿಕೇರಿ ಕ್ಲಬ್‌ಗಳ ಅಧ್ಯಕ್ಷರು ಮತ್ತು ಸದಸ್ಯರು, ಸನ್ಮಾನಿತರು, ಫಲಾನುಭವಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts