More

    ಮೀನುಗರಡಿ ಗ್ರಾಮಕ್ಕೆ ಕಾಲುಸಂಕವೇ ಗತಿ

    ಶೃಂಗೇರಿ: ಗಿರಿಜನರು ಹೆಚ್ಚಾಗಿ ವಾಸವಾಗಿರುವ ನೆಮ್ಮಾರ್ ಗ್ರಾಪಂನ ಮಲ್ನಾಡ್ ಗ್ರಾಮದ ಮೀನುಗರಡಿ ಮತ್ತಿತರ ಹಳ್ಳಿಗೆ ಸಂಪರ್ಕ ಕಲ್ಪಿಸುವ ಮೀನುಗರಡಿ ಹಳ್ಳ (ವಾಮಿನಸರಲು)ದ ಸೇತುವೆ ಮತ್ತು ರಸ್ತೆ ಡಾಂಬರೀಕರಣ ಕನಸು ಇನ್ನೂ ಕೈಗೂಡದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಇಲ್ಲಿಯ ಜನರು ಕಾಲುಸಂಕವನ್ನೇ ನಂಬಿಕೊಂಡಿದ್ದಾರೆ.

    ಸುತ್ತಲೂ ದಟ್ಟ ಅರಣ್ಯ ಪ್ರದೇಶವಿರುವ ಮೀನುಗರಡಿ ಹಳ್ಳವು ಮಳೆಗಾಲ ಆರಂಭವಾಗುತ್ತಿದ್ದಂತೆ ತುಂಬಿ ಹರಿಯುತ್ತದೆ. ಬೇಸಿಗೆಯಲ್ಲಿ ದಾಟಬಹುದಾದರೂ ಮಳೆ ಆರಂಭವಾಗುತ್ತಿದ್ದಂತೆ ನೀರಿನ ಪ್ರಮಾಣ ಹೆಚ್ಚಾಗಿ ದಾಟುವುದು ಅಸಾಧ್ಯ. ಹೀಗಾಗಿ ಗ್ರಾಮಸ್ಥರೇ ಒಟ್ಟಾಗಿ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ. ಹಳ್ಳಿಗೆ ಸಮರ್ಪಕ ರಸ್ತೆ, ಸೇತುವೆ ಇಲ್ಲದಿದ್ದರೂ ನೂರಾರು ವರ್ಷಗಳಿಂದ ಇಲ್ಲಿಯೇ ಜನರು ಬದುಕು ನಡೆಸುತ್ತಿದ್ದಾರೆ.
    ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿರುವ ಅಥವಾ ತಾಲೂಕಿನ ಅಂಚಿನ ಪ್ರದೇಶದಲ್ಲಿರುವ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯ ಇಲಾಖೆಯಿಂದ ಅಡ್ಡಿಯಾಗಿದೆ. ಇದರಿಂದ ಅಭಿವೃದ್ಧಿ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ. ಹುಲಗರಡಿ, ಹಂಚಿನಕೊಡಿಗೆ, ಗೊಚ್ಚೆಹಳ್ಳ, ಹೆಗ್ಗುಂಬ್ರಿ, ಮೇಗೂರು, ತೊಳಾಲುಕೊಂಡ, ಪಾರ್ಥನಮಕ್ಕಿ, ಹೆಗ್ಗಾರುಕೊಡಿಗೆ ಮುಂತಾದ ಹಳ್ಳಿಗಳಿಗೆ ಈ ಹಳ್ಳವನ್ನು ದಾಟಿ ಸಾಗಬೇಕು.
    ಪಡಿತರ, ದಿನನಿತ್ಯ ವಸ್ತು, ಆಸ್ಪತ್ರೆ, ಬಸ್ ಸೌಕರ್ಯ ಪಡೆಯಲು ಕನಿಷ್ಠ ನಾಲ್ಕು ಕಿಮೀ ನಡೆಯಲೇಬೇಕು. ಈ ಹಳ್ಳಿಗಳ ಜನರು ಬೆಂಕಿಪೊಟ್ಟಣ ತರಬೇಕೆಂದರೂ ಬುಕುಡಿಬೈಲು ಅಥವಾ ಮೇಗೂರಿಗೆ ಹೋಗಬೇಕು. ಆರೋಗ್ಯದ ಸಮಸ್ಯೆ ಎದುರಾದಾಗ ಜನರ ಪಾಡು ಹೇಳತೀರದು. ಬಹುತೇಕ ಅರಣ್ಯ ಪ್ರದೇಶದಲ್ಲಿರುವ ಮನೆಗಳಿಗೆ ವಿದ್ಯುತ್ ಮಾರ್ಗದಲ್ಲಿ ಸಮಸ್ಯೆಯಾದರೆ ತುರ್ತು ದುರಸ್ತಿಯನ್ನೂ ಮಾಡುವುದಿಲ್ಲ. ಕತ್ತಲೆಯಲ್ಲೇ ಕಾಲ ಕಳೆಯಬೇಕು.
    ಮೀನುಗರಡಿ ಹಳ್ಳಕ್ಕೆ 60-70 ಅಡಿ ಉದ್ದದ ಕಾಲುಸಂಕ ಹಾಕಬೇಕು. ಇದಕ್ಕಾಗಿ ನೇರವಾದ ಕಾಡು ಮರ ದೊರೆಯದ್ದರಿಂದ ಅಡಕೆ ಮರವನ್ನು ಬಳಸಿ ಕಾಲುಸಂಕ ನಿರ್ಮಿಸಿದ್ದಾರೆ. ಉದ್ದವಾಗಿರುವ ಕಾಲುಸಂಕ ಎರಡು ಭಾಗ ಮಾಡಿಕೊಂಡು, ಹಳ್ಳದ ಮೇಲಿರುವ ಬಾಗಿದ ಮರವನ್ನು ಬಳಸಿಕೊಂಡು ಮರಗಳನ್ನು ಕಟ್ಟುತ್ತಾರೆ. ಕಾಲುಸಂಕ ಕಟ್ಟಲು ಬಳ್ಳಿಯನ್ನು ಬಳಸುತ್ತಾರೆ. ನಡೆದಾಡಲು 3-4 ಅಡಕೆ ಮರ ಹಾಕಿ ಕಟ್ಟಿ, ಹಿಡಿದುಕೊಳ್ಳಲು ಎರಡೂ ಕಡೆ ಹಗ್ಗ ಕಟ್ಟುತ್ತಾರೆ. ಇಪ್ಪೆ ಜಾತಿಯ ಮರದ ಕಂಬವನ್ನು ಎರಡೂ ಬದಿಗೆ ಬಳಸುವುದರಿಂದ ಅದು ಬೇರು ಕೊಟ್ಟಲ್ಲಿ ಕಂಬವೂ ಹಾಳಾಗುವುದಿಲ್ಲ. ಈ ಕಾಲುಸಂಕದಲ್ಲಿ ಮಕ್ಕಳಿಂದ ವಯೋವೃದ್ಧರವರೆಗೂ ದಾಟುವುದು ಅನಿವಾರ್ಯ. ಮೀನುಗರಡಿ ಹಳ್ಳಿಯ ನೂರಾರು ಕುಟುಂಬಗಳು ರಸ್ತೆ ನಿರ್ಮಾಣ ಪೂರ್ಣಗೊಳ್ಳುವುದು ಯಾವಾಗ ಎಂದು ಕಾಯುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts