More

    ಮತ ಮಾರಾಟದ ವಸ್ತುವಲ್ಲ ಎಂದ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ

    ತುಮಕೂರು: ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ, ಅಮೂಲ್ಯವಾದ ಮತವನ್ನು ಸ್ವತಂತ್ರವಾಗಿ, ನ್ಯಾಯಸಮ್ಮತವಾಗಿ, ಮುಕ್ತವಾಗಿ ಚಲಾಯಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಹೇಳಿದರು.

    ನಗರದ ಬಾಲಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾನ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾನದ ಹಕ್ಕು ನಮ್ಮೆಲ್ಲರ ಹಕ್ಕು. ಮತದಾನದ ಮೂಲಕ ಭಾರತವನ್ನು ಇನ್ನೂ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ಸಾಧ್ಯ ಎಂದರು.

    18ವರ್ಷ ಮೇಲ್ಪಟ್ಟ ಎಲ್ಲರೂ ಮತಪಟ್ಟಿಗೆ ಸೇರ್ಪಡೆಗೊಳ್ಳಬೇಕು ಎಂಬುದು ರಾಷ್ಟ್ರೀಯ ಮತದಾನ ದಿನದ ಮುಖ್ಯ ಉದ್ದೇಶ. 2011ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಹಾಗೂ ಚುನಾವಣೆಯಲ್ಲಿ ಭಾಗವಹಿಸುವವರ ಸಂಖ್ಯೆ ಶೇ.60 ಇತ್ತು. ಇದೀಗ ಪ್ರಸ್ತುತ ಶೇ.80ಕ್ಕೂ ಹೆಚ್ಚು ಇದೆ. ಆಗ ಎಲ್ಲ ಜನರಿಗೆ ಮತದಾನ, ಪ್ರಜಾಪ್ರಭುತ್ವ ಹಾಗೂ ಮೂಲಅಂಶಗಳ ಬಗ್ಗೆ ಜಾಗೃತಿ ಇರಲಿಲ್ಲ. ಚುನಾವಣಾ ಪ್ರಚಾರದ ಸ್ವೀಪ್ ಕಾರ್ಯಕ್ರಮಗಳ ಮೂಲಕ ಮತದಾನದ ಸಾಕ್ಷರತೆ ನೀಡಲಾಗುತ್ತಿದೆ. ಜಿಲ್ಲೆಯ ಬಿಎಲ್‌ಒಗಳು 18ವರ್ಷ ಮೇಲ್ಪಟ್ಟ ಎಲ್ಲ ಯುವ ಜನರನ್ನು ಮತಪಟ್ಟಿಗೆ ಸೇರ್ಪಡೆ ಮಾಡಿದ್ದಾರೆ ಎಂದು ತಿಳಿಸಿದರು. ಮತದಾರರಿಗೆ ಗುರುತಿಗಾಗಿ ಎಪಿಕ್ ಕಾರ್ಡ್ ನೀಡಲಾಗುತ್ತಿದೆ. ಒಳ್ಳೆಯ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನು ಮನದಲ್ಲಿಟ್ಟುಕೊಂಡು ಆಸೆ-ಆಮಿಷಗಳಿಗೆ ಬಲಿಯಾಗದೆ, ಸ್ವಇಚ್ಚೆಯಿಂದ ಮತ ಚಲಾಯಿಸಬೇಕು.

    ಆಗ ದೇಶ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ತಹಸೀಲ್ದಾರ್ ಮೋಹನ್‌ಕುಮಾರ್, ಜಿಪಂ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಕಂದಾಯ ಅಧಿಕಾರಿ ತುಕರಾಮ್ ನಾಯಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಟರಾಜ್ ಮತ್ತಿತರರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳು ಹಾಗೂ ಪ್ರಬಂಧ ಹಾಗೂ ರಸಪ್ರಶ್ನೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು.

    ಭಾರತದ ಸಂವಿಧಾನದಲ್ಲಿ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರಿಗಿದೆ. ಯುವ ಮತದಾರರಿಗೆ ಮತದಾನದ ಅರಿವು ಮೂಡಿಸುವುದೇ ಮುಖ್ಯ ಉದ್ದೇಶವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಸಂವಿಧಾನ ತಿಳಿಸಿರುವಂತೆ ಮತದಾನದ ಹಕ್ಕನ್ನು ಜಾಗರೂಕತೆಯಿಂದ, ಉತ್ತಮ ರೀತಿಯಾಗಿ ಚಲಾಯಿಸಬೇಕು.
    ನ್ಯಾ.ರಾಘವೇಂದ್ರ ಶೆಟ್ಟಿಗಾರ್
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts