More

    ಪರಿಸರ ಹಾಳು ಮಾಡುತ್ತಿರುವುದು ದುರಂತ

    ಕುಶಾಲನಗರ: ವಿದ್ಯಾರ್ಥಿ ಜೀವನದಲ್ಲೇ ಎಲ್ಲರೂ ಗಿಡ ನೆಡುವ ಮೂಲಕ ಪರಿಸರ ಉಳಿಸಬೇಕು. ಕನಿಷ್ಠ ನಿಮ್ಮ ಪ್ರೀತಿ ಪಾತ್ರರ ಜನ್ಮ ದಿನದಂದು ಒಂದು ಗಿಡ ನೆಟ್ಟು ಪೋಷಿಸುವ ಮೂಲಕ ಪರಿಸರ ಕಾಳಜಿ ವಹಿಸಬೇಕೆಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್ ಸಲಹೆ ನೀಡಿದರು.


    ಹೆಬ್ಬಾಲೆಯ ಶ್ರಿ ಬನಶಂಕರಿ ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಶಾಲೆ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಅಂತರ ಪ್ರೌಢಶಾಲಾ ಮತ್ತು ಕಾಲೇಜುಗಳ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಕಾವೇರಿ ನದಿ ಇತ್ತೀಚೆಗೆ ವಿಪರೀತ ಮಲಿನವಾಗುತ್ತಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ನದಿ ಸೇರಿದಂತೆ ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ಪ್ರಾಣಿ ಪಕ್ಷಿಗಳು ಮಾಡದ ಕೆಲಸವನ್ನು ಬುದ್ಧಿವಂತ ಜೀವಿ ಮನುಷ್ಯ ಮಾಡುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.


    ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಬಹುಮಾನ ಸಿಗದಿದ್ದರೆ ಜ್ಞಾನ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇಂತಹ ಕಾರ್ಯಕ್ರಮಗಳಿಂದ ಬೇರೆ ಬೇರೆ ಶಾಲೆಗಳ ವಿದ್ಯಾರ್ಥಿಗಳ ಪರಿಚಯವಾಗಿ, ಹೊಸ ವಿಚಾರಗಳ ವಿನಿಮಯ ಸಾಧ್ಯವಾಗುತ್ತದೆ. ಸ್ನೇಹವೂ ಗಟ್ಟಿಯಾಗುತ್ತೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.


    ಹಳೆಯ ವಿದ್ಯಾರ್ಥಿ ಪ್ರಸನ್ನ ಮಾತನಾಡಿ, ಶಾಲೆಯಲ್ಲಿ ಕಲಿಯುವಾಗ ಶಿಕ್ಷಕರು ಎದುರಿಗೆ ಬಂದರೆ ನಿಂತು ಕೈಮುಗಿಯುತ್ತಿದ್ದೆವು. ಅವರಲ್ಲಿ ಪೂಜ್ಯನೀಯ ಭಾವವಿರುತ್ತಿತ್ತು. ಈಗ ಅಂತಹ ಸಂಸ್ಕೃತಿ ಕಾಣಲು ಸಾಧ್ಯವಿಲ್ಲ. ನಾವು ಓದಿದ ಶಾಲೆಯ ಮುಂದೆ ಹೋದರೆ ಒಮ್ಮೆ ತಿರುಗಿ ನೋಡಿ ಕೈ ಮುಗಿಯುತ್ತಿದ್ದೇವೆ. ಹಿರಿಯರು, ಶಿಕ್ಷಕರಿಗೆ ಗೌರವಿಸಲು ಸಲಹೆ ನೀಡಿದರು.


    ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಚ್.ವಿ.ಶಿವಪ್ಪ ಮಾತನಾಡಿ, ಭಾಷಣ ಸ್ಪರ್ಧೆಯಿಂದ ವೇದಿಕೆ ಮೇಲೆ ನಿಂತು ಧೈರ್ಯವಾಗಿ ಮಾತನಾಡಲು ಸಾಧ್ಯವಾಗಲಿದೆ. ಒಂದೇ ವಿಷಯವನ್ನು ಬೇರೆ ಬೇರೆಯಾಗಿ ಹೇಗೆ ಮಂಡಿಸಬಹುದು ಎಂದು ತಿಳಿಯುತ್ತದೆ. ಪ್ರಬಂಧ ಸ್ಪರ್ಧೆಯಿಂದ ಬರೆಯುವ ಆಸಕ್ತಿ ಮೂಡುತ್ತದೆ. ಭವಿಷ್ಯದಲ್ಲಿ ದೊಡ್ಡ ದೊಡ್ಡ ಹುದ್ದೆಗಳಿಗೆ ಹೋದರೆ ಇಂತಹ ಸ್ಪರ್ಧೆಗಳು ಸಹಕಾರಿಯಾಗುತ್ತವೆ. ಅದರಿಂದ ಇಂತಹ ಸ್ಪರ್ಧೆಗಳನ್ನು ನಡೆಸುತ್ತಿದ್ದೇವೆ ಎಂದರು.


    ಮಾಜಿ ಸೈನಿಕ ಯತೀಶ್, ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಲ್.ರಮೇಶ್ ಮಾತನಾಡಿದರು.


    ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯಕುಮಾರ್, ಪ್ರೌಢಶಾಲೆ ಮುಖ್ಯ ಶಿಕ್ಷಕ ಬಸವರಾಜ್ ಶೆಟ್ಟಿ, ಕಸಾಪ ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ ಎಂ.ಎನ್.ಮೂರ್ತಿ, ಕನ್ನಡ ಶಿಕ್ಷಕ ಮೆ.ನಾ.ವೆಂಕಟ್ ನಾಯಕ್, ಹಿಂದಿ ಶಿಕ್ಷಕಿ ಕವಿತಾ, ತೊರೆನೂರು ಶಿಕ್ಷಕ ಮಂಜುನಾಥ್, ಹಿರಿಯ ವಿದ್ಯಾರ್ಥಿನಿ ಎಸ್.ಆರ್.ಮಮತಾ, ಲೋಕೇಶ್, ಕೆ.ವಿ.ಉಮೇಶ್, ಟಿ.ಜಿ.ಪ್ರೇಮಕುಮಾರ್ ಇತರರು ಇದ್ದರು.


    ಸನ್ಮಾನ : ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ನಾಗೇಶ್ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಅವರನ್ನು ಸನ್ಮಾನಿಸಲಾಯಿತು.

    ಪ್ರಬಂಧ, ಭಾಷಣ ಸ್ಪರ್ಧೆ ವಿಜೇತರು
    ಅಂತರ ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಯನ್ನು ವಿಜೇತರಾದ ವಿದ್ಯಾರ್ಥಿಗಳು.
    ಪ್ರೌಢಶಾಲಾ ವಿಭಾಗ: ಪ್ರಬಂಧ ಸ್ಪರ್ಧೆ, ತೊರೆನೂರು ಸರ್ಕಾರಿ ಪ್ರೌಢಶಾಲೆ ನಂದಿತಾ(ಪ್ರಥಮ), ಕೂಡಿಗೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ದರ್ಶನ್, ಹೆಬ್ಬಾಲೆ ಪ್ರೌಢಶಾಲೆಯ ಎಚ್.ಆರ್.ನಮಿತಾ(ದ್ವಿತೀಯ), ಭಾಷಣ ಸ್ಪರ್ಧೆಯಲ್ಲಿ ಕೂಡಿಗೆ ಮುರಾರ್ಜಿ ದೇಸಾಯಿ ಪ್ರೌಢಶಾಲೆ ಗಾನವಿ(ಪ್ರಥಮ), ಕೂಡಿಗೆ ಸದ್ಗುರು ಅಪ್ಪಯ್ಯ ಪ್ರೌಢಶಾಲೆ ಎಸ್.ಗೌತಮಿ(ದ್ವಿತೀಯ).


    ಕಾಲೇಜು ವಿಭಾಗ: ಪ್ರಬಂಧ ಸ್ಪರ್ಧೆ-ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜು ಟಿ.ಜಿ.ಪಲ್ಲವಿ(ಪ್ರಥಮ), ಶಿರಂಗಾಲ ಸರ್ಕಾರಿ ಪ್ರೌಢಶಾಲೆಯ ಎಸ್.ಆರ್. ರಕ್ಷಿತಾ(ದ್ವಿತೀಯ). ಭಾಷಣ ಸ್ಪರ್ಧೆ-ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜು ಭೂಮಿಕಾ (ಪ್ರಥಮ), ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜು ಸಂಗೀತಾ(ದ್ವಿತೀಯ).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts