More

    ಬೆಂಗಳೂರಿನಲ್ಲಿ ನೀರಿನ ಪ್ರಾಬ್ಲಂ; ಮತ್ತೆ ವರ್ಕ್​ ಫ್ರಂ ಹೋಂ!

    ರಾಮ ಕಿಶನ್​ ಕೆ.ವಿ. ಬೆಂಗಳೂರು
    ಕಳೆದ ಕೆಲ ವಾರಗಳಿಂದ ರಾಜಧಾನಿ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದು, ಅಪಾರ್ಟ್​ಮೆಂಟ್​ಗಳಲ್ಲಿ ಜಲ ಸಂಕಷ್ಟ ಇನ್ನಷ್ಟು ಉಲ್ಬಣಗೊಂಡಿದೆ. ಕೊಳವೆಬಾವಿ ಹಾಗೂ ಟ್ಯಾಂಕರ್​ ನೀರು ಆಶ್ರಯಿಸಿಕೊಂಡಿದ್ದ ಅಪಾರ್ಟ್​ಮೆಂಟ್​ ನಿವಾಸಿಗಳಿಗೆ ಸದ್ಯ ನೀರು ಪೂರೈಸುವುದೇ ಸವಾಲಾಗಿದೆ. ಈ ಕಾರಣದಿಂದಾಗಿ ಮತ್ತೆ ವರ್ಕ್​ ಫ್ರಂ ಹೋಂ ಬೇಡಿಕೆ ಕಂಡುಬರುತ್ತಿದೆ.

    ನೀರಿನ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಸತಿ ಸಮುಚ್ಚಯದಲ್ಲಿ ವಾಹನ ತೊಳೆಯದಂತೆ ಹಾಗೂ ಈಜುಕೊಳ ಬಳಕೆ ಮಾಡದಂತೆ ಅಪಾರ್ಟ್​ಮೆಂಟ್​ ಅಸೋಸಿಯೇಷನ್​ ಸೂಚನೆ ನೀಡಿದೆ. ನೀರಿನ ಮಿತಬಳಕೆ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪೂರಕವಾಗಿ ಬಳಸಿ ಬಿಸಾಡುವ (ಯೂಸ್​ ಆ್ಯಂಡ್​ ಥ್ರೋ) ವಸ್ತುಗಳನ್ನು ಹೆಚ್ಚು ಬಳಸಲು ಸೂಚಿಸಿದೆ. ಕೆಲ ವಸತಿ ಸಮುಚ್ಚಯದಲ್ಲಿ ನಿವಾಸಿಗಳಿಗೆ ನೀರಿನ ಬಳಕೆಯನ್ನು ಶೇ.20 ಕಡಿಮೆ ಮಾಡಲು ತಿಳಿಸಿದೆ. ಸಕಾಲದಲ್ಲಿ ಟ್ಯಾಂಕರ್​ ನೀರು ಪೂರೈಕೆಯಾಗುತ್ತಿಲ್ಲ. ಹೀಗಿರುವಾಗ ನಗರದಲ್ಲಿ ಎದುರಾಗಿರುವ ನೀರಿನ ಸಮಸ್ಯೆಯ ವಾಸ್ತವತೆಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ನೀರಿನ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಇಲ್ಲವಾದರೆ ಸಮಸ್ಯೆ ಇನ್ನಷ್ಟು ಹೆಚ್ಚಲಿದೆ. ಈಗಿನಿಂದಲೇ ಜನರು ಪರ್ಯಾಯ ಕ್ರಮಗಳನ್ನು ಅನುಸರಿಸುವುದು ಅಗತ್ಯ ಎಂದು ಬಹುತೇಕ ಬಾಡಿಗೆ ಮನೆ ಮಾಲೀಕರು ಪ್ರತಿಕ್ರಿಯಿಸಿದ್ದಾರೆ.

    ಮತ್ತೆ ಮನೆಯಿಂದಲೇ ಕೆಲಸ:

    ನಗರದ ವಿವಿಧ ಭಾಗದಲ್ಲಿರುವ ವಸತಿ ಸಮುಚ್ಚಯಗಳಲ್ಲಿ ನೀರಿನ ಸಮಸ್ಯೆ ಹೆಚ್ಚು ಕಂಡುಬರುತ್ತಿದೆ. ಸದ್ಯ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿರುವ ಕೆಲ ಐಟಿ ಉದ್ಯೋಗಿಗಳು ಬೇಸಿಗೆ ಅಂತ್ಯದವರೆಗೆ ಊರಿಗೆ ತೆರಳುವ ಲೆಕ್ಕಾಚಾರದಲ್ಲಿದ್ದಾರೆ. ಮತ್ತೆ ವರ್ಕ್​ ಫ್ರಂ ಹೋಂ ಸೌಲಭ್ಯ ಪಡೆದುಕೊಂಡು, ಮುಂದಿನ 2-3 ತಿಂಗಳು ಊರಿನಲ್ಲಿರಲು ಆಸಕ್ತಿ ತೋರಿದ್ದಾರೆ.

    ಮಕ್ಕಳ ಪರೀಕ್ಷೆ ನಡೆಯುತ್ತಿರುವುದರಿಂದ ಬಹುತೇಕ ಕುಟುಂಬಗಳು ನಗರದಲ್ಲಿ ಉಳಿದುಕೊಂಡಿವೆ. ಪರೀಕ್ಷೆ ಮುಗಿಯುತ್ತಿದ್ದಂತೆ, ಏಪ್ರಿಲ್​ ಆರಂಭದಿಂದಲೇ ಬಹುತೇಕ ಐಟಿ ಉದ್ಯೋಗಿಗಳು ಊರಿನಿಂದಲೇ ಕೆಲಸ ನಿರ್ವಹಿಸಲು ಮುಂದಾಗಿದ್ದಾರೆ. ಸದ್ಯದ ನೀರಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಕೆಲ ಕಂಪನಿಗಳು “ವರ್ಕ್​ ಫ್ರಂ ಹೋಂ’ ಸೌಲಭ್ಯ ಮುಂದುವರಿಸಲು ಚಿಂತಿಸಿವೆ.

    ಸ್ವಯಂ ಜಾಗೃತಿ ಅಗತ್ಯ

    ಮಿತವಾಗಿ ನೀರು ಬಳಸುವುದರ ಬಗ್ಗೆ ಜನರು ಸ್ವಯಂ ಜಾಗೃತಿ ಬೆಳೆಸಿಕೊಳ್ಳಬೇಕು. ವಾರಕ್ಕೊಮ್ಮೆ ವಾಷಿಂಗ್​ ಮಷಿನ್​ ಬಳಸುವುದು, ವಾಟರ್​ ಫಿಲ್ಟರ್​ನಿಂದ ಹೊರಬರುವ ನೀರನ್ನು ಶೇಖರಿಸಿ ಮನೆ ಬಳಕೆಗೆ ಉಪಯೋಗಿಸುವುದು, ಸ್ನಾನಗೃಹದಲ್ಲಿ ನೀರಿನ ಮಿತ ಬಳಕೆ ಮುಂತಾದ ಕ್ರಮಗಳನ್ನು ಅನುಸರಿಸಬೇಕು. ಇದರಿಂದ ನೀರಿನ ಹೊರೆ ತಪ್ಪುತ್ತದೆ. ಜತೆಗೆ ಪ್ರತಿಯೊಬ್ಬರೂ ವಾಟರ್​ ಮೀಟರ್​ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರು ಅಪಾರ್ಟ್​ಮೆಂಟ್​ ಫೆಡರೇಷನ್​ ಮಾಜಿ ಅಧ್ಯಕ್ಷ ಎಚ್​.ಎ. ನಾಗರಾಜ್​ ತಿಳಿಸಿದ್ದಾರೆ.

    ಕೈಗಾರಿಕೆಗಳಿಗೆ ಹೊರೆ

    ಟ್ಯಾಂಕರ್​ ನೀರಿನ ಬೆಲೆ ಏರಿಕೆ ಹಾಗೂ ನೀರಿನ ಅಲಭ್ಯತೆ ಕೈಗಾರಿಕೆಗಳಿಗೂ ತಟ್ಟಿದೆ. ಹೆಚ್ಚು ನೀರು ಬಳಕೆಯೊಂದಿಗೆ ನಡೆಯುತ್ತಿರುವ ಕೈಗಾರಿಕೆಗಳಿಗೆ ಕಳೆದ ಒಂದೆರಡು ವಾರಗಳಿಂದ ಸಮಸ್ಯೆಯಾಗುತ್ತಿದೆ. ಇದರಿಂದ ಒಟ್ಟು ವೆಚ್ಚದ ಮೇಲೆ ಶೇ.5&10 ಹೆಚ್ಚಿನ ಹೊರೆ ಬರಬಹುದು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್​ಕೆಸಿಸಿಐ) ಉಪಾಧ್ಯಕ್ಷ ಎಂ.ಜಿ. ಬಾಲಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

    ನಗರದ ಪೂರ್ವ ಭಾಗದ ಹಾಗೂ ಟ್ಯಾಂಕರ್​ ನೀರನ್ನು ಅವಲಂಬಿಸಿಕೊಂಡಿದ್ದ ಅಪಾರ್ಟ್​ಮೆಂಟ್​ಗಳಲ್ಲಿ ಹೆಚ್ಚು ಸಮಸ್ಯೆಯಾಗುತ್ತಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಲಭ್ಯ ನೀರನ್ನು ಮಿತವಾಗಿ ಬಳಸುವಂತೆ ಈಗಾಗಲೆ ಸೂಚಿಸಿದ್ದೇವೆ. ಬಿಬಿಎಂಪಿ ಟ್ಯಾಂಕರ್​ ನೀರಿನ ಬೆಲೆ ನಿಗದಿ ಪಡಿಸಿದ ಬಳಿಕ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ.
    -ವಿಕ್ರಮ್​ ರೈ, ಬೆಂಗಳೂರು ಅಪಾರ್ಟ್​ಮೆಂಟ್​ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts