More

    ವೆಸ್ಟ್​ ಬ್ಯಾಂಕ್​ನಲ್ಲಿ ಮಸೀದಿ ಕೆಳಗಿದ್ದ ಹಮಾಸ್​ ನೆಲೆ ಮೇಲೆ ಇಸ್ರೇಲ್​ ದಾಳಿ: ಸ್ಥಳದ ರೇಖಾಚಿತ್ರದಲ್ಲಿ ಸ್ಫೋಟಕ ಮಾಹಿತಿ

    ಜೆರುಸಲೇಂ: ಹಮಾಸ್​ ಉಗ್ರರ ವಿರುದ್ಧ ಗಾಜಾದಲ್ಲಿ ಪ್ರತೀಕಾರದ ದಾಳಿಯನ್ನು ತೀವ್ರಗೊಳಿಸಿರುವ ಇಸ್ರೇಲಿ ರಕ್ಷಣಾ ಪಡೆ ಭಾನುವಾರ (ಅ.22) ವೆಸ್ಟ್​ ಬ್ಯಾಂಕ್​ನಲ್ಲಿ ಮಸೀದಿ ಕೆಳಗಡೆ ಇದ್ದ ಹಮಾಸ್​ ಉಗ್ರರ ನೆಲೆ ಮೇಲೆ ದಾಳಿ ಮಾಡಿದೆ.

    ಮಸೀದಿ ಕೆಳಗಡೆ ಇದ್ದ ನೆಲೆಯನ್ನು ಭಯೋತ್ಪಾದನೆಗೆ ಸಂಚು ರೂಪಿಸಲು ಮತ್ತು ಅದನ್ನು ಕಾರ್ಯಗತಗೊಳಿಸಲು ಹಮಾಸ್​ ಮತ್ತು ಪ್ಯಾಲೆಸ್ತೀನ್​ ಇಸ್ಲಾಮಿಕ್​ ಜಿಹಾದಿ ಗುಂಪು ಬಳಸುತ್ತಿತ್ತು.

    ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಲು ಸಿದ್ಧವಾಗಿದ್ದು, ಇದೇ ಸಂದರ್ಭದಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ಗಾಜಾಗೆ 20 ನೆರವಿನ ಟ್ರಕ್‌ಗಳ ಆಗಮನವನ್ನು ಸ್ವಾಗತಿಸಿದರು. ಈಜಿಪ್ಟ್​ನ ರಫಾ ಗಡಿ ಮೂಲಕ ಹೆಚ್ಚಿನ ನೆರವನ್ನು ನೀಡಲು ವಾಷಿಂಗ್ಟನ್ ಬದ್ಧವಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಒಂದೆಡೆ ನಾಗರಿಕರಿಗೆ ನೆರವು, ಇನ್ನೊಂದೆಡೆ ಹಮಾಸ್​ ವಿರುದ್ಧ ಇಸ್ರೇಲಿ ಪಡೆಗಳ ರಣಕಹಳೆ ಗಾಜಾ ಪ್ರದೇಶವನ್ನು ಇನ್ನಿಲ್ಲದ ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.

    ಇಸ್ರೇಲ್ ಮೇಲಿನ ಹಮಾಸ್ ದಾಳಿಯಲ್ಲಿ 1,400 ಜನರು ಸಾವನ್ನಪ್ಪಿದ್ದರೆ, ಗಾಜಾ ಪಟ್ಟಿಯಲ್ಲಿ ಸಾವಿನ ಸಂಖ್ಯೆ 4,469 ಕ್ಕೆ ಏರಿದೆ ಎಂದು ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ತಿಳಿಸಿದೆ.

    ಇಂದು ಇಸ್ರೇಲ್​ ಪಡೆಯ ವಾಯುದಾಳಿಗೆ ನಾಶವಾದ ಹಮಾಸ್​ ಉಗ್ರರ ನೆಲೆ, ಆಕ್ರಮಿತ ವೆಸ್ಟ್​ ಬ್ಯಾಂಕ್​ನ ಜೆನಿನ್​ ನಿರಾಶ್ರಿತರ ಶಿಬಿರದ ಬಳಿ ಇರುವ ಅಲ್​ ಅನ್ಸರ್​ ಮಸೀದಿಯ ಕಳೆಗಡೆ ಇತ್ತು. ಇಸ್ರೇಲ್​ ಪ್ರಕಾರ ಈ ನೆಲೆಯನ್ನು ವಿಧ್ವಸಂಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಲು ಬಳಸಲಾಗುತ್ತಿತ್ತು ಎಂದು ಹೇಳಿದೆ. ಇಸ್ರೇಲ್ ರಕ್ಷಣಾ ಪಡೆಗಳು ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಮಸೀದಿಯ ಕೆಳಗಿರುವ ಬಂಕರ್‌ನ ಪ್ರವೇಶದ್ವಾರವನ್ನು ತೋರಿಸಿದೆ. ಉಗ್ರರು ಅಲ್ಲಿ ಶಸ್ತ್ರಾಸ್ತ್ರಗಳನ್ನು ಎಲ್ಲಿ ಸಂಗ್ರಹಿಸಿಟ್ಟಿದ್ದಾರೆ ಎಂಬುದನ್ನು ವಿವರಿಸುವ ರೇಖಾಚಿತ್ರವನ್ನು ಬಿಡುಗಡೆ ಮಾಡಿದೆ.

    Israel strikes 1

    ಮಸೀದಿ ಮೇಲಿನ ಇಸ್ರೇಲ್ ವಾಯುದಾಳಿಗೆ ಕನಿಷ್ಠ ಒಬ್ಬ ಪ್ಯಾಲೆಸ್ತೀನಿಯನ್ ಮೃತಪಟ್ಟಿದ್ದು, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನಿಯನ್ ರೆಡ್ ಕ್ರೆಸೆಂಟ್ ಸಂಸ್ಥೆ ಹೇಳಿದೆ. ಅ.7ರಂದು ಹಮಾಸ್​ ಉಗ್ರರು 5000 ರಾಕೆಟ್​ಗಳಿಂದ ಇಸ್ರೇಲ್​ ಮೇಲೆ ದಿಢೀರ್​ ದಾಳಿ ಮಾಡಿದ ಬಳಿಕ ಅಂದಿನಿಂದ ವೆಸ್ಟ್​ ಬ್ಯಾಂಕ್​ನಲ್ಲಿ ಇಸ್ರೇಲಿ ಪಡೆಗಳು ನಡೆಸುತ್ತಿರುವ ದಾಳಿಗೆ 84 ಪ್ಯಾಲೆಸ್ತೀನಿಯನ್ಸ್​ ಅಸುನೀಗಿದ್ದಾರೆ ಎಂದು ಪ್ಯಾಲೆಸ್ತೀನ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಹಮಾಸ್​ ಗುಂಪಿನ ಮೇಲೆ ಮತ್ತಷ್ಟು ಒತ್ತಡ ಹೇರಲು ಇಸ್ರೇಲಿ ಪಡೆ, ಮತ್ತೊಂದು ಸುತ್ತಿನ ತೀವ್ರ ದಾಳಿಗೆ ಸಿದ್ಧತೆ ನಡೆಸುತ್ತಿದೆ. ಇಸ್ರೇಲ್​ ಮುಂದಿನ ಹಂತದ ಯುದ್ಧ ಪ್ರವೇಶಿಸಲು ಯೋಜನೆ ರೂಪಿಸುತ್ತಿದೆ ಎಂದು ಇಸ್ರೇಲಿ ರಕ್ಷಣಾ ಪಡೆಗಳ ವಕ್ತಾರ ರೀರ್​ ಅಡ್ಮಿರಲ್​ ಡೇನಿಯಲ್​ ಹಗರಿ ಅವರು ಮಾಹಿತಿ ನೀಡಿದ್ದಾರೆ. ಇಸ್ರೇಲಿ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಗಾಜಾ ನಗರದ ಮೇಲೆ ದಾಳಿಗಳನ್ನು ಹೆಚ್ಚಿಸುವುದಾಗಿ ತಿಳಿಸಿದ್ದಾರೆ.

    ದಕ್ಷಿಣ ಗಾಜಾ ನಗರ ಖಾನ್​ ಯೂನಿಸ್​ ಮೇಲೆ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ ಕನಿಷ್ಟ 11 ಪ್ಯಾಲೆಸ್ತೀನಿಯನ್ಸ್​ ಮೃತಪಟ್ಟಿರುವುದಾಗಿ ಪ್ಯಾಲೆಸ್ತೀನಿಯನ್​ ಮಾಧ್ಯಮಗಳು ವರದಿ ಮಾಡಿವೆ. ಗಾಜಾದ ಮೇಲೆ ಇಸ್ರೇಲ್ ಪ್ರತೀಕಾರದ ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಇಸ್ರೇಲ್‌ಗೆ ಇದೆ ಎಂದು ಹೇಳುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕರಡು ನಿರ್ಣಯವನ್ನು ಅಮೆರಿಕ ಶನಿವಾರ ಪ್ರಸ್ತಾಪಿಸಿದ್ದು, ಆ ಪ್ರದೇಶದಾದ್ಯಂತ ಶಾಂತಿ ಮತ್ತು ಭದ್ರತೆಗೆ ಬೆದರಿಕೆ ಹಾಕುತ್ತಿರುವ ಭಯೋತ್ಪಾದಕ ಗುಂಪುಗಳಿಗೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವುದನ್ನು ಇರಾನ್ ಕೂಡಲೇ ನಿಲ್ಲಿಸಬೇಕೆಂದು ಕರಡು ಒತ್ತಾಯಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

    ಸದ್ಯ ಇಸ್ರೇಲ್​ ಮತ್ತು ಹಮಾಸ್​ ನಡುವಿನ ಯುದ್ಧ 2 ವಾರಗಳನ್ನು ಪೂರೈಸಿ, ಮೂರನೇ ವಾರಕ್ಕೆ ಕಾಲಿಟ್ಟಿದೆ. ಆದರೆ, ಕದನ ಕಾರ್ಮೋಡ ಮಾತ್ರ ತಿಳಿಯಾಗಿಲ್ಲ. ಎರಡೂ ಕಡೆಯಿಂದ 5 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ಇಸ್ರೇಲ್- ಪ್ಯಾಲೆಸ್ತೀನ್ ವಿವಾದವೇನು?
    ಇಸ್ರೇಲ್- ಪ್ಯಾಲೆಸ್ತೀನ್ ನಡುವಿನ ಸಂಘರ್ಷ ಸುಮಾರು ನೂರು ವರ್ಷಗಳಿಂದ ನಡೆಯುತ್ತಿದೆ. ವೆಸ್ಟ್ ಬ್ಯಾಂಕ್, ಗಾಜಾ ಪಟ್ಟಿ ಮತ್ತು ಗೋಲನ್ ಹೈಟ್ಸ್ ಇನ್ನಿತರ ಪ್ರದೇಶಗಳ ಮೇಲಿನ ಹಕ್ಕಿನ ಬಗ್ಗೆ ಎರಡೂ ದೇಶಗಳ ನಡುವೆ ವಿವಾದ ಇದೆ. ಪೂರ್ವ ಜೆರುಸಲೆಮ್ ಸೇರಿ ಈ ಪ್ರದೇಶಗಳನ್ನು ಪ್ಯಾಲೆಸ್ತೀನ್ ತನ್ನದು ಎಂದು ಹೇಳಿಕೊಳ್ಳುತ್ತಿದೆ. ಆದರೆ ಇಸ್ರೇಲ್ ಜೆರುಸಲೆಮ್ ಮೇಲಿನ ಹಕ್ಕನ್ನು ಸಾಧಿಸುತ್ತಿದೆ.

    ಗಾಜಾ ಪಟ್ಟಿ ಎಂದರೇನು? : ಗಾಜಾ ಪಟ್ಟಿ ಇಸ್ರೇಲ್ ಮತ್ತು ಈಜಿಪ್ಟ್ ನಡುವೆ ಇದೆ. ಈ ಸ್ಥಳವು ಪ್ರಸ್ತುತ ಹಮಾಸ್ ಉಗ್ರರ ನಿಯಂತ್ರಣದಲ್ಲಿದೆ. ಹಮಾಸ್ ಎಂಬುದು ಇದು ಇಸ್ರೇಲ್ ವಿರೋಧಿ ಗುಂಪು. ಸೆಪ್ಟೆಂಬರ್ 2005 ರಲ್ಲಿ ಇಸ್ರೇಲ್, ಗಾಜಾ ಪಟ್ಟಿಯಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿತು. ನಂತರ ಈ ಪ್ರದೇಶದ ಮೇಲೆ ಹಲವಾರು ನಿರ್ಬಂಧಗಳನ್ನು ವಿಧಿಸಿತು. ವೆಸ್ಟ್ ಬ್ಯಾಂಕ್ ಮತ್ತು ಗಾಜಾ ಪಟ್ಟಿಯಲ್ಲಿ ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯವನ್ನು ಸ್ಥಾಪಿಸಬೇಕು ಎಂದು ಪ್ಯಾಲೆಸ್ತೀನ್ ಹೋರಾಟ ನಡೆಸುತ್ತಿದೆ. (ಏಜೆನ್ಸೀಸ್​)

    ಕೇವಲ 24 ಗಂಟೆಗಳಲ್ಲಿ 13ರ ಬಾಲಕ ಸೇರಿ 10 ಮಂದಿ ಹೃದಯಾಘಾತಕ್ಕೆ ಬಲಿ: ಗಾರ್ಬಾ ಸಂಭ್ರಮದ ವೇಳೆ ದುರಂತ

    ಕಪಿಲ್ ದೇವ್- ಸೈಯದ್ ಕಿರ್ಮಾನಿ ಜತೆಯಾಟದ ದಾಖಲೆ ಮುರಿದ ನೆದರ್ಲೆಂಡ್: ಲಂಕಾಗೆ ಮೊದಲ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts