More

    ಕೇವಲ 24 ಗಂಟೆಗಳಲ್ಲಿ 13ರ ಬಾಲಕ ಸೇರಿ 10 ಮಂದಿ ಹೃದಯಾಘಾತಕ್ಕೆ ಬಲಿ: ಗಾರ್ಬಾ ಸಂಭ್ರಮದ ವೇಳೆ ದುರಂತ

    ಅಹಮದಾಬಾದ್​: ಪ್ರಸ್ತುತ ದಿನಗಳಲ್ಲಿ ಹೃದಯಾಘಾತವು ಕೂಡ ಒಂದು ಟ್ರೆಂಡಿಂಗ್ ವಿಷಯವಾಗಿದೆ. ಈ ಹೃದಯಾಘಾತ ಯಾವಾಗ? ಯಾರಿಗೆ? ಹೇಗೆ? ಬರುತ್ತದೋ ಗೊತ್ತಿಲ್ಲ. ಆಟವಾಡುತ್ತಿರುವಾಗಲೇ ಕುಸಿದು ಬಿದ್ದು, ಆಸ್ಪತ್ರೆಗೆ ಬರುವಷ್ಟರಲ್ಲಿ ಹೃದಯಾಘಾತದಿಂದ ಸಾಯುವವರೂ ಇದ್ದಾರೆ. ನಿದ್ದೆ ಮಾಡುವಾಗ, ಟಿವಿ ನೋಡುವಾಗ ಹೃದಯಾಘಾತಗಳು ಸಂಭವಿಸುತ್ತಿವೆ. ದಿನಕ್ಕೆ ನಾಲ್ಕೈದು ಹೃದಯಾಘಾತದ ಸುದ್ದಿಗಳನ್ನು ಕೇಳುತ್ತಿದ್ದೇವೆ. ಅದರಲ್ಲೂ ಕರೊನಾ ನಂತರ ಹೃದಯಾಘಾತಗಳ ಸಂಖ್ಯೆ ಹೆಚ್ಚಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳವಳಕಾರಿ ವಿಚಾರ ಏನೆಂದರೆ, ಚಿಕ್ಕಮಕ್ಕಳು ಕೂಡ ಇದಕ್ಕೆ ಬಲಿಯಾಗುತ್ತಿದ್ದಾರೆ.

    ಇದೀಗ ಗುಜರಾತಿನಿಂದ ಆಘಾತಕಾರಿ ಸಂಗತಿಯೊಂದು ವರದಿಯಾಗಿದೆ. ಅದೇನೆಂದರೆ, ಕೇವಲ 24 ಗಂಟೆಗಳಲ್ಲಿ 10 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಅದು ಕೂಡ ನವರಾತ್ರಿ ಸಂಭ್ರಮದ ವೇಳೆ ಗಾರ್ಬಾ ನೃತ್ಯ ಮಾಡುವಾಗಲೇ ಈ ದುರಂತಗಳು ಸಂಭವಿಸಿದ್ದು, ನಿಜಕ್ಕೂ ಇದು ಪ್ರತಿಯೊಬ್ಬರು ಗಂಭೀರವಾಗಿ ಚಿಂತಿಸಬೇಕಾದ ವಿಷಯವಾಗಿದೆ.

    ಮೃತಪಟ್ಟವರಲ್ಲಿ ಎಲ್ಲರೂ ಹದಿಹರೆಯದ ಮತ್ತು ಮಧ್ಯ ವಯಸ್ಕರಾಗಿದ್ದಾರೆ. ಇದರಲ್ಲಿ ಬರೋಡಾದ ದಾಭೋಯ್​ ಮೂಲದ 13 ಬಾಲಕನು ಸಹ ಸೇರಿದ್ದಾನೆ. ಶುಕ್ರವಾರ (ಅ.20) ಅಹಮದಾಬಾದ್​ನಲ್ಲಿ 24 ವರ್ಷದ ವ್ಯಕ್ತಿಯೊಬ್ಬ ಗಾರ್ಬಾ ನೃತ್ಯ ಮಾಡುವಾಗ ಇದ್ದಕ್ಕಿದ್ದಂತೆ ಕುಸಿದು ಮೃತಪಟ್ಟನು. ಅದೇ ರೀತಿ ಕಾಪದ್ವಂಜ್ ಪ್ರದೇಶದಲ್ಲಿ 17 ವರ್ಷದ ಹುಡುಗನೊಬ್ಬ ಗಾರ್ಬಾ ನೃತ್ಯ ಮಾಡುವಾಗಲೇ ದಿಢೀರನೇ ಅಸುನೀಗಿದ್ದಾನೆ. ರಾಜ್ಯದಲ್ಲಿ ಕಳೆದೊಂದು ದಿನದಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ.

    ನವರಾತ್ರಿಯ ಮೊದಲ 6 ದಿನಗಳು ಹೃದಯ ಸಮಸ್ಯೆಗೆ ಸಂಬಂಧಿಸಿದ ಸುಮಾರು 521 ಕರೆಗಳು ಮತ್ತು ಉಸಿರಾಟದ ಸಮಸ್ಯೆಗೆ ಸಂಬಂಧಿಸಿದಂತೆ ಹೆಚ್ಚುವರಿಯಾಗಿ 609 ಕರೆಗಳನ್ನು 108 ಎಮರ್ಜೆನ್ಸಿ ಆಂಬ್ಯುಲೆನ್ಸ್​ ಸೇವೆ ಸ್ವೀಕರಿಸಿದೆ. ಈ ಕರೆಗಳು ಸಂಜೆ 6 ಗಂಟೆಯಿಂದ ತಡರಾತ್ರಿ 2 ಗಂಟೆಯವರೆಗೂ ಗಾರ್ಬಾ ಸಂಭ್ರಮ ನಡೆಯುವ ಸ್ಥಳಗಳಿಂದಲೇ ಬಂದಿವೆ.

    ಈ ಒಂದು ಆಘಾತಕಾರಿ ಬೆಳವಣಿಗೆ ಸ್ಥಳೀಯ ಸರ್ಕಾರ ಮತ್ತು ಕಾರ್ಯಕ್ರಮ ಆಯೋಜಕರು ಕ್ರಮ ಕೈಗೊಳ್ಳಲು ಪ್ರೇರೇಪಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾಗಿರುವ ಸರ್ಕಾರ, ಗಾರ್ಬಾ ಸಂಭ್ರಮ ನಡೆಯುವ ಸ್ಥಳಗಳಿಂದ ಹತ್ತಿರದಲ್ಲಿರುವ ಎಲ್ಲ ಸರ್ಕಾರ ಆಸ್ಪತ್ರೆಗಳಿಗೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಹೈ ಅಲರ್ಟ್​ ನೀಡಿದೆ. ಹೃದಯ ಸಂಬಂಧಿತ ಮತ್ತು ಉಸಿರಾಟದ ಸಮಸ್ಯೆಯಿಂದ ಯಾರೇ ಬಂದರೂ ತಕ್ಷಣ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದೆ.

    ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್‌ಗಳು ತ್ವರಿತವಾಗಿ ಕಾರ್ಯಕ್ರಮ ಸ್ಥಳಗಳನ್ನು ಪ್ರವೇಶಿಸಲು ಕಾರಿಡಾರ್‌ಗಳನ್ನು ರಚಿಸಲು ಗಾರ್ಬಾ ಸಂಘಟಕರಿಗೆ ಸರ್ಕಾರ ಸೂಚನೆ ನೀಡಿದೆ. ಇದಲ್ಲದೆ, ಗಾರ್ಬಾ ಸಂಘಟಕರು ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ವೈದ್ಯರು ಮತ್ತು ಆಂಬ್ಯುಲೆನ್ಸ್‌ಗಳನ್ನು ನಿಲ್ಲಿಸುವ ಮೂಲಕ ಭಾಗವಹಿಸುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಂಡಿದ್ದಾರೆ. ತಮ್ಮ ಸಿಬ್ಬಂದಿಗೆ ಸಿಪಿಆರ್ ತರಬೇತಿ ನೀಡಲು ಮತ್ತು ಭಾಗವಹಿಸುವವರಿಗೆ ಸಾಕಷ್ಟು ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಲಹೆ ನೀಡಲಾಗಿದೆ.

    ಈ ವರ್ಷ ನವರಾತ್ರಿ ಉತ್ಸವಕ್ಕೂ ಮುನ್ನ ಗುಜರಾತ್‌ನಲ್ಲಿ ಗರ್ಬಾ ಅಭ್ಯಾಸ ಮಾಡುವಾಗ ಮೂವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ನಿಜಕ್ಕೂ ಈ ಒಂದು ಬೆಳವಣಿಗೆ ಕಳವಳಕಾರಿಯಾಗಿದ್ದು, ಸರ್ಕಾರ ಹಠಾತ್​ ಹೃದಯಾಘಾತಗಳಿಗೆ ಮೂಲ ಕಾರಣ ಏನೆಂಬುದನ್ನು ಪತ್ತೆಹಚ್ಚಿ, ಜನರಿಗೆ ಅರಿವು ಮೂಡಿಸುವ ಕೆಲಸವನ್ನು ತಕ್ಷಣ ಮಾಡಬೇಕಿದೆ. (ಏಜೆನ್ಸೀಸ್​)

    Heart Attacks: ಮಕ್ಕಳಲ್ಲಿ ಹೃದಯ ವೈಫಲ್ಯಕ್ಕೆ ಕಾರಣವೇನು? ಹೃದಯಾಘಾತವಾದಾಗ ಏನು ಮಾಡಬೇಕು?

    ಭಾರತ ವಿರೋಧಿ 17 ಉಗ್ರರು ಅಪರಿಚಿತರ ಗುಂಡಿಗೆ ಬಲಿ

    ಗಗನಯಾನ ಮಾಡ್ಯೂಲ್ ಯಶಸ್ವಿ; ಆರಂಭಿಕ ಅಡ್ಡಿ ನಿವಾರಣೆ ನಂತರ ನಭೋಮಂಡಲ ತಲುಪಿದ ಟೆಸ್ಟ್ ವೆಹಿಕಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts