More

    ಐಎಸ್‌ಪಿಆರ್‌ಎಲ್ ಗುತ್ತಿಗೆ ಸಂಸ್ಥೆಯಿಂದ ವೇತನ ಗೊಂದಲ

    – ಗೋಪಾಲಕೃಷ್ಣ ಪಾದೂರು ಉಡುಪಿ

    ಪೆಟ್ರೋಲಿಯಂ ಸಚಿವಾಲಯ ಅಧೀನದ ಪಾದೂರು ಕಚ್ಚಾತೈಲ ಸಂಗ್ರಹಾಗಾರದಲ್ಲಿ ದೈನಂದಿನ ನಿರ್ವಹಣೆ ಗುತ್ತಿಗೆ ಪಡೆದಿರುವ ಕಂಪನಿ ಐಎಸ್‌ಪಿಆರ್‌ಎಲ್ ಜೊತೆಗಿನ ಮೂಲ ಒಪ್ಪಂದದಲ್ಲಿ ನಮೂದಿಸಿದ ಸಂಬಳವನ್ನು ಉದ್ಯೋಗಿಗಳಿಗೆ ನೀಡಿಲ್ಲ ಎನ್ನುವ ಕುರಿತು ಪ್ರಧಾನಿ ಕಚೇರಿಗೆ ದೂರು ಸಲ್ಲಿಕೆಯಾಗಿದ್ದು, ತನಿಖೆಗೆ ಆದೇಶವಾಗಿದೆ.

    ಐಎಸ್‌ಪಿಆರ್‌ಎಲ್ ಘಟಕದಲ್ಲಿ ವಿವಿಧ ವಿಭಾಗಗಳ ನಿರ್ವಹಣೆಗಾಗಿ 67 ಸಿಬ್ಬಂದಿ ಪೂರೈಸಲು 2018ರಲ್ಲಿ ಗುಜರಾತ್‌ನ ಗುತ್ತಿಗೆ ಕಂಪನಿಯೊಂದರ ಜೊತೆ ಒಪ್ಪಂದ ಮಾಡಿಕೊಂಡಿದೆ. ಟೆಂಡರ್ ಬಿಡ್‌ನಲ್ಲಿ ಉದ್ಯೋಗಿಗಳಿಗೆ ನಿರ್ದಿಷ್ಟ ವಿದ್ಯಾರ್ಹತೆ, ಅನುಭವ ಹಾಗೂ ಸಂಬಳವನ್ನೂ ನಮೂದಿಸಲಾಗಿದೆ. ಐಎಸ್‌ಪಿಆರ್‌ಎಲ್ ಗುತ್ತಿಗೆದಾರ ಕಂಪನಿಗೆ ತೆರಿಗೆ ಒಳಗೊಂಡಂತೆ 24 ತಿಂಗಳ ಅವಧಿಗೆ 16,56,72,000 ರೂ.ಮೊತ್ತ ನಿಗದಿಪಡಿಸಿದೆ. ಕಂಪನಿ 2019 ಜನವರಿಯಿಂದ ನಿರ್ವಹಣೆ ಪ್ರಾರಂಭಿಸಿದ್ದು, ಪೂರ್ಣಪ್ರಮಾಣದಲ್ಲಿ ಸಿಬ್ಬಂದಿ ನೇಮಕವನ್ನೂ ಮಾಡಿಕೊಳ್ಳದೆ ಬಿಡ್‌ನಲ್ಲಿ ದಾಖಲಿಸಿರುವ ಸಿಟಿಸಿ(ಕಾಸ್ಟ್ ಟು ಕಂಪನಿ) ನಿಯಮ ಉಲ್ಲಂಘಿಸಿದೆ ಎನ್ನುವುದು ಉದ್ಯೋಗಿಗಳ ಆರೋಪ.
    ಗುತ್ತಿಗೆ ಕಂಪನಿ ಪ್ರತಿ ತಿಂಗಳು ಉದ್ಯೋಗಿಗಳ ಪಿಎಫ್ ಹಣ ಜಮೆ ಮಾಡಿದ ಬಗ್ಗೆ ಮತ್ತು ಸಿಟಿಸಿ ಕೊಡುತ್ತಿರುವ ಬಗ್ಗೆ ದಾಖಲೆ ಸಲ್ಲಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.

    ಅದರೆ ಐಎಸ್‌ಪಿಆರ್‌ಎಲ್ ಜೊತೆ ಮಾಡಿಕೊಂಡ ಒಪ್ಪಂದದಲ್ಲಿ ನಮೂದಿಸಿರುವ ವೇತನವನ್ನು ಸಿಬ್ಬಂದಿಗೆ ನೀಡಲಾಗುತ್ತಿಲ್ಲ. ಉದಾಹರಣೆಗೆ, ಒಪ್ಪಂದದಲ್ಲಿ ಇಲೆಕ್ಟ್ರಿಕಲ್ ಟೆಕ್ನೀಶಿಯನ್ ಹುದ್ದೆಗೆ 85,000 ರೂ.ವೇತನ ನಿಗದಿಪಡಿಸಲಾಗಿದ್ದು, ಗುತ್ತಿಗೆ ಕಂಪನಿ ನೀಡುತ್ತಿರುವುದು 34,658 ರೂ. ಹೀಗೆ ಯಾವ ಸಿಬ್ಬಂದಿಗೂ ಒಪ್ಪಂದದಲ್ಲಿ ಸೂಚಿಸಿರುವ ವೇತನ ನೀಡಿಲ್ಲ. ಆರಂಭದ ಹಂತದಲ್ಲಿ ಯಾರಿಗೂ ನೇಮಕಾತಿ ಪತ್ರವನ್ನೂ ನೀಡಿರಲಿಲ್ಲ. ಆದರೆ ಈ ಸಿಟಿಸಿ ಗೊಂದಲ ಆರಂಭಗೊಂಡಂತೆ ಕೆಲವರಿಗೆ ನೇಮಕಾತಿ ಪತ್ರಿ ನೀಡಲಾಗಿದೆ ಎಂದು ಉದ್ಯೋಗಿಗಳು ದೂರಿದ್ದಾರೆ. ಈ ಮಧ್ಯೆ, ವೇತನದ ಬಗ್ಗೆ ಕೆಲ ನೌಕರರು ಕೇಂದ್ರ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದು, ಇನ್ನಷ್ಟೇ ವಿಚಾರಣೆ ನಡೆಯಬೇಕಿದೆ.

    ಕಡತ ವರ್ಗಾವಣೆ: ಕಂಪನಿ ವಂಚನೆ ಬಗ್ಗೆ ಸ್ಥಳೀಯ ರಾಜೇಶ್ ಎಂಬವರು ಇ-ಜನಸ್ಪಂದನ ಮೂಲಕ ಪ್ರಧಾನಿ ಕಚೇರಿಗೆ ದೂರು ಸಲ್ಲಿಸಿದ್ದರು. ಅರ್ಜಿ ಬಗ್ಗೆ ಪರಿಶೀಲನೆ ನಡೆಸಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಂಡು ವಾರದೊಳಗೆ ವರದಿ ನೀಡಬೇಕು. ಇದನ್ನು ಇ-ಜನಸ್ಪಂದನ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಹೀಗಾಗಿ ಜರೂರು ಎಂದು ಪರಿಗಣಿಸಬೇಕಾಗಿ ನ.18ರಂದು ಜಿಲ್ಲಾಧಿಕಾರಿ ಕಚೇರಿಯಿಂದ ಕಾಪು ತಹಸೀಲ್ದಾರ್‌ಗೆ ಸೂಚನೆ ನೀಡಲಾಗಿದೆ. ಅದರಂತೆ ಕಂದಾಯ ನಿರೀಕ್ಷಕರು ಡಿ.9ರಂದು ಕಾಪು ತಹಸೀಲ್ದಾರ್‌ಗೆ ಸಲ್ಲಿಸಿದ ವರದಿಯಲ್ಲಿ ಈ ಪ್ರಕರಣ ಕಾರ್ಮಿಕ ಇಲಾಖೆ, ಕೇಂದ್ರ ಪೆಟ್ರೋಲಿಯಂ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ಸಂಬಂಧಪಟ್ಟ ಇಲಾಖೆಗೆ ಕಡತ ವರ್ಗಾಯಿಸಬಹುದು ಎಂದು ಷರಾ ಹಾಕಿ ಹಿಂತಿರುಗಿಸಿದ್ದಾರೆ.

    ಗುತ್ತಿಗೆ ಅಧಾರದಲ್ಲೇ ಜಾಸ್ತಿ: ಪಾದೂರು ಕಚ್ಚಾತೈಲ ಸಂಗ್ರಹಾಗಾರದಲ್ಲಿ ಪೆಟ್ರೋಲಿಯಂ ಇಲಾಖೆಯ ಇಬ್ಬರು ಅಧಿಕಾರಿಗಳು ಪ್ರಭಾರ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಎಲ್ಲ ಉದ್ಯೋಗಿಗಳನ್ನೂ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. ಆದರೆ, ಅಲ್ಲಿಯೂ ಸ್ಥಳೀಯರಿಗೆ ಸಿಕ್ಕಿರುವ ಅವಕಾಶ ಬಹಳ ಕಡಿಮೆ.

    ಹೊಸ ಬಿಡ್‌ನಲ್ಲಿ ಸಿಟಿಸಿ ರದ್ದು: ಈಗಿನ ಗುತ್ತಿಗೆ ಡಿಸೆಂಬರ್ ಅಂತ್ಯಕ್ಕೆ ಕೊನೆಗೊಂಡಿದೆ. 2021-2022ನೇ ಸಾಲಿಗೆ ಹೊಸ ಗುತ್ತಿಗೆ ನೀಡಲು ಆನ್‌ಲೈನ್ ಮೂಲಕ ಐಎಸ್‌ಪಿಆರ್‌ಎಲ್ ಟೆಂಡರ್ ಪ್ರಕಟಿಸಿದೆ. ಸಿಟಿಸಿ ಗೊಂದಲ ಅರಿವಾಗುತ್ತಿದ್ದಂತೆ ಹೊಸ ಬಿಡ್ ಮಾರ್ಗಸೂಚಿಯಲ್ಲಿ ಸಿಟಿಸಿ ಪದವನ್ನೇ ಕೈ ಬಿಡಲಾಗಿದೆ. ‘ಒಟ್ಟು ಮೊತ್ತ ಪಾವತಿಸಲಾಗುವುದು. ಉದ್ಯೋಗಿಗಳಿಗೆ ಸರ್ಕಾರದ ಕಾನೂನಿದನ್ವಯ ಸಂಬಳ ನೀಡಬಹುದು’ ಎಂದು ಉಲ್ಲೇಖಿಸಲಾಗಿದೆ.

    ನೌಕರರಲ್ಲಿ ಗೊಂದಲಕ್ಕೆ ಕಾರಣವಾಗಿರುವುದರಿಂದ ಈ ಬಾರಿ ಬಿಡ್‌ನಲ್ಲಿ ಸಿಟಿಸಿ ನಮೂದಿಸಿಲ್ಲ. ನೌಕರರಿಗೆ ಎಷ್ಟು ಸಂಬಳ ನೀಡಬೇಕು ಎಂಬುದನ್ನು ಗುತ್ತಿಗೆ ಪಡೆದ ಕಂಪನಿ ತೀರ್ಮಾನಿಸಲಿದೆ.
    – ಸುನೀಲ್ ಕುಮಾರ್, ಐಎಸ್‌ಪಿಆರ್‌ಎಲ್ ಹಿರಿಯ ಅಧಿಕಾರಿ

    ಸೂಕ್ಷ್ಮವ್ಯವಸ್ಥೆ ಹೊಂದಿರುವ ಪಾದೂರು ಐಎಸ್‌ಪಿಆರ್‌ಎಲ್ ಘಟಕದಲ್ಲಿ ನಿರ್ದಿಷ್ಟ ವಿದ್ಯಾರ್ಹತೆ, ಅನುಭವ ಇಲ್ಲದ ಉದ್ಯೋಗಿಗಳನ್ನು ಭರ್ತಿ ಮಾಡಿಕೊಂಡರೆ, ಅಸಮರ್ಪಕ ನಿರ್ವಹಣೆಯಿಂದ ಪರಿಸರ ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ಹಾನಿ ಆಗಬಹುದು. ಹೀಗಾಗಿ ಬಿಡ್‌ನಲ್ಲಿ ದಾಖಲಿಸಿರುವ ಎಲ್ಲ ಅಂಶಗಳನ್ನು ಪಾಲಿಸುವುದು ಗುತ್ತಿಗೆದಾರ ಕಂಪನಿಯ ಜವಾಬ್ದಾರಿ. ಮಾಜಿ ಉದ್ಯೋಗಿಗಳು ಕಂಪನಿ ವೇತನ ತಾರತಮ್ಯ ಬಗ್ಗೆ ಧ್ವನಿ ಎತ್ತಿರುವುದರಿಂದ ಹೊಸ ಗುತ್ತಿಗೆ ಬಿಡ್‌ನಲ್ಲಿ ಸಿಟಿಸಿ ಕಾಲಂ ರದ್ದು ಮಾಡಿದ್ದಾರೆ.
    – ರಾಜೇಶ್, ದೂರುದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts