More

  ಕೆಪಿಸಿಸಿ ಅಧ್ಯಕ್ಷಗಿರಿಗೆ ಖಂಡ್ರೆ ಹೆಸರು?- ಮೂಲ ಮತ್ತು ವಲಸಿಗ ಕಾಂಗ್ರೆಸಿಗರಿಗೆ ಒಮ್ಮತದ ನಾಯಕ | ವೀರಶೈವ-ಲಿಂಗಾಯತ ಸಮುದಾಯಕ್ಕೆ ಆದ್ಯತೆ

  ಕಲಬುರಗಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕಲ್ಯಾಣ ಕರ್ನಾಟಕಕ್ಕೆ ಒಲಿಯುವ ಸಾಧ್ಯತೆ ಗೋಚರಿಸುತ್ತಿದೆ. ಭಾಲ್ಕಿ ಶಾಸಕರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಬಡ್ತಿ ಸಿಗುವ ನಿರೀಕ್ಷೆ ಇದೆ. ಒಂದೆರಡು ದಿನಗಳಲ್ಲಿ ಅಧ್ಯಕ್ಷರ ಹೆಸರು ಪ್ರಕಟವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

  ಕಳೆದ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಯ 13 ಕ್ಷೇತ್ರಗಳಿಗೆ ನಡೆದ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ನಂತರ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದರಿಂದ ವರಿಷ್ಠರು ಹೊಸ ನೇಮಕ ಮಾಡಬೇಕಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸೇರಿ ಕೆಲವರು ಲಾಬಿ ನಡೆಸಿದ್ದಾರೆ. ಆದರೆ ಪಕ್ಷ ಮತ್ತು ಸಂಘಟನೆ ಹಿತದೃಷ್ಟಿಯಿಂದ ಈಶ್ವರ ಖಂಡ್ರೆ ಅವರನ್ನು ನೇಮಿಸುವುದು ಸೂಕ್ತ ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ.

  ಮೂಲ ಕಾಂಗ್ರೆಸಿಗರು ಮತ್ತು ವಲಸಿಗರು, ಎಲ್ಲ ಜಾತಿ ಜನಾಂಗದವರನ್ನು ಒಗ್ಗೂಡಿಸುವಂಥ ನಾಯಕ ಕೆಪಿಸಿಸಿ ಅಧ್ಯಕ್ಷರಾಗಬೇಕು ಎಂಬ ಹೈಕಮಾಂಡ್ ಬಯಕೆಗೆ ಈಶ್ವರ ಖಂಡ್ರೆ ಸೂಕ್ತ ಎಂದು ಗುರುತಿಸಲಾಗುತ್ತಿದೆ. ಸದ್ಯದ ಮಟ್ಟಿಗೆ ಮೂಲ ಕಾಂಗ್ರೆಸಿಗರು ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ವಲಸೆ ಬಂದಿರುವವರನ್ನು ಸಮನ್ವಯತೆಯಿಂದ ಕೊಂಡೊಯ್ಯುವಂಥ ಪ್ರಶ್ನಾತೀತ ನಾಯಕ ಎಂದರೆ ಈಶ್ವರ ಖಂಡ್ರೆ ಎಂದೇ ಹೇಳಲಾಗುತ್ತಿದೆ.

  ಈ ಮಧ್ಯೆ ಈಗಾಗಲೇ ವರಿಷ್ಠರು ಸಿದ್ದರಾಮಯ್ಯ ಅವರನ್ನು ದಿಲ್ಲಿಗೆ ಕರೆಸಿದ್ದು, ಕೆಪಿಸಿಸಿ ಅಧ್ಯಕ್ಷಗಿರಿ ಸೇರಿ ಅನೇಕ ವಿಷಯಗಳ ಬಗ್ಗೆ ಚಚರ್ೆ ನಡೆಸಿದ್ದಾರೆ. ಖಂಡ್ರೆ ಅವರದ್ದು ಕಾಂಗ್ರೆಸ್ ನಿಷ್ಠ ಮನೆತನ. ಮಾಜಿ ಸಚಿವ ಭೀಮಣ್ಣ ಖಂಡ್ರೆ ಮತ್ತು ದಿ.ವಿಜಯಕುಮಾರ ಖಂಡ್ರೆ ಅವರು ಕಾಂಗ್ರೆಸ್ನಿಂದಲೇ ಶಾಸಕ, ಮಂತ್ರಿ ಆಗಿದ್ದರು. ತಂದೆ ಗರಡಿಯಲ್ಲಿ ಪಳಗಿರುವ ಈಶ್ವರ ಖಂಡ್ರೆ ಅವರೂ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿ ಆಗಿದ್ದರು.

  ಅಧಿಕಾರ ಇರಲಿ, ಇಲ್ಲದಿರಲಿ, ಖಂಡ್ರೆ ಪಕ್ಷನಿಷ್ಠರಾಗಿ ಕೆಲಸ ಮಾಡುತ್ತಿದ್ದಾರೆ. ಅಂತೆಯೇ ಭಾಲ್ಕಿ ಕ್ಷೇತ್ರದ ಜನತೆ ಖಂಡ್ರೆ ಮನೆತನದ ಕೈ ಬಿಟ್ಟಿಲ್ಲ ಎನ್ನುವುದೂ ಅಷ್ಟೇ ಸತ್ಯ. ಉತ್ತಮ ವಾಗ್ಮಿಯಾಗಿರುವ ಈಶ್ವರ ಖಂಡ್ರೆ ಅವರಲ್ಲಿ ಸಂಘಟನಾ ಚತುರತೆ, ಸಾಮಥ್ರ್ಯ ಇದೆ. ಕಳೆದ ಲೋಕಸಭಾ ಚುನಾವಣೆ ವೇಳೆ 200ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಬಂದಿದ್ದಾರೆ. ಅಲ್ಲದೆ ವೀರಶೈವ-ಲಿಂಗಾಯತ ಸಮುದಾಯದ ಪ್ರಬಲ ನಾಯಕತ್ವದ ಗುಣಗಳೂ ಅವರಲ್ಲಿವೆ. ಅಂತೆಯೇ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರೆ ಈ ಸಮುದಾಯದವರು ಕಾಂಗ್ರೆಸ್ ಕಡೆ ತಮ್ಮ ಒಲವು ಬದಲಿಸಬಹುದು ಎಂಬ ಲೆಕ್ಕಾಚಾರ ನಡೆದಿದೆ.
  ಕಳೆದ ಲೋಕಸಭೆ ಮತ್ತು ನಂತರ ನಡೆದ ವಿಧಾನಸಭೆ ಮರು ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ಗೆ ಚೈತನ್ಯ ತುಂಬುವ ಸಂಜೀವಿನಿ ಬೇಕಿದೆ. ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಇರುವ ನಾಯಕನಿಗೆ ಕೆಪಿಸಿಸಿ ಸಾರಥ್ಯ ನೀಡಬೇಕಿದೆ. ಈಶ್ವರ ಖಂಡ್ರೆ ಅವರಲ್ಲಿ ಈ ಶಕ್ತಿ ಇದೆ ಎನ್ನುತ್ತಾರೆ ಪ್ರಮುಖರು. ಸದ್ಯಕ್ಕೆ ಚೆಂಡು ಹೈಕಮಾಂಡ್ ಅಂಗಳದಲ್ಲಿದೆ. ಎಲ್ಲದ್ದಕ್ಕೂ ಕಾದು ನೋಡಲಾಗುತ್ತಿದೆ.

  ಕಾಂಗ್ರೆಸ್​ನಲ್ಲಿ ಯಾವುದೇ ಜವಾಬ್ದಾರಿ ಕೊಟ್ಟರೂ ಹೊರಲು ಸಿದ್ಧ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಆದರೆ ಯಾವುದೇ ಹುದ್ದೆಯನ್ನು ನಾನಾಗಿಯೇ ಕೇಳುವುದಿಲ್ಲ. ಪಕ್ಷದ ಅಧ್ಯಕ್ಷಗಿರಿ ಸಿಕ್ಕರೆ ಕೆಲಸ ಮಾಡುತ್ತೇನೆ.
  | ಈಶ್ವರ ಖಂಡ್ರೆ ಕಾರ್ಯಾಧ್ಯಕ್ಷ ಕೆಪಿಸಿಸಿ, ಶಾಸಕ ಭಾಲ್ಕಿ


  ವಾದಿರಾಜ ವ್ಯಾಸಮುದ್ರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts