ಬೆಂಗಳೂರು: ಪ್ರತಿನಿತ್ಯ ಇಷ್ಟಲಿಂಗ ಪೂಜೆ ಮಾಡುವುದರಿಂದ ಸರ್ವ ಸಂಕಷ್ಟಗಳು ನಿವಾರಣೆಯಾಗಿ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಉಜ್ಜಯಿನಿ ಜಗದ್ಗುರು ಶ್ರೀಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಸವನಗುಡಿಯ ನಿಜಗುಣ ಕಲ್ಯಾಣಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀಉಜ್ಜಯಿನಿ ಜಗದ್ಗುರುಗಳ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮಜಾಗೃತಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, “ಇಷ್ಟಲಿಂಗಂ ಇದಂ ಸಾಕ್ಷಾತ್ ಅನಿಷ್ಟ ಪರಿಹಾರಕಂ” ಎಂಬ ಉಕ್ತಿಗನುಸಾರವಾಗಿ ಇಷ್ಟಲಿಂಗದಲ್ಲಿ ನಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ಇದೆ. ಅದನ್ನು ಯಾವಾಗಲೂ ದೇಹದ ಮೇಲೆ ಧರಿಸಿ ಪ್ರತಿದಿನ ಪೂಜಿಸಬೇಕು ಎಂದು ಹೇಳಿದರು.
ಜಗತ್ತಿನಲ್ಲಿ ಹತ್ತು ಹಲವು ಧರ್ಮಗಳಿವೆ. ವಿವಿಧ ಪರಂಪರೆ ಸಂಪ್ರದಾಯಗಳಿವೆ. ಆದರೆ ನಾವು ಪೂಜಿಸುವ ದೇವರನ್ನು ದೇಹದಲ್ಲೇ ಧರಿಸಿಕೊಂಡು ಸದಾ ನಮ್ಮೊಂದಿಗೆ ಇರಿಸಿಕೊಳ್ಳಲು ಸಾಧ್ಯವಿರುವುದು ಕೇವಲ ವೀರಶೈವ ಲಿಂಗಾಯತರಿಗೆ ಮಾತ್ರ. ಆ ಕಾರಣದಿಂದಲೇ ದೇಹವನ್ನು ದೇವಾಲಯ ಎಂದು ಶರಣರು ವರ್ಣಿಸಿದ್ದಾರೆ. ದೇವರನ್ನು ಹೊತ್ತು ತಿರುಗುವ ಜೀವಿ ಸಾಕ್ಷಾತ್ ಶಿವನಾಗಲು ಸಾಧ್ಯ ಎಂಬುದನ್ನು ವೀರಶೈವ ಆಚಾರ್ಯರು ತಮ್ಮ ಸಿದ್ಧಾಂತದಲ್ಲಿ ಬೋಧಿಸಿದ್ದು, ಆ ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತವು ಜಗತ್ತಿನ ಪ್ರಾಚೀನ ಸಿದ್ಧಾಂತಗಳಲ್ಲಿ ಒಂದಾಗಿದೆ ಎಂದು ಜಗದ್ಗುರುಗಳು ವಿವರಿಸಿದರು.
ರಾಜಾಪುರದ ಶ್ರೀಪಟ್ಟದ ರಾಜೇಶ್ವರ ಶಿವಾಚಾರ್ಯ ಸ್ವಾಮಿಗಳು, ನಾಗಲಾಪುರದ ಶ್ರೀಪಟ್ಟದ ತೇಜೇಶಲಿಂಗ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದ ಸಮಾರಂಭವನ್ನು ವಸತಿ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಾಸಕ ರವಿಸುಬ್ರಹ್ಮಣ್ಯ, ಬಿ.ಎಸ್.ಪರಮಶಿವಯ್ಯ, ಷಡಕ್ಷರಿ ಶಾಸ್ತ್ರಿಗಳು, ಮೋಹನ್ ಚಂದ್ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ತಪ್ಪಾಗಿ ಬರೆದು ಸರ್ಕಾರಿ ಆದೇಶ; ಸಂಬಂಧಿತರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ..
ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್