ಧರ್ಮ ಸಂಸ್ಕೃತಿ ಬೆಳವಣಿಗೆಗೆ ಸದಾ ಸಿದ್ಧ

ಕಲಬುರಗಿ: ವಿಶ್ವ ಬಂಧುತ್ವ, ಸಾಮರಸ್ಯ ಬೋಧಿಸಿದ ವೀರಶೈವ ಧರ್ಮ ಸಂಸ್ಕೃತಿ ಪುನರುತ್ಥಾನ ಮತ್ತು ಬೆಳವಣಿಗೆಗಾಗಿ ಈ ಜೀವ ಯಾವಾಗಲೂ ಮುಡಿಪಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ತೆಲಂಗಾಣದ ಕೋಲನಪಾಕ (ಕೊಲ್ಲಿಪಾಕಿ) ಸ್ವಯಂಭು ಶ್ರೀ ಸೋಮೇಶ್ವರ ಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ತಮ್ಮ ೬೮ನೇ ಜನ್ಮ ದಿನೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸದಾ ಸರ್ವರ ಹಿತ ಬಯಸಿದ ಜಗದ್ಗುರು ರೇಣುಕಾಚಾರ್ಯರು ಅವತರಿಸಿದ ಪುಣ್ಯ ತಾಣ ಇದು. ಧರ್ಮ ಸೂರ್ಯರಾದ ಅವರು ಸರ್ವ ಸಮುದಾಯದ ಉನ್ನತಿ ಮತ್ತು ಶ್ರೇಯೋಭಿವೃದ್ಧಿಗಾಗಿ ಸದಾ ಶ್ರಮಿಸಿದ್ದನ್ನು ಎಂದಿಗೂ ಮರೆಯಲಾಗದು ಎಂದರು.

ರೇಣುಕಾಚಾರ್ಯರ ದೂರದೃಷ್ಟಿ ಮತ್ತು ಭಾವೈಕ್ಯ ವಿಚಾರ ಧಾರೆಗಳು ಮಾನವ ಕುಲಕೋಟಿಗೆ ದಾರಿ ದೀಪವಾಗಿವೆ. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರೈ ದೊಡ್ಡದೆಂದು ಸಾರಿದ ಕೀರ್ತಿ ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು.

ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆಯಬೇಕೆಂಬ ಸಂಕಲ್ಪ ನಮ್ಮದು. ಶಿಥಿಲಗೊಂಡ ಸ್ವಯಂಭು ಶ್ರೀ ಸೋಮೇಶ್ವರ ದೇವಾಲಯದ ಮರು ನಿರ್ಮಾಣ ಮತ್ತು ಯಾತ್ರಿಕರಿಗೆ ವಸತಿ ಸಂಕೀರ್ಣ ನಿರ್ಮಿಸಿ ಅನುಕೂಲವಾಗುವಂಥ ಇನ್ನಷ್ಟು ಪ್ರಗತಿಪರ ಕೆಲಸ ಮಾಡುವ ಸಂಕಲ್ಪ ಕೈಗೊಂಡಿದ್ದೇವೆ. ಎಲ್ಲರೂ ಸಹಕರಿಸಿ ಈ ಕಾರ್ಯ ಮಾಡಿದರೆ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿದರು.

ಚಂದ್ರಜ್ಞಾನಾಗಮ ತೆಲುಗು ಕೃತಿಯನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜ ಬಿಡುಗಡೆ ಮಾಡಿ, ಅತ್ಯಂತ ಪ್ರಾಚೀನ ಕ್ಷೇತ್ರ ಇದಾಗಿದೆ. ಸ್ವಯಂಭು ಶ್ರೀ ಸೋಮೇಶ್ವರ ಮತ್ತು ಚಂಡಿಕಾಂಬಾ ಅಮ್ಮನವರ ಶಕ್ತಿ ಸಾಮರ್ಥ್ಯ ಅಮೂಲ್ಯವಾದುದು. ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಈ ಕ್ಷೇತ್ರ ಸಂಪೂರ್ಣ ಅಭಿವೃದ್ಧಿ ಆಗಬೇಕೆಂಬುದು ನಮ್ಮೆಲ್ಲರ ನಿಲುವು. ನಮ್ಮಿಂದ ಮತ್ತು ಸರ್ಕಾರದಿಂದ ವಿಶೇಷ ಸಂಪನ್ಮೂಲ ದೊರಕಿಸಿಕೊಡಲು ತೆಲಂಗಾಣ ಸರ್ಕಾರ ಮುಂದಾಗಬೇಕು. ನಮ್ಮ ಸರ್ಕಾರವೂ ಸಹಕಾರ ನೀಡಲಿದೆ ಎಂದರು.

ಆಲೇರು ಶಾಸಕ ಬಿರ್ಲಾ ಐಲಯ್ಯ ಮತ್ತು ಭುವನಗಿರಿ ಶಾಸಕ ಅಮಿತಕುಮಾರ ರೆಡ್ಡಿ ಮಾತನಾಡಿದರು.

ಮೇಹಕರ ಹಿರೇಮಠದ ಶ್ರೀ ರಾಜೇಶ್ವರ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿ, ಹೊಸ ವರ್ಷದಲ್ಲಿ ನಿರ್ಮಾಣಗೊಳ್ಳುತ್ತಿರುವ ಯಾತ್ರಿ ನಿವಾಸದ ಉದ್ಘಾಟನೆ ಮಾಡುವುದಾಗಿ ತಿಳಿಸಿದರು.

ಎಮ್ಮಿಗನೂರಿನ ಶ್ರೀ ವಾಮದೇವ ಮಹಂತ ಶಿವಾಚಾರ್ಯರು ಮಾತನಾಡಿ, ಕೋಲನಪಾಕ ಕ್ಷೇತ್ರದ ಅಭಿವೃದ್ಧಿಗಾಗಿ ರಂಭಾಪುರಿ ಜಗದ್ಗುರುಗಳು ಶ್ರಮಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಶಿವಾವದ್ವೈತ ಸಿದ್ಧಾಂತದ ಅರಿವು ಆದಾಗಲೇ ಮಾನವ ಜೀವನ ಸಾರ್ಥಕಗೊಳ್ಳಲಿದೆ ಎಂದರು.

ಸಿದ್ಧರಬೆಟ್ಟ ವೀರಭದ್ರ ಶ್ರೀ ಹಾಗೂ ಅಮ್ಮಿನಭಾವಿ ಅಭಿನವ ಶಾಂತಲಿಂಗ ಶ್ರೀಗಳು ನುಡಿ ನಮನ ಸಲ್ಲಿಸಿದರು. ಮಾಜಿ ಸಂಸದ ಮಂಜುನಾಥ ಕುನ್ನೂರ, ಪ್ರಮುಖರಾದ ಶಿವಶರಣಪ್ಪ ಸೀರಿ, ಗುರುಪಾದಪ್ಪ ಕಿಣಗಿ, ಅಮೃತಪ್ಪ ಮಲಕಪ್ಪ ಗೌಡ, ದಯಾನಂದ ಶೀಲವಂತ, ಎಸ್.ಬಿ.ಹಿರೇಮಠ, ಪೀಠದ ಕಲಬುರಗಿ ಜಿಲ್ಲಾ ವಕ್ತಾರ ಸಿದ್ರಾಮಪ್ಪ ಆಲಗೂಡಕರ್, ೪೫ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು.

ಎA. ವೀರಮಲ್ಲೇಶ ಹಾಗೂ ಅಣ್ಣಾರಾವ ಬಿರಾದಾರ ಅವರು ರಂಭಾಪುರಿ ಜಗದ್ಗುರುಗಳಿಗೆ ಗೌರವ ಮಾಲಾರ್ಪಣೆ ಮಾಡಿದರು. ನ್ಯಾಯವಾದಿ ವಿಜಯಕುಮಾರ ಹೆರೂರ ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ ಅವರಿಂದ ಭಕ್ತಿ ಗೀತೆ ಜರುಗಿತು. ದೇವಾಪುರ ಶಿವಮೂರ್ತಿ ಶಿವಾಚಾರ್ಯರು ನಿರೂಪಣೆ ಮಾಡಿದರು. ನಂತರ ಅನ್ನ ದಾಸೋಹ ನೆರವೇರಿಸಿ ಸಾವಿರಾರು ಮುತ್ತೈದೆಯರಿಗೆ ಉಡಿ ತುಂಬಿ ಗೌರವಿಸಲಾಯಿತು.


ಈ ಜೀವ ಜಗತ್ತಿಗೆ ವೀರಶೈವ ಧರ್ಮ ಕೊಟ್ಟ ಕೊಡುಗೆ ಅಪಾರ. ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳು ಸದಾಕಾಲ, ಸರ್ವರಿಗೂ ಹಿತಕಾರಿ. ರಂಭಾಪುರಿ ಜಗದ್ಗುರುಗಳ ನಿರಂತರ ಶ್ರಮ, ಸಾಧನೆ ಅಪೂರ್ವ.
| ಡಾ.ಶರಣಪ್ರಕಾಶ ಪಾಟೀಲ್ ವೈದ್ಯಕೀಯ ಶಿಕ್ಷಣ ಸಚಿವ

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…