More

    ಹೊಸ ಇತಿಹಾಸ ಬರೆಯುವುದೇ ನಂದಿಗ್ರಾಮ?

    | ರಾಘವ ಶರ್ಮ ನಿಡ್ಲೆ ನಂದಿಗ್ರಾಮ (ಪ.ಬಂಗಾಳ)

    ಭಾಂಗಾಬೇರಾ ಮತ್ತು ಸೋನಾಚುರಾ. 2007ರಲ್ಲಿ ರಕ್ತಸಿಕ್ತ ನಂದಿಗ್ರಾಮ ಜಮೀನು ಸ್ವಾಧೀನ ವಿರೋಧಿ ಸಂಘರ್ಷಕ್ಕೆ ಸಾಕ್ಷಿಯಾದ ಎರಡು ಬಹುಮುಖ್ಯ ಗ್ರಾಮಗಳಿವು. ಈ ಭೂಮಿ ರಕ್ಷಣೆ ಹೋರಾಟದಲ್ಲಿ ಮೃತಪಟ್ಟವರ ನೆನಪಿಗಾಗಿ ಭಾಂಗಾಬೇರಾದಲ್ಲಿ ‘ಶಹೀದ್ ಸ್ಮಾರಕ’ ನಿರ್ಮಾಣ ಮಾಡಲಾಗಿದೆ. ಸ್ಮಾರಕದಿಂದ ಕೊಂಚ ದೂರದಲ್ಲಿ ಭಾಂಗಾಬೇರಾ ಶಹೀದ್ ಮಿನಾರ್​ನ್ನು ಸುವೇಂದು ಅಧಿಕಾರಿ ನಿರ್ಮಾಣ ಮಾಡಿದ್ದಾರೆ. ಮಂಗಳವಾರದಂದು ಶಹೀದ್ ಸ್ಮಾರಕಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹುತಾತ್ಮರನ್ನು ಸ್ಮರಿಸಿ, ಹೋರಾಟದ ದಿನಗಳನ್ನು ಮೆಲುಕು ಹಾಕಿದರು.

    ಹೊಸ ಇತಿಹಾಸ ಬರೆಯುವುದೇ ನಂದಿಗ್ರಾಮ?ಈ ಭಾಷಣ ಕೇಳಲು ಭಾಂಗಾಬೇರಾ ನಿವಾಸಿ ಮದನಮೋಹನ್ ಪೈಕ್ ಕೂಡ ಹೋಗಿದ್ದರು. ಮಮತಾ ತೆರಳಿದ ಬಳಿಕ ಸ್ಮಾರಕದಿಂದ 50 ಮೀಟರ್ ದೂರದಲ್ಲಿದ್ದ ಮಂದಿರವೊಂದರ ಬಳಿ ‘ವಿಜಯವಾಣಿ’ ಜತೆ ಮಾತನಾಡಿದ ಮದನಮೋಹನ್, ‘ಮುಖ್ಯಮಂತ್ರಿ ಜತೆ ಅನೇಕ ಮಹಿಳಾ ಸೆಕ್ಯೂರಿಟಿ ಗಾರ್ಡ್ ಬಂದಿದ್ದರು. ಅವರಲ್ಲಿ ಒಬ್ಬರು, ಇಲ್ಲಿ ಮಹಿಳೆಯರ ಟಾಯ್ಲೆಟ್ ಎಲ್ಲಿದೆ ಎಂದು ನನ್ನಲ್ಲಿ ಕೇಳಿದರು. ಅದಕ್ಕೆ, ಇಲ್ಲಿ ವಿಶಾಲವಾದ ಬಯಲುಪ್ರದೇಶ ಕಾಣುತ್ತಿದೆಯಲ್ಲ. ನೀವು ಎಲ್ಲಿ ಬೇಕಾದರೂ ಹೋಗಬಹುದು ಎಂದೆ. ಈ ಗ್ರಾಮದ ಮಹಿಳೆಯರು ಶೌಚಕ್ಕೆ ಎಲ್ಲಿ ಹೋಗುತ್ತಾರೆ ಎಂಬ ಪ್ರಶ್ನೆಗೆ, ನನ್ನ ಹಿಂದಿನ ಮಾತಿನಲ್ಲೇ ನಿಮ್ಮ ಪ್ರಶ್ನೆಗೆ ಉತ್ತರ ಇದೆ ಎಂದು ಹೇಳಿದೆ. ಅವರು ಏನೂ ಹೇಳದೆ ತೆರಳಿದರು’ ಎಂದು ಹಳ್ಳಿಯ ಕಹಿವಾಸ್ತವ ಬಿಚ್ಚಿಟ್ಟರು. ‘ಮಮತಾ 10 ವರ್ಷದಿಂದ ಅಧಿಕಾರದಲ್ಲಿದ್ದಾರೆ. ಇಲ್ಲಿನ ಭೂಮಿ ಹೋರಾಟ ಹೆಸರಲ್ಲಿ ಗದ್ದುಗೆ ಏರಿದರು. ಆದರೆ, ಇಲ್ಲಿನ ಬಡಮಂದಿಗೆ ಶೌಚಗೃಹ ಕಟ್ಟಿಕೊಡಲಿಲ್ಲ’ ಎಂದು ಅತೃಪ್ತಿ ಹೊರಹಾಕಿದರು. ‘ಇದಕ್ಕೆ ಶಾಸಕರು ಕೂಡ ಕಾರಣ ಅಲ್ಲವೇ’ ಎಂಬ ಪ್ರಶ್ನೆಗೆ, ‘ಸುವೇಂದು ನಂದಿಗ್ರಾಮದ ಏಳಿಗೆಗಾಗಿ ಎಷ್ಟೋ ಕೆಲಸ ಮಾಡಿದ್ದಾರೆ. ಆದರೆ, ಮಮತಾ ಸಿಎಂ ಆದ ಮೇಲೆ ಒಮ್ಮೆಯೂ ಇಲ್ಲಿ ಬರಲಿಲ್ಲ. ಈಗ ಸ್ಮಾರಕಕ್ಕೆ ಮಾಲೆ ಹಾಕಲು ಬಂದಿದ್ದಾರೆ. ಮಹಿಳೆಯರ ಸ್ಥಿತಿ ಬಗ್ಗೆ ಅರಿಯುವ ಯತ್ನ ಮಾಡಿದರೇ?’ ಎಂದು ಮರುಪ್ರಶ್ನೆ ಹಾಕಿದರು.

    ಭಾಂಗಾಬೇರಾದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯೂ ಬಾಧಿಸುತ್ತಿದೆ. ‘ಮನೆಮಂದಿ, ಮಕ್ಕಳು ಒಂದೂವರೆ ಕಿಮೀ ನಡೆದು ನಿತ್ಯವೂ ನೀರನ್ನು ಹೊತ್ತು ತರಬೇಕು. ಇಲ್ಲಿ ಟ್ಯೂಬ್​ವೆಲ್ ಕೂಡ ಇಲ್ಲ. ಈ ರಣಬಿಸಿಲಲ್ಲಿ ನೀರು ತರುವಾಗ ಜೀವ ಕೈಗೆ ಬಂದಂತಾಗುತ್ತದೆ. ಇದಕ್ಕೊಂದು ಶಾಶ್ವತ ಪರಿಹಾರ ಬೇಕು’ ಎಂದರು ಸೀತಾ ಪೈಕ್. ನಂದಿಗ್ರಾಮದ ಬಹುತೇಕ ಗ್ರಾಮಗಳ ಜನರು, ‘ದೀದಿ ಇಲ್ಲಿಗೆ ವರ್ಷಕ್ಕೆ 2 ಬಾರಿಯಾದರೂ ಬಂದು ನಮ್ಮನ್ನು ಮಾತನಾಡಿಸಬೇಕಿತ್ತು’ ಎಂದು ಹೇಳುತ್ತಾರೆ.

    ಸಿಪಿಐ-ಎಂನಿಂದ ಯುವ ಅಭ್ಯರ್ಥಿ: ನಂದಿಗ್ರಾಮದಲ್ಲಿ ಇಬ್ಬರು ರಾಜಕೀಯ ದಿಗ್ಗಜರ ಮಧ್ಯೆ ಸಿಪಿಐ-ಎಂನಿಂದ 37 ವರ್ಷದ ಮೀನಾಕ್ಷಿ ಮುಖರ್ಜಿ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಕೈಗಾರಿಕಾಭಿವೃದ್ಧಿ ಹಾಗೂ ಯುವಕರಿಗೆ ನೌಕರಿ ಕೊಡಿಸುವ ಭರವಸೆ ನೀಡುತ್ತಿರುವ ಮೀನಾಕ್ಷಿಯವರಿಗೆ ಮಿತ್ರಪಕ್ಷ ಇಂಡಿಯನ್ ಸೆಕ್ಯುಲರ್ ಫ್ರಂಟ್ ಜತೆಗಿರುವುದು ಮುಸ್ಲಿಂ ಮತಗಳನ್ನು ಸೆಳೆಯಲು ನೆರವಾಗುತ್ತಿದೆ. ಟಿಎಂಸಿ ಕಾರ್ಯಕರ್ತರು ಸಿಪಿಐಎಂ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ನಂದಿಗ್ರಾಮ ಪೇಟೆಯ ರಸ್ತೆ ಮಧ್ಯೆಯೇ ಧರಣಿ ಕೂತಿದ್ದ ಮೀನಾಕ್ಷಿ ವಿಜಯವಾಣಿ ಜತೆ ಮಾತನಾಡಿ, ‘ಟಿಎಂಸಿ ಭಯೋತ್ಪಾದನೆ ನೋಡಿ. ಪೊಲೀಸರು ಕೂಡ ಕೈಕಟ್ಟಿ ಕೂತಿದ್ದಾರೆ. ಮತ್ತೊಮ್ಮೆ ಇವರಿಗೆ ಅಧಿಕಾರ ನೀಡಬೇಕೆ? ಬಿಜೆಪಿ ಕೂಡ ಏನೂ ಕಡಿಮೆ ಇಲ್ಲ. ಸುವೇಂದು ರಾತ್ರಿ ಬೆಳಗಾಗುವುದರೊಳಗೆ ಬಿಜೆಪಿ ಸೇರಿದ್ದಾರೆ. ನಾಳೆ ಆ ಪಕ್ಷದಿಂದ ಹಿಂಸಾಚಾರ ಶುರುಮಾಡುತ್ತಾರೆ’ ಎಂದು ಕಿಡಿಕಾರಿದರು.

    ಕ್ಷೇತ್ರ ಹಿನ್ನೆಲೆ: 2011ರಲ್ಲಿ ಟಿಎಂಸಿ ಸರ್ಕಾರ ರಚಿಸಿದ ಬಳಿಕ ಇಲ್ಲಿ ಎಡಪಕ್ಷಗಳು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. 2009ರ ಉಪ ಚುನಾವಣೆಯಲ್ಲಿ ನಂದಿಗ್ರಾಮ ಗೆದ್ದಿದ್ದ ಟಿಎಂಸಿಗೆ 2011ರಲ್ಲಿ ಗೆಲ್ಲುವುದು ಕಷ್ಟವಾಗಿರಲಿಲ್ಲ. ಈ ಎರಡೂ ಚುನಾವಣೆಗಳಲ್ಲಿ ಪಕ್ಷದಿಂದ ಫಿರೋಜಾ ಅಭ್ಯರ್ಥಿಯಾಗಿದ್ದರು. 2016ರಲ್ಲಿ ಸ್ಪರ್ಧಿಸುವಂತೆ ಸುವೇಂದು ಅವರನ್ನು ಮಮತಾ ಕಳುಹಿಸಿಕೊಟ್ಟರು. ಪೂರ್ವ ಮೇದಿನಿಪುರದ ಕೊಂಟೈ ಕ್ಷೇತ್ರದ ಶಾಸಕ ಸುವೇಂದುಗೆ ಇಲ್ಲಿ 68 ಪ್ರತಿಶತ ಮತ ಬಂತು. ಸುವೇಂದು ಮೂಲತಃ ಕೊಂಟೈ ಪಟ್ಟಣದವರಾಗಿದ್ದರೂ, ನಂದಿಗ್ರಾಮ ಕೂಡ ಇದೇ ಜಿಲ್ಲೆ ವ್ಯಾಪ್ತಿಯಲ್ಲಿರುವುದರಿಂದ ಸುವೇಂದು ತಮ್ಮನ್ನು ಮಣ್ಣಿನ ಮಗ ಎಂದು ಕರೆದುಕೊಂಡಿದ್ದಾರೆ. 2007ರ ಸಂಘರ್ಷವೂ ಅವರಿಗೆ ಅಂಥದ್ದೊಂದು ಹೆಸರು ತಂದುಕೊಟ್ಟಿತ್ತು. ಕಾಂಗ್ರೆಸ್ ಮತ್ತು ಎಡಪಕ್ಷಗಳ ಪಾರಮ್ಯ ರಾಜ್ಯದಲ್ಲಿ ಕಡಿಮೆಯಾಗುತ್ತಿದ್ದಂತೆಯೇ ಈ ಕ್ಷೇತ್ರದಲ್ಲಿ ಬಿಜೆಪಿ ಬೇರೂರುವ ಯತ್ನ ಶುರು ಮಾಡಿತು. 2016ರಲ್ಲಿ ತಾಮ್ಲುಕ್ ಲೋಕಸಭೆಗೆ (ನಂದಿಗ್ರಾಮ ಇದರ ವ್ಯಾಪ್ತಿಯಲ್ಲಿದೆ) ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 1,96,450 ಮತ ಗಳಿಸುವ ಮೂಲಕ 2ನೇ ಸ್ಥಾನದಲ್ಲಿದ್ದರು. 2019ರ ಚುನಾವಣೆಯಲ್ಲಿ ಶೇ.37ರಷ್ಟು ಮತ ಬಾಚಿದ್ದ ಬಿಜೆಪಿ ಚುನಾವಣೆ ಗೆಲ್ಲಲಾಗದಿದ್ದರೂ ಕ್ಷೇತ್ರದಲ್ಲಿ ತನ್ನ ಬೇರು ಗಟ್ಟಿಗೊಳಿಸಿತ್ತು. ಸುವೇಂದು ಅಧಿಕಾರಿ ಬಿಜೆಪಿ ಸೇರಲು ಇದು ಕೂಡ ಒಂದು ಕಾರಣ.

    ಐತಿಹಾಸಿಕ ರ‍್ಯಾಲಿ: ಕಮ್ಯುನಿಸ್ಟ್ ಪಾರ್ಟಿ ಬಳಿಕ ಟಿಎಂಸಿ ಭದ್ರಕೋಟೆಯಾಗಿದ್ದ ನಂದಿಗ್ರಾಮ ಮೊದಲ ಬಾರಿಗೆ ಹಿಂದೆಂದೂ ಕಾಣದ ಚುನಾವಣಾ ರೋಡ್ ಶೋಗೆ ಮಂಗಳವಾರ ಸಾಕ್ಷಿಯಾಯಿತು. ಗೃಹ ಸಚಿವ ಅಮಿತ್ ಷಾ ರೋಡ್ ಶೋನಲ್ಲಿ ಭಾರಿ ಪ್ರಮಾಣದಲ್ಲಿ ನೆರೆದಿದ್ದ ಜನರನ್ನು ಕಂಡು ಕೋಲ್ಕತ್ತದಿಂದ ಬಂದಿದ್ದ ಬಿಜೆಪಿ ಮುಖಂಡರೂ ಅಚ್ಚರಿಗೊಂಡರು. ರೋಡ್ ಶೋ ಉದ್ದಕ್ಕೂ ಜೈಶ್ರೀರಾಮ್ ವಂದೇ ಮಾತರಂ ಘೊಷಣೆಗಳು ಮುಗಿಲುಮುಟ್ಟಿದ್ದವು. ರ‍್ಯಾಲಿ ವೀಕ್ಷಣೆಗೆಂದು ಬಂದಿದ್ದ ನಿಮೋಯ್ ಚಂದ್ರ ಸಾಹು, ‘ಇಷ್ಟು ದೊಡ್ಡ ರ್ಯಾಲಿಯನ್ನು ನಾನು ನೋಡಿಯೇ ಇರಲಿಲ್ಲ. ಮಮತಾರ ಮುಸ್ಲಿಂ ತುಷ್ಟೀಕರಣಕ್ಕೆ ಜನ ಬುದ್ಧಿ ಕಲಿಸಲಿದ್ದಾರೆ’ ಎಂದರು. ‘ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯಕ್ಕೆ ಬರದಂತೆ ಮಾಡಿದ ಮಮತಾಗೆ ಏಕೆ ಮತ ನೀಡಬೇಕು’ ಎಂದು ಪ್ರಶ್ನಿಸಿದ ಸಾಹು, ‘ಸಿಪಿಐ, ಟಿಎಂಸಿ ಅಟ್ಟಹಾಸ ಸಾಕಾಗಿದೆ. ನಮಗೆ ಅಭಿವೃದ್ಧಿ ಬೇಕಿದೆ’ ಎಂದು ಅಭಿಪ್ರಾಯಪಟ್ಟರು.

    ಪ್ರಮುಖ ವೃತ್ತಿ ಮೀನುಸಾಕಣೆ: ನಂದಿಗ್ರಾಮ ಮತ್ತು ಸುತ್ತಮುತ್ತಲಿನ ಯಾವುದೇ ಗ್ರಾಮದಲ್ಲಿ ನೋಡಿದರೂ, ಜೀವನೋಪಾಯಕ್ಕೆ ಜನರು ಮೀನುಸಾಕಣೆಯನ್ನು ವೃತ್ತಿಯನ್ನಾಗಿಸಿಕೊಂಡಿರುವ ದೃಶ್ಯ ಎದ್ದುಕಾಣುತ್ತದೆ. 14 ವರ್ಷಗಳ ಹಿಂದೆ ಕೃಷಿ ಮಾಡಲೆಂದು ಯಾವ ಜಮೀನನ್ನು ಮಮತಾ ಹೋರಾಟದ ಮೂಲಕ ಉಳಿಸಿಕೊಂಡಿದ್ದರೋ, ಅಲ್ಲಿನ ಬಹುತೇಕ ಜಮೀನಿನಲ್ಲಿ ಸಣ್ಣ ಕೆರೆಗಳನ್ನು ನಿರ್ಮಾಣ ಮಾಡಿಕೊಂಡು ಸಿಗಡಿ, ಎಣ್ಣೆ ಮೀನು ಸಾಕಣೆ, ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ.

    ಇಬ್ಬರಿಗೂ ನಿರ್ಣಾಯಕ: ಬಿಜೆಪಿ ಸೇರಿ ಸ್ಪರ್ಧಿಸುತ್ತಿರುವ ಸುವೇಂದು ಅಧಿಕಾರಿ ಚುನಾವಣೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಅವರು ಗೆದ್ದು ಬಂದರೆ ರಾಜ್ಯ ಮತ್ತು ರಾಷ್ಟ್ರೀಯ ಬಿಜೆಪಿಯ ಪ್ರಮುಖ ನಾಯಕರಾಗಿ ರೂಪುಗೊಳ್ಳಲಿದ್ದಾರೆ. ಇಲ್ಲದಿದ್ದರೆ ಪಕ್ಷದಲ್ಲಿ ಮೂಲೆಗುಂಪಾದರೂ ಅಚ್ಚರಿ ಇಲ್ಲ. ಏತನ್ಮಧ್ಯೆ, ಮಮತಾ ನಂದಿಗ್ರಾಮ ಗೆದ್ದು ರಾಜ್ಯವನ್ನೂ ಗೆದ್ದರೆ ರಾಷ್ಟ್ರ ರಾಜಕಾರಣದಲ್ಲಿ ತೃತೀಯ ರಂಗದ ನಾಯಕಿಯಾಗುವುದರಲ್ಲಿ ಅನುಮಾನವಿಲ್ಲ. ಒಂದುವೇಳೆ ಸೋತಲ್ಲಿ, ಅವರ ರಾಜಕೀಯ ಭವಿಷ್ಯವೇ ತೂಗುಯ್ಯಾಲೆಯಲ್ಲಿ ಸಿಲುಕಲಿದೆ. ಈ ಎಲ್ಲ ದೃಷ್ಟಿಯಿಂದ ನಂದಿಗ್ರಾಮ ಫಲಿತಾಂಶ ನಿರ್ಣಾಯಕ.

    ಬಂಗಾಳದಲ್ಲಿ ನಿಜವಾದ ಪರಿವರ್ತನೆ ತರಲು ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸೋಲಬೇಕು. ಇಲ್ಲಿನ ಜನರ ಉತ್ಸಾಹ ನೋಡಿದರೆ ಸುವೇಂದು ಅಧಿಕಾರಿ ಗೆಲುವು ನಿಶ್ಚಿತ ಎನಿಸುತ್ತಿದೆ. ಬಂಗಾಳದ ಜನರು ಅಕ್ರಮ ನುಸುಳುವಿಕೆ ನಿಲ್ಲಬೇಕೆಂದು ಬಯಸಿದ್ದು, ಅದಕ್ಕಾಗಿ ಸಿಎಎ ಜಾರಿಯಾಗಬೇಕು ಎಂಬ ಗಟ್ಟಿ ಅಭಿಪ್ರಾಯ ಹೊಂದಿದ್ದಾರೆ.

    | ಅಮಿತ್ ಷಾ ಕೇಂದ್ರ ಗೃಹ ಸಚಿವ

    (ನಂದಿಗ್ರಾಮ ರೋಡ್ ಶೋ ಬಳಿಕ ಹೇಳಿದ್ದು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts