More

    ಅರೆಮಲೆನಾಡಿನಲ್ಲಿ ಕೆಂಧೂಳಿನ ಓಕುಳಿ ; ಚಿಕ್ಕನಾಯಕನಹಳ್ಳಿಯಲ್ಲಿ ಮತ್ತೆ ಗಣಿ ಧೂಳು

    | ಸೋರಲಮಾವು ಶ್ರೀಹರ್ಷ ತುಮಕೂರು

    ಅಕ್ರಮ ಗಣಿಗಾರಿಕೆ ಕಾರಣಕ್ಕೆ 2011ರಿಂದ ಸ್ತಬ್ಧವಾಗಿರುವ ಚಿಕ್ಕನಾಯಕನಹಳ್ಳಿ ತಾಲೂಕಿನ ಗಣಿಗಾರಿಕೆ ಮತ್ತೆ ಆರಂಭವಾಗುವ ಭಯ ಸ್ಥಳೀಯರಿಗೆ ಕಾಡಲಾರಂಭಿಸಿದೆ. ಅರೆಮಲೆನಾಡು ಎಂಬ ಖ್ಯಾತಿ ಗಳಿಸಿದ್ದ ಚಿ.ನಾ.ಹಳ್ಳಿ ಅಬ್ಬಿಗೆ ಗುಡ್ಡದಿಂದ ಕಬ್ಬಿಣದ ಅದಿರು ತುಂಬಿಕೊಂಡು ನೂರಾರು ಲಾರಿಗಳು ಓಡಾಡಲಾರಂಭಿಸಿವೆ.

    ಗಣಿಗಾರಿಕೆ ಸ್ತಬ್ಧವಾದಾಗ ಮಾರಾಟವಾಗದೆ ಉಳಿದಿದ್ದ ಅದಿರನ್ನು 2014ರಲ್ಲಿ ಹರಾಜಿನಲ್ಲಿ ಕೊಂಡುಕೊಂಡಿದ್ದ ಜಾನಕಿ ಕಾರ್ಪೋರೇಷನ್ ಲಿ., ರಪ್ತು ಮಾಡಲು ಆರಂಭಿಸಿದ್ದು ಇದರ ನೆಪದಲ್ಲಿ ಹೊಸದಾಗಿಯೂ ಗಣಿಗಾರಿಕೆ ನಡೆಸಲಾಗುತ್ತಿದೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿರುವುದು ಹೊಸ ವಿವಾದ ಸೃಷ್ಟಿಸಿದೆ.

    2011ಕ್ಕೂ ಮುಂಚೆ ತಾಲೂಕಿನಲ್ಲಿ ನಡೆದ ಅಕ್ರಮ ಗಣಿಗಾರಿಕೆ ಫಲ ಜೀವಜಲದ ಸೆಲೆ, ಕೊಳವೆಬಾವಿಗಳು ಬತ್ತಿ ಹೋದವು. ತೆಂಗು-ಕಂಗಿನ ಈ ಫಲವತ್ತಾದ ಭೂಮಿ ಬರಡಾಗಿದ್ದು ಜನರು ಬೆಂಗಳೂರು ಕಡೆಗೆ ಗುಳೆ ಹೋಗಲಾರಂಭಿಸಿದ್ದು ಇತಿಹಾಸವಾಗಿದೆ, ಇಲ್ಲಿನ ಜನರ ಪುನರ್ವಸತಿಗಾಗಿ ಮೀಸಲಿರುವ ಬರೋಬ್ಬರಿ 2554ಕೋಟಿ ರೂ. ಬಳಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ.

    2021 ೆ.16ರಂದು ವಲಯ ಅರಣ್ಯಾಧಿಕಾರಿ, ಭೂ ವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸಿ 2014ರಲ್ಲಿ ಜಾನಕಿ ಕಾರ್ಪೋರೇಷನ್ ಲಿ., ಇ-ಹರಾಜು ಮೂಲಕ ಪಡೆದಿರುವ 4 ಸಾವಿರ ಮೆಟ್ರಿಕ್ ಟನ್ ಕಬ್ಬಿಣದ ಅದಿರಿನ ದಾಸ್ತಾನು ಗುರುತಿಸಿದ್ದು ಅಲ್ಲಿಂದ ಅದಿರು ರ್ತು ಆರಂಭಿಸಲಾಗಿದ್ದು ದಿನನಿತ್ಯ ನೂರಾರು ಲಾರಿಗಳು ಓಡಾಡುತ್ತಿವೆ.

    ಹರಾಜಿನಲ್ಲಿ ಕೊಂಡುಕೊಂಡಿದ್ದ 12 ಸಾವಿರ ಮೆಟ್ರಿನ್ ಟನ್ ಕಬ್ಬಿಣದ ಅದಿರಿನ ಪೈಕಿ ಈಗಾಗಲೇ 8 ಸಾವಿರ ಮೆಟ್ರಿಕ್ ಟನ್ ಸಾಗಾಣಿಕೆಯಾಗಿದ್ದು ಉಳಿದ 4 ಸಾವಿರ ಮೆ.ಟ. ಅದಿರು ಸಾಗಾಣಿಕೆ ಆರಂಭಿಸಲಾಗಿದೆ. ಇದರ ನೆಪದಲ್ಲಿ ಹೊಸದಾಗಿಯೂ ಗಣಿಗಾರಿಕೆ ಆರಂಭಿಸಲಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದ್ದು ಈ ಬಗ್ಗೆ ನಿಗಾವಹಿಸುವ ದೊಡ್ಡ ಜವಾಬ್ದಾರಿ ತುಮಕೂರು ಜಿಲ್ಲಾಡಳಿತದ ಮೇಲಿದೆ.

    ಕಾವಲಿಗೆ ನಿಲ್ಲಲು ಸ್ಥಳೀಯರ ವಿಶೇಷ ಆಸಕ್ತಿ : ತಾಲೂಕಿನಲ್ಲಿ ಲಾರಿಗಳು ಓಡಾಡಲಾರಂಭಿಸಿದ್ದೇ ತಡ ಸ್ಥಳೀಯ ರಾಜಕೀಯ ಪುಡಾರಿಗಳಿಗೂ ರೆಕ್ಕೆಪುಕ್ಕ ಬರಲಾರಂಭಿಸಿವೆ. ಅದಿರು ಸಾಗಿಸುವ ಸಂಸ್ಥೆಗಳನ್ನು ಹೆದರಿಸಿ ಹಣ ಕೀಳುವ ದೊಡ್ಡ ಹುನ್ನಾರವೂ ಆರಂಭವಾಗಿದೆ ಎಂದು ದೂರಲಾಗುತ್ತಿದೆ. ಒಂದು ಲಾರಿ ಲೋಡಿಗೆ 500 ರೂ. ವಸೂಲಿ ಮಾಡುತ್ತಿರುವ ಮೂರು ಪ್ರತ್ಯೇಕ ಗುಂಪುಗಳು ಸರತಿಯಲ್ಲಿವೆ ಎಂಬ ಬಗ್ಗೆ ಮೈನಿಂಗ್ ಕಂಪನಿಗಳು ಆತಂಕ ವ್ಯಕ್ತಪಡಿಸಿವೆ. ಕಚ್ಚಾ ರಸ್ತೆಯಲ್ಲಿ ವಿಪರೀತ ಧೂಳೆಬ್ಬಿಸಿಕೊಂಡು ಲಾರಿಗಳು ಓಡಾಡುತ್ತಿದ್ದು ಕೆಂಧೂಳಿಗೆ ಇಲ್ಲಿ ಬಡಜನರ ಬದುಕು ಬರಡಾಗುವ ಆತಂಕವಿದೆ. ಬೆಳೆದ ಬೆಳೆಗಳ ಮೇಲೆ ಧೂಳು ಕೂರುತ್ತಿದೆ. ತೆಂಗು ಹೊಂಬಾಳೆ ಮೇಲೆ ಧೂಳು ಕೂತರೆ ಪರಾಗಸ್ಪರ್ಶಕ್ಕೆ ಅವಕಾಶವಾಗದೆ ಇಳುವರಿ ಕಡಿಮೆಯಾಗಲಿದೆ. ರಸ್ತೆ ನಿರ್ಮಿಸಿಕೊಂಡು ಅದಿರು ತೆಗೆದುಕೊಂಡು ಹೋಗಬೇಕಿದ್ದರೂ ಕಂದಾಯ, ಅರಣ್ಯ ಹಾಗೂ ಗಣಿ ಇಲಾಖೆ ಅಧಿಕಾರಿಗಳ ಜಾಣಮೌನ ಆಶ್ಚರ್ಯ ಮೂಡಿಸಿದೆ.

    ನೈಸರ್ಗಿಕ ಸಂಪನ್ಮೂಲದ ಆಗರವಾಗಿದ್ದ ಚಿಕ್ಕನಾಯಕನಹಳ್ಳಿ ತಾಲೂಕು ಇಂದು ಬರಡು ಭೂಮಿಯಾಗಿದೆ. ಗಣಿಯ ಹೆಸರಿನಲ್ಲಿ ಅವೈಜ್ಞಾನಿಕವಾಗಿ ಅರಣ್ಯ ನಾಶ ಮಾಡಿದ್ದು, ಎಗ್ಗಿಲ್ಲದೆ ಕೆರೆಗಳಲ್ಲಿ ತೆಗೆದ ಮಣ್ಣು, ಮರಳು, ಜನರ ಬದುಕನ್ನು ನರಕವಾಗಿಸಿದೆ. ಒಂದು ಕಾಲದಲ್ಲಿ ಅರೆಮಲೆ ನಾಡು ಎಂದು ಕರೆಸಿಕೊಂಡಿದ್ದ ನಾಡು ಬರಡು ಭೂಮಿಯಾಗಿದೆ. ಜಿಲ್ಲೆಯ ಜನರಿಗೆ ಮೀಸಲಿರುವ ಪುನಶ್ಚೇತನ ನಿಧಿಯನ್ನು ಬಳಸುವ ಇಚ್ಛಾಶಕ್ತಿಯನ್ನು ಜನಪ್ರತಿನಿಧಿಗಳು ಪ್ರದರ್ಶಿಸಿಲ್ಲ.
    ಮಲ್ಲಿಕಾರ್ಜುನ ಭಟ್ಟರಹಳ್ಳಿ, ರಾಜ್ಯ ಕಾರ್ಯದರ್ಶಿ, ಕೆಆರ್‌ಎಸ್ ಪಕ್ಷ

    ಸಿಇಸಿ ನೇತೃತ್ವದಲ್ಲಿ 2014ರಲ್ಲಿ ಇ-ಹರಾಜಿನಲ್ಲಿ ಕೊಂಡುಕೊಂಡು ಹಣ ಕೂಡ ಪಾವತಿಸಿರುವ ಜಾನಕಿ ಕಾರ್ಪೋರೋಷನ್ ಲಿ., ತಮ್ಮ ಪಾಲಿನ 4 ಸಾವಿರ ಮೆಟ್ರಿಕ್ ಟನ್ ಕಬ್ಬಿಣದ ಅದಿರು ರಪ್ತು ಮಾಡಲು ಆರಂಭಿಸಿದೆ. ದಾಸ್ತಾನು ಇರುವ ಅದಿರನ್ನು ಗುರುತು ಮಾಡಲಾಗಿದ್ದು ವಲಯ ಅರಣ್ಯಾಧಿಕಾರಿಗೆ ತೋರಿಸಿ ಮಾಹಿತಿ ನೀಡಲಾಗಿದೆ, ಪ್ರಸ್ತುತ ಅಷ್ಟನ್ನು ಮಾತ್ರ ಕೊಂಡೊಯ್ಯಲು ಅವಕಾಶವಿದೆ.
    ಮಹೇಶ್, ಉಪನಿರ್ದೇಶಕ ಗಣಿ ಮತ್ತು ಭೂವಿಜ್ಞಾನ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts