More

    ರೈಲ್ವೆ ಮೇಲ್ಸೇತುವೆ ನಿರ್ಮಿಸಿ ಕೊಡದಿದ್ದರೆ ಮತದಾನ ಬಹಿಷ್ಕಾರ!

    ಕಾರವಾರ: ರೈಲ್ವೆ ಮೇಲ್ಸೇತುವೆ ನಿರ್ಮಿಸಿ ಕೊಡದೇ ಇದ್ದರೆ ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಹೊನ್ನಾವರದ ಅನಂತವಾಡಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
    ರೈಲ್ವೆ ಗೇಟ್ ಹೋರಾಟ ಸಮಿತಿಯ ಸದಸ್ಯರು ಗುರುವಾರ ಎಡಿಸಿ ಪ್ರಕಾಶ ರಜಪೂತ ಅವರಿಗೆ ಮನವಿ ಸಲ್ಲಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅನಂತವಾಡಿ ಗ್ರಾಮ ಹಾಗೂ ರಾಷ್ಟ್ರೀಯ ಹೆದ್ದಾರಿ 66 ರ ನಡುವೆ ಕೊಂಕಣ ರೈಲ್ವೆ ಹಳಿ ಹಾದು ಹೋಗಿದೆ. ತುಂಬೆ ಬೀಳು, ಅಂಬೇ ಬೀಳು, ಮುಂಡಾರು, ಕೋಟಾ, ಸಂಪಳ್ಳಿ, ಗಂಜಿಗೇರಿ, ಗಮಯನಮೂಲೆ ಸೇರಿ ಹಲವು ಸಣ್ಣ ಮಜರೆಗಳಿದ್ದು, 250 ಮನೆಗಳಿವೆ. 2 ಸಾವಿರ ಜನಸಂಖ್ಯೆ ಇದ್ದು, ಸುಮಾರು 1200 ಮತದಾರರಿದ್ದಾರೆ. ಗ್ರಾಮಕ್ಕೆ ತೆರಳಲು ಕೊಂಕಣ ರೈಲ್ವೆ ಗೇಟ್(ಎಲ್‌ಸಿ-68-ಇ) ನ್ನು ದಾಟುವುದು ಬಿಟ್ಟು ಬೇರೆ ಮಾರ್ಗವಿಲ್ಲ. ಆದರೆ, ರೈಲ್ವೆ ಓಡಾಟ ಇಲ್ಲದೇ ಇದ್ದರೂ ಗೇಟ್ ದಿನವಿಡಿ ಮುಚ್ಚಿಯೇ ಇರುವುದು ಸಮಸ್ಯೆಯಾಗಿದೆ.
    ಅಪಘಾತ, ರೋಗಿಗಳನ್ನು ಕರೆದೊಯ್ಯುವ ಸಂದರ್ಭ ಬಂದರೂ ರೈಲ್ವೆ ಗೇಟ್ ತೆರೆಯುವುದಿಲ್ಲ. ರೈಲ್ವೆ ಗೇಟ್ ಸಕಾಲಕ್ಕೆ ತೆರೆಯದ ಕಾರಣ ಆಸ್ಪತ್ರಗೆ ತೆರಳಲು ವಿಳಂಬವಾಗಿ ಮೂರ್ನಾಲ್ಕು ಜನ ಮೃತಟ್ಟಿದ್ದಾರೆ. ರೈಲ್ವೆ ಗೇಟ್ ಹೆಚ್ಚಿನ ಅವಧಿಯಲ್ಲಿ ಮುಚ್ಚಿರುವ ಕಾರಣ ಕೆಎಸ್‌ಆರ್‌ಟಿಸಿ ಬಸ್ ಬರುವುದಿಲ್ಲ. ಗ್ರಾಮದಿಂದ ಮುಖ್ಯ ರಸ್ತೆಗೆ ಸುಮಾರು 4 ಕಿಮೀ ಖಾಸಗಿ ವಾಹನ ಅಥವಾ ನಡೆದುಕೊಂಡು ತಲುಪಬೇಕಿದೆ. ಆಟೋ ಚಾಲಕರೂ ಗ್ರಾಮಕ್ಕೆ ಬರಲು ಒಪ್ಪುವುದಿಲ್ಲ. ಸ್ಕೂಲ್ ಬಸ್‌ಗಳು ಊರಿಗೆ ಬರುವುದಿಲ್ಲ. ಇದರಿಂದ ಶಾಲೆ ವಿದ್ಯಾರ್ಥಿಗಳೂ ತೆರಳುವುದು ಕಷ್ಟವಾಗಿದೆ.
    ರೈಲ್ವೆ ಗೇಟ್ ಬದಲು ಮೇಲ್ಸೇತುವೆ ನಿರ್ಮಿಸಿಕೊಡುವಂತೆ ಕೊಂಕಣ ರೈಲ್ವೆಗೆ ಮನವಿ ಕೊಟ್ಟಿದ್ದೇವೆ. ಅಧಿಕಾರಿಗಳು ಬಂದು ಸರ್ವೇ ಮಾಡಿಕೊಂಡು ಹೋಗಿದ್ದಾರೆ. ಆದರೆ, ಮೇಲ್ಸೇತುವೆಯ ಶೇ. 50 ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಕೊಡಬೇಕು ಎಂಬುದು ಕೊಂಕಣ ರೈಲ್ವೆ ಅಧಿಕಾರಿಗಳ ವಾದವಾಗಿದೆ. ಈ ಸಂಬಂಧ ವರ್ಷಗಳ ಹಿಂದೆ ಹೊನ್ನಾವರ ತಹಸೀಲ್ದಾರ್ ಕಚೇರಿಯವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಪ್ರತಿಭಟಿಸಿದ್ದೆವು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಅವರ ಕಚೇರಿಯಿಂದಲೂ ಪ್ರತ್ಯುತ್ತರ ಬಂದಿದೆ. ಸಂಸದರಿಗೆ, ಸ್ಥಳೀಯ ಶಾಸಕರಿಗೆ ಮನವಿ ಮಾಡಿದ್ದೆವು. ಸಂಸದರು ಪ್ರತ್ಯುತ್ತರ ನೀಡಿಲ್ಲ. ಹಿಂದಿನ ಶಾಸಕರು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದು, ಈ ಸಂಬಂಧ ಅಲ್ಲೊಂದು ಕಡತ ರಚನೆಯಾಗಿದೆ. ಆದರೆ, ಅದು ಮುಂದುವರಿಯಲಿಲ್ಲ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯ ಅವರಿಗೆ ಮನವಿ ಮಾಡಿದ್ದೆವು ಅವರೂ ಸ್ಪಂದನೆ ನೀಡಿಲ್ಲ. ಸುಮಾರು 30 ವರ್ಷಗಳಿಂದ ಪ್ರತಿಭಟನೆ ನಡೆಸಿ ನಾವು ಸೋತು ಹೋಗಿದ್ದು, ಇದರಿಂದ ಮತದಾನ ಬಹಿಷ್ಕಾರದ ನಿರ್ಧಾರಕ್ಕೆ ಬಂದಿದ್ದೇವೆ ಎಂದರು. ನಮ್ಮ ಈ ಹೋರಾಟಕ್ಕೆ ಆಡಳಿತ ಬಗ್ಗದೇ ಇದ್ದರೆ ಹಳಿಯ ಮೇಲೆ ಕುಳಿತು ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದರು.
    ಹೋರಾಟ ಸಮಿತಿಯ ಅಧ್ಯಕ್ಷ ಗಜಾನನ ನಾಯ್ಕ, ಉಪಾಧ್ಯಕ್ಷ ಪಾಂಡುರಂಗ ಗೌಡ, ಗ್ರಾಮಸ್ಥರಾದ ಮಾದೇವ ನಾಯ್ಕ, ಶಶಿಕಲಾ ನಾಯ್ಕ, ನಾಗಮ್ಮ ನಾಯ್ಕ, ಪರಮೇಶ್ವರ, ಈಶ್ವರ ನಾಯ್ಕ, ಲಂಬೋದರ ನಾಯ್ಕ, ಮಾದೇವ ನಾಯ್ಕ, ಜಯಂತ ನಾಯ್ಕ, ಪ್ರಶಾಂತ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.

    ಇದನ್ನೂ ಓದಿ: ಬಿಜೆಪಿಗೆ ಅಡಿಪಾಯ ಹಾಕಿದವರನ್ನು ಮನೆಯಲ್ಲಿ ಕೂರಿಸಲಾಗಿದೆ-ಡಿಕೆಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts