More

    ಮುಂಬೈಗೆ ಒಲಿಯುವುದೇ ಗೆಲುವು? ಇಂದು ಪಂಜಾಬ್ ಕಿಂಗ್ಸ್ ಎದುರಾಳಿ

    ಪುಣೆ: ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಸೋಲು-ಗೆಲುವನ್ನು ಸಮವಾಗಿ ಸ್ವೀಕರಿಸಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್-15ರ ಪಂದ್ಯದಲ್ಲಿ ಬುಧವಾರ ಎದುರಾಗಲಿವೆ. ಎಂದಿನ ಚಾಳಿಯಂತೆ ಈ ಬಾರಿಯೂ ಆರಂಭಿಕ ಪಂದ್ಯಗಳಲ್ಲಿ ಸೋಲಿನ ಸರಣಿ ಮುಂದುವರಿಸಿರುವ ಮುಂಬೈ ಇಂಡಿಯನ್ಸ್ ಪಾಲಿಗೆ ಈ ಪಂದ್ಯ ಮಹತ್ವ ಪಡೆದಿದೆ. ಮುಂದಿನ ಹಾದಿ ಸುಗಮವಾಗಬೇಕಾದರೆ ಮುಂಬೈ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ಮತ್ತೊಂದೆಡೆ ಅಸ್ಥಿರ ನಿರ್ವಹಣೆ ತೋರುತ್ತಿರುವ ಪಂಜಾಬ್ ಕಿಂಗ್ಸ್, ಕಳೆದ ಪಂದ್ಯದಲ್ಲಿ ಬಹುತೇಕ ಗೆಲುವಿನ ಸನಿಹದಲ್ಲಿದ್ದರೂ ಗುಜರಾತ್ ಟೈಟಾನ್ಸ್‌ನ ರಾಹುಲ್ ತೆವಾಟಿಯಾ, ಕಡೇ 2 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿ ಶಾಕ್ ಕೊಟ್ಟಿದ್ದರು. ಇದೀಗ ಮಯಾಂಕ್ ಗೆಲುವಿನ ಹಳಿಗೇರುವ ತವಕದಲ್ಲಿದೆ.

    *ಒತ್ತಡದಲ್ಲಿ ರೋಹಿತ್ ಪಡೆ
    ರೋಹಿತ್ ಶರ್ಮ ಬಳಗ ಸರ್ವಾಂಗೀಣ ವೈಫಲ್ಯದಿಂದಾಗಿ ನಿರಾಸೆ ಅನುಭವಿಸುತ್ತಾ ಬಂದಿದೆ. 2014ರಲ್ಲಿ ಆರಂಭಿಕ ಐದು ಪಂದ್ಯಗಳಲ್ಲಿ ಸೋತರೂ ಪ್ಲೇಆ್ ಹಂತಕ್ಕೇರಿದ ಇತಿಹಾಸ ಹೊಂದಿರುವ ರೋಹಿತ್ ಬಳಗ ಪುಟಿದೇಳಲು ಅದೇ ಸ್ಫೂರ್ತಿಯಾಗಿದೆ. ಗಾಯದಿಂದ ಚೇತರಿಸಿಕೊಂಡ ಬಳಿಕ ಆಡಿದ ಎರಡೂ ಪಂದ್ಯಗಳಲ್ಲೂ ಅಬ್ಬರಿಸಿರುವ ಸೂರ್ಯಕುಮಾರ್ ಯಾದವ್ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದರೆ, ಇವರಿಗೆ ಇತರ ಬ್ಯಾಟರ್‌ಗಳಿಂದ ಬೆಂಬಲ ದಕ್ಕಬೇಕಿದೆ. ಆಲ್ರೌಂಡರ್ ಕೈರಾನ್ ಪೊಲ್ಲಾರ್ಡ್ ಇದುವರೆಗೆ ಸ್ಫೋಟಿಸಿಲ್ಲ. ಕಗಿಸೊ ರಬಾಡ, ರಾಹಲ್ ಚಹರ್, ವೈಭವ್ ಅರೋರರಂಥ ಬಲಿಷ್ಠ ಬೌಲಿಂಗ್ ಹೊಂದಿರುವ ಪಂಜಾಬ್ ತಂಡವನ್ನು ಸಮರ್ಥವಾಗಿ ಎದುರಿಸಲು ಮುಂಬೈ ಸಜ್ಜಾಗಬೇಕಿದೆ. ಲೆಗ್ ಸ್ಪಿನ್ನರ್ ಎಂ. ಅಶ್ವಿನ್ ಕೊಂಚ ಪ್ರಭಾವ ಬೀರುತ್ತಿದ್ದರೆ, ಅನುಭವಿ ಜಸ್‌ಪ್ರೀತ್ ಬುಮ್ರಾಗೆ ಬಸಿಲ್ ಥಂಪಿ, ಜೈದೇವ್ ಉನಾದ್ಕತ್ ಸಾಥ್ ನೀಡಬೇಕಿದೆ.

    *ಪುಟಿದೇಳುವ ವಿಶ್ವಾಸದಲ್ಲಿ ಪಂಜಾಬ್
    ಲೀಗ್‌ನಲ್ಲಿ ಇದುವರೆಗೆ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿರುವ ಮಯಾಂಕ್ ಪಡೆ ಪುಟಿದೇಳುವ ವಿಶ್ವಾಸದಲ್ಲಿದೆ. ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್ ಸ್ಫೋಟಿಸುತ್ತಿದ್ದರೆ, ಸ್ವತಃ ನಾಯಕ ಮಯಾಂಕ್ ಅಗರ್ವಾಲ್, ಶಾರುಖ್ ಖಾನ್‌ರಿಂದ ಇದುವರೆಗೆ ದೊಡ್ಡ ಮೊತ್ತ ಬಂದಿಲ್ಲ. ರಬಾಡ, ಲಿವಿಂಗ್‌ಸ್ಟೋನ್, ವೈಭವ್ ಅರೋರ, ರಾಹಲ್ ಚಹರ್ ಒಳಗೊಂಡ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಜಾನಿ ಬೇರ್‌ಸ್ಟೋ ಆಡಿದ ಮೊದಲ ಪಂದ್ಯದಲ್ಲೇ ವಿಲರಾಗಿದ್ದರು.

    ಟೀಮ್ ನ್ಯೂಸ್:
    ಮುಂಬೈ: ಕಳೆದ ಪಂದ್ಯದಲ್ಲಿ ಕೇವಲ 2 ವಿದೇಶಿ ಆಟಗಾರರನ್ನು ಆಡಿಸಲಾಗಿತ್ತು. ಈ ಬಾರಿ 4 ವಿದೇಶಿಗರ ಕೋಟಾ ಭರ್ತಿ ಮಾಡುವ ಸಾಧ್ಯತೆಗಳಿದ್ದು, ಫ್ಯಾಬಿಯನ್ ಅಲೆನ್, ಟೈಮಲ್ ಮಿಲ್ಸ್ ಕಣಕ್ಕಿಳಿಯಬಹುದು. ರಮಣದೀಪ್ ಸಿಂಗ್ ಹೊರಗುಳಿಯಲಿದ್ದು, ಜೈದೇವ್ ಉನಾದ್ಕತ್ ಅಥವಾ ಬಸಿಲ್ ಥಂಪಿ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಯಬಹುದು.
    ಪಂಜಾಬ್ ಕಿಂಗ್ಸ್: ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಬಹುತೇಕ ಕಣಕ್ಕಿಳಿಯಲಿದೆ.

    * 25: ರೋಹಿತ್ ಶರ್ಮ ಇನ್ನು 25 ರನ್‌ಗಳಿಸಿದರೆ ಟಿ20 ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಲಿದ್ದಾರೆ. ಈ ಸಾಧನೆ ಮಾಡಿದ ಭಾರತದ ಎರಡನೇ (ವಿರಾಟ್ ಕೊಹ್ಲಿ ಮೊದಲ ಬ್ಯಾಟರ್) ಹಾಗೂ ವಿಶ್ವದ 7ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.

    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್
    ಮುಖಾಮುಖಿ: 27, ಮುಂಬೈ: 14, ಪಂಜಾಬ್: 13

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts