More

    ಇಂದು ಗುಜರಾತ್ ಟೈಟಾನ್ಸ್‌ಗೆ ಮುಂಬೈ ಸವಾಲು ; ಪ್ಲೇಆಫ್ ರೇಸ್ ಖಚಿತತೆಯಲ್ಲಿ ಹಾರ್ದಿಕ್ ಪಡೆ

    ಮುಂಬೈ: ಅಂಕಪಟ್ಟಿಯಲ್ಲಿ ಸ್ಥಾನ ಕಾಯ್ದುಕೊಂಡಿರುವ ಗುಜರಾತ್ ಟೈಟಾನ್ಸ್ ತಂಡ ಹಾಗೂ ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್-15ರ ಹಣಾಹಣಿಯಲ್ಲಿ ಶುಕ್ರವಾರ ಬ್ರಬೋರ್ನ್ ಸ್ಟೇಡಿಯಂನಲ್ಲಿ ಎದುರಾಗಲಿವೆ. ಸತತ ಗೆಲುವಿನ ನಾಗಾಲೋಟದಲ್ಲಿ ತೇಲುತ್ತಿದ್ದ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ತಂಡ ಹಿಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು ಸೋಲಿನ ಪೆಟ್ಟು ತಿಂದಿದೆ. ಇನ್ನು ಒಂದು ಪಂದ್ಯದಲ್ಲಿ ಗೆದ್ದರೂ ಗುಜರಾತ್ ಟೈಟಾನ್ಸ್ ತಂಡ ಪ್ಲೇಆಫ್ ಹಂತವನ್ನು ಖಚಿತಪಡಿಸಿಕೊಳ್ಳಲಿದೆ. ಸತತ 8 ಸೋಲಿನ ಬಳಿಕ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ ಗೆಲುವಿನ ಹಳಿಗೇರಿರುವ ಮುಂಬೈ ಪಾಲಿಗೆ ಈ ಪಂದ್ಯ ಅನೌಪಚಾರಿಕವಾಗಿದೆ.

    * ಟೈಟಾನ್ಸ್‌ಗೆ ಗೆಲುವಿನ ತವಕ
    ಸತತ 5 ಗೆಲುವಿನ ಬಳಿಕ ಸೋಲಿನ ರುಚಿ ಕಂಡಿರುವ ಗುಜರಾತ್ ಟೈಟಾನ್ಸ್ ತಂಡ ಪ್ಲೇಆಫ್ ಹಂತವನ್ನು ಖಾತ್ರಿಪಡಿಸಿಕೊಳ್ಳುವ ದೃಷ್ಠಿಯಿಂದ ಈ ಪಂದ್ಯ ಮಹತ್ವ ಪಡೆದಿದೆ. ಇದುವರೆಗೂ ಆಡಿರುವ 10 ಪಂದ್ಯಗಳಲ್ಲಿ 8ರಲ್ಲಿ ಗೆದ್ದು, 2ರಲ್ಲಿ ಸೋತಿರುವ ಗುಜರಾತ್ ಟೈಟಾನ್ಸ್ 16 ಅಂಕ ಸಂಪಾದಿಸಿದೆ. ಹಿಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲೂ ತಂಡ ವೈಫಲ್ಯ ಅನುಭವಿಸಿತ್ತು. ಯುವ ಬ್ಯಾಟರ್ ಸಾಯಿ ಸುದರ್ಶನ್ ಹೊರತುಪಡಿಸಿದರೆ ಇತರ ಬ್ಯಾಟರ್‌ಗಳು ಸಂಪೂರ್ಣ ವೈಫಲ್ಯರಾಗಿದ್ದರು. ಇದೀಗ ಮುಂಬೈ ವಿರುದ್ಧ ಗೆಲುವಿನ ಹಳಿಗೇರುವುದೇ ತಂಡದ ಪ್ರಮುಖ ಗುರಿಯಾಗಿದೆ. ಅಲ್ಲದೆ, ಐಪಿಎಲ್‌ನಲ್ಲಿ ಆಡಿದ ಮೊದಲ ಯತ್ನಲ್ಲೇ ಅಗ್ರಸ್ಥಾನಿಯಾಗಿ ಪ್ಲೇಆಫ್ ಗೇರುವ ಅಪರೂಪದ ಅವಕಾಶವನ್ನು ಹಾರ್ದಿಕ್ ಪಡೆ ಹೊಂದಿದೆ.

    * ಹೋರಾಟಕ್ಕೆ ಮುಂಬೈ ಸಜ್ಜು
    ಟೂರ್ನಿಯಲ್ಲಿ ಮುಂಬೈ ಹೋರಾಟ ಮುಕ್ತಾಯಗೊಳಿಸಿದರೂ ಮುಂದಿನ ಪಂದ್ಯಗಳಲ್ಲಿ ಜಯ ದಾಖಲಿಸಿದರೆ ಅಂಕಪಟ್ಟಿಯಲ್ಲಿ ಕಡೇ ಸ್ಥಾನ ತಪ್ಪಿಸಿಕೊಳ್ಳಲು ಹೋರಾಡಬೇಕಿದೆ. ಟೂರ್ನಿಯುದ್ದಕ್ಕೂ ತಂಡದ ನಿರ್ವಹಣೆಯೇ ಸಂಪೂರ್ಣ ನೆಲಕಚ್ಚಿದ್ದು, ಆರಂಭಿಕರಾದ ರೋಹಿತ್ ಶರ್ಮ ಹಾಗೂ ಇಶಾನ್ ಕಿಶನ್ ಜೋಡಿಯ ವೈಫಲ್ಯವೇ ಪ್ರಮುಖವಾಗಿ ಎದ್ದುಕಾಣುತ್ತಿದೆ. ಕಡೇ ಹಂತದಲ್ಲಿ ಪಂದ್ಯಗಳಲ್ಲಿ ಜಯ ದಾಖಲಿಸಿ ಟೂರ್ನಿಗೆ ವಿದಾಯ ಹೇಳುವ ಲೆಕ್ಕಾಚಾರದಲ್ಲಿದೆ.

    ಟೀಮ್ ನ್ಯೂಸ್
    ಮುಂಬೈ ಇಂಡಿಯನ್ಸ್
    ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಬಹುದು. ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡರೂ ಅಚ್ಚರಿಯಿಲ್ಲ.

    ಗುಜರಾತ್ ಟೈಟಾನ್ಸ್
    ವೇಗಿ ಪ್ರದೀಪ್ ಸಂಗ್ವಾನ್ ಬದಲಿಗೆ ಯಶ್ ದಯಾಳ್ ಸ್ಥಾನ ಪಡೆಯಬಹುದು. ಕಳೆದ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರಿದ್ದ ಬಿ ಸಾಯಿ ಸುದರ್ಶನ್ ಮೈದಾನದಲ್ಲಿ ಗಾಯದ ಸಮಸ್ಯೆ ಎದುರಿಸಿದ್ದರು. ಒಂದು ವೇಳೆ ಅಲಭ್ಯರಾದರೆ ಅಭಿನವ್ ಮನೋಹರ್ ಅಥವಾ ವಿಜಯ್ ಶಂಕರ್ ಕಣಕ್ಕಿಳಿಬಹುದು.

    ಪಂದ್ಯ ಆರಂಭ: ರಾತ್ರಿ 7.30ಕ್ಕೆ
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts