More

    ಇಂದು ಗ್ರೀನ್ ಜೆರ್ಸಿಯಲ್ಲಿ ಗೆಲುವಿನ ಬೇಟೆಗೆ ಆರ್‌ಸಿಬಿ ಸಜ್ಜು ; ಇಂದು ಸನ್‌ರೈಸರ್ಸ್‌ ಮರುಮುಖಾಮುಖಿ

    ಮುಂಬೈ: ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಹಳಿಗೇರಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರ ತನ್ನ ಮತ್ತೊಂದು ನಿರ್ಣಾಯಕ ಹಣಾಹಣಿಗೆ ಸಜ್ಜಾಗಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಕದನದಲ್ಲಿ ಆರ್‌ಸಿಬಿ, ಸತತ ಮೂರು ಸೋಲಿನಿಂದ ಕಂಗೆಟ್ಟಿರುವ ಸನ್‌ರೈಸರ್ಸ್‌ ಸವಾಲು ಎದುರಿಸಲಿದೆ. ‘ಗೋ ಗ್ರೀನ್’ ಅಭಿಯಾನದ ಹಿನ್ನೆಲೆಯಲ್ಲಿ ಬೆಂಗಳೂರು ತಂಡದ ಆಟಗಾರರು ಹಸಿರು ಜೆರ್ಸಿ ತೊಟ್ಟು ಕಣಕ್ಕಿಳಿಯಲಿದ್ದಾರೆ. ಮೊದಲ ಹಣಾಹಣಿಯಲ್ಲಿ ಸನ್‌ರೈಸರ್ಸ್‌ ಎದುರು ಹೀನಾಯ ಸೋಲು ಕಂಡಿದ್ದ ಆರ್‌ಸಿಬಿ, ಇದೀಗ ಸೇಡು ತೀರಿಸಿಕೊಳ್ಳುವುದರ ಜತೆಗೆ ಪ್ಲೇಆಫ್ ಹಂತಕ್ಕೆ ಮತ್ತಷ್ಟು ಸನಿಹವಾಗುವ ಅವಕಾಶ ಹೊಂದಿದೆ. ವಿಶ್ವ ಶ್ರೇಷ್ಠ ಬ್ಯಾಟರ್‌ಗಳಾದ ಕೇನ್ ವಿಲಿಯಮ್ಸನ್ ಹಾಗೂ ವಿರಾಟ್ ಕೊಹ್ಲಿ ನೈಜ ಫಾರ್ಮ್ ಕೊರತೆ ಎದುರಿಸುತ್ತಿರುವುದು ಉಭಯ ತಂಡಗಳ ಪಾಲಿಗೆ ಹಿನ್ನಡೆಯಾಗಿದೆ. ಗುಜರಾತ್ ಎದುರು ಕೊಹ್ಲಿ ಅರ್ಧಶತಕ ಬಾರಿಸಿದರೂ ಸ್ಫೋಟಿಸಲು ವಿಫಲರಾಗಿದ್ದರು.

    *2 ತಂಡಗಳಿಗೂ ಗೆಲುವು ಅನಿವಾರ್ಯ
    ಪ್ಲೇಆ್ ಹಂತಕ್ಕೇರಲು ಉಭಯ ತಂಡಗಳ ಪಾಲಿಗೆ ಈ ಪಂದ್ಯ ಮಹತ್ವ ಪಡೆದಿದೆ. ರನ್‌ರೇಟ್‌ನಲ್ಲಿ ಮೈನಸ್ ಹೊಂದಿರುವ ಆರ್‌ಸಿಬಿ, ಉಳಿದಿರುವ 3 ಪಂದ್ಯಗಳಲ್ಲಿ ಉತ್ತಮ ರನ್‌ರೇಟ್ ಜತೆಗೆ ಕನಿಷ್ಠ ಎರಡಲ್ಲಿ ಗೆಲ್ಲಲೇಬೇಕಿದೆ. ಇದುವರೆಗೂ ಆಡಿರುವ 11 ಪಂದ್ಯಗಳಿಂದ 6 ಪಂದ್ಯ ಜಯಿಸಿರುವ ಆರ್‌ಸಿಬಿ 12 ಪಾಯಿಂಟ್ಸ್ ಹೊಂದಿದೆ. ಮತ್ತೊಂದೆಡೆ, ಸತತ 5 ಗೆಲುವಿನ ಬಳಿಕ ಹ್ಯಾಟ್ರಿಕ್ ಸೋಲು ಕಂಡಿರುವ ಸನ್‌ರೈಸರ್ಸ್‌ ಪಾಲಿಗೆ ಉಳಿದಿರುವ 4 ಪಂದ್ಯಗಳಲ್ಲೂ ಗೆಲುವಿನ ಒತ್ತಡದಲ್ಲಿದೆ. ಆಡಿರುವ 10 ಪಂದ್ಯಗಳಲ್ಲಿ ತಲಾ 5 ಗೆಲುವು, ಸೋಲು ಕಂಡಿದೆ.

    * ಆರ್‌ಸಿಬಿ ಹಸಿರು ಜೆರ್ಸಿ
    ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಆರ್‌ಸಿಬಿ ತಂಡದ ಆಟಗಾರರು ಎಂದಿನಂತೆ ಒಂದು ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಆಡಲು ಸಿದ್ಧವಾಗಿದ್ದು, ಈ ವರ್ಷ ಸನ್‌ರೈಸರ್ಸ್‌ ವಿರುದ್ಧ ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದ್ದಾರೆ. 2011 ರಿಂದಲೂ ಆರ್‌ಸಿಬಿ, 1 ಪಂದ್ಯದಲ್ಲಿ ಗ್ರೀನ್ ಜೆರ್ಸಿ ತೊಡುವ ಸಂಪ್ರದಾಯ ಬೆಳೆಸಿಕೊಂಡಿದೆ. ಕೋವಿಡ್ ವಾರಿಯರ್ಸ್‌ಗೆ ಗೌರವ ಸಲ್ಲಿಸುವ ಸಲುವಾಗಿ ಕಳೆದ ಬಾರಿ ಬ್ಲೂ ಜೆರ್ಸಿ ತೊಡಲಾಗಿತ್ತು. ಆರ್‌ಸಿಬಿ ಇದುವರೆಗೆ ಗ್ರೀನ್/ಬ್ಲೂ ಜೆರ್ಸಿಯಲ್ಲಿ ಆಡಿರುವ 11 ಪಂದ್ಯಗಳ ಪೈಕಿ 2ರಲ್ಲಿ ಮಾತ್ರ ಜಯ ದಾಖಲಿಸಿದೆ.

    ಟೀಮ್ ನ್ಯೂಸ್:
    ಆರ್‌ಸಿಬಿ: ಹಿಂದಿನ ಪಂದ್ಯದಲ್ಲಿ ಗೆಲುವು ಕಂಡಿರುವ ತಂಡದಲ್ಲಿ ಬದಲಾವಣೆ ನಿರೀಕ್ಷಿಸುವಂತಿಲ್ಲ.
    ಸನ್‌ರೈಸರ್ಸ್‌: ವಾಷಿಂಗ್ಟನ್ ಸುಂದರ್ ಚೇತರಿಕೆ ಕಂಡರೆ ಸೀನ್ ಅಬೋಟ್ ಹೊರಗುಳಿಯಲಿದ್ದಾರೆ.

    *6: ಸನ್‌ರೈಸರ್ಸ್‌ ತಂಡ 2020ರಿಂದ ಈಚೆಗೆ ಆರ್‌ಸಿಬಿ ಎದುರು ಆಡಿರುವ 6 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ದಾಖಲಿಸಿದೆ.

    ಪಂದ್ಯ ಆರಂಭ: ಮಧ್ಯಾಹ್ನ 3.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 21; ಆರ್‌ಸಿಬಿ: 8, ಸನ್‌ರೈಸರ್ಸ್‌: 12, ರದ್ದು: 1
    ಮೊದಲ ಹಣಾಹಣಿ: ಆರ್‌ಸಿಬಿಗೆ 9 ವಿಕೆಟ್ ಸೋಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts