More

    ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿ ಆರ್‌ಸಿಬಿ ; ಇಂದು ಮುಂಬೈ ಇಂಡಿಯನ್ಸ್ ಸವಾಲು

    ಪುಣೆ: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್-15ರ ಪಂದ್ಯದಲ್ಲಿ ಶನಿವಾರ ಎದುರಾಗಲಿವೆ. ಸರ್ವಾಂಗೀಣ ವೈಫಲ್ಯದಿಂದ ತತ್ತರಿಸಿರುವ 5 ಬಾರಿಯ ಚಾಂಪಿಯನ್ ರೋಹಿತ್ ಶರ್ಮ ಬಳಗ ಗೆಲುವಿನ ಕನವರಿಕೆಯಲ್ಲಿದೆ. ಟೂರ್ನಿಯಲ್ಲಿ ಎಂದಿನಂತೆ ಸತತ ಸೋಲುಗಳಿಂದಲೇ ಅಭಿಯಾನ ಆರಂಭಿಸಿರುವ ಮುಂಬೈ ತಂಡ ಪುಟಿದೇಳುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಪಂಜಾಬ್ ತಂಡಕ್ಕೆ ಸೋತ ಬಳಿಕ ಕೆಕೆಆರ್ ಹಾಗೂ ರಾಜಸ್ಥಾನ ಎದುರು ಭರ್ಜರಿ ಗೆಲುವು ದಾಖಲಿಸಿರುವ ಫಾಫ್ ಡು ಪ್ಲೆಸಿಸ್ ಬಳಗಕ್ಕೆ ಮ್ಯಾಕ್ಸ್‌ವೆಲ್ ಬಲ ತುಂಬಲಿದ್ದಾರೆ.

    ಆರ್‌ಸಿಬಿಗೆ ಕೆಜಿಎಫ್ ಬಲ!
    ಭರ್ಜರಿ ಲಯದಲ್ಲಿರುವ ಆರ್‌ಸಿಬಿ ತಂಡಕ್ಕೆ ಈ ಬಾರಿ ‘ಕೆಜಿಎಫ್’ (ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಪ್ಲೆಸಿಸ್) ಬಲ ಸಿಗಲಿದೆ. ಮದುವೆ ಕಾರ್ಯಕ್ರಮದಿಂದಾಗಿ ತಡವಾಗಿ ತಂಡ ಕೂಡಿಕೊಂಡಿರುವ ಆಸೀಸ್ ಆಲ್ರೌಂಡರ್ ಮ್ಯಾಕ್ಸ್‌ವೆಲ್ ಈ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಆರಂಭಿಕರಾದ ಅನುಜ್ ರಾವತ್ ಹಾಗೂ ಪ್ಲೆಸಿಸ್ ತಂಡಕ್ಕೆ ಇನ್ನಷ್ಟು ಭದ್ರ ಬುನಾದಿ ಹಾಕಬೇಕಿದೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಮೊದಲ 3 ಪಂದ್ಯಗಳಲ್ಲೂ ಲಯ ಕಂಡುಕೊಂಡಿಲ್ಲ. ಮಧ್ಯಮ ಕ್ರಮಾಂಕಕ್ಕೆ ಈಗಾಗಲೆ ದಿನೇಶ್ ಕಾರ್ತಿಕ್, ಶಾಬಾಜ್ ಅಹ್ಮದ್ ಸಾಕಷ್ಟು ಶಕ್ತಿ ತುಂಬಿದ್ದು, ಇದೀಗ ಮ್ಯಾಕ್ಸ್‌ವೆಲ್ ಲಭ್ಯತೆಯಿಂದ ಮತ್ತಷ್ಟು ಬಲ ಬಂದಂತಾಗಿದೆ. ಹರ್ಷಲ್ ಪಟೇಲ್, ಹಸಂಗ, ಆಕಾಶ್ ದೀಪ್ ಹಾಗೂ ಸಿರಾಜ್ ಒಳಗೊಂಡ ಬೌಲಿಂಗ್ ಪಡೆ ಉತ್ತಮ ಲಯದಲ್ಲಿದೆ.

    * ಗೆಲುವಿನ ಒತ್ತಡದಲ್ಲಿ ಮುಂಬೈ
    ಸೋಲಿನ ಸುಳಿಯಿಂದ ಹೊರಬರಲು ಯತ್ನಿಸುತ್ತಿರುವ ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ಒತ್ತಡದಲ್ಲಿದೆ. ಕೆಕೆಆರ್ ಎದುರು ಡೇನಿಯಲ್ ಸ್ಯಾಮ್ಸ್ ಒಂದೇ ಓವರ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಎದುರು 35 ರನ್ ಬಿಟ್ಟುಕೊಟ್ಟಿದ್ದರು. ಹೀನಾಯ ಸೋಲಿನಿಂದ ಮುಖಭಂಗಕ್ಕೀಡಾಗಿರುವ ಮುಂಬೈ ತಂಡಕ್ಕೆ ಗೆಲುವೊಂದೇ ಮಾರ್ಗವಾಗಿದೆ. ಆರಂಭಿಕ ಹಂತದಲ್ಲಿ ಇಶಾನ್ ಕಿಶನ್ ಹಾಗೂ ನಾಯಕ ರೋಹಿತ್ ಶರ್ಮ ಜೋಡಿ ವಿಫಲರಾಗುತ್ತಿದ್ದರೆ, ಸೂರ್ಯಕುಮಾರ್ ಯಾದವ್, ಪದಾರ್ಪಣೆ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಹಾಗೂ ತಿಲಕ್ ವರ್ಮ ಗಮನಸೆಳೆಯುತ್ತಿದ್ದಾರೆ. ಟೈಮಲ್ ಮಿಲ್ಸ್ ದುಬಾರಿಯಾಗುತ್ತಿರುವುದು ತಂಡಕ್ಕೆ ಹಿನ್ನಡೆಯಾಗಿದೆ.

    ಟೀಮ್ ನ್ಯೂಸ್:
    ಆರ್‌ಸಿಬಿ: ಮ್ಯಾಕ್ಸ್‌ವೆಲ್ ಆಗಮನದಿಂದ  ಶೆರ್ಫಾನ್ ರುದರ್ಫೋರ್ಡ್ ಹೊರಗುಳಿಯಲಿದ್ದಾರೆ. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷೆ ಇಲ್ಲ.

    ಮುಂಬೈ: ಕೆಕೆಆರ್ ಎದುರು ದುಬಾರಿಯಾಗಿದ್ದ ಡೇನಿಯಲ್ ಸ್ಯಾಮ್ಸ್ ಬದಲಿಗೆ  ಫ್ಯಾಬಿಯನ್ ಅಲೆನ್ ಮತ್ತು ಬಸಿಲ್ ಥಂಪಿ ಬದಲಿಗೆ ಅನುಭವಿ ಜೈದೇವ್ ಉನಾದ್ಕತ್ ಕಣಕ್ಕಿಳಿಯುವ ಸಾಧ್ಯತೆಗಳಿವೆ.

    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 29, ಮುಂಬೈ: 17, ಆರ್‌ಸಿಬಿ: 12

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts