More

    ಗೆಲುವಿನ ನಿರೀಕ್ಷೆಯಲ್ಲಿ ಪಂಜಾಬ್; ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿ ರಾಜಸ್ಥಾನ ರಾಯಲ್ಸ್

    ಮುಂಬೈ: ಅಂತಿಮ ನಾಲ್ಕರ ಘಟ್ಟಕ್ಕೇರಲು ಪ್ರಬಲ ಪೈಪೋಟಿ ಮುಂದುವರಿಸಿರುವ ಕನ್ನಡಿಗ ಮಯಾಂಕ್ ಅಗರ್ವಾಲ್ ಸಾರಥ್ಯದ ಪಂಜಾಬ್ ಕಿಂಗ್ಸ್ ಹಾಗೂ ಸ್ಥಿರ ನಿರ್ವಹಣೆ ನಡುವೆಯೂ ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್-15ರಲ್ಲಿ ಶನಿವಾರದ ಮೊದಲ ಪಂದ್ಯದಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಎದುರಾಗಲಿವೆ. ಹಿಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಭರ್ಜರಿ ಗೆಲುವು ದಾಖಲಿಸಿದ ವಿಶ್ವಾಸದಲ್ಲಿರುವ ಪಂಜಾಬ್ ತಂಡಕ್ಕೆ ಗೆಲುವೊಂದೇ ಮಾರ್ಗವಾಗಿದೆ. ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿರುವ ಸಂಜು ಸ್ಯಾಮ್ಸನ್ ಬಳಗಕ್ಕೆ ಪ್ಲೇಆಫ್ ಹಂತಕ್ಕೇರಲು ಇನ್ನೂ ಕನಿಷ್ಠ 2 ಗೆಲುವು ಅಗತ್ಯವಾಗಿದೆ. 10ರಲ್ಲಿ ತಲಾ 5 ಜಯ-ಸೋಲು ಕಂಡಿರುವ ಪಂಜಾಬ್ ತಂಡಕ್ಕೆ ಉಳಿದ 4ರಲ್ಲಿ ಕನಿಷ್ಠ ಮೂರಾದರೂ ಗೆಲುವಿನ ಅವಶ್ಯಕತೆ ಇದೆ. ಕೊನೇ 3 ಪಂದ್ಯಗಳಲ್ಲಿ ಪ್ಲೇಆಫ್ ರೇಸ್‌ನಲ್ಲಿ ಪೈಪೋಟಿ ಒಡ್ಡುತ್ತಿರುವ ಆರ್‌ಸಿಬಿ (ಮೇ 13), ಡೆಲ್ಲಿ (ಮೇ 16) ಮತ್ತು ಸನ್‌ರೈಸರ್ಸ್‌ (ಮೇ 22) ತಂಡಗಳಿಂದಲೇ ಮಯಾಂಕ್ ಬಳಗಕ್ಕೆ ಸವಾಲು ಎದುರಾಗಲಿದೆ ಎಂಬುದು ಗಮನಾರ್ಹ.

    * ತಂಡಕ್ಕೆ ಮಯಾಂಕ್ ತ್ಯಾಗ
    ಅಸ್ಥಿರ ನಿರ್ವಹಣೆಯಿಂದ ಬಳಲುತ್ತಿರುವ ಮಯಾಂಕ್ ಅಗರ್ವಾಲ್ ಹಿಂದಿನ ಪಂದ್ಯದಲ್ಲಿ ಆರಂಭಿಕ ಬ್ಯಾಟಿಂಗ್‌ನಿಂದ ಹಿಂದೆ ಸರಿದಿದ್ದರು. ಮಯಾಂಕ್ ಹಿಂದೆ ಸರಿದರೂ ಶಿಖರ್ ಧವನ್, ಭಾನುಕ ರಾಜಪಕ್ಷೆ, ಲಿಯಾಮ್ ಲಿವಿಂಗ್‌ಸ್ಟೋನ್‌ರಂತ ಸ್ಫೋಟಕ ಬ್ಯಾಟರ್‌ಗಳು ಅಬ್ಬರಿಸಿದ್ದರು. ಆದರೆ, ಇಂಗ್ಲೆಂಡ್ ಬ್ಯಾಟರ್ ಜಾನಿ ಬೇರ್‌ಸ್ಟೋ ಸತತವಾಗಿ ವಿಫಲರಾಗುತ್ತಿದ್ದಾರೆ. ಆರಂಭಿಕನಾಗಿ ಬಡ್ತಿ ನೀಡಿರುವ ಹಿನ್ನೆಲೆಯಲ್ಲಿ ಬೇರ್‌ಸ್ಟೋಗೆ ಮತ್ತೊಂದು ಅವಕಾಶ ನೀಡಬಹುದು. ಕಗಿಸೊ ರಬಾಡ, ಅರ್ಷ್‌ದೀಪ್ ಸಿಂಗ್, ಸಂದೀಪ್ ಶರ್ಮ, ರಾಹುಲ್ ಚಹರ್ ಒಳಗೊಂಡ ಬೌಲಿಂಗ್ ಪಡೆ ಉತ್ತಮ ಲಯದಲ್ಲಿದೆ.

    * ಗೆಲುವಿನ ಒತ್ತಡದಲ್ಲಿ ರಾಜಸ್ಥಾನ

    ಹಿಂದಿನ ಎರಡು ಪಂದ್ಯಗಳಲ್ಲೂ ಸೋತು ಒತ್ತಡಕ್ಕೆ ಸಿಲುಕಿರುವ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗೆಲುವೊಂದೇ ಮಾರ್ಗವಾಗಿದೆ. ಆರಂಭಿಕ ಹಂತದಲ್ಲಿ ಜೋಸ್ ಬಟ್ಲರ್ ಉತ್ತಮ ಆರಂಭ ಒದಗಿಸುತ್ತಿದ್ದರೆ, ಸಂಜು ಸ್ಯಾಮ್ಸನ್ ಲಯಕ್ಕೆ ಮರಳಿದ್ದಾರೆ. ಯುವ ಬ್ಯಾಟರ್ ರಿಯಾನ್ ಪರಾಗ್ ಹಾಗೂ ಶಿಮ್ರೋನ್ ಹೆಟ್ಮೆಯರ್ ಮಧ್ಯಮ ಕ್ರಮಾಂಕದ ಶಕ್ತಿಯಾಗಿದ್ದಾರೆ. ಇದರ ನಡುವೆಯೂ ಹಿಂದಿನ ಎರಡೂ ಪಂದ್ಯಗಳಲ್ಲೂ ರಾಜಸ್ಥಾನ ತಂಡ ನಿರಾಸೆ ಕಂಡಿದ್ದು, ಇದೀಗ ಗೆಲುವಿನ ಹಳಿಗೇರುವ ತವಕದಲ್ಲಿದೆ. ಟೂರ್ನಿಯಲ್ಲಿ ಇದುವರೆಗೂ ಅತಿಹೆಚ್ಚು ವಿಕೆಟ್ ಕಬಳಿಸಿ ಪರ್ಪಲ್ ಕ್ಯಾಪ್ ಧರಿಸಿರುವ ಯಜುವೇಂದ್ರ ಚಾಹಲ್, ಕನ್ನಡಿಗ ಪ್ರಸಿದ್ಧ ಕೃಷ್ಣ, ಆರ್.ಅಶ್ವಿನ್, ಟ್ರೆಂಟ್ ಬೌಲ್ಟ್ ಹಾಗೂ ಕುಲದೀಪ್ ಸೇನ್ ಒಳಗೊಂಡ ಬೌಲಿಂಗ್ ಪಡೆ ಮತ್ತಷ್ಟು ಚುರುಕಾಗಬೇಕಿದೆ.

    ಟೀಮ್ ನ್ಯೂಸ್:
    ಪಂಜಾಬ್ ಕಿಂಗ್ಸ್: ಹಿಂದಿನ ಪಂದ್ಯದಲ್ಲಿ ಗೆಲುವಿನ ಕಂಡಿರುವ ತಂಡವನ್ನೇ ಉಳಿಸಿಕೊಳ್ಳುವ ಸಾಧ್ಯತೆಗಳಿವೆ.

    ರಾಜಸ್ಥಾನ: ಪ್ರಸಕ್ತ ಟೂರ್ನಿಯಲ್ಲಿ ಕಡೆಣಿಸಲ್ಪಟ್ಟಿರುವ ಯಶಸ್ವಿ ಜೈಸ್ವಾಲ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಜೈಸ್ವಾಲ್‌ಗೆ ಅವಕಾಶ ನೀಡಿದರೆ ಕರುಣ್ ನಾಯರ್ ಹೊರಗುಳಿಯುವರು.

    ಪಂದ್ಯ ಆರಂಭ: ಮಧ್ಯಾಹ್ನ 3.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 23, ರಾಜಸ್ಥಾನ: 13, ಪಂಜಾಬ್: 10

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts